ಕರಾವಳಿ

ಕರ್ನಾಟಕದ ಪ್ರಪ್ರಥಮ ಸರ್ಫಿಂಗ್ ಸ್ಪರ್ಧೆಗೆ ಮಂಗಳೂರಿನಲ್ಲಿ ಚಾಲನೆ : ದೇಶವಿದೇಶಗಳ 80ಕ್ಕೂ ಹೆಚ್ಚು ಸರ್ಫರ್‌ಗಳಿಂದ ಕೌಶಲ್ಯ ಪ್ರದರ್ಶನ

Pinterest LinkedIn Tumblr

Surffing_comption_10

ಮಂಗಳೂರು, ಮೇ 27 : ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಷನ್ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಮಂತ್ರ ಸರ್ಫ್ ಕ್ಲಬ್ ಅಸೋಸಿಯೇಶನ್ ಹಾಗೂ ಕೆನರಾ ಸರ್ಫಿಂಗ್ ಆಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಸಹಯೋಗದಲ್ಲಿ ಮಂಗಳೂರಿನ ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ “ಆಲ್ ಕಾರ್ಗೊ ಇಂಡಿಯನ್ ಓಪನ್ ಆಫ್ ಸರ್ಫಿಂಗ್” ಸ್ಪರ್ಧೆಗೆ ಶುಕ್ರವಾರ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಚಿವ ಅಭಯಚಂದ್ರ ಜೈನ್, ಸ್ಥಳೀಯ ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪಣಂಬೂರ್ ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

Surffing_comption_1 Surffing_comption_2 Surffing_comption_3 Surffing_comption_4 Surffing_comption_5

ಸ್ಪರ್ಧೆಯಲ್ಲಿ ಭಾಗವಹಿಸಲು ದೇಶದ ವಿವಿಧ ಕಡೆಗಳಿಂದ 80ಕ್ಕೂ ಹೆಚ್ಚು ಸರ್ಫರ್‌ಗಳು ಆಲ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ 7.30ರಿಂದ 11.30ರವರೆಗೆ ಹಾಗೂ ಮಧ್ಯಾಹ್ನ 12.45 ರಿಂದ 3 ಗಂಟೆಯವರೆಗೆ ಸಮುದ್ರದ ನೀರಿನ ಅಲೆಗಳ ಏರಿಳಿತವನ್ನು ಗಮನದಲ್ಲಿರಿಸಿಕೊಂಡು ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮೂರು ದಿನಗಳ ಅವಧಿಗೆ ವಸತಿ, ಸಾರಿಗೆ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಸ್ಪರ್ಧೆಯ ತೀರ್ಪುಗಾರರಾಗಿ ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಡೋನೇಷ್ಯಾದ ಸರ್ಫಿಂಗ್ ಕ್ಷೇತ್ರದ ಅಂತಾರಾಷ್ಟ್ರೀಯ ಚಾಂಪಿಯನ್‌ಗಳು ಆಗಮಿಸಿದ್ದಾರೆ. ವಿವಿಧ ವಿಭಾಗಗಳಿಗೆ ಒಟ್ಟು 6 ಲಕ್ಷ ರೂ. ವೌಲ್ಯದ ನಗದು ಬಹುಮಾನವನ್ನು ವಿತರಣೆ ಮಾಡಲಾಗುತ್ತದೆ. ಸಮುದ್ರದ ನೀರಿನಲ್ಲಿ ವಿವಿಧ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವ ಸರ್ಫರ್‌ಗಳನ್ನು ಸುಲಭವಾಗಿ ಗುರುತಿಸಲು ನಾಲ್ಕು ಬಣ್ಣದ ಜೆರ್ಸಿಗಳನ್ನು ಸಿದ್ಧಪಡಿಸಲಾಗಿದೆ.

ಮೂರು ದಿನಗಳ ಸ್ಪರ್ಧೆಯ ಸಮಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಸರ್ಫಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಹಾಗೂ ವೀಕ್ಷಕರಿಗೆ ಅನುಕೂಲವಾಗುವಂತೆ ಮುಕ್ಕದ ಶ್ರೀನಿವಾಸ ಕಾಲೇಜಿನ ಪ್ರಮುಖ ಪ್ರವೇಶ ದ್ವಾರದ ಸಮೀಪದಿಂದ ಸಸಿಹಿತ್ಲು ಬೀಚ್‌ವರೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Surffing_comption_6 Surffing_comption_7 Surffing_comption_8 Surffing_comption_9 Surffing_comption_11 Surffing_comption_12 Surffing_comption_13 Surffing_comption_14 Surffing_comption_15

ದೇಶದ ಅತ್ಯುನ್ನತ ಸರ್ಫಿಂಗ್ ಪಟುಗಳು ಹಾಗೂ ಅಂತರರಾಷ್ಟ್ರೀಯ ಸರ್ಫಿಂಗ್ ಪಟುಗಳು ತಮ್ಮ ಕೌಶಲವನ್ನು ಒರೆಗೆ ಹಚ್ಚಲು ಆಗಮಿಸಿದ್ದಾರೆ. 6 ಲಕ್ಷ ರೂಪಾಯಿ ಬಹುಮಾನದ ಈ ಟೂರ್ನಿಯಲ್ಲಿ 80ಕ್ಕೂ ಹೆಚ್ಚು ಸರ್ಫರ್‌ಗಳು ಭಾಗವಹಿಸಿದ್ದಾರೆ.

ಪುರುಷರ ವಿಭಾಗದಲ್ಲಿ 16ರ ವಯೋಮಿತಿ, ಜೂನಿಯರ್ ಅಥವಾ ಬಾಲಕರು (17- 22 ವರ್ಷ), ಸೀನಿಯರ್ ಅಥವಾ ಪುರುಷರು (22- 28 ವರ್ಷ), ಮಾಸ್ಟರ‍್ಸ್ (28 ವರ್ಷ ಮೇಲ್ಪಟ್ಟವರು) ಭಾಗವಹಿಸಿದ್ದಾರೆ.

ಈ ಎಲ್ಲ ವಿಭಾಗಗಳಲ್ಲಿ ಮಹಿಳಾ ವರ್ಗಕ್ಕೂ ಸ್ಪರ್ಧೆಗಳಿರುತ್ತವೆ. ವರ್ಲ್ಡ್ ಸರ್ಫ್ ಲೀಗ್‌ನ ಪ್ರಧಾನ ವ್ಯವಸ್ಥಾಪಕ ಸ್ಟೀವ್ ರಾಬರ್ಟ್‌ಸನ್ ಮತ್ತು ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಪ್ರಧಾನ ವ್ಯವಸ್ಥಾಪಕ ಟಿಪ್ ಹೈನ್ ಅವರು ಇಡೀ ಕೂಟದ ಅಧಿಕೃತ ಉಸ್ತುವಾರಿ ವಹಿಸಿದ್ದಾರೆ.

ಯುಎಸ್ ಓಪನ್ ಆಫ್ ಸರ್ಫಿಂಗ್ ಹಾಗೂ ಆಸ್ಟ್ರೇಲಿಯನ್ ಓಪನ್ ಆಫ್ ಸರ್ಫಿಂಗ್‌ನಿಂದ ಸ್ಫೂರ್ತಿ ಪಡೆದು ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ ಈ ಸರ್ಫಿಂಗ್ ಸ್ಪರ್ಧೆ ಆಯೋಜಿಸಲಾಗುತ್ತಿದೆ. ದೇಶದಲ್ಲಿ ಸರ್ಫಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಮತ್ತು ಹೊಸದಾಗಿ ರಚನೆಯಾದ ಕೆನರಾ ಸರ್ಫಿಂಗ್ ಹಾಗೂ ವಾಟರ್ ಸ್ಪೋರ್ಟ್ಸ್ ಪ್ರೊಮೋಷನ್ ಕೌನ್ಸಿಲ್ ಸಹಯೋಗದಲ್ಲಿ ಕೂಟ ಆಯೋಜಿಸಿದೆ. ಈ ಮೂಲಕ ಕ್ರೀಡೆ ಜನಪ್ರಿಯತೆಗೆ ಹೊಸ ಆದಾಯದ ವಾಹಿನಿಯನ್ನು ಕಂಡುಕೊಳ್ಳಲಾಗಿದೆ.

Comments are closed.