ಕರಾವಳಿ

ಶಾಲೆಯ ಪರಿಸರ ಸ್ವಚ್ಛತೆಗೆ ಊರವರ ಒತ್ತಾಯ.

Pinterest LinkedIn Tumblr

kasba_school_photo_1

ಕಸ್ಬಾ ಬೆಂಗರೆ,ಸೆ.30: ಸರಕಾರಿ ಹಿರಿಯ ಪ್ರೌಢ ಶಾಲೆ, ಕಸ್ಬಾ ಬೆಂಗರೆ ಇದರ ಆಸುಪಾಸಿನಲ್ಲಿ ಕೊಳಚೆ ನೀರು ನಿಂತು ಪರಿಸರ ತುಂಬಾ ಕೆಟ್ಟು ಹೋಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಕ ರೋಗಗಳ ಭೀತಿಯಿಂದಾಗಿ ಶಾಲೆಯಿಂದ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಪ್ರಯುಕ್ತ ಕಸ್ಬಾ ಬೆಂಗರೆಯ ಕೆಲವು ಸಂಘಟನೆಗಳು ಇದಕ್ಕೂ ಮೊದಲು ಸ್ಥಳೀಯ ಕಾಪೋರೇಟರ್ ವಿನಾ ಕರ್ಕೇರಾ ಮತ್ತು ಶಾಸಕ ಜೆ.ಆರ್. ಲೋಬೋರವರನ್ನು ಭೇಟಿ ಮಾಡಿತ್ತು.
ಆದ್ದರಿಂದ ಕಾರ್ಪೋರೇಟರ್ ಮೀರಾ ಕರ್ಕೇರಾ ಹಾಗೂ ಮೇಯರ್ ಸ್ಥಳಕ್ಕೆ ಭೇಟಿ ಮಾಡಿ ಅದನ್ನು ಶುಚಿತ್ವಗೊಳಿಸುವುದಾಗಿ ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 15 ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

kasba_school_photo_2

ಆದರೆ, ವಿಪರ್ಯಾಸವೆಂದರೆ ಇಷ್ಟರವರೆಗೆ ಮಂಗಳೂರು ನಗರ ಪಾಲಿಕೆಯವರಾಗಲಿ ಅಥವಾ ಕಾರ್ಪೋರೇಟರ್ ಕಡೆಯಿಂದ ಯಾವುದೇ ಶುಚಿತ್ವ ಕೆಲಸವು ನಡೆದಿಲ್ಲ. ಇನ್ನು ಶಾಲೆಗೆ ಆವರಣ ಗೋಡೆ  ಇಲ್ಲ. ಶಾಲೆಯು ದನ-ಕುರಿಗಳ ತಾಣವಾಗಿದೆ. ಅದರ ಮಲ ಮೂತ್ರದಿಂದಾಗಿ ಪ್ರತೀ ದಿನವು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೊದಲನೆಯ ಪ್ರಿಯೆಡ್‌ನಲ್ಲಿ ಶಾಲೆಯನ್ನು ಶುಚಿಗೊಳಿಸಬೇಕಾಗುತ್ತದೆ.

ಈ ಪ್ರಯುಕ್ತ ಸುಮಾರು ಒಂದೂವರೆ ತಿಂಗಳಿಗೂ ಮುಂಚೆ ಶಾಲೆಯ ಆವರಣ ಗೋಡೆಗೆಂದು ಕೇವಲ 3 ಲಕ್ಷ ರೂಪಾಯಿಗಳನ್ನು ಶಾಸಕರ ಅನುದಾನದಿಂದ ಬಿಡುಗಡೆ ಮಾಡಿದ್ದೇನೆಂದು ಹಾಗೂ ಇತರ ಅನುದಾನವನ್ನು ಹಂತಹಂತವಾಗಿ ಆದಷ್ಟು ಬೇಗನೇ ಬಿಡುಗಡೆಗೊಳಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಅನುದಾನದಿಂದ ಇಷ್ಟರವರೆಗೂ ಯಾವುದೇ ಕೆಲಸ-ಕಾರ್ಯಗಳು ಆರಂಭಗೊಂಡಿಲ್ಲ.

kasba_school_photo_3

ಸುಮಾರು 35,000 ಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಬೆಂಗರೆ ಪ್ರದೇಶದಲ್ಲಿ(ತೋಟ ಬೆಂಗರೆ, ಕುದ್ರೋಳಿ ಬೆಂಗರೆ, ಕಸ್ಬಾ ಬೆಂಗರೆ) ಕೇವಲ ಒಂದೇ ಒಂದು ಪ್ರೌಢ ಶಾಲೆ ಇರುವುದು. ಆ ಶಾಲೆಗೆ 14  ವರ್ಷದಿಂದ ಮುಖ್ಯೋಪಾಧ್ಯಾಯರು, ಕ್ರಾಫ್ಟ್ ಶಿಕ್ಷಕರು, ಡಿ ಗ್ರೂಪ್ ನೌಕರರು ಉತ್ತಮ ಪ್ರಯೋಗಾಲಯ ಮತ್ತು ಸಲಕರಣೆಗಳು ಇಲ್ಲ. ಸುಮಾರು 2 ವರ್ಷದಿಂದ ಕಂಪ್ಯೂಟರ್‌ಗಳು ನಿಷ್ಕ್ರಿಯವಾಗಿವೆ.

ಉತ್ತಮ ಆಟದ ಮೈದಾನ, ಲೈಬ್ರರಿಯು ಇಲ್ಲ. 2 ನೆಯ ಅವಧಿಗೆ ಸಂಸದರಾಗಿರುವ ನಳೀನ್ ಕುಮಾರ್ ಕಟೀಲ್‌ರವರು ಇಷ್ಟರವರೆಗೆ ಒಮ್ಮೆಯೂ ಶಾಲೆಗೆ ಭೇಟಿ ನೀಡಿಲ್ಲ ಎಂಬುವುದು ಬೇಸರದ ಸಂಗತಿ. ಹೀಗೆ ಶಾಲೆಗೆ ಮೂಲಭೂತ ವ್ಯವಸ್ಥೆಯನ್ನು ಒದಗಿಸಲು ವಿಫಲವಾಗಿರುವ ಜನಪ್ರತಿನಿಧಿಗಳ ವಿರುದ್ಧ ಅವಶ್ಯ ಬಂದರೆ ಹೋರಾಟ ನಡೆಸಲು ನಾವು ಸಿದ್ಧರಾಗಿದ್ದೇವೆ ಎಂದು ಎಸ್.ಐ.ಓ. ಕಸ್ಬಾ ಬೆಂಗರೆ ಕಾರ್ಯದರ್ಶಿ ಬ್ರ| ಸೈಫುಲ್ಲಾ ತಿಳಿಸಿದ್ದಾರೆ.

Write A Comment