ಕನ್ನಡ ವಾರ್ತೆಗಳು

ಉಡುಪಿಯನ್ನ ಬೆಚ್ಚಿಬೀಳಿಸಿದ ಪತ್ರಕರ್ತ ಹಿತೇಂದ್ರ ಪ್ರಸಾದ್ ಕೊಲೆ ಪ್ರಕರಣ: ಮೂವರು ಆರೋಪಿಗಳು ದೋಷಮುಕ್ತಿ

Pinterest LinkedIn Tumblr

ಉಡುಪಿ: ಅಂದು ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಪ್ರಕರಣವಿದು. 2006ನೇ ಆಗಸ್ಟ್ 21 ರಂದು ರಾತ್ರಿ 10 ಗಂಟೆಗೆ ಹೈ ಮಾರುತ ಪತ್ರಿಕೆ ಸಂಪಾದಕ ಹಿತೇಂದ್ರ ಪ್ರಸಾದ್ ಅವರು ಉಡುಪಿಯ ಶಿವಳ್ಳಿ ಗ್ರಾಮದ ತಲ್ಲೂರ್‍ಸ್ ಬಾರ್ ಸಮೀಪ ದುಷ್ಕರ್ಮಿಗಳ ತಲವಾರು ಪೆಟ್ಟಿಗೆ ಕೊಲೆಯಾಗಿದ್ದರು. ಯಾವ ಉದ್ದೇಶವೋ ಏನೋ ಮೈಮೇಲೆ 50 ಮಚ್ಚಿನ ಏಟುಗಳು ಇದ್ದವು. ಹಿತೇಂದ್ರ ಅವರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಸದ್ಯ ದೋಷಮುಕ್ತಿಗೊಂಡು ಬಿಡುಗಡೆಗೊಂಡಿದ್ದಾರೆ. ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ತೀರ್ಪು ನೀಡಿದೆ.

Hitendra prasad_Murder_Accused released (1) Hitendra prasad_Murder_Accused released (2)

ಕಳೆದ ವರ್ಷ ಕೊಲೆಯಾದ ಪಿಟ್ಟಿ ನಾಗೇಶನ ಶಿಷ್ಯರು ಎನ್ನಲಾದ ಅಲೆವೂರಿನ ನಿವಾಸಿ ಸಲೀಂ ಅಲಿಯಾಸ್ ಮಂಚಿ ಸಲೀಂ (31), ಉಡುಪಿ ಕೊಳಲಗಿರಿ ನಿವಾಸಿ ರಮೇಶ ಅಲಿಯಾಸ್ ಅಟ್ಟೆ ರಮೇಶ(37), ಕುಕ್ಕಿಕಟ್ಟೆ ಸಮೀಪದ ನಿವಾಸಿ ಮಣಿಕಂಠ(32) ಸದ್ಯ ಬಿಡುಗಡೆಯಾದವರು.

ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ರುವಾರಿ ಪಿಟ್ಟಿ ನಾಗೇಶ್ ಕಳೆದ ವರ್ಷ ಕೊಲೆಯಾಗಿದ್ದಾನೆ. ಅಲ್ಲದೇ ಕೊಲೆ ಆರೋಪದ ಎರಡನೇ ಆರೋಪಿ ಇಂದಿರಾನಗರದ ದಿನೇಶ ಅಲಿಯಾಸ್ ಮಿಮ್ಮಿ ಎಂಬಾತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Hitendra prasad_Murder_Accused released (3)

(ಸಂಗ್ರಹ ಚಿತ್ರಗಳು)

ನಡೆದಿದ್ದಾದರೂ ಏನು?
ಅಂದು 2006ನೇ ಆಗಸ್ಟ್ 21 ರಂದು ರಾತ್ರಿ ಹಿತೇಂದ್ರ ಪ್ರಸಾದ್ ತನ್ನ ಪತ್ನಿ ಹಾಗೂ ಇತರ ಕೆಲವು ಪತ್ರಕರ್ತರೊಂದಿಗೆ ಮಣಿಪಾಲದ ಸಮೀಪದಲ್ಲಿ ಒಂದೆಡೆ ಲೈವ್‌ಬ್ಯಾಂಡ್ ವಿರುದ್ಧ ನಡೆಯುತ್ತಿದ್ದ ಜೆ.ಡಿ.ಎಸ್. ಪಕ್ಷದ ಪ್ರತಿಭಟನೆಯ ವರದಿಗಾಗಿ ಕಾರಿನಲ್ಲಿ ತೆರಳಿದ್ದರು. ಇದೇ ವೇಳೆ ಪ್ರತಿಭಟನಾಕರರ ತಂಡವೂ ಸ್ಥಳದಲ್ಲಿ ನೆರೆದಿತ್ತು. ಸ್ಥಳದಲ್ಲಿದ್ದ ಕೆಲ ಮಾಧ್ಯಮದವರು ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ಹಿತೇಂದ್ರ ಪ್ರಸಾದ್ ಅವರು ತನ್ನ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಾ ಹೊರಗಡೆ ಬಂದ ವೇಳೆ ನಿರ್ಜನ ಪ್ರದೇಶದಲ್ಲಿ ಏಕಾ‌ಏಕಿ ಎರಗಿದ ನಾಲ್ವರು ದುಷ್ಕರ್ಮಿಗಳು ಹಿತೇಂದ್ರನ ತಲೆ, ಕುತ್ತಿಗೆ ಹಾಗೂ ಕೈ ಭಾಗಕ್ಕೆ ಮಾರಣಾಂತಿಕವಾಗಿ ಕಡಿದು ಸಮೀಪದ ಚರಂಡಿಗೆಸೆದು ಪರಾರಿಯಾಗುತ್ತಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಹಿತೇಂದ್ರ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಅದೇ ರಾತ್ರಿ 12.25ಕ್ಕೆ ಕೊನೆಯುಸಿರೆಳೆದಿದ್ದರು. ಕೊಲೆ ನಡೆದ ತರುವಾಯ ನೆರೆದಿದ್ದ ಕೆಲವರು ಕಾರಿನಲ್ಲಿದ್ದ ಆತನ ಪತ್ನಿಯನ್ನು ಮನೆಗೆ ತಲುಪಿಸಿ ತಾವುಗಳು ಆ ಕೇಸಿನಿಂದ ಬಚಾಯಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ.

ಆರೋಪಿಗಳನ್ನು ಎರಡೇ ದಿನದಲ್ಲಿ ಬಂಧಿಸಿದ್ದ ಪೊಲೀಸರು
ಇತ್ತ ಪತ್ರಕರ್ತನೋರ್ವನ ಕೊಲೆ ನಡೆದ ಹಿನ್ನೆಲೆ ಉಡುಪಿ ಪೊಲೀಸರು ಅಲರ್ಟ್ ಆಗುತ್ತಾರೆ. ಹಿತೇಂದ್ರ ಪ್ರಸಾದ್ ಅವರಿಂದ ತನ್ನ ಕೆಲವು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿಸಿಕೊಂಡು ಆತನಿಂದ ಜೀವಬೆದರಿಕೆಯಲ್ಲಿ ಬದುಕುತ್ತಿದ್ದನೆನ್ನಲಾದ ಪಿಟ್ಟಿ ನಾಗೇಶ್ ಪ್ರಕರಣದ ರುವಾರಿಯಾಗಿರುವ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಸುಳಿವಿನ ಮೇರೆಗೆ ಎರಡೇ ದಿನದಲ್ಲಿ ಉಡುಪಿಯ ಇಂದ್ರಾಳಿಯ ರೈಲ್ವೇ ನಿಲ್ದಾಣದಲ್ಲಿ ಮಣಿಪಾಲ ಹಾಗೂ ಡಿಸಿ‌ಐಬಿ ಪೊಲಿಸರು ಕಾರ್ಯಾಚರಣೆ ನಡೆಸಿ ಈ ನಾಲ್ವರು ಆರೋಪಿಗಳನ್ನು ಬಂಧಿಸುತ್ತಾರೆ. ತಮ್ಮ ಪ್ರಾಣಕ್ಕೆ ಕುತ್ತು ತರುವ ವಿಚಾರದಲ್ಲಿ ಪಿಟ್ಟಿ ನಾಗೇಶ ಹಿತೇಂದ್ರನನ್ನು ಕೊಲ್ಲುವಂತೆ ಈ ನಾಲ್ವರಿಗೆ ಸೂಚಿಸಿದ್ದಲ್ಲ್ಲದೇ ಅವರೆಲ್ಲರನ್ನೂ ಬೈಕಿನಲ್ಲಿ ಕರೆದುತಂದು ಆ ಸ್ಥಳಕ್ಕೆ ಬಿಟ್ಟಿದ್ದ ಎನ್ನಲಾಗಿತ್ತು. ಅದರಂತೆಯೇ ಈ ನಾಲ್ವರು ಹಿತೇಂದ್ರನನ್ನು ಲೈವ್‌ಬ್ಯಾಂಡ್ ಸಮೀಪ ನಿರ್ಜನ ಪ್ರದೇಶದಲ್ಲಿ ಮಾರಕಾಯುಧಗಳಿಂದ ಹೊಡೆದು ಕೊಂದಿದ್ದರು ಎಂದು ಆರೋಪಿಸಲಾಗಿತ್ತು. ಈತನ್ಮಧ್ಯೆಯೇ ಪಿಟ್ಟಿ ನಾಗೇಶನನ್ನು 2006 ಆಗಸ್ಟ್ 28 ರಂದು ಬಂಧಿಸಲಾಗಿತ್ತು.

27 ಜನ ಸಾಕ್ಷಿದಾರರ ವಿಚಾರಣೆ
ಪ್ರಕರಣದ ಬಗ್ಗೆ ಅಂದಿನ ಮಣಿಪಾಲ ಇನ್ಸ್‌ಪೆಕ್ಟರ್ ಸಂಜೀವ ನಾಯ್ಕ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ನಡುವೆ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಅವರ ಪೈಕಿ ಪಿಟ್ಟಿ ನಾಗೇಶ್ ಕಳೆದ ವರ್ಷ ಕೊಲೆಯಾದರೇ ಇನ್ನೋರ್ವ ಆರೋಪಿ ದಿನೇಶ ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಉಳಿದ ಮೂವರು ಆರೋಪಿಗಳಾದ ಸಲೀಂ, ರಮೇಶ ಹಾಗೂ ಮಣಿಕಂಠ ಎಂಬವರ ವಿರುದ್ಧ ಮೃತ ಹಿತೇಂದ್ರ ಪ್ರಸಾದನ ಪತ್ನಿ, ಅತ್ತೆ, ಘಟನೆಯ ದಿನದಂದು ಸ್ಥಳದಲ್ಲಿದ್ದ ಕೆಲವು ಪತ್ರಕರ್ತರು, ಪಕ್ಷದ ಮುಖಂಡರು, ಸ್ಥಳದಲ್ಲಿದ್ದ ಬಾರ್‌ಗೆ ಸಂಬಂದಪಟ್ಟ ಕೆಲವರು, ಪೊಲೀಸರು, ಹಾಗೂ ವೈಧ್ಯಾಧಿಕಾರಿಗಳು ಸೇರಿದಂತೆ 27 ಮಂದಿಯ ಸುದೀರ್ಘ ವಿಚಾರಣೆಯೂ ನಡೆದಿತ್ತು.

ಆರೋಪಿಗಳ ಬಗ್ಗೆ ಮಾಡಲಾದ ಆರೋಪಗಳು ಸಾಕ್ಷ್ಯಾಧಾರಗಳಿಂದ ರುಜುವಾತಾಗದ ಹಿನ್ನೆಲೆಯಲ್ಲಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಅವರು ಮೂವರು ಆರೋಪಿಗಳನ್ನು ಬಿಡುಗಡೆಗೊಳಿಸಿರುತ್ತಾರೆ.

ಆರೋಪಿಗಳಾದ ಸಲೀಂ ಹಾಗೂ ರಮೇಶ ಪರವಾಗಿ ಉಡುಪಿ ನ್ಯಾಯವಾದಿ ಟಿ. ವಿಜಯ ಕುಮಾರ್ ಶೆಟ್ಟಿ ಹಾಗೂ ಮಣಿಕಂಠ ಪರವಾಗಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ವಾದಿಸಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Write A Comment