ಕರಾವಳಿ

ಶಾಲೆಗೆ ಹೋಗಿಲ್ಲ…ಕಾಲೇಜು ಮೆಟ್ಟಿಲು ಹತ್ತಿಲ್ಲ. ಆದ್ರೂ ಪಿಯುಸಿಯಲ್ಲಿ ಪೋಲಿಯೊ ಪೀಡಿತ ಯಶವಂತ ಪಾಸ್

Pinterest LinkedIn Tumblr

ವಿಶೇಷ ವರದಿ- ಯೋಗೀಶ್ ಕುಂಭಾಸಿ

ಉಡುಪಿ: ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ, ಸಾಧಿಸುವ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಶಾಲೆ ಹಾಗೂ ಕಾಲೇಜು ಮೆಟ್ಟಿಲು ಹತ್ತದೆಯೇ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಪೋಲಿಯೊ ಪೀಡಿತ ಯಶವಂತ ಎಂಬ ಯುವಕನ ಸಾಧನೆಯ ಕಥೆಯಿದು.

Spoorthidhama_Yashavantha_PUC Score (1)

Spoorthidhama_Yashavantha_PUC Score (4)

ಯಶವಂತನಿಗೆ ಶಿಕ್ಷಣವೆಂದರೇ ಅಚ್ಚುಮೆಚ್ಚು…
ಮೈಸೂರಿನಲ್ಲಿ ಹುಟ್ಟಿದ ಯಶವಂತ ಹುಟ್ಟುವಾಗಲೇ ಪೋಲಿಯೋದಿಂದ ಕಾಲುಗಳ ಬಲವನ್ನು ಕಳೆದುಕೊಂಡಿದ್ದವರು. ಕೇವಲ ಗಾಲಿ ಕುರ್ಚಿಯಲ್ಲೇ ದಿನ ಕಳೆಯುತ್ತಿದ್ದ ಹರೆಯದ ಹುಡುಗನಿಗೆ ಶಿಕ್ಷಣವೆಂದರೆ ಅಚ್ಚುಮೆಚ್ಚು. ಅಜ್ಜನೇ ಈತನ ಶಿಕ್ಷಣದ ಪ್ರೀತಿಗೆ ಸೋತು ಆತನಿಗೆ ಪಾಠ ಪ್ರವಚನವನ್ನು ಮನೆಯಲ್ಲಿಯೇ ಮಾಡುತ್ತಾರೆ. ಆದರೇ ತಾತನ ಅಗಲುವಿಕೆಯ ನಂತರ ಯಶವಂತನ ಶಿಕ್ಷಣದ ಕನಸು ಮರೀಚಿಕೆಯೇ ಆಗಿಹೋಯಿತು. ಇತ್ತ ಮನೆಯಲ್ಲಿ ಮಗ ಕೈ ಕಾಲಿಗೆ ಶಕ್ತಿಯಿಲ್ಲದೇ ಇರುವುದನ್ನು ನೋಡಿದ ತಂದೆ ಮದ್ಯವ್ಯಸನಿಯಾಗುತ್ತಾರೆ. ಆದರೆ ಹೆತ್ತ ತಾಯಿ ಸುಧಾರಾಣಿಯವರಿಗೆ ಮಗನೆಂದರೆ ಅತಿಯಾದ ಪ್ರೀತಿ. ಮಗನ ಆಸೆಯನ್ನು ಪೂರೈಸುವಂತೆ ಪತಿಯಲ್ಲಿ ಕೇಳಿದರೇ ಯಾವುದೇ ರೀತಿಯ ಸಹಕಾರವೂ ಸಿಕ್ಕಿಲ್ಲ. ಕೊನೆಕೊನೆಗೆ ಯಶವಂತ ಓದುವ ಆಸೆಯನ್ನೇ ಬಿಡುವ ಹಂತಕ್ಕೆ ತಲುಪಿದ. ಆದರೇ ಹೆತ್ತ ತಾಯಿ ಅದಕ್ಕೆ ಅವಕಾಶ ಕೊಡಲಿಲ್ಲ.

Spoorthidhama_Yashavantha_PUC Score (6)

ಮಗನ ಆಸೆ ಫಲಿಸಲು ತಾಯಿ ನೀಡಿದ್ರು ಸಾತ್…
ಮಗನನ್ನು ಓದಿಸಬೇಕು. ಆತನನು ವಿದ್ಯಾವಂತನನ್ನಾಗಿ ಮಾಡಬೇಕು ಎಂದು ಯಶವಂತನ ತಾಯಿ ಸುಧಾರಾಣಿ ಶಪಥ ಮಾಡುತ್ತಾರೆ. ತನ್ನ ತಾಯಿಯ ಸಹಕಾರದೊಂದಿಗೆ ರಾತ್ರೋ ರಾತ್ರಿ ಮಗ ಯಶವಂತನೊಂದಿಗೆ ಮೈಸೂರಿನಿಂದ ಹೊರಡುತ್ತಾರೆ. ಇಲ್ಲಿಂದ ಶುರುವಾಯಿತು ಯಶವಂತನ ಸಾಧನೆಯ ಪಯಣ. ಮೈಸೂರಿನಿಂದ ಕುಂದಾಪುರದ ಕೋಣಿಯ ಮಾನಸ ವಿಶೇಷ ಮಕ್ಕಳ ಶಾಲೆಗೆ ಬಂದಿಳಿದ ತಾಯಿ ಮಗ ಕೆಲವು ತಿಂಗಳುಗಳ ಕಾಲ ಅಲ್ಲಿನ ಮಕ್ಕಳೊಂದಿಗೆ ಕಾಲ ಕಳೆದರು ತದನಂತರ ವಿವೇಕಾನಂದರ ಪರಮ ಭಕ್ತನಾದ ಯಶವಂತನು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕಿನ ಗುರುಗಳ ಮುಖಾಂತರ ಕೆದೂರು ಸ್ಫೂರ್ತಿಧಾಮದ ಬಗ್ಗೆ ತಿಳಿದುಕೊಳ್ಳುತ್ತಾರೆ.

 Spoorthidhama_Yashavantha_PUC Score (2)

ಆಶ್ರಯ ನೀಡಿದ ‘ಸ್ಫೂರ್ತಿಧಾಮ’…
ಸುಧಾರಾಣಿ ತನ್ನ ಮಗನೊಂದಿಗೆ ಸ್ಫೂರ್ತಿಧಾಮಕ್ಕೆ ಅಶ್ರಯ ಕೇಳಿ ಬರುತ್ತಾರೆ. ಇವರ ಕತೆಯನ್ನು ಕೇಳಿದ ಮುಖ್ಯಕಾರ್ಯನಿರ್ವಾಹಕ ಡಾ|| ಕೇಶವ ಕೋಟೇಶ್ವರ ಅವರು ತಾಯಿ ಮಗ ಇಬ್ಬರಿಗೂ ಆಶ್ರಯ ನೀಡುತ್ತಾರೆ. ಯಶವಂತನಿಗೆ ಬೇಕಾದ ಪುಸ್ತಕಗಳನ್ನು ಒದಗಿಸಿ ಆತನ ಓದಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಓದಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ ಯಶವಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಖಾಸಗಿಯಾಗಿ ಕಟ್ಟಿ ಬರೆದು 277 ಅಂಕಗಳೊಂದಿಗೆ ಉತ್ತೀರ್ಣನಾಗುತ್ತಾನೆ.

ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ….
ತದನಂತರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೂಡ ಖಾಸಗಿಯಾಗಿ ಕಟ್ಟುವ ಬಯಕೆಗೆ ಡಾ. ಕೇಶವ ಕೋಟೇಶ್ವರ ಅವರು ಪ್ರೋತ್ಸಾಹ ನೀಡುತ್ತಾರೆ. ಆತನಿಗೆ ಬೇಕಾದ ಪುಸ್ತಕಗಳನ್ನು ನೀಡುವ ಜೊತೆಗೆ ಸ್ಪೂರ್ತಿಧಾಮದಲ್ಲಿರುವ ಪದವಿ ವಿದ್ಯಾರ್ಥಿನಿ ವನಿತಾ ಟ್ಯೂಶನ್ ನೀಡುತ್ತಾರೆ. ದಿನಕ್ಕೆ ಒಂದೆರಡು ಗಂಟೆ ಓದಿ ಒಂದು ಗಂಟೇ ಟ್ಯೂಶನ್ ಪಡೇಯುತ್ತಿದ್ದ ಯಶವಂತ ಪರೀಕ್ಷೆ ಬರೆದು 272 ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾನೆ. ಈತ ಕಲಾ ವಿಭಾಗದಲ್ಲಿ ಓದಿದ್ದ.

Spoorthidhama_Yashavantha_PUC Score (3)

ಬರೆಯುವುದೆಂದರೇ ಯಶವಂತನಿಗೆ ಇಷ್ಟ….
ಓದುವುದರ ಜೊತೆಗೆ ಲೇಖನಗಳನ್ನು ಬರೆಯುವುದು ಕೂಡ ಯಶವಂತನ ಹವ್ಯಾಸ. ಅನೇಕ ಬಾರಿ ಈತನ ಕತೆ ಕವನಗಳು ಬಾಲಮಂಗಳದಲ್ಲಿ ಪ್ರಕಟವಾಗಿದೆ. ಹಾಗೂ ಇತ್ತೀಚೆಗೆ ೧೮ ವರ್ಷದೊಳಗಿರುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ಮಾಹಿತಿಗಳನ್ನು ಸಂಗ್ರಹಿಸಿ ಮಕ್ಕಳ ಸಾಧನೆ ಬಗ್ಗೆ ಲೇಖನವನ್ನು ಬಾಲಮಂಗಳದಲ್ಲಿ ಪ್ರಕಟಿಸಲಾಗಿತ್ತು. ಹಾಗೂ ೨೦೧೫-೧೬ನೇ ಸಾಲಿನಲ್ಲಿ ರಾಜ್ಯಸರ್ಕಾರವು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಕ್ಕಳಿಗೆ ರಾಜ್ಯ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ ಅದಕ್ಕಾಗಿ ಪ್ರಸ್ತುತ ಇವರು ಆ ಮಕ್ಕಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಲೇಖನಗಳನ್ನು ಬರೆಯುವ ತಯಾರಿಯಲ್ಲಿದ್ದಾರೆ. ಮುಂದೆ ಈತನು ತಾನು ಈಗ ಆಶಯ್ರದಲ್ಲಿರುವ ಸಂಸ್ಥೆಯಾದ ಸ್ಫೂರ್ತಿಧಾಮದ ಬಗ್ಗೆ ಒಂದು ಲೇಖನವನ್ನು ಬರೆಯಬೇಕೆಂಬ ಆಸೆಯಿಂದಿದ್ದಾರೆ. ಈತನು ಬರೆಯುವ ಲೇಖನಗಳೆಲ್ಲಾ ಪ್ರಕಟವಾಗುವಂತದ್ದು ಭೃಗುನಂದನ ಎನ್ನುವ ಈತನ ಅಂಕಿತನಾಮದೊಂದಿಗೆ.

Spoorthidhama_Yashavantha_PUC Score (5)

‘ಕನ್ನಡಿಗ ವರ್ಲ್ಡ್’ಜೊತೆ ಮಾತು……
‘ನನ್ನ ಆಸೆಗೆ ಸಹಕರಿಸಿದ ತಾಯಿ, ಸ್ಪೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹನ ಕೇಶವ್ ಕೋಟೇಶ್ವರ ಹಾಗೂ ಇಲ್ಲಿನ ಸ್ನೇಹಿತರಿಂದ ನಾನು ಪಿಯುಸಿಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಡಿಪ್ಲಮೋ ಮಾಡುವೆ. ಸ್ವಲ್ಪ ಮರೆಗುಳಿಯಾಗಿದ್ದೆ. ಆದರೇ ರಾಮರಕ್ಷಾ ಸ್ತೋತ್ರ ಓದಿದರೇ ಮರೆವು ಕಮ್ಮಿಯಾಗಿ ನೆನಪಿನ ಶಕ್ತಿ ಜಾಸ್ಥಿಯಾಗುತ್ತದೆಂಬ ಹಿರಿಯರ ಮಾರ್ಗದರ್ಶನದಂತೆ ನಿತ್ಯ ಐದಾರು ಬಾರಿ ಸ್ತೋತ್ರ ಪಠಿಸಿದೆ. ಸದ್ಯ ನೆನಪಿನ ಶಕ್ತಿಯೂ ಜಾಸ್ಥಿಯಾಗಿದೆ.

ದೈಹಿಕ ಬಲಕ್ಕಿಂತ ಮಾನಸಿಕ ಬಲವೇ ಶ್ರೇಷ್ಠ ಎನ್ನುವುದು ಯಶವಂತನ ಸಾಧನೆಯಿಂದ ತಿಳಿಯುತ್ತದೆ. ಕನಸ್ಸು ಕಾಣುತ್ತಾ ಆ ಕನಸ್ಸು ನನಸ್ಸು ಮಾಡಲು ಸತತ ಪ್ರಯತ್ನ ನಡೆಸುತ್ತಿರುವ ಯಶವಂತ ಹಾಗೂ ಮಗನ ಸಂತೋಷಕ್ಕಾಗಿ ತನ್ನೆಲ್ಲಾ ಸಂತೋಷವನ್ನು ತ್ಯಾಗ ಮಾಡಿ ಮಗನ ಸೇವೆ ಮಾಡುತ್ತಿರುವ ಅಮ್ಮನ ಸಹಕಾರ ನಿಜಕ್ಕೂ ಹೆಮ್ಮೆ ಸಂಗತಿ. ಯಶವಂತನ ಬದುಕು ಹಸನಾಗಲಿ ಎಂಬುದು ‘ಕನ್ನಡಿಗ ವರ್ಲ್ಡ್’ ಆಶಯವಾಗಿದೆ.

Comments are closed.