ಕನ್ನಡ ವಾರ್ತೆಗಳು

ಮಂಗಳೂರು ದಸರಾಕ್ಕೆ ರಜತ ಮಹೋತ್ಸವ ಸಂಭ್ರಮ : ಅ. 13 ರಿಂದ 24ರವರೆಗೆ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಅದ್ದೂರಿ ನವರಾತ್ರಿ ಮಹೋತ್ಸವ

Pinterest LinkedIn Tumblr

Kudroli_dasar_meet_1

_ ಸತೀಶ್ ಕಾಪಿಕಾಡ್

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಮಂಗಳೂರು ದಸರಾಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಅಕ್ಟೋಬರ್ 13 ರಿಂದ 24ರವರೆಗೆ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ -2015ನ್ನು ಬಹಳ ವಿಜೃಭಂಣೆಯಿಂದ ನಡೆಸಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾದ ರೂವಾರಿ ಬಿ.ಜನಾರ್ದನ ಪೂಜಾರಿ ತಿಳಿಸಿದರು.

ಸೋಮವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೂಜಾರಿಯವರು, ಶ್ರೀ ಕ್ಷೇತ್ರದ ಜೀರ್ಣೋದ್ಧಾರವಾಗಿ ಹಾಗೂ ಮಂಗಳೂರು ದಸರಾ ಆರಂಭವಾಗಿ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬ್ರಹ್ಮಕಲಶೋತ್ಸವ ನಡೆಸಲಾಗುವುದು, ಜೊತೆಗೆ ಶ್ರೀ ಕ್ಷೇತ್ರದ ರಜತಮಹೋತ್ಸವ ಅಂಗವಾಗಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಬಹಳ ಅದ್ಧೂರಿ ಮತ್ತು ವೈಭವಯುತವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

Kudroli_dasara_Press_5 Kudroli_dasara_Press_6 Kudroli_dasara_Press_7 Kudroli_dasara_Press_8 Kudroli_dasara_Press_9

ದಸರಾವನ್ನು ಅದ್ದೂರಿಯಾಗಿ ಮಾಡಿದರೆ ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇದರಿಂದ ಎಲ್ಲಾ ರೀತಿಯಲ್ಲಿ ಆರ್ಥಿಕವಾಗಿ ಆದಾಯ ಹೆಚ್ಚುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂದು ಪೂಜಾರಿ ತಿಳಿಸಿದರು.

ಹೊರೆಕಾಣಿಕೆ :

ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಅಕ್ಟೋಬರ್ ೧೪ರಂದು ಸಂಜೆ ನಾಲ್ಕು ಗಂಟೆಗೆ ನಗರದ ಕೇಂದ್ರ ಮೈದಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದ್ದು, ಭಕ್ತಾಧಿಗಳು ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಪೂಜಾರಿ ಮನವಿ ಮಾಡಿದರು.

ಮಳೆಗಾಗಿ ಪ್ರಾರ್ಥನೆ :

ಮಳೆ ಕಡಿಮೆಯಾಗಿ ಸಮಸ್ಯೆ ಉಂಟಾಗಿರುವುದರಿಂದ ಜನ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಈಗಾಗಲೇ ನಿರಂತರವಾಗಿ ಮಳೆಗಾಗಿ ಪ್ರಾರ್ಥನೆ ಸಲಿಸುತ್ತಿದ್ದೇವೆ. ಬರಗಾಲ ನೀಗಿಸುವಂತೆ ಪ್ರಾರ್ಥಿಸಿ ಅ.13 ರಿಂದ 15ರವರೆಗೆ ಪೂಜೆ ಸಲ್ಲಿಸಲಾಗುವುದು ಎಂದೂ ಪೂಜಾರಿ ತಿಳಿಸಿದರು.

Kudroli_dasar_meet_2 Kudroli_dasar_meet_3 Kudroli_dasar_meet_4

ಎತ್ತಿನಹೊಳೆ ಯೋಜನೆ ಕೈಬಿಡಲು ವಿಶೇಷ ಪ್ರಾರ್ಥನೆ :

ಈಗಾಗಲೇ ಕಾಮಗಾರಿ ಆರಂಭಗೊಂಡು ಜಿಲ್ಲೆಗೆ ಮಾರಕವಾಗಿ ಪರಿಣಮಿಸಲಿರುವ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವ ಸದ್ಬುದ್ಧಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಾಯಕರುಗಳಿಗೆ ಭಗವಂತನು ನೀಡಲಿ ಎಂದು ಶ್ರೀ ಕ್ಷೇತ್ರದಲ್ಲಿ ಅಕ್ಟೋಬರ್ 16ರಂದು ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಪ್ರಾರ್ಥಿಸಲಾಗುವುದು.

ಎತ್ತಿನಹೊಳೆ ಯೋಜನೆಯನ್ನು ಕೈಬಿಟ್ಟು ಕೋಲಾರ, ತುಮಕೂರು ಸಹಿತ ನೀರಿಲ್ಲದ ಜಿಲ್ಲೆಗಳಿಗೆ ಪರ್ಯಾಯ ನೀರು ಒದಗಿಸುವ ಯೋಜನೆ ಕೈಗೊಳ್ಳುವ ಮನಸ್ಸನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹಾಗೂ ಇತರ ರಾಜಕಾರಣಿಗಳಿಗೆ ಶ್ರೀ ದೇವಿ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗುವುದು. ಆದರೆ ಈ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳನ್ನು ಆಮಂತ್ರಿಸುವುದಿಲ್ಲ. ಸ್ವಚ್ಚೆಯಿಂದ ಬರುವವರಿಗೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಾಗಿ ಪೂಜಾರಿ ಹೇಳಿದರು.

ಎತ್ತಿನಹೊಳೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿಲ್ಲ. ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರದ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಜನಸಾಮಾನ್ಯರಿಗೆ, ಶಾಲಾ ಮಕ್ಕಳಿಗೆ ಅರ್ಥವಾಗುವ ಈ ಸತ್ಯ ಶಾಸಕರು, ಸಚಿವರುಗಳಿಗೆ ಅರ್ಥವಾಗದಿರುವುದು ವಿಪರ್ಯಾಸ ಎಂದರು.

ದ.ಕ.ಜಿಲ್ಲೆಯ ಜನರು ಯೋಜನೆ ಕೈಬಿಡುವಂತೆ ಒತ್ತಾಯಿಸಿ ಈಗಾಗಲೇ ಅನೇಕ ರೀತಿಯ ಹೋರಾಟ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಜನತೆಯೇ ಯಾರಿಗೂ ಪ್ರಯೋಜನವಿಲ್ಲದ ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದರೆ. ಇಷ್ಟೆಲ್ಲಾ ಜಾಗೃತಿಯ ಮಧ್ಯೆಯೂ ಕೆಲವರು ಜನಜಾಗೃತಿ ಜಾಥಾ ಮಾಡಲು ಹೊರಟಿರುವುದು ನಾಟಕವಾಗಿದೆ. ಜನರಿಗೆ ಜಾಗೃತಿಯ ಅಗತ್ಯವಿಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕಾದವರು. ಸಚಿವರು, ಶಾಸಕರು, ಸಂಸದರು ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಖಜಾಂಜಿ ಪದ್ಮರಾಜ್. ಆರ್ (ನ್ಯಾಯವಾದಿ) ಶ್ರೀ ಕ್ಷೇತ್ರ ಅಭಿವೃದ್ಧಿ ಮಂಡಳಿ ಸದಸ್ಯರಾದ ಬಿ.ಕೆ.ತಾರಾನಾಥ್, ಬಿ.ದೇವೇಂದ್ರ ಪೂಜಾರಿ, ಕೆ.ಮಹೇಶ್ಚಂದ್ರ,ಡಾ. ಬಿ.ಜಿ.ಸುವರ್ಣ, ಡಿ.ಡಿ.ಕಟ್ಟೆಮಾರ್, ಕಾರ್ಪೊರೇಟರ್ ರಾಧಕೃಷ್ಣ, ಲಿಲಾಕ್ಷ ಕರ್ಕೇರ, ಹರಿಕೃಷ್ಣ ಬಂಟ್ವಾಳ್, ಎಸ್.ಜೈವಿಕ್ರಮ್, ಡಾ. ಅನುಸೂಯ ಸಾಲ್ಯಾನ್, ಮುಂತಾದವರು ಉಪಸ್ಥಿತರಿದ್ದರು.

1 Comment

Write A Comment