ಕನ್ನಡ ವಾರ್ತೆಗಳು

ಕಟೀಲು : ಮೂರು ದಿನಗಳ ದ.ಕ. ಜಿಲ್ಲಾ 20ನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Pinterest LinkedIn Tumblr

Kateelu_kannada_sahitya_1

ಮಂಗಳೂರು / ಕಟೀಲು, (ಸರಸ್ವತಿ ಸದನ ಸಭಾ ಮಂಟಪ, ಗೋಪಾಲಕೃಷ್ಣ ಅಸ್ರಣ್ಣ ವೇದಿಕೆ), ಆ.29: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದ ಸರಸ್ವತಿ ಸದನ ಸಭಾ ಮಂಟಪದಲ್ಲಿ ಗೋಪಾಲಕೃಷ್ಣ ಅಸ್ರಣ್ಣ ವೇದಿಕೆಯಲ್ಲಿ 3 ದಿನಗಳ ಕಾಲ ನಡೆಯಲಿರುವ 20ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ನೀಡಲಾಯಿತು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಾಂಪ್ರದಾಯಿಕ ರೀತಿಯಲ್ಲಿ ತೆಂಗಿನ ಹೂವನ್ನು ಅರಳಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕನ್ನಡ ಇಂದು ರಾಜ್ಯ ಹಾಗೂ ಆಡಳಿತ ಭಾಷೆಯಾಗಿ, ಸಾಮಾನ್ಯ ಜನರ ಭಾಷೆಯಾಗಿ ಶಕ್ತಿ ಪಡೆದಿದೆ. ಆದುದರಿಂದ ಕನ್ನಡ ನಾಶವಾಗುತ್ತದೆ ಎಂಬ ಭಯ ಹಾಗೂ ನಿರಾಶವಾದಿ ಮಾತು ಬೇಡ. ಕನ್ನಡದಲ್ಲಿ ಹೊಸ ಹೊಸ ಸಾಹಿತ್ಯ ಗಳನ್ನು ಹೊರತರುವ ಬಗ್ಗೆ ಇಂದು ಚರ್ಚೆ ಆಗಬೇಕಾಗಿದೆ ಎಂದು ಹೇಳಿದರು.

ಹಿಂದೆಲ್ಲಾ ವಿಧಾನಸಭೆ, ವಿಧಾನ ಪರಿಷತ್ ಸಭೆಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದೇ ಪ್ರತಿಷ್ಠೆಯ ಮಾತಾಗಿತ್ತು. ಆದರೆ ಈಗ ಅಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಾರೆ. ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ಯಾವುದಾದರೂ ಕಡತ, ಪತ್ರವನ್ನು ನೀಡಿದರೂ ಅದನ್ನು ಹರಿದು ಹಾಕುವಷ್ಟರ ಮಟ್ಟಿಗೆ ಕನ್ನಡ ಅಭಿಮಾನ ಬೆಳೆದಿದೆ. ಇದೀಗ ಕನ್ನಡ ಭಾಷೆ ಅಳಿದು ಹೋಗುತ್ತದೆ ಎಂಬ ಭಯವನ್ನು ಬಿಟ್ಟು, ಕನ್ನಡದಲ್ಲಿ ಉತ್ತಮ ಸಂದೇಶ, ಮಾರ್ಗದರ್ಶನ ನೀಡುವ ಶಕ್ತಿದಾಯಕ ಸಾಹಿತ್ಯ ರಚನೆಗೆ ಇಂತಹ ಸಾಹಿತ್ಯ ಸಮ್ಮೇಳನಗಳು ಪ್ರೇರಣೆ ನೀಡಬೇಕು ಎಂದು ಶಂಕರಮೂರ್ತಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

kateel_samelana_photo_3 kateel_samelana_photo_4 kateel_samelana_photo_5 kateel_samelana_photo_6 kateel_samelana_photo_7 kateel_samelana_photo_8

ಸಾಹಿತ್ಯದ ಮೂಲಕ ಸೌಹಾರ್ದದ ಕೊರತೆ ನೀಗಿಸುವ ಪ್ರಯತ್ನವಾಗಲಿ : ಡಿವಿಎಸ್

ದೀಪ ಪ್ರಜ್ವಲನಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಸಮಾಜದಲ್ಲಿಂದು ಸೌಹಾರ್ದ, ಪ್ರೀತಿ, ವಿಶ್ವಾಸ ಹಾಗೂ ಪರಸ್ಪರ ಬಾಂಧವ್ಯದ ಕೊರತೆ ಎದ್ದು ಕಾಣುತ್ತಿದ್ದು, ಸಾಹಿತ್ಯದ ಮೂಲಕ ಅದನ್ನು ನೀಗಿಸುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು. ಸಂಸ್ಕೃತಿ ಮತ್ತು ಸಂಸ್ಕಾರ ಕೊಡುವ ಪುಸ್ತಕಗಳು ಇಂದು ಅಗತ್ಯವಾಗಿದೆ. ಅಂತಹ ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಇಂದು ಕಡಿಮೆಯಾ ಗುತ್ತಿದ್ದು, ಸಮ್ಮೇಳನದಲ್ಲಿ ಈ ಬಗ್ಗೆ ಒತ್ತು ನೀಡುವ ಕೆಲಸ ಆಗಬೇಕು ಎಂದು ಅವರು ನುಡಿದರು.

ಶಿಕ್ಷಣ ಸುಧಾರಣೆಗೆ ನಮ್ಮ ದೃಷ್ಟಿಕೋನ ಬದಲಾಗಬೇಕು :ಸಮ್ಮೇಳನಾಧ್ಯಕ್ಷ ಡಾ.ಸುಕುಮಾರ ಗೌಡ

ಸಮ್ಮೇಳನದ ಸರ್ವಾಧ್ಯಕ್ಷ ಶಿಕ್ಷಣ ತಜ್ಞ ಡಾ.ಎನ್.ಸುಕುಮಾರ ಗೌಡ ಅವರು ಮಾತನಾಡಿ, ಶಿಕ್ಷಣವು ವಸ್ತು ಉತ್ಪನ್ನ ವಿಧಾನವಾಗುವ ಬದಲು ವ್ಯಕ್ತಿ ನಿರ್ಮಾಣ ಪ್ರಕ್ರಿಯೆ ಎಂಬ ಭಾವನೆ ಮೂಡಬೇಕು. ಆದುದರಿಂದ ಶಿಕ್ಷಣದಲ್ಲಿ ಸುಧಾರಣೆಯಾಗಬೇಕಿದ್ದರೆ ಮೊದಲು ನಮ್ಮ ದೃಷ್ಟಿಕೋನದಲ್ಲಿ ಬದಲಾವಣೆಯಾಗಬೇಕಿದೆ ಎಂದು ಹೇಳಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಅಂಶಗಳು ಹೆಚ್ಚಾಗ ಬೇಕು. ಕಲಿಸುವ-ಕಲಿಯುವ ತರಗತಿಗಳು ಶಿಕ್ಷಕ- ವಿದ್ಯಾರ್ಥಿಗಳ ಯೋಚನಾ ಕೇಂದ್ರಗಳಾಗಬೇಕು. ಸ್ವಂತಿಕೆ, ಸೃಜನಶೀಲತೆಗೆ ಒತ್ತು ಕೊಡುವಂತಿರಬೇಕು ಎಂದವರು ಶಿಕ್ಷಣ ಸಂಸ್ಥೆಗಳಿಗೆ ಕಿವಿಮಾತು ಹೇಳಿದರು.

ಇಂಗ್ಲಿಷ್ ಮಾಧ್ಯಮದ ಬಗ್ಗೆ ಖಾರವಾಗಿ ಪ್ರತಿಕ್ರಿಯಿ ಸಿರುವ ಅವರು, ಆಂಗ್ಲ ಮಾಧ್ಯಮ ಶಾಲೆಗಳೆಂದು ಕರೆಸಿ ಕೊಳ್ಳುವ ಬಹುತೇಕ ಶಾಲೆೆಗಳಲ್ಲಿ ಆಂಗ್ಲ ಭಾಷೆಯನ್ನು ಸಂವಹನ ಕ್ರಿಯೆಗಾಗಿ ಬಳಸುವುದಿಲ್ಲ. ಬೋಧನಾ ಮಾಧ್ಯಮವಾಗಿಯೂ ಬಳ ಸುವುದಿಲ್ಲ. ಕೇವಲ ಪರೀಕ್ಷಾ ಮಾಧ್ಯಮವಾಗಿ ಮಾತ್ರವೇ ಬಳಸಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಮಗುವಿನ ಇಂಗ್ಲಿಷ್ ಭಾಷೆ ಸಹಜವಾಗಿ ಬೆಳೆಯದೆ, ಕಲಿಕೆ ಕುಂಠಿತಗೊಳ್ಳುತ್ತದೆ. ಇದರ ಪರಿಣಾಮ ಕಲಿಕಾ ದೋಷಗಳು, ವ್ಯಕ್ತಿತ್ವದ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಅವರು ಹೇಳಿದರು. ಜಡ್ಡುಗಟ್ಟಿದ ಬಿಗಿಯಾದ ಸಾಂಪ್ರದಾಯಿಕ ತರಗತಿಗಳ ಬದಲಿಗೆ ಮುಕ್ತ ಕಲಿಕಾ ಕೇಂದ್ರಗಳು ಹುಟ್ಟಬೇಕು. ಇದು ಸಾಧ್ಯವಾಬೇಕಾದರೆ, ಶಿಕ್ಷಕರಲ್ಲಿ ಹಾಗೂ ಶಿಕ್ಷಣ ವ್ಯವಸ್ಥೆಯ ಸರ್ವರಲ್ಲಿ ತೆರೆದ ಮನ, ಪರಿವರ್ತನಾ ಗುಣ ಮತ್ತು ಎದೆಗಾರಿಕೆ ಮುಖ್ಯ ಎಂದು ಡಾ.ಎನ್.ಸುಕುಮಾರ ಗೌಡ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಡೋಜ ಕೆ.ಪಿ.ರಾವ್ ಕನ್ನಡ ಬಾವುಟವನ್ನು ಸಮ್ಮೇಳನಾಧ್ಯಕ್ಷ ಡಾ.ಎನ್. ಸುಕುಮಾರ ಗೌಡರಿಗೆ ಹಸ್ತಾಂತರಿಸುವ ಮೂಲಕ ಸಮ್ಮೇಳನದ ಸಾರಥ್ಯವನ್ನು ಹಸ್ತಾಂತರಿಸಿದರು.

ವೇದಿಕೆಯಲ್ಲಿ ಕ್ರೀಡಾಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್‌ಕುಮಾರ್ ಕಟೀಲ್, ದ.ಕ. ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಶಾಸಕ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಲಕ್ಷ್ಮೀ ನಾರಾಯಣ ಅಸ್ರಣ್ಣ, ಜಿಪಂ ಸದಸ್ಯ ಈಶ್ವರ ಕಟೀಲು, ಕೊಂಡೆಮೂಲ ಗ್ರಾಪಂ ಅಧ್ಯಕ್ಷೆ ಗೀತಾ ಪೂಜಾರ್ತಿ, ಕಟೀಲು ಚರ್ಚ್ ನ ಧರ್ಮಗುರು ಫಾ. ಫ್ರಾನ್ಸಿಸ್ ಗೋಮ್ಸ್, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕದ್ರಿ ಗೋಪಾಲನಾಥ್, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎಚ್. ಬಿ.ಎಲ್.ರಾವ್, ಕಾಸರಗೋಡು ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ವಿ. ಭಟ್, ಉಡುಪಿ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸುರೇಶ್ ಶೆಟ್ಟಿ ಎಕ್ಕಾರು, ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಆಶಯ ನುಡಿಗಳನ್ನಾಡಿದರು. ವಿದ್ವಾನ್ ಹರಿನಾರಾಯಣ ದಾಸ ಅಸ್ರಣ್ಣ ಸ್ವಾಗತಿಸಿದರು. ಭುವನಾಭಿರಾಮ ಉಡುಪ ವಂದಿಸಿದರು. ಮಂಜುಳಾ ಶೆಟ್ಟಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

11 ಮಂದಿಗೆ ವಿದ್ವತ್ ಸನ್ಮಾನ

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಹಿರಿಯ ಪಾಡ್ದನ ಕಲಾವಿದೆ ಗಿಡಿಗೆರೆ ರಾಮಕ್ಕ ಸಹಿತ, ಹಿರಿಯ ಸಾಹಿತಿ ಕೇಶವ ಉಚ್ಚಿಲ್, ವಾದ್ಯ ಸಂಗೀತ ಗಾರ ವಿದ್ವಾನ್ ಲಿಂಗಪ್ಪ ಸೇರಿಗಾರ, ಸಂಗೀತ ಕಲಾವಿದೆ ಸರೋಜಾ ಎಂ.ರಾವ್, ಬಹುಭಾಷಾ ವಿದ್ವಾಂಸ ಲಕ್ಷ್ಮಣದಾಸ ವೇಲಣಕರ್, ಆಗಮ ವಿದ್ವಾಂಸ ಶಿಬರೂರು ವೇದವ್ಯಾಸ ತಂತ್ರಿ, ಸಾಹಿತಿ ಎ.ಪಿ.ಮಾಲತಿ, ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಭರತನಾಟ್ಯ ವಿದ್ವಾಂಸ ಕೆ. ಮುರಳೀಧರ ರಾವ್ ಹಾಗೂ ಹಿರಿಯ ವಿದ್ವಾಂಸರಾದ ಅಂಗಡಿಮಾರು ಕೃಷ್ಣ ಭಟ್, ಪಾವಂಜೆ ಕೃಷ್ಣ ಭಟ್‌ರನ್ನು ಸನ್ಮಾನಿಸಲಾಯಿತು.

ಪ್ರೊ.ಬಿ.ಎಂ.ಹೆಗ್ಡೆ ಸನ್ಮಾನ ನೆರವೇರಿಸಿದರು. ನಿತ್ಯಾನಂದ ಕಾರಂತ ಪೊಳಲಿ ಅಭಿನಂದನಾ ಭಾಷಣ ಗೈದರು. ಇದೇ ವೇಳೆ ಯಕ್ಷಗಾನ ಸಾಹಿತ್ಯ ಪ್ರದರ್ಶನ, ವಸ್ತು ಪ್ರದರ್ಶನ ಪ್ರಾಂಗಣ, ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನ, ಸ್ವಾವಲಂಬಿ ಸಂತೆ ಸಹಿತ ವಿವಿಧ ಪ್ರದರ್ಶನಗಳ ಉದ್ಘಾಟನೆ ನೆರವೇರಿತು.

Write A Comment