ಕರಾವಳಿ

ಸಿಇಟಿ ಫಲಿತಾಂಶ ಪ್ರಕಟ: ಅನಂತ್ ಜಿ, ಮಿಲಿಂದ್ ಕುಮಾರ್, ಮೃದುಲಾ ಪ್ರಥಮ

Pinterest LinkedIn Tumblr

CET-rank-holders

ಸಿಇಟಿ ವಿವಿಧ ವಿಭಾಗಗಳಲ್ಲಿ ಮೊದಲ ರ‍್ಯಾಂಕ್‌ ಪಡೆದ ಜಿ. ಅನಂತ್‌, ಮಿಲಿಂದ್ ಕುಮಾರ್, ಸಂಜಯ್‌ ಎಂ. ಗೌಡರ್‌ ಮತ್ತು ಮೃದುಲಾ ಸಿ.ಆರ್.

ಬೆಂಗಳೂರು: ಪ್ರಸಕ್ತ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ -ಸಿಇಟಿ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದ್ದು, ವೈದ್ಯಕೀಯ ವಿಭಾಗದಲ್ಲಿ ಅನಂತ್. ಜಿ, ಹೋಮಿಯೋಪತಿಯಲ್ಲಿ ಸಂಜಯ್ ಎಂ. ಗೌಡರ್, ಇಂಜಿನಿಯರಿಂಗ್‌ನಲ್ಲಿ ಮಿಲಿಂದ್‌ಕುಮಾರ್ ವಡ್ಡಿರಾಜು, ಆರ್ಕಿಟೆಕ್ಟ್ ವಿಭಾಗದಲ್ಲಿ ಮೃದುಲಾ. ಸಿ.ಆರ್ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ.

ಪರೀಕ್ಷೆ ತೆಗೆದುಕೊಂಡಿದ್ದ 1,78,377 ವಿದ್ಯಾರ್ಥಿಗಳಲ್ಲಿ 1,71,868 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅದರಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ 41,530 ವಿದ್ಯಾರ್ಥಿಗಳು, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಕೋರ್ಸ್‌ಗೆ 99,791, ಇಂಜಿನಿಯರಿಂಗ್ ಕೋರ್ಸ್‌ಗೆ 1,27,576, ಆರ್ಕಿಟೆಕ್ಟ್‌ಗೆ 1395 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

ಇದಲ್ಲದೆ ಬಿಎಸ್ಸಿ ಕೃಷಿ ಕೋರ್ಸ್‌ಗೆ 96,341, ಪಶುಸಂಗೋಪನೆ ಕೋರ್ಸ್‌ಗೆ 99,788, ಬಿ ಫಾರಂ ಮತ್ತು ಡಿ ಫಾರಂಗೆ 1,31,324 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

medical-rank-students

ಎಲ್ಲ 7 ವಿಭಾಗಗಳಲ್ಲಿ ಪ್ರಥಮ 5 ಱ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಪೂರ್ತಿ ಸಂಪೂರ್ಣ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಬರಿಸಲು ಸರ್ಕಾರ ಈ ವರ್ಷದಿಂದ ನಿರ್ಧಾರ ಕೈಗೊಂಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಂದು ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಬಿಡುಗಡೆ ಮಾಡಿ ಜೂ. 3 ರಿಂದ ತುಮಕೂರು, ಗುಲ್ಬರ್ಗ ಸೇರಿದಂತೆ ರಾಜ್ಯದ 15 ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದ್ದು, ಆ ಬಳಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಮುಂದಿನ ತಿಂಗಳು ಬರೆಯಬೇಕಾಗುತ್ತದೆ. ಆದರೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದಾಖಲಾತಿ ಪರಿಶೀಲನೆ ಮತ್ತು ಕೌನ್ಸಲಿಂಗ್ ನಿಗದಿಯಂತೆ ನಡೆಯಲಿದೆ ಎಂದು ಹೇಳಿದರು.

ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ ಸಚಿವರು, ಕಾಮೆಡ್- ಕೆ ವೈದ್ಯಕೀಯ ಸೀಟ್‌ಗಳನ್ನು ಕೊಡುವುದಿಲ್ಲ ಎಂದು ತಗಾದೆ ತೆಗೆದಿರುವ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಸಲಹೆ ಕೋರಲಾಗಿದೆ. ಅಲ್ಲಿಂದ ಅಭಿಪ್ರಾಯ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭರತ್ ಲಾಲ್ ಮೀನಾ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Comments are closed.