ಕರಾವಳಿ

ಬಾಳಿಗಾ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ನರೇಶ್ ಶೆಣೈ ಬಂಧನದ ಬಗ್ಗೆ ಕಮಿಷನರ್ ಹೇಳಿದ್ದೇನು…

Pinterest LinkedIn Tumblr

Polish_Commisnr_Press1

ಮಂಗಳೂರು, ಜೂ. 27: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆಗೆ ಸಂಬಂಧಿಸಿ ಪ್ರಮುಖ ಆರೋಪಿ ಎಂ.ನರೇಶ್ ಶೆಣೈ(39)ಯನ್ನು ನಗರದ ಸಿಸಿಬಿ ಪೊಲೀಸರು ರವಿವಾರ ಬೆಳಗ್ಗೆ 11:30ರ ಸುಮಾರಿಗೆ ಮುಲ್ಕಿ ಪಡುಬಿದ್ರೆ ಸಮೀಪದ ಹೆಜಮಾಡಿಯಲ್ಲಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.

ರವಿವಾರ ಸಂಜೆ ನಗರದ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು,ಬಂಧಿತ ನರೇಶ್ ಶೆಣೈ ನಗರದ ವಿ.ಟಿ.ರಸ್ತೆಯಲ್ಲಿ ವಿವೇಕ್ ಟ್ರೇಡರ್ಸ್‌ ಎಂಬ ಆಯುರ್ವೇದಿಕ್ ಔಷಧ ವಿತರಣಾ ಸಂಸ್ಥೆಯನ್ನು ನಡೆಸಿಕೊಂಡಿದ್ದು, ಕೊಲೆಯ ರೂವಾರಿಯಾಗಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ತಿಲಕ್‌ಚಂದ್ರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರವೀಶ್ ನಾಯಕ್, ಶಾಂತರಾಮ, ರಾಜೇಶ್, ಮಾರುತಿ ನಾಯ್ಕ್, ಸಿಸಿಬಿ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ ಸಹಕಾರದಿಂದ ಆರೋಪಿ ನರೇಶ್ ಶೆಣೈಯನ್ನು ಬಂಧಿಸಲಾಗಿದೆ ಎಂದರು.

Polish_Commisnr_Press2

ಮಾರ್ಚ್ 21ರಂದು ನಗರದ ಕೊಡಿಯಾಲ್‌ಬೈಲ್ ಬಳಿ ನಡೆದ ಬಾಳಿಗಾ ಹತ್ಯೆಗಾಗಿ ನರೇಶ್ ಶೆಣೈ ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿ, ಹತ್ಯೆ ನಡೆದ ಬಳಿಕ ಆರೋಪಿಗಳಿಗೆ ಹಣ ಸಹಾಯ ಮಾಡಿ, ಕಳೆದ ಮೂರು ತಿಂಗಳುಗಳ ಕಾಲ ತಲೆಮರೆಸಿಕೊಂಡು ಸಾಕ್ಷಗಳನ್ನು ನಾಶಪಡಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದರು.

ಜಮ್ಮುಕಾಶ್ಮೀರ, ಗೋರಖ್‌ಪುರ್, ಲಕ್ನೋ, ನೇಪಾಲದಲ್ಲಿ ತಲೆ ಮರೆಸಿಕೊಂಡಿದ್ದರೆಂದು ತನಿಖೆಯಿಂದ ಗೊತ್ತಾಗಿದೆ. ನರೇಶ್ ಶೆಣೈಗೆ ಅಡಗುದಾಣ ಬದಲಾಯಿಸಲು ಹಾಗೂ ಆತನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆಂಬುದು ತನಿಖೆ ನಡೆಯಲಿದೆ. ನರೇಶ್ ಶೆಣೈಯ ಕಚೇರಿ ಉದ್ಯೋಗಿ ಹಾಗೂ ನಿಕಟವರ್ತಿ ವಿಘ್ನೆಶನನ್ನು ಶೀಘ್ರದಲ್ಲೇ ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವುದಾಗಿ ಕಮಿಷನರ್ ಚಂದರಶೇಖರ್ ಮಾಹಿತಿ ನೀಡಿದರು.

Baliga_naresh_shenoy

ನರೇಶ್ ಶೆಣೈಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಪೊಲೀಸ್ ಕಸ್ಟಡಿಗೆ ಕೋರುವುದಾಗಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಸಾಕ್ಷಾಧಾರಗಳನ್ನುಸ ಸಂಗ್ರಹಿಸಿದ ಬಳಿಕ ಜೂನ್ 23ರಂದು ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಹಿತ ಈ ಹಿಂದೆ ಬಂಧಿಸಲ್ಪಟ್ಟ ಆರೋಪಿಗಳಾದ ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಮಂಜುನಾಥ ಶೆಣೈ ಎಂಬವರ ವಿರುದ್ಧ ನಗರದ ಜೆಎಂಎಫ್‌ಸಿ 3ನೆ ನ್ಯಾಯಾಲಯದಲ್ಲಿ 770 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಲು ನ್ಯಾಯಾಲಯದ ಅನುಮತಿ ಪಡೆಯಲಾಗಿದೆ ಎಂದರು.

ನಗರ ಡಿಸಿಪಿಗಳಾದ ಸಂಜೀವ್ ಎಂ. ಪಾಟಿಲ್, ಕೆ.ಎಂ.ಶಾಂತರಾಜು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.