ಅಂತರಾಷ್ಟ್ರೀಯ

ಭಾರತಕ್ಕೆ ಭಯೋತ್ಪಾದನೆ ರಫ್ತಾಗಿದೆ, ಸ್ವದೇಶದಲ್ಲಿ ಬೆಳೆದದ್ದಲ್ಲ ಮೋದಿ

Pinterest LinkedIn Tumblr

modi-dan

ನ್ಯೂಯಾರ್ಕ್, ಸೆ. 30: ಭಾರತದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಭಯೋತ್ಪಾದನೆ ಹೊರಗಿನಿಂದ ‘ರಫ್ತಾ’ಗಿರುವುದಾಗಿದೆ, ಅದು ‘ದೇಶದಲ್ಲೇ ಬೆಳೆದದ್ದಲ್ಲ’ ಹಾಗೂ ಅದಕ್ಕೆ ‘‘ಯಾವುದೇ ಗಡಿಗಳಿಲ್ಲ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕಕ್ಕೆ ನೀಡಿರುವ ಐದು ದಿನಗಳ ಭೇಟಿಯ ನಾಲ್ಕನೆ ದಿನವಾದ ಸೋಮವಾರ ಇಲ್ಲಿ ವಿದೇಶ ಬಾಂಧವ್ಯಗಳ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಒಳ್ಳೆಯ ಭಯೋತ್ಪಾದನೆ ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ ಎಂದು ಹೇಳಿದ ಅವರು, ಈ ಜಾಗತಿಕ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಮೂಹಿಕ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಪಶ್ಚಿಮ ಏಶ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ತಲೆಯೆತ್ತುತ್ತಿದ್ದು, ಈ ಬಿಕ್ಕಟ್ಟು ಭಾರತಕ್ಕೂ ಹರಡುವ ಅಪಾಯವಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೋದಿ, ಇಂಥ ಯಾವ ಅಪಾಯವೂ ಇಲ್ಲ ಎಂದುತ್ತರಿಸಿದರು. ‘‘ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳು ವಿದೇಶಗಳಿಂದ ರಫ್ತಾಗಿರುವುದೇ ವಿನಃ ಭಾರತದಲ್ಲಿ ಬೆಳೆದದ್ದಲ್ಲ’’ ಎಂದು ಸ್ಪಷ್ಟಪಡಿಸಿದರು. ಕೆಲವು ದಿನಗಳ ಹಿಂದೆ ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಭಾರತದಲ್ಲಿ ಅಲ್-ಖಾಯಿದಾ ಬೆದರಿಕೆ ಕುರಿತು ತಾನು ನೀಡಿದ ಪ್ರತಿಕ್ರಿಯೆ ಬಗ್ಗೆ ಮೋದಿ ಈ ಸಂದರ್ಭದಲ್ಲಿ ಮಾತನಾಡಿದರು. ಆ ಸಂದರ್ಶನದಲ್ಲಿ ‘ಭಾರತದ ಮುಸ್ಲಿಮರು ಅಲ್-ಖಾಯಿದಾವನ್ನು ಸೋಲಿಸುತ್ತಾರೆ’ ಎಂದು ಮೋದಿ ಪ್ರತಿಕ್ರಿಯಿಸಿದ್ದರು.

‘‘ಭಾರತದಲ್ಲಿರುವ ಎಲ್ಲ ಸಮುದಾಯಗಳ ಜನರು ಒಂದು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿದ್ದಾರೆ. ಅದು ಬುದ್ಧ, ಮಹಾತ್ಮಾ ಗಾಂಧಿ ಮುಂತಾದ ಮಹಾತ್ಮರು ಬೋಧಿಸಿದ ಅಹಿಂಸಾ ಸಿದ್ಧಾಂತ. ಅಹಿಂಸೆ ನಮ್ಮ ಬದುಕಿನ ಜೀವಾಳವಾಗಿದೆ’’ ಎಂದರು.

‘‘ಭಯೋತ್ಪಾದನೆಗೆ ಗಡಿಗಳಿಲ್ಲ. ಒಳ್ಳೆಯ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ. ಭಯೋತ್ಪಾದನೆ ಭಯೋತ್ಪಾದನೆಯೆ’’ ಎಂದು ಪ್ರಧಾನಿ ಹೇಳಿದರು. ‘‘ಭಯೋತ್ಪಾದನೆ ವಿರುದ್ಧ ಜಗತ್ತು ಏಕ ಧ್ವನಿಯಲ್ಲಿ ಮಾತನಾಡಬೇಕಾಗಿದೆ’’ ಎಂದು ಅವರು ನುಡಿದರು.

ಒಬಾಮ ಜೊತೆ ಅಮೋಘ ಮಾತುಕತೆ: ಮೋದಿ
ವಾಶಿಂಗ್ಟನ್, ಸೆ. 30: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರೊಂದಿಗಿನ ತನ್ನ ಭೇಟಿ ಅಮೋಘವಾಗಿತ್ತು ಹಾಗೂ ಹಲವಾರು ವಿಷಯಗಳ ಬಗ್ಗೆ ತಾವು ಚರ್ಚೆ ನಡೆಸಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
‘‘ಇಡೀ ಮಾನವಕುಲದ ಒಳಿತಿಗಾಗಿ ನಮ್ಮ ದೇಶಗಳು ಜೊತೆಯಾಗಿ ಕೆಲಸ ಮಾಡಲು ಸಾಧ್ಯವಾಗುವಂಥ ಭಾಗೀದಾರಿಕೆಯ ಬಗ್ಗೆ ಅಧ್ಯಕ್ಷ ಒಬಾಮ ಮತ್ತು ನಾನು ಕಲ್ಪನೆಗಳನ್ನು ಹಂಚಿಕೊಂಡೆವು’’ ಎಂದು ಮೋದಿ ಹೇಳಿದರು.

ಮಹಾತ್ಮಾ ಗಾಂಧಿಗೆ ಶ್ರದ್ಧಾಂಜಲಿ
ವಾಶಿಂಗ್ಟನ್, ಸೆ. 30: ಅಮೆರಿಕದ ರಾಜಧಾನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎದುರಿಗಿರುವ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಹಾತ್ಮಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಜೊತೆಗೆ ಆಗಮಿಸಿದ ಪ್ರಧಾನಿಯನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಭಾರತೀಯ ಅಮೆರಿಕನ್ನರು ಅಲ್ಲಿ ನೆರೆದಿದ್ದರು.
ತನ್ನ ಭೇಟಿಯ ಐದನೆ ಹಾಗೂ ಕೊನೆಯ ದಿನವಾದ ಮಂಗಳವಾರ ಪ್ರಧಾನಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಚಕ್ ಹ್ಯಾಗೆಲ್‌ರನ್ನು ಭೇಟಿಯಾಗಲಿದ್ದಾರೆ. ಬಳಿಕ ಪ್ರತ್ಯೇಕವಾಗಿ ಮೇರಿಲ್ಯಾಂಡ್ ರಾಜ್ಯದ ಗವರ್ನರ್ ಜೊತೆ ಮಾತುಕತೆ ನಡೆಸಲಿದ್ದಾರೆ.

Write A Comment