ಕರಾವಳಿ

ಜನರ ಸಾಮಾನ್ಯ ಸಮಸೈಗಳಿಗೂ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಫಲ : ನಾಯಕ್ ಆರೋಪ

Pinterest LinkedIn Tumblr

Pratap_nayak_Press_1

ಮಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯದ ಜನರ ಸಮಸೈಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜಾರಿಗೆ ತರುವಲ್ಲಿ ಹಾಗೂ ಈ ಹಿಂದೆ ಜಾರಿಗೆ ತಂದ ಹಲವು ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಆರೋಪಿಸಿದ್ದಾರೆ.

Pratap_nayak_Press_3

ಶುಕ್ರವಾರ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಲಕ್ಷ್ಮೀ ಪೂಜೆ, ಗೋಪೂಜೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ತಾಲೂಕು ಕೇಂದ್ರಗಳಿಗೆ ಹೋದರೂ ದಿನಕ್ಕೆ 5ರಿಂದ 10 ರೇಶನ್ ಕಾರ್ಡ್ ಗಳು ಅರ್ಜಿದಾರರ ಕೈ ಸೇರುತ್ತಿಲ್ಲ. ಕೆಲವು ಬಡ ಕುಟುಂಬಗಳು ಕಳೆದ ಒಂದು ವರ್ಷದಿಂದ ರೇಶನ್ ಕಾರ್ಡ್ ನಿಂದ ವಂಚಿತರಾಗಿದ್ದಾರೆ. ಬಿಪಿಎಲ್ ಕಾರ್ಡ್ ದಾರರ ರೇಶನ್ ಕಾರ್ಡ್ ಗಳು ರದ್ದಾಗುತ್ತಿದೆ. ಒಂದೆಡೆ ಒಂದು ರೂ ಗೆ ಅಕ್ಕಿ ನೀಡಿದರೆ ಇನ್ನೊಂದೆಡೆ ರೇಶನ್ ಕಾರ್ಡ್ ರದ್ದು ಮಾಡಿ ಸರಕಾರ ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ತಿಳಿಸಿದರು.

ಕುಮ್ಕಿ ಭೂಮಿಯನ್ನು ಹೊಂದಿರುವ ರೈತರಿಗೆ ಸರಕಾರ ನೋಟೀಸ್ ನೀಡಿದ್ದು, ಇದರಿಂದ ನೂರಾರು ರೈತರು ಬೀದಿ ಪಾಲಾಗಲಿದ್ದಾರೆ. ಈಗಾಗಲೇ ರೈತರು ಆ ಭೂಮಿಯಲ್ಲಿ ದೊಡ್ಡ ಪ್ರಮಾಣದ ಕೃಷಿಯನ್ನು ಮಾಡಿದ್ದು, ಆ ಭೂಮಿಯನ್ನು ಅವರಿಗೆ ನೀಡುವಂತೆ ನಾವು ಆಗ್ರಹಿಸುತ್ತೇವೆ ಎಂದರು.

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸುವುದು, ಪೊಲೀಸರ ಮೇಲೆ ಒತ್ತಡ ತರುವುದು, ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಹಾಕುವುದನ್ನೇ ತನ್ನ ಕೆಲಸವನ್ನಾಗಿಸಿದೆ. ತಪ್ಪು ಮಾಡಿದವರಿಗೆ ನಿಷ್ಪಕ್ಷವಾಗಿ ಕಠಿಣಕ್ರಮ ಜರಗಿಸದೆ ಇದ್ದಲ್ಲಿ ಸರಕಾರದ ಮೇಲೆ ಜನರಿಗೆ ನಂಬಿಕೆ ಹೋದಿತು. ಕಾವೂರು ಎಸ್ ಐ ಯನ್ನು ಅಮಾನತು ಮಾಡಿದ ನಗರದ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲು ಸರಕಾರ ಹವಣಿಸುತ್ತಿದೆ. ನಿಷ್ಠಾವಂತ ಅಧಿಕಾರಿಗಳ ಕೆಲಸಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.

Pratap_nayak_Press_2

ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಅ.29ರಂದು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಮಾಜಿ ಎಮ್.ಎಲ್.ಸಿ.ಗಳಾದ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮುಖಂಡರಾದ ರವಿಶಂಕರ್ ಮಿಜಾರು,  ಸಂಜೀವ ಮಠಂದೂರು, ಆಶಾ ತಿಮ್ಮಪ್ಪ ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment