ರಾಷ್ಟ್ರೀಯ

ವರ್ಷ ತುಂಬಿದ ಸರ್ಕಾರ : ಮೋದಿ ಮಾಡಿದ್ದೇನು ..? ಜನ ಹೇಳೋದೇನು..?

Pinterest LinkedIn Tumblr

Modi-one-Year--ii

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದು ವರ್ಷದಲ್ಲಿ ಹಲವು ಜನಪರ ಯೋಜನೆಗಳನ್ನು  ಜಾರಿಗೆ ತಂದಿದ್ದಾರೆ. ಕೇವಲ ಜಾರಿಯಷ್ಟೇ ಅಲ್ಲ ಕೆಲ ಯೋಜನೆಗಳು ಅನುಷ್ಠಾನಕ್ಕೂ ಬಂದಿವೆ. ಇವುಗಳಲ್ಲಿ ಪ್ರಮುಖವಾಗಿ ಹೆಸರಿಸಬಹುದಾದವು ಕೆಲವಿವೆ.  2014ರ ಮೇ 26ರಂದು ನರೇಂದ್ರ ಮೋದಿಯವರು

ಈ ದೇಶದ ಪ್ರಧಾನಿಯಾಗಿ ಭಾರೀ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದಾಗ ಹೇಳಿದ್ದ ಒಂದು ಮಾತನ್ನು ಸಾಮಾನ್ಯವಾಗಿ ಯಾರು ಮರೆಯುವಂತಿಲ್ಲ.  ಅವರು ಹೇಳಿದ್ದಿಷ್ಟೇ. ನಾನು ಈ ದೇಶದ ಪ್ರಧಾನಮಂತ್ರಿಯಲ್ಲ . ನಿಮ್ಮ ಪ್ರಧಾನ ಸೇವಕ ಎಂದು.  ಅವರ ಆ ಮಾತಿನಂತೆಯೇ ಮೋದಿ ಕೆಲಸ ಮಾಡುತ್ತಾ ಮುಂದೆ ಸಾಗಿದ್ದಾರೆ. ಅದರಲಿ, ಮುಖ್ಯವಾಗಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳೆಂದರೆ, ಜನ-ಧನ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಪಘಾತ ವಿಮಾ ಯೋಜನೆ, ಹಿರಿಯರಿಗೆ ಪಿಂಚಣಿಗಳು ಅತ್ಯಂತ ಜನಪ್ರಿಯವಾಗಿವೆ.

ಜನ-ಧನ ಯೋಜನೆಯಲ್ಲಿ ಇದುವರೆಗೆ 15 ಕೋಟಿಗೂ ಹೆಚ್ಚು ಖಾತೆಗಳು ಸಾರ್ವಜನಿಕ ವಲಯದ ವಿವಿಧ ಬ್ಯಾಂಕ್‌ಗಳಲ್ಲಿ  ಆರಂಭವಾಗಿದ್ದು, ಅಷ್ಟೂ ಜನ ಫಲಾನುಭವಿಗಳಾಗಿದ್ದಾರೆ. ಪ್ರತಿಯೊಬ್ಬರ ಖಾತೆಗೆ 500 ರೂ.ಗಳನ್ನು ಜಮೆ ಮಾಡಲಾಗಿದೆ.  ಸುಕನ್ಯ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಭವಿಷ್ಯದ ನಿಧಿಯನ್ನು ಸ್ಥಾಪಿಸುವ ಯೋಜನೆ ಕೂಡ ಜನರಿಗೆ ಹತ್ತಿರವಾಗಿದೆ. ಅಪಘಾತ ವಿಮೆ ಯೋಜನೆಯಡಿ ಫಲಾನುಭವಿಗಳು ತಿಂಗಳಿಗೆ ಒಂದು ರೂ. ಅಂದರೆ ವಾರ್ಷಿಕ 12 ರೂಪಾಯಿ ಜಮೆ ಮಾಡುವ ಮೂಲಕ 2 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಅದೇ ರೀತಿ 18ರಿಂದ 40 ವರ್ಷ ವಯಸ್ಸಿನವರಿಗೆ ದಿನಕ್ಕೆ 1 ರೂಪಾಯಿನಂತೆ ವಾರ್ಷಿಕ 330 ರೂ. ಸಂದಾಯ ಮಾಡಿ ಎರಡು ಲಕ್ಷವರೆಗೆ ವಿಮಾ ಸೌಲಭ್ಯ ಪಡೆಯುವ ಯೋಜನೆ ಕೂಡ ಜನಮನದಲ್ಲಿ ಸ್ಥಾನಗಳಿಸಿದೆ. ಹಿರಿಯರಿಗೆ  ಪಿಂಚಣಿ ಯೋಜನೆ ಕೂಡ ಈಗಾಗಲೇ ಅನೇಕ ಮಂದಿಯನ್ನು ತಲುಪಿದೆ.

ಸ್ವಚ್ಚ ಭಾರತ:

ನರೇಂದ್ರ ಮೋದಿಯವರು ತಾವು ಪ್ರಧಾನಿಯಾದ ತಕ್ಷಣ ಕಂಡದ್ದು , ಸ್ವಚ್ಚ ಭಾರತದ ಕನಸು. ಅವರು ಕಳೆದ ವರ್ಷ ಅಕ್ಟೋಬರ್ 2ರಂದು  ಗಾಂಧಿ ಜಯಂತಿಯಂದು ಸ್ವಚ್ಚ ಭಾರತ ಪರಿಕಲ್ಪನೆಗೆ ಮೂರ್ತ ರೂಪ ನೀಡಿದರು.  ಅದು ಎಲ್ಲೆಲ್ಲೂ ಸ್ವಚ್ಚತೆಯ  ಗಾಳಿ ಬೀಸುವಂತೆ ಮಾಡಿದೆ.  ಆರು ತಿಂಗಳ ಕೆಳಗೆ ಕೊಳಕಿನಿಂದ ತುಂಬಿರುತ್ತಿದ್ದ ಪ್ರದೇಶಗಳು ಈಗ ಸ್ವಚ್ಚವಾಗಿ ಕಾಣುವ ಹಾದಿಯಲ್ಲಿ ಮುಂದೆ ಸಾಗಿವೆ. ಇದು ನಿಜಕ್ಕೂ ಒಂದು ಪ್ರಶಂಸನಾರ್ಹ ಬೆಳವಣಿಗೆ.
ಮೇಕ್ ಇನ್ ಇಂಡಿಯ:
ಪ್ರಧಾನಿ ಮೋದಿಯವರ ಇನ್ನೊಂದು ಕನಸು ಮೇಕ್ ಇನ್ ಇಂಡಿಯ ಕೂಡ ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ. ಅನೇಕ ಮುಂದುವರೆದ ರಾಷ್ಟ್ರಗಳು ಈಗ ಭಾರತದತ್ತ ದೃಷ್ಟಿ ಬೀರುವಂತಾಗಿದೆ.   ಈ ಮೊದಲು ಬೇರೆ ದೇಶ ಗಳತ್ತ ಭಾರತ ಮುಖ ಮಾಡಿ ನೋಡುವಂತಾಗಿದ್ದರೆ, ಇದೀಗ ಒಂದು ವರ್ಷದಿಂದೀಚೆಗೆ ಆ ದೇಶಗಳೇ ನಮ್ಮತ್ತ ತಿರುಗಿ ನೋಡು ವಂತಾಗಿರುವುದು ಹೆಮ್ಮೆಯ ವಿಷಯವಾಗಿರಬಹುದು.
ಆಂತರಿಕ ಸಂಬಂಧ:
ಇಷ್ಟೆಲ್ಲ ಅಭಿವೃದ್ಧಿ ಜನಪ್ರಿಯತೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಹೋದ್ಯೋಗಿಗಳ ನಡುವಣ ಸಂಬಂಧಗಳು ಹೇಗಿವೆ ಎಂಬುದನ್ನು ನಾವು ಕೊಂಚ ಅವಲೋಕಿಸಿದರೆ ಒಳ್ಳೆಯದು ಎನಿಸುತ್ತದೆ.  ಪ್ರಧಾನಿ ನರೇಂದ್ರ ಮೋದಿಯವರು ತಾವು ವೈಯಕ್ತಿಕವಾಗಿ ಕೆಲಸ ಮಾಡುವುದರತ್ತ ಹೆಚ್ಚು ಗಮನ ನೀಡಿ, ಇತರರಿಂದ(ಸಚಿವರು, ಸಂಸದರು) ಕೆಲಸ ಮಾಡಿಸುವ ನಿಟ್ಟಿನಲ್ಲಿ ಅಷ್ಟಾಗಿ ಗಮನ ನೀಡಿಲ್ಲ ಎನ್ನಬಹುದು. ಏಕೆಂದರೆ ನರೇಂದ್ರ ಮೋದಿಯವರು ಪ್ರತಿಯೊಬ್ಬ ಸಚಿವನ ವೈಯಕ್ತಿಕ ವಿಷಯದಲ್ಲೂ ಪ್ರವೇಶಿಸುವುದು ಒಳಗೊಳಗೆ ಅಸಮಾ ಧಾನಗಳು ಹೆಚ್ಚುವಂತೆ ಮಾಡಿವೆ.
ಮೋದಿಯವರ ಸಂಪುಟದಲ್ಲಿ ನಮಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅವಕಾಶವೇ ಇಲ್ಲ. ಎಲ್ಲ  ಖಾತೆಗಳಲ್ಲೂ ಪ್ರಧಾನಿಯವರೇ ಮಧ್ಯಪ್ರವೇಶಿಸುತ್ತಾರೆ. ಅವರು ಯಾರನ್ನೂ ನಂಬುವುದಿಲ್ಲ ಎಂಬ ಅಪಸ್ವರಗಳು ಈಗ ಅವರ ಸಂಪುಟದಲ್ಲೇ ಕೇಳಿ ಬರತೊಡಗಿವೆ. ಮೋದಿಯವರು ಒಂದು ರೀತಿಯಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಹೊಂದಿದ್ದಾರೆ ಎಂಬ ಗುಸುಗುಸು ಅವರ ಪಕ್ಷದಲ್ಲೇ ನಡೆಯುತ್ತಿದೆ.  ನರೇಂದ್ರ ಮೋದಿಯವರದು ಸಂಕೀರ್ಣವಾದ ವ್ಯಕ್ತಿತ್ವ. ಅವರು ಒಬ್ಬ ಸಮರ್ಥ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾಯಕತ್ವ ತಂಪೆರೆಯುವ ತೆಂಗಿನ ಮರವಾಗಬೇಕೆ ಹೊರತು ಆಲದ ಮರವಾಗಬಾರದು. ಏಕೆಂದರೆ ಆಲದ ಮರದ ಕೆಳಗೆ ಯಾವುದೇ ಸಸಿಗಳು ಬೆಳೆಯಲು ಸಾಧ್ಯವಿಲ್ಲ. ಈ ಮಾತು ನಿಜವಾಗದಂತೆ ಬಿಜೆಪಿ ನಾಯಕರು ಎಚ್ಚರ ವಹಿಸಬೇಕಾದ ಅಗತ್ಯವಿದೆ.  ಈ ಎಲ್ಲ ಕಾರಣಗಳಿಂದಾಗಿ ಮೋದಿ ಸಹೋದ್ಯೋಗಿಗಳಾಗಲಿ, ಅವರ ಹಿಂಬಾಲಕರಾಗಲಿ ಮೋದಿಯವರ ವೇಗಕ್ಕೆ ಹೆಜ್ಜೆ ಹಾಕುವುದು ಕೊಂಚ ಕಷ್ಟ ಎನಿಸುತ್ತದೆ. ಮೋದಿಯ ನಾಯಕತ್ವ ಮತ್ತು ರಾಜನೀತಿಯ ಬಗ್ಗೆ ಹೇಳುವುದಾದರೆ ಅದ್ವಿತೀಯ. ಅಮೆರಿಕ ಅಧ್ಯಕ್ಷ ಒಬಾಮ ಅವರೇ ಖುದ್ದಾಗಿ ಮೋದಿಯವರ ಅಭಿಮಾನಿಯಾಗಿದ್ದಾರೆ ಎಂದರೆ ಈ ಬಗ್ಗೆ ಯೋಚನೆ ಮಾಡಬೇಕು. ಈಗ ಬಿಜೆಪಿ ಮತ್ತು  ಎನ್‌ಡಿಎ ಸರ್ಕಾರ ನಡೆದಿರುವ ಹಾದಿ ಕಡಿಮೆ. ಸವೆಸಬೇಕಾದ ದಾರಿ ಉದ್ದವಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾಯಕರು ಮುನ್ನಡೆಯುವುದು ಅಗತ್ಯವಾಗುತ್ತದೆ.

ಕೇಂದ್ರ-ರಾಜ್ಯ ಸಂಬಂಧ:
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧದ ಬಗ್ಗೆ ನಾಯಕರು ಅತ್ಯಂತ ಸೂಕ್ಷ್ಮವಾಗಿ ವ್ಯವಹರಿಸಬೇಕಾಗುತ್ತದೆ. ಕೇಂದ್ರದಲ್ಲಿ ಬೇರೆ ಸರ್ಕಾರವಿದ್ದು , ರಾಜ್ಯಗಳಲ್ಲಿ ಬೇರೆ ಪಕ್ಷದ ಸರ್ಕಾರಗಳಿದ್ದರೆ ಅಲ್ಲಿ ಸಂಘರ್ಷಗಳು ಸಾಮಾನ್ಯ. ಆದರೆ ಆ ಸಂಘರ್ಷಗಳು ಬೃಹದಾಕರವಾಗಿ  ಬೆಳೆದು ಮನಸ್ತಾಪಗಳಿಗೆ ಕಾರಣವಾಗಿ ಅಭಿವೃದ್ದಿಗೆ ಹಿನ್ನಡೆಯಾಗಬಾರದು. ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ತುಂಬ ಜಾಗರೂಕತೆಯಿಂದ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.
ಇಲ್ಲಿ ಇನ್ನು ಒಂದಂಶ ನೆನಪಿಡಲೇಬೇಕು. ಇತರ ರಾಜಕೀಯ ಪಕ್ಷಗಳಿಗೂ ಬಿಜೆಪಿಗೂ ನಡುವೆ ಒಂದು ಅಂತರವಿದೆ. ಎಲ್ಲ ಪಕ್ಷಗಳು ಸ್ವತಂತ್ರವಾಗಿದ್ದರೆ ಬಿಜೆಪಿಗೆ ಹಾಗಲ್ಲ. ಬಿಜೆಪಿ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ ಎಸ್) ಇದೆ. ಭಾರತವನ್ನು ವಿಶ್ವದಲ್ಲಿ ಸೂಪರ್ ಪವರ್ ದೇಶವನ್ನಾಗಿ ಪರಿವರ್ತಿಸುವುದು ಆರ್‌ಎಸ್‌ಎಸ್ ಮುಖ್ಯ ಅಜೆಂಡಾ. ಇದನ್ನು ಅರಿತಿರುವ ಆರ್‌ಎಸ್‌ಎಸ್ ಪಕ್ಕ ಅಭಿಮಾನಿ ನರೇಂದ್ರ ಮೋದಿಯವರು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಒಬ್ಬ ಪ್ರಧಾನಿ ಇವುಗಳನ್ನು ಆರ್‌ಎಸ್‌ಎಸ್ ನೀತಿಗೆ ಅನುಗುಣವಾಗಿ ಅನುಷ್ಠಾನಗೊಳಿಸುವುದು ಅಷ್ಟೂ ಸುಲಭವಾದ ಮಾತಲ್ಲ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದಾಗಲೂ  ನಮಗೆ ಇದರ ಅನುಭವವಾಗಿದೆ. ಸಂಘ ಪರಿವಾರ ಮತ್ತು ಪಕ್ಷಗಳ ನಡುವೆ ಸಮನ್ವಯತೆ ಸಾಧಿಸುವುದು ಪಕ್ಷ ಹಾಗೂ ಸಂಘದ ಹಿರಿಯರ ಹೊಣೆಯಾಗಿರುತ್ತದೆ. ಯಾವುದೇ ಅಜೆಂಡಾ, ಯೋಜನೆಗಳಿಗಿಂತ ಜನಹಿತ ಮುಖ್ಯ ಎಂಬುದನ್ನು  ಆಡಳಿತ ನಡೆಸುವವರು ಗಮನದಲ್ಲಿಡಬೇಕು.

-ಚಿಕ್ಕರಸು

————————-

* ಸಾಧನೆಯ ಹಾದಿಯಲ್ಲಿ : ಮೋದಿ ದಿಟ್ಟ ಹೆಜ್ಜೆ
125 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಂತಹ ಬೃಹತ್ ಪ್ರಜಾತಂತ್ರ ವ್ಯವಸ್ಥೆಯ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರವೊಂದರ ಒಂದೇ ಒಂದು ವರ್ಷ ಅವಧಿಯಲ್ಲಿ ಅದರ ಸಾಧನೆಯ ಬಗ್ಗೆ ಮಾತನಾಡುವುದು ಅಷ್ಟೇನೂ ಸರಿಯೆನಿಸಲಾರದೇನೋ ಎಂಬುದು ಸಾಮಾನ್ಯವಾಗಿ ಎಲ್ಲರೆದುರು ನಿಲ್ಲುವ ಪ್ರಶ್ನೆ.  ಈಗ ಬಿಜೆಪಿ ನೇತೃತ್ವದ ಎನ್‌ಡಿ ಸರ್ಕಾರ ನರೇಂದ್ರ ಮೋದಿ ಅಧ್ವರ್ಯದಲ್ಲಿ ಒಂದು ವರ್ಷ ಪೂರೈಸಿ ಎರಡನೇ ವರ್ಷದ ಹೊಸ್ತಿಲಿಗೆ ಬಂದು ನಿಂತಿದೆ. ಸರ್ಕಾರ ತನ್ನ 60 ಮೆಟ್ಟಿಲುಗಳ(5 ವರ್ಷ) ಪೈಕಿ ಕೇವಲ 12 ಮೆಟ್ಟಿಲುಗಳನ್ನಷ್ಟೇ ಏರಿದೆ. ಇನ್ನೂ ಏರಬೇಕಾದ ಮೆಟ್ಟಿಲುಗಳ ಸಂಖ್ಯೆ ದೊಡ್ಡದಿದೆ. ಹಾಗಾಗಿ ಈಗಲೇ ಸಾಧನೆಗಳ ಪಟ್ಟಿ ಮಾಡುತ್ತಾ ಕೂರುವುದು ಕಷ್ಟದ ಕೆಲಸ.

‘ಸಾಧನೆಯ ಹಾದಿಯಲ್ಲಿ …!

ಆದರೆ ಒಂದಂತೂ ಸತ್ಯ. ಒಂದು ಸರ್ಕಾರ ಯಾವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ ಎಂಬುದನ್ನು ಪರಿಶೀಲಿಸಿದರೆ ಈ ಸರ್ಕಾರ ಮುಂದೆ ಹೇಗೆ ಸಾಗಲಿದೆ. ಏನು ಸಾಧಿಸಲಿದೆ ಎಂಬುದು ಪತ್ತೆ ಹಚ್ಚುವುದು ಸರಳ.ಪ್ರಸ್ತುತ ಮೋದಿ ಸರ್ಕಾರ ಸಾಧನೆ ಹಾದಿಯಲ್ಲಿ ದೃಢವಾದ, ದಿಟ್ಟ ಹೆಜ್ಜೆಗಳನ್ನೇ ಇಟ್ಟಿದೆ.
ಸರ್ಕಾರವೊಂದರ ಸಾಧನೆ, ಗುಣಾವಗುಣಗಳನ್ನು ಸಾಮಾನ್ಯವಾಗಿ ಆಡಳಿತ ಪಕ್ಷದವರು ಹೊಗಳುವುದು, ವಿರೋಧ ಪಕ್ಷಗಳವರು ತೆಗಳುವುದು ಸಾಮಾನ್ಯ ವಿಷಯವೇ. ಆದ್ದರಿಂದ ಅವರೆಡನ್ನೂ ಬಿಟ್ಟು ಸರ್ಕಾರದ ಕಾರ್ಯ ವೈಖರಿಯ ನೇರ ಫಲಾನುಭವಿಗಳಾಗಿರುವ ಜನಸಾಮಾನ್ಯರ  ಸ್ಥಾನದಲ್ಲಿ ನಿಂತು ವೀಕ್ಷಿಸುವ ಮೂಲಕ ಆಳುವವರು, ಆಳಿಸಿಕೊಳ್ಳುವವರಿಬ್ಬರಿಗೂ ನ್ಯಾಯ ಒದಗಿಸಬೇಕಾಗುತ್ತದೆ. ಲೋಕಸಭೆ ಚುನಾವಣಾ ಪೂರ್ವದಲ್ಲಿ  ಯಾವುದೇ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಧಿಕಾರಕ್ಕೆ ಬಂದ ನಂತರ ಅದರಲ್ಲಿನ ಭರವಸೆಗಳನ್ನು ಆದ್ಯತೆ ಮೇಲೆ ಈಡೇರಿಸುವುದು ಆಡಳಿತಾರೂಢ ಪಕ್ಷದ ಹೊಣೆ. ಆದರೆ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳ ಈಡೇರಿಕೆಗೆ ಅದರದೇ ಆದ ಸಮಯ ಬೇಕಾಗುತ್ತದೆ.
ಪ್ರಮುಖ ವಿಷಯಗಳು: ಬಿಜೆಪಿಯ ಪ್ರಣಾಳಿಕೆ ಬಗ್ಗೆ ಹೇಳುವುದಾದರೆ ಅದರಲ್ಲಿ ಪ್ರಮುಖವಾದ ಕೆಲವು ಅಂಶಗಳಿದ್ದವು. ಅವುಗಳಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ, ಪಾರದರ್ಶಕ ಆಡಳಿತ, ಸಮರ್ಥವಾದ ವಿದೇಶಾಂಗ ನೀತಿ , ವಿದೇಶಿ ಬ್ಯಾಂಕ್‌ಗಳಲ್ಲಿನ ಕಪ್ಪು ಹಣ ವಾಪಸಾತಿ ಹಾಗೂ ಅಭಿವೃದ್ಧಿ, ಬೆಲೆ ಏರಿಕೆ ನಿಯಂತ್ರಣ ಹಾಗೂ ಮಹಿಳೆಯರಿಗೆ ರಕ್ಷಣೆ ಮುಂತಾದವುಗಳು ಮುಖ್ಯವಾದುವು. ಹಾಗಾಗಿ ಮೊದಲು ಈ ಅಂಶಗಳ ಬಗ್ಗೆ ಸರ್ಕಾರ ಏನು ಮಾಡಿದೆ ಎಂಬುದನ್ನು ಗಮನಿಸಬಹುದು.
ಭ್ರಷ್ಟಾಚಾರ ಮುಕ್ತ:
ಬಿಜೆಪಿಯ ಮೊದಲನೆ ಘೋಷಣೆ ಭ್ರಷ್ಟಾಚಾರ ಮುಕ್ತ ಆಡಳಿತ, ಈ ಬಗ್ಗೆ ಗಮನಿಸೋಣ. ಪ್ರಧಾನಿ ನರೇಂದ್ರ ಮೋದಿ ನೇತತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿಲ್ಲ. ಪ್ರಧಾನಿ ಅಥವಾ ಸಂಪುಟದ ಯಾವೊಬ್ಬ ಸಚಿವನ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲ. ( ಆರಂಭದಲ್ಲಿ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಮಾಲಿಕತ್ವದ ಪೂರ್ತಿ ಸಂಸ್ಥೆಯ ಬಗ್ಗೆ ಅಪಸ್ವರ ಕೇಳಿಬಂದಿದ್ದು, ನಂತರ ಸಿಎಜಿ ವರದಿಯ್ಲಲಿ ಗಡ್ಕರಿ ಕಂಪನಿ ಹೆಸರು ಪ್ರಸ್ತಾಪವಾಗಿದ್ದು ಹೊರತಾಗಿ) ಈ ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದೆ ಒಂದು ವರ್ಷ ಕಳೆದಿರುವ ಮೋದಿ ಸರ್ಕಾರದ ಸಾಧನೆ ಮೆಚ್ಚುಬೇಕಾದ್ದೆ. ಹಾಗಂತ ಮೋದಿ ಸರ್ಕಾರದಲ್ಲಿ ಎಲ್ಲವೂ ಶುಭ್ರವಾಗಿದೆ ಎಂದೇನಲ್ಲ.
ಈ ಹಿಂದೆ ತಂಬಾಕು ನಿಷೇಧದ ಪ್ರಸ್ತಾಪ ಬಂದಾಗ ಸಂಪುಟದ ಒಂದಿಬ್ಬರು ಸಚಿವರು ತಂಬಾಕು  ಉದ್ಯಮದ ಪರವಾಗಿ ನಿಂತು ಮಾತನಾಡಿದ್ದು ಕೂಡ ನಡೆಯಿತು ಆದರೆ ಅದಕ್ಕೆ ಹೆಚ್ಚು ಪ್ರಚಾರ ಸಿಗಲಿಲ್ಲವೋ ಅಥವಾ ಬೇಕೆಂದೇ ಉಪೇಕ್ಷಿಸಲಾಯಿತೋ ಅದು ಬೇರೆ ವಿಚಾರ. ಒಟ್ಟಾರೆ 12 ತಿಂಗಳ ಮಟ್ಟಿಗೆ ಹೇಳುವುದಾದರೆ ಈ ವಿಷಯದಲ್ಲಿ ಮೋದಿ ಸರ್ಕಾರಕ್ಕೆ ನೂರಕ್ಕೆ 90 ಮಾರ್ಕ್ಸ್ ಕೊಡಬಹುದು.

ಪಾರದರ್ಶಕತೆ:

ಇನ್ನು ಆಡಳಿತದಲ್ಲಿ ಪಾರದರ್ಶಕತೆ ಬಗ್ಗೆ ಹೇಳಬೇಕೆಂದರೆ, ಪ್ರಮುಖವಾಗಿ ಕಲ್ಲಿದ್ದಲು ಗಣಿ ನಿಕ್ಷೇಪ ಹಂಚಿಕೆಯ ವಿಷಯದಲ್ಲೇ  ನೋಡಬಹುದು. ಹಿಂದಿನ ಯುಪಿಎ ಸರ್ಕಾರ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದ 100ಕ್ಕೂ ಹೆಚ್ಚು ಕಲ್ಲಿದ್ದಲು ಗಣಿಗಳನ್ನು ಮರು ಹರಾಜು ಮಾಡಿದ ಕೇಂದ್ರ ಸರ್ಕಾರ, ಬೊಕ್ಕಸಕ್ಕೆ ಸುಮಾರು ಎರಡು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ರಾಜಸ್ವ ಜಮಾ ಆಗುವಂತೆ ನೋಡಿಕೊಂಡಿತು. ತರಂಗಾಂತರ ಹಂಚಿಕೆಯಲ್ಲೂ  ಸರ್ಕಾರ ಇದೇ ನೀತಿ  ಅನುಸರಿಸಿತು. ಹಾಗಾಗಿ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿಯೂ ಕೆಲವು ಅಂಶ ಯಶಸ್ವಿಯೇ ಆದಂತಾಯಿತು.

ಕಪ್ಪು ಹಣ ವಾಪಸಾತಿ:

ಈ ವಿಷಯದಲ್ಲಿ ಮಾತ್ರ ಎನ್‌ಡಿಎ ಸರ್ಕಾರ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಅಧಿಕಾರಕ್ಕೆ ಬಂದರೆ ಕೇವಲ ನೂರೇ ದಿನಗಳಲ್ಲಿ ಕೊಳೆಯುತ್ತಿರುವ ಲಕ್ಷಾಂತರ ಕೋಟಿ ಹಣವನ್ನು ಸ್ವದೇಶಕ್ಕೆ ಮರಳಿ ತರುತ್ತೇವೆ. ಆ ಹಣ ವಾಪಸ್ ತಂದರೆ ಭಾರತದ ಬಡತನವನ್ನೇ ನೀಗಿಸಿಬಿಡಬಹುದು ಎಂದೆಲ್ಲ ಹೇಳಿಕೊಂಡಿದ್ದ ಬಿಜೆಪಿ ಸರ್ಕಾರದ ಧ್ವನಿ ಅದೇಕೋ ಬರಬರುತ್ತಾ ಬದಲಾಯಿತು. ಸರ್ಕಾರ ನೇಮಿಸಿದ ಎಂ.ಬಿ.ಷಾ ನೇತೃತ್ವದ ಸಮಿತಿ ಇನ್ನೂ ಕಾರ್ಯಾಚರಣೆ ನಡೆಸುತ್ತಿದೆ. ಮೊದಮೊದಲು ವಿದೇಶಗಳ ಜೊತೆ ಈ ಬಗ್ಗೆ ಮಾಡಿಕೊಂಡಿರುವ ಒಪ್ಪಂದಗಳಿಗೆ ಭಂಗ ಬರದಂತೆ ನೋಡಿಕೊಳ್ಳಲು ಈ ವಿಷಯವನ್ನು ರಹಸ್ಯವಾಗಿಡಲಾಗುವುದು ಎಂದು ಹೇಳಲಾಯಿತು. ಆನಂತರ ವಿದೇಶಿ ಬ್ಯಾಂಕ್‌ಗಳಲ್ಲಿರುವ  ಕಪ್ಪುಹಣದ ಲೆಕ್ಕ ಸಿಕ್ಕಿಲ್ಲ ಅಂತ ಹೇಳಲಾಯಿತು. ಇವಾವೂ ವರ್ಕೌಟ್ ಆಗಲಿಲ್ಲ. ಕೊನೆಗೆ ಸ್ವತಃ ಸ್ವಿಸ್ ಸರ್ಕಾರವೇ ಖುದ್ದಾಗಿ ಕಪ್ಪು ಹಣ ಮಾಹಿತಿ ಬಗ್ಗೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಹೇಳಿತು. ಆದರೂ  ಆ ಪ್ರಕ್ರಿಯೆ ಮಾತ್ರ ವೇಗ ಪಡೆದುಕೊಳ್ಳಲೇ ಇಲ್ಲ. 100 ದಿನಗಳ ಬದಲಿಗೆ 365 ದಿನಗಳಾದವು. ಫಲಿತಾಂಶ ಮಾತ್ರ ಶೂನ್ಯ.

ಇಳಿಯದ ಬೆಲೆ:

ಪ್ರಮುಖವಾಗಿ ಇಡೀ ದೇಶವೇ ನಿರೀಕ್ಷಿಸುತ್ತಿದ್ದ ಬೆಲೆ ಏರಿಕೆ ನಿಯಂತ್ರಣದಲ್ಲೂ ನಿರೀಕ್ಷಿತ ಯಶಸ್ಸು ಕಾಣಲಾಗಲಿಲ್ಲ. ಪೆಟ್ರೋಲಿಯಂ ಉತ್ಪನ್ನಗಳಿಂದ ಹಿಡಿದು ಅಗತ್ಯ ಖಾದ್ಯ ಪದಾರ್ಥಗಳವರೆಗೂ ಬಡವರು ನಿರೀಕ್ಷಿಸಿದ ಬೆಲೆ ಇಳಿಕೆ ಭಾಗ್ಯ ದೊರೆಯಲಿಲ್ಲ. ದಿನದಿಂದ ದಿನಕ್ಕೆ ಬೆಲೆಗಳು ಮೇಲು ಮುಖವಾಗಿ ಚಲಿಸಿದವೇ ಹೊರತು ಕೆಳಮುಖವಾಗಲೇ ಇಲ್ಲ.  ಕಳೆದ ವರ್ಷಕ್ಕೂ, ಈ ವರ್ಷಕ್ಕೂ ತುಲನೆ ಮಾಡಿ ನೋಡಿದರೆ ಕನಿಷ್ಠ ಶೇ.30ರಿಂದ 40ರಷ್ಟು ಬೆಲೆಗಳು ಏರಿಕೆಯಾಗಿವೆ. ಈ ಕಾರಣದಿಂದಲೇ ಜನಸಮಾನ್ಯರನ್ನು ಮೋದಿ ಸರ್ಕಾರದ ಸಾಧನೆ ಬಗ್ಗೆ ಕೇಳಿದರೆ ಅವರು ಥಟ್ಟಂತ ಶಹಭಾಸ್‌ಗಿರಿ ಕೊಡಲು ಅನುಮಾನಿಸುವುದು. ಇದು ವಾಸ್ತವ ಸ್ಥಿತಿ ಕೂಡ ಎನ್ನಬಹುದು. ಸರ್ಕಾರ ಹಣದುಬ್ಬರ ತಡೆಗೆ ಕ್ರಮ ಕೈಗೊಂಡಿತಾದರೂ  ಅದರ ಲಾಭ ಬಡ ಮತದಾರನಿಗೆ ಇನ್ನೂ ತಲುಪಿಲ್ಲ.

ವಿದೇಶಾಂಗ ನೀತಿ:

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಒಂದು ವರ್ಷದ ಆಡಳಿತಾವಧಿಯಲ್ಲಿ 45 ದಿನಗಳನ್ನು ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.  ಆದರೆ ಒಂದು ಅಂಶವನ್ನಿಲ್ಲಿ ಗಮನಿಸಬೇಕಾಗುತ್ತದೆ. ಮೋದಿಯವರು 45 ದಿನಗಳಲ್ಲಿ 18 ರಾಷ್ಟ್ರಗಳನ್ನು ಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಗಡಿಭದ್ರತೆ, ಭಯೋತ್ಪಾದನೆಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದ್ದಾರೆ. ಭಾರತದೊಂದಿಗೆ ಭಯೋತ್ಪಾದನೆ ದಮನಕ್ಕೆ ಹಲವು ರಾಷ್ಟ್ರಗಳು ಕೈಜೋಡಿಸಲು ಮುಂದಾಗಿವೆ.  ಅಷ್ಟೇ ಅಲ್ಲ. ತಾವು ಭೇಟಿ ಮಾಡಿದ ರಾಷ್ಟ್ರಗಳ ಜೊತೆ ಒಟ್ಟು 93  ಶತಕೋಟಿ ಡಾಲರ್‌ಗಳ ವ್ಯವಹಾರ ಕುದುರಿಸಿದ್ದಾರೆ. ವಿಶ್ವಸಂಸ್ಥೆ  ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯತ್ವ ಪ್ರಸ್ತಾಪಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಶಾಂತಿ-ಸಹಕಾರಗಳ ಮಹತ್ವವನ್ನು ಸಾರಿ ಬಂದಿದ್ದಾರೆ. ಮೋದಿಯವರ ಈ ವ್ಯೂಹಾತ್ಮಕವಾದ ವಿಚಾರಗಳಿಗೆ ವಿದೇಶಿ ಗಣ್ಯರು ತಲೆದೂಗಿದ್ದಾರೆ. ಇದೇನು ಕಡಿಮೆ ಸಾಧನೆಯೇ?

———

* ಸಾಧನೆಗಳ ನಡುವೆಯೂ ವಿವಾದಗಳ ಸರಮಾಲೆ
ಕೇಂದ್ರದಲ್ಲಿ ಯಶಸ್ವಿಯಾಗಿ ಒಂದು ವರ್ಷ ಪೂರ್ಣಗೊಳಿ ಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೆಲವು ವಿವಾದಗಳ ಮೈಮೇಲೆ ಎಳೆದುಕೊಂಡಿದೆ. ಭ್ರಷ್ಟಾಚಾರ ರಹಿತ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇವೆ  ಎಂದು ಬಿಜೆಪಿ ನಾಯಕರು ಹೇಳಿದ್ದರೂ ಕೆಲವು ಜನ ವಿರೋಧಿ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಪ್ರಮೂಖವಾಗಿ ಭೂಸ್ವಾಧೀನ ಮಸೂದೆ, ನೇರ ಬಂಡವಾಳ ಹೂಡಿಕೆ, ಕಪ್ಪು ವಾಪಸ್ ತರದಿರುವುದು ಸೇರಿದಂತೆ ಇತ್ಯಾದಿ.
ಭೂಸ್ವಾಧೀನ ಮಸೂದೆ :
2013ರಲ್ಲಿ ಅಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಅಂದು ಪ್ರತಿಪಕ್ಷವಾಗಿದ್ದ ಬಿಜೆಪಿ ಭಾರೀ ವಿರೋಧ ಮಾಡಿ ಅಂಗೀಕಾರವಾಗದಂತೆ ಅಡ್ಡಿಪಡಿಸಿತ್ತು.  2014ರ ಮೇ ತಿಂಗಳಿನಲ್ಲಿ  ಕೇಂದ್ರಕ್ಕೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅದೇ ಮಸೂದೆಯನ್ನು ಅನುಷ್ಠಾನ ಮಾಡಲು ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿತ್ತು.ಇದೊಂದು ರೈತ ವಿರೋಧಿ ಮಸೂದೆಯಾಗಿರುವುದರಿಂದ ಸರ್ಕಾರ ಯಾವುದೇ ಕಾರಣಕ್ಕೂ ಮಸೂದೆಯನ್ನು ಜಾರಿ ಮಾಡಬಾರದೆಂದು ಪ್ರತಿಪಕ್ಷಗಳು ಒತ್ತಾಯ ಮಾಡಿದ್ದವು. ಕೆಲವು ರಾಷ್ಟ್ರೀಯ ಯೋಜನೆಗಳಿಗೆ ಭೂಸ್ವಾಧೀನಪಡಿಸಿಕೊಳ್ಳುವಾಗ ರೈತರ ಅನುಮತಿ ಪಡೆಯದೆ ಭೂಮಿ ವಶಪಡಿಸಿಕೊಳ್ಳುವ ಅವಕಾಶವಿತ್ತು. ಪ್ರತಿಪಕ್ಷಗಳ ಒತ್ತಡ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಸಂಸತ್ ಸ್ಥಾಯಿ ಸಮಿತಿಗೆ ಒಪ್ಪಿಸಿದೆ.
ನೇರ ವಿದೇಶಿ ಬಂಡವಾಳ ಹೂಡಿಕೆ:
ಯುಪಿಎ ಅವಧಿಯಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಭಾರೀ ಪ್ರತಿರೋಧ ಒಡ್ಡಿದ್ದು ಬಿಜೆಪಿ. ಸಣ್ಣ ಉದ್ಯಮದಲ್ಲೂ ಎಫ್‌ಡಿಐಗೆ ಅವಕಾಶ ನೀಡಿದರೆ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಅಬ್ಬರಿಸಿದ್ದರು. ಅಂದು ವಿರೋಧಿಸಿದ ಬಿಜೆಪಿ ತನ್ನ ರಾಗ ಬದಲಾಯಿಸಿ ಇದೀಗ ವಿದೇಶಿ ನೇರ ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸಿದೆ.
ಕಪ್ಪು ಹಣ ವಾಪಸ್ ಬಾರದಿರುವುದು:
ಅಧಿಕಾರಕ್ಕೆ ಬಂದ ನೂರು ದಿನದಲ್ಲಿ  ವಿದೇಶದಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರುತ್ತೇನೆ ಎಂದು ದೇಶದ ಜನತೆ ಮೋದಿ ಮೋದಿ ವಾಗ್ದಾನ ಮಾಡಿದ್ದರು. ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕಪ್ಪು ಹಣವನ್ನು ವಾಪಸ್ ತರದಿರುವುದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ವಿಶೇಷ ತನಿಖಾ ದಳ ರಚನೆ ಮಾಡಿ ಕೆಲವು ತೆರಿಗೆ ವಂಚಿತರ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಆದರೆ ಸರ್ಕಾರ ಈ ವಲಯದಲ್ಲಿ ಇನ್ನಷ್ಟು ತ್ವರಿತವಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.
ಸಾರಿಗೆ ಸುರಕ್ಷತಾ ಕಾಯ್ದೆ:
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಈ ಮಸೂದೆ ವಾಹನ ಮತ್ತು ದ್ವಿಚಕ್ರ ವಾಹನಗಳ ಸವಾರರ ಕಣ್ಣು ಕೆಂಪಾಗುವಂತೆ ಮಾಡಿದೆ. ಈ ಕಾಯ್ದೆಯನ್ವಯ ಚಾಲನಾ ಪರವಾನಗಿ ಹೊಂದದೆ ಇರುವವರು, ಪದೇ ಪದೇ ಅಪಘಾತ ಎಸಗುವವರಿಗೆ ಶಿಕ್ಷೆ ಪ್ರಮಾಣ ದುಪ್ಪಟ್ಟು ಮಾಡಲಾಗಿದೆ.
ವಿವಾದಾತ್ಮಕ ಹೇಳಿಕೆಗಳು:
ನರೇಂದ್ರ ಮೋದಿ ಸರ್ಕಾರಕ್ಕೆ ವಿರೋಧ ಪಕ್ಷಗಳಿಗಿಂತ ಸ್ವಪಕ್ಷೀಯ ಕಂಟಕಪ್ರಾಯವಾಗಿ ಪರಿಣಮಿಸಿದ್ದಾರೆ. ಅದರಲ್ಲೂ ಸಂಸದರಾದ ಸಾಕ್ಷಿ ಮಹಾರಾಜ್, ಸಾಧ್ವಿ ನಿರಂಜನ್ ಜ್ಯೋತಿ ಹಾಗೂ ಸಂಪುಟದಲ್ಲಿರುವ ಸ್ಮೃತಿ ಇರಾನಿ, ಉಮಾ ಭಾರತಿ ಅವರ ವಿವಾದಾತ್ಮಕ ನಡವಳಿಕೆಗಳು  ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದವು.

———————-

* ಅಬ್ಬರದ ಪ್ರಚಾರದ ಮೂಲಕ ಆಧಿಪತ್ಯ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ 365 ದಿನಗಳನ್ನು  ಪೂರೈಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಬ್ಬರದ ಪ್ರಚಾರದ ಮೂಲಕ ಆಧಿಪತ್ಯ ಸ್ಥಾಪಿಸಿದವರು ಮೋದಿ. ಆದರೆ ಆರಂಭದಲ್ಲಿನ  ಹುರುಪು, ಉತ್ಸಾಹಗಳು ಆಡಳಿತದ ಅವಧಿಯಲ್ಲಿ ಮಂಕಾಗಿದ್ದರೂ ಅವರ ಅಲೆ ಮುಂದುವರೆದಿದೆ.ಜನ ಸೇವೆಯನ್ನೇ ಜೀವಾಳವಾಗಿಸಿಕೊಳ್ಳಬೇಕು ಎಂಬುದು ಮೋದಿ ಆಶಯ.  ಆದರೆ ಎಲ್ಲೋ ಎಡವಟ್ಟುಗಳು ನಡೆದಿವೆ. ಹಾಗಾಗಿ ಈ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿಗಿಂತ ಭಾರೀ ಸದ್ದು ಮಾಡಿದ್ದು, ಮೋದಿಯವರ ವಿದೇಶ ಪಯಣ. ಈಗಲೂ ಅದು ಮುಂದುವರೆದಿದೆ. ನೂರು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸಮಸ್ಯೆಗಳು ಬೃಹದಾಕಾರ ರೂಪದಲ್ಲಿದೆ. ಅವುಗಳಿಗೆ ಪರಿಹಾರ ಸಿಗುತ್ತಿರುವುದು ತೀರಾ ಕಡಿಮೆ. ಬದಲಿಗೆ ಅವು ಬಗೆಹರಿಯದಷ್ಟು ತೀವ್ರ ಸ್ವರೂಪ ಪಡೆಯುತ್ತಿವೆ. ಈ ನಡುವೆ ಮೋದಿ ಅವರ ವಿದೇಶ ಪ್ರವಾಸದ ಪಟ್ಟಿ ಅಷ್ಟೇ ವೇಗವಾಗಿ ಬೆಳೆಯುತ್ತಿದೆ.

ಭಾರತ ಕೃಷಿ ಪ್ರಧಾನ ರಾಷ್ಟ್ರ. ಕೃಷಿಗೆ  ಎಲ್ಲಾ ಸರ್ಕಾರಗಳು ಪ್ರಥಮ ಆದ್ಯತೆ ನೀಡುತ್ತಲೇ ಬಂದಿವೆ. ಈ ಕ್ಷೇತ್ರ ಮುಂದುವರೆದರೆ ಉಳಿದ ಕ್ಷೇತ್ರಗಳ ಹಾದಿ ಸುಗಮ ಎಂಬುದು ಹಿಂದಿನಿಂದಲೂ ಅಳವಡಿಸಿಕೊಂಡು ಬಂದ ಮಂತ್ರ.  ಆದರೆ ಇದೀಗ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಮೋದಿ ಹೆಜ್ಜೆ ಇಟ್ಟಿದ್ದಾರೆ. ಮೊದಲಿಗೆ ದೇಶವನ್ನು ಆರ್ಥಿಕವಾಗಿ ಪ್ರಬಲ ರಾಷ್ಟ್ರವನ್ನಾಗಿಸುವುದು ಮೋದಿ ಆಶಯ.  ಆ ನಿಟ್ಟಿನಲ್ಲಿ ಅವರು ಬಂಡವಾಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಹಾಗಾಗಿ ವಿಶ್ವ ಪರ್ಯಟನೆ ನಡೆಸುತ್ತಾ ಬಂದಿದ್ದಾರೆ. ದೇಶದ ಆರ್ಥಿಕ ನೀತಿಗಳು ಮತ್ತು ಸ್ಥಿತಿಗತಿಗಳನ್ನು ಅರಿತಿರುವ ಅವರು, ಆ ಕ್ಷೇತ್ರದ ಒಟ್ಟಾರೆ ಬೆಳವಣಿಗೆಗೆ ಕ್ರಮಗಳನ್ನು ಕೈಗೊಳ್ಳುತ್ತಾ ಸಾಗಿದ್ದಾರೆ. ಕಾರ್ಪೋರೇಟ್ ವಲಯವನ್ನು ಈ ಕಾರಣಕ್ಕಾಗಿಯೇ ಅವರು ಬೆಂಬಲಿಸುತ್ತಾ ಬಂದಿದ್ದಾರೆ.

ಆಧುನಿಕ ರೈಲ್ವೆ ಯೋಜನೆಗಳು, ಉತ್ಪಾದನೆ, ವ್ಯಾಪಾರ ವಹಿವಾಟು, ಬ್ಯಾಂಕ್ ವಲಯಗಳ ಅಭಿವೃದ್ಧಿ ಸೇರಿದಂತೆ ದೇಶದ ಆರ್ಥಿಕ ಉನ್ನತಿಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ವಿಶ್ವದ ಸಬಲ ದೇಶಗಳೊಂದಿಗೆ ಮಾತುಕತೆ ನಡೆಸಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ಅದಕ್ಕಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿ ಹಲವು ರಾಷ್ಟ್ರಗಳ ಜತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.  ಈ ಹಿಂದೆ ಅಧಿಕಾರಕ್ಕೆ ಬಂದ ಯಾವ ಪ್ರಧಾನಿಗಳು ಇಂತಹ ದಿಟ್ಟ ನಿಲುವುಗಳನ್ನು ಕೈಗೊಳ್ಳಲಿಲ್ಲ. ಇಡೀ ಪ್ರಪಂಚವೇ ಇಂದು ಪ್ರಧಾನಿ ಮೋದಿಯವರತ್ತ ದೃಷ್ಟಿ ಹರಿಸಿದೆ. ಇದಕ್ಕೆ ಕಾರಣ ಅವರು ಕೈಗೊಳ್ಳುತ್ತಿರುವ ಕ್ರಮಗಳು. ವಿಶ್ವದ ಹಿರಿಯಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ತಾನು ಮೋದಿ ಅಭಿಮಾನಿ ಎಂದು ಹೇಳಿಕೊಳ್ಳುವಷ್ಟರ ಮಟ್ಟಿಗೆ ದೇಶದ ಪ್ರಧಾನಿ ಇಂದು ಚಲಾವಣೆಯಲ್ಲಿದ್ದಾರೆ.

ಕೇವಲ ಒಂದು ವರ್ಷದ ಆಡಳಿತಾವಧಿಯನ್ನು ಅಭಿವೃದ್ಧಿಗೆ ತುಲನೆ ಮಾಡಲು ಸಾಧ್ಯವಿಲ್ಲ. ಮುಂದಿನ ನಾಲ್ಕು ವರ್ಷಗಳಲ್ಲಿ ಎಷ್ಟರಮಟ್ಟಿಗೆ ಅಭಿವೃದ್ಧಿಯಾಗಲಿದೆ ಎಂಬುದೇ ಮೋದಿಯವರ ಆಡಳಿತದ ಅಳತೆಗೋಲಾಗಲಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರ ಮತ್ತು ವೈಫಲ್ಯಗಳನ್ನು ಬಗೆಹರಿಸುವತ್ತ ಪ್ರಧಾನಿ ಗಂಭೀರ ಚಿಂತನೆ ನಡೆಸಿದ್ದಾರೆ. ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವಾರು ನಿದರ್ಶನಗಳು ಎಲ್ಲರ  ಕಣ್ಣೆದುರಿಗೇ ಇವೆ.  ಭಾರತದ ಬಗ್ಗೆ ಮುಂದುವರೆದ ರಾಷ್ಟ್ರಗಳಿಗೆ ಸಾಕಷ್ಟು ಕೀಳರಿಮೆ ಇತ್ತು. ಅದನ್ನು  ಹೋಗಲಾಡಿಸುವ ನಿಟ್ಟಿನಲ್ಲಿ ಮೋದಿ ಭಾರೀ ಚಾಣಾಕ್ಷ ನೀತಿಗಳನ್ನು ಅಳವಡಿಸುತ್ತಾ ಸಾಗಿದ್ದಾರೆ. ಅದಕ್ಕಾಗಿ ವಿಶ್ವ ಬಂಡವಾಳ ಆಕರ್ಷಣೆಯ ಮೂಲಕ ದೇಶದಲ್ಲಿ ಇತರೆ ಕ್ಷೇತ್ರಗಳ ಅಭ್ಯುದಯಕ್ಕೆ ಅವರು ಅಪಾರ ಆಸಕ್ತಿ ತೋರಿದ್ದಾರೆ. ಆ ಮೂಲಕ ದೇಶದ ಸಾಮರ್ಥ್ಯವನ್ನು ವಿಶ್ವಕ್ಕೆ ಸಾಬೀತುಪಡಿಸಲು ಮುಂದಾಗಿದ್ದಾರೆ. ಹೀಗಾಗಿ ಇಡೀ ವಿಶ್ವ ಮೋದಿಯವರನ್ನು ಕುತೂಹಲದಿಂದ ಕಾದು ನೋಡುತ್ತಿದೆ.

ಕೃಷಿ ಅಭಿವೃದ್ಧಿಯ ಜೊತೆ ಜೊತೆಗೆ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅಗತ್ಯವಾದ ಕೈಗಾರಿಕೆಗಳಿಗೂ ಮೋದಿಯವರು ಪ್ರಥಮ ಆದ್ಯತೆ ನೀಡಲು ಮುಂದಾಗಿರುವುದು ಇದೇ ಕಾರಣಕ್ಕೆ ಎಂಬುದು ಜಗಜ್ಜಾಹೀರಾಗಿದೆ. ವಿಶ್ವದ ಪ್ರಮುಖ ರಾಷ್ಟ್ರಗಳು ಇಂದು ಮೋದಿ ಅಲೆ ಕಂಡು ಸ್ವಲ್ಪ ಮಟ್ಟಿಗೆ ಆತಂಕಗೊಂಡಿವೆ.  ಅಮೆರಿಕಾ, ಚೀನಾ, ರಷ್ಯಾ, ಜಪಾನ್, ಆಸ್ಟ್ರೇಲಿಯಾ ಹೀಗೆ ಮುಂದುವರೆದ ರಾಷ್ಟ್ರಗಳೆಲ್ಲವೂ ಅವರನ್ನು ಆಹ್ವಾನಿಸಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿಸಿಕೊಂಡಿವೆ. ಇದರರ್ಥ ಮೋದಿ ಅವರ ಆಡಳಿತ ನಿರ್ವಹಣೆಯ ಯಶಸ್ವಿ ಕಾರ್ಯಾಚರಣೆ ಎನ್ನಲು ಯಾವುದೇ ಅಡ್ಡಿ ಇಲ್ಲ.  ಮೇಕ್ ಇನ್ ಇಂಡಿಯಾದಂತಹ ಅದ್ಭುತ ಕಲ್ಪನೆಗೆ ಜೀವ ತುಂಬಲು ಹೊರಟಿರುವ ಮೋದಿ ಅವರ ಕನಸಿಗೆ ಭೂಸ್ವಾಧೀನ ಕಾಯ್ದೆಗೆ  ಉಂಟಾಗಿರುವ ವಿರೋಧ ಅಡ್ಡಿಯಾಗಲಿದೆ ಎಂಬುದನ್ನು ಈ ಕ್ಷಣ ಎಲ್ಲರೂ ಒಪ್ಪಿಕೊಳ್ಳಲೇಬೇಕು. ಒಟ್ಟಾರೆ ಆರ್ಥಿಕ ಸಾಮರ್ಥ್ಯ ಹೆಚ್ಚಿಸಲು ಮೋದಿಯವರು ಎಲ್ಲಾ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಸಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಒಂದು ವರ್ಷದ  ಆಡಳಿತ ಅದಕ್ಕೆ ಸಂಪೂರ್ಣ ನಿದರ್ಶನವಾಗಿದೆ.
–  ಪ್ರಮೋದ್ ಆಲಘಟ್ಟ

–   ಈ ಸಂಜೆ

1 Comment

  1. I First appreciate this government for only one thing that is they ruled this country for one year without any scame.
    Hates up..

Write A Comment