ಕನ್ನಡ ವಾರ್ತೆಗಳು

ಮಗುವನ್ನು ತ್ಯಜಿಸಿ ಸುದ್ದಿಯಾಗಿದ್ದ ತಂದೆ, ತಾಯಿ ಪತ್ತೆ :ಸ್ಥಳೀಯರ ಸಹಕಾರದಲ್ಲಿ ದೇವಸ್ಥಾನದ ಎದುರು ವಿವಾಹ

Pinterest LinkedIn Tumblr

salethur_married_couple_1

ಬಂಟ್ವಾಳ, ಜ. 27: ಸಾಲೆತ್ತೂರು ರಸ್ತೆ ಬದಿಯ ಪೊದೆಯಲ್ಲಿ ಜ.22ರಂದು ಮಗುವನ್ನು ತ್ಯಜಿಸಿ ಸುದ್ದಿಯಾಗಿದ್ದ ಮಗುವಿನ ತಾಯಿ ಮತ್ತು ತಂದೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸ್ಥಳೀಯರ ಸಹಕಾರದಲ್ಲಿ ಜ.26ರಂದು ಬಿ.ಸಿ.ರೋಡ್‌ನಲ್ಲಿ ಅವರಿಗೆ ವಿವಾಹ ನೆರವೇರಿಸಲಾಗಿದೆ.

ವಿವಾಹ ಪೂರ್ವದಲ್ಲಿ ಆಕೆ ಗರ್ಭಿಣಿ ಆಗಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಮಗುವಿನ ತಾಯಿ ರಜನಿ ಮತ್ತು ತಂದೆ ಅಶೋಕ ನಾಯ್ಕ ಎಂದು ಗುರುತಿಸಲಾಗಿದ್ದು ಇಬ್ಬರು ಒಂದೇ ಸಮಾಜದವರು. ಆಕೆಗೆ ತಂದೆ ಇಲ್ಲ, ತಾಯಿ ಮತ್ತು ಸಹೋದರಿಯ ಜೊತೆಗೆ ಮಂಚಿ ಗ್ರಾಮದ ನೂಜಿಯಲ್ಲಿ ವಾಸ್ತವ್ಯವಿದ್ದು, ಕೂಲಿ ಕಾರ್ಮಿಕರಾಗಿದ್ದು ಕುಟುಂಬದಲ್ಲಿ ತೀವ್ರ ಬಡತನವಿದೆ ಎಂದು ತಿಳಿದುಬಂದಿದೆ. ಅವರಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಬಂದಿದ್ದ ಅಶೋಕ ಸ್ನೇಹದ ಗುರುತಾಗಿ ಆಕೆಯಲ್ಲಿ ಕುಡಿ ಅರಳಿಸಿದ್ದನ್ನು ಒಪ್ಪಿಕೊಂಡಿದ್ದಾಗಿ ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪಹೇಳಿದ್ದಾರೆ.

salethur_married_couple_2

ಒಂದು ವಾರದ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೆತ್ತ ಆಕೆ ಮನೆಗೆ ಬಂದಾಗ ಮಗುವನ್ನು ಸಾಕುವುದು ಕಷ್ಟ ಎನಿಸಿತ್ತು. ಸ್ನೇಹಿತನ ಸುಳಿವಿಲ್ಲದ ಕಾರಣ ಅಸಹಾಯಕಳಾಗಿ ಯಾರಾದರು ಮಗುವನ್ನು ಸಾಕಿದರೆ ಸಾಕಲಿ ಎಂದು ರಸ್ತೆ ಬದಿಯ ಪೊದೆಯಲ್ಲಿ ತ್ಯಜಿಸಿದ್ದಳು ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ತಂದೆಯ ಹೆಸರು ಬರೆಯುವ ಸಂದರ್ಭದಲ್ಲಿ ಅಶೋಕ ನಾಯ್ಕ ಎಂದು ನಮೂದಿಸಿದ್ದು ದಾಖಲಿಸಲಾಗಿದೆ. ಜೊತೆಗೆ ಪಲ್ಸ್ ಪೊಲಿಯೊ ಲಸಿಕೆ ಕೂಡಾ ಮಗುವಿಗೆ ಮಾಡಲಾಗಿತ್ತು. ಮಗುವೊಂದು ಪೊದೆಯಲ್ಲಿ ಸಿಕ್ಕಿದ್ದು ಸುದ್ದಿ ಆಗುತ್ತಿದ್ದಂತೆ ಆತ ತಲೆ ಮರೆಸಿಕೊಂಡಿದ್ದ.

salethur_married_couple_3

ಘಟನೆಯ ಬಗ್ಗೆ ಸಾಮಾಜಿಕ ಸೇವಾಕರ್ತ, ಬಂಟ್ವಾಳ ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ನೇಮಿರಾಜ ರೈ ಅವರ ಗಮನಕ್ಕೆ ಬಂದಿದ್ದು, ಸ್ಥಳೀಯರಾದ ಮೋಹನದಾಸ ಶೆಟ್ಟಿ, ಪ್ರಮುಖರಾದ ರಾಮ್‌ದಾಸ್ ಬಂಟ್ವಾಳ ನೆರವಿನಲ್ಲಿ ಮನೆಮಂದಿಗೆ ತಿಳಿ ಹೇಳಿದ್ದು ಇಬ್ಬರ ಒಪ್ಪಿಗೆಯಲ್ಲಿ, ಪೋಷಕರು ಮತ್ತು ಪೊಲೀಸರ ಸಹಕಾರದಲ್ಲಿ ಪ್ರಕರಣ ವನ್ನು ಸುಖಾಂತ್ಯ ಮಾಡಿದ್ದಾರೆ.

ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಎದುರು ಪರಸ್ಪರ ಹಾರ ಬದಲಾಯಿಸುವ ಮೂಲಕ ವಿವಾಹ ನೆರವೇರಿಸಲಾಗಿದೆ. ವಿವಾಹ ಸಂದರ್ಭದಲ್ಲಿ ಇಬ್ಬರ ಮನೆಮಂದಿ ಉಪಸ್ಥಿತರಿದ್ದರು. ಜ.27ರಂದು ಅಕೃತ ನೋಂದಣಿ ಮಾಡಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

Write A Comment