ಕರಾವಳಿ

ದ.ಕ.ಜಿಲ್ಲೆಯ ವಿವಿದೆಡೆಗಳಲ್ಲಿ ಬಾರೀ ಮಳೆ : ಹಲವು ಮನೆಗಳಿಗೆ ಹಾನಿ – ಉಚ್ಚಿಲದಲ್ಲಿ ತೀವ್ರಗೊಂಡ ಕಡಲ್ಕೊರೆತ : ಮನೆಗಳು ಸಮುದ್ರಪಾಲಾಗುವ ಭೀತಿಯಲ್ಲಿ ಸ್ಥಳೀಯರು

Pinterest LinkedIn Tumblr

Rain_havy_2016_2

ಮಂಗಳೂರು,ಜೂನ್.29 : ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಕಳೆದ 10 ದಿನಗಳಿಂದ ಉತ್ತಮ ಮಳೆ ಸುರಿದಿದೆ.ಮಂಗಳೂರು ಸುತ್ತಮುತ್ತ ಹಾಗೂ ಸುಬ್ರಹ್ಮಣ್ಯ, ಕಡಬ, ಸುಳ್ಯದಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಪುತ್ತೂರು, ಮಡಂತ್ಯಾರು, ಕಲ್ಲೇರಿ, ಬಜಪೆ ಪರಿಸರದಲ್ಲಿಯೂ ಮಳೆ ಸುರಿದಿದೆ. ಬೆಳ್ತಂಗಡಿ, ಉಜಿರೆ, ಪುಂಜಾಲಕಟ್ಟೆ, ಮಚ್ಚಿನ, ಬಿ.ಸಿ. ರೋಡ್‌, ಬಂಟ್ವಾಳ, ಕಲ್ಲಡ್ಕ, ಮಾಣಿ, ಮಂಚಿ, ಫರಂಗಿಪೇಟೆ, ವಾಮದಪದವು, ಸಿದ್ಧಕಟ್ಟೆ, ಪಾಣೆಮಂಗಳೂರು, ಉಳ್ಳಾಲ, ಬಜಪೆ ಮುಂತಾದೆಡೆ ಈ ಬಾರಿ ಉತ್ತಮ ವರ್ಷಧಾರೆಯಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಸಮುದ್ರದಲ್ಲಿ ಭಾರೀ ಬಿರುಗಾಳಿ ಬೀಸುತ್ತಿರುವುದರಿಂದ ಹಲವೆಡೆಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡು ಮೂರು ಮನೆಗಳು ಸಮುದ್ರಪಾಲಾಗುವ ಭೀತಿಯಲ್ಲಿವೆ.

Rain_havy_2016_3 Rain_havy_2016_4 Rain_havy_2016_5 Rain_havy_2016_6

ನ್ಯೂ ಉಚ್ಚಿಲ ನಿವಾಸಿಗಳಾದ ವಸಂತ್, ಯಮುನಾ ಹಾಗೂ ಚಂದ್ರಶೇಖರ್ ಎಂಬುವರ ಮನೆಗಳಿಗೆ ಸಮುದ್ರದ ಅಲೆಗಳು ಬೀಸುತ್ತಿದೆ. ಇದರಿಂದ ಯಮುನಾ ಅವರ ಪುತ್ರಿ ವಿನೋದಿನಿ (35) ಎಂಬವರ ಕಾಲಿಗೆ ಗಂಭೀರ ಗಾಯವಾಗಿದೆ. ಕಡಲಿನಬ್ಬರ ತೀವ್ರಗೊಂಡ ಹಿನ್ನೆಲೆಯಲ್ಲಿ ಮನೆಯ ಹೊರಗಡೆ ಇದ್ದ ವಸ್ತುಗಳನ್ನು ವಿನೋದಿನಿ ಅವರು ಜೋಡಿಸಿ ಇಡುತ್ತಿದ್ದರು. ಈ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅವರ ಮನೆಗೆ ಬಡಿದಿದೆ. ಇದರಿಂದ ವಿನೋದಿನಿ ಅವರಿಗೆ ಅಲೆ ಅಪ್ಪಳಿಸಿ ಅವರ ಕಾಲು ಹೊಂಡದಲ್ಲಿ ಹೂತು ಹೋಗಿದ್ದು, ಎಡಗಾಲನ್ನು ಹೊರತೆಗೆಯುವ ವೇಳೆ ಅವರ ಬಲಗಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಅವರನ್ನು ತೊಕ್ಕೊಟ್ಟು ಆಸ್ಪತ್ರೆಗೆ ಸ್ಥಳೀಯರು ಸೇರಿಸಿದ್ದಾರೆ.

Rain_havy_2016_7

ಉಳ್ಳಾಲದ ಕಡಲತೀರದಲ್ಲಿ ಕಡಲ್ಕೊರೆತ ಶಾಶ್ವತ ತಡೆಗೆ ಬ್ರೇಕ್ವಾಟರ್ ನಿರ್ಮಾಣವಾಗುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಕಡಲಬ್ಬರ ಇಳಿ ಮುಖಗೊಂಡಿವೆ. ಆದರೆ ಇದರಿಂದಾಗಿ ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ ಎನ್ನಲಾಗಿದೆ.. ಕಡಲ್ಕೊರೆತ ತಡೆಗೆ ಈ ಪ್ರದೇಶದಲ್ಲಿ ಶಾಶ್ವತ ಕ್ರಮವನ್ನು ಆದಷ್ಟು ಬೇಗ ಕೈಗೊಳ್ಳುವ ಅಗತ್ಯವಿದೆ. ಈ ಬಗ್ಗೆ ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸೋಮೇಶ್ವರ ಗ್ರಾಪಂ ಸದಸ್ಯ ರಾಜೇಶ್ ಉಚ್ಚಿಲರವರು ಇಂಜಿನಿಯರ್ ಮನೋಹರ್ ಅವರನ್ನು ಕರೆಸಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.

ಕಡಲ್ಕೊರೆತ ಸಮಸ್ಯೆ ಹೆಚ್ಚಾಗಿರುವ ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಶಾಶ್ವತ ಬ್ರೇಕ್ ವಾಟರ್ನ ಅಗತ್ಯ ಇದೆ. ಸರಕಾರವು ತಾತ್ಕಾಲಿಕ ಕಡಲ್ಕೊರೆತ ತಡೆಗೆ ಲಕ್ಷಾಂತರ ರೂ. ವ್ಯಯಿಸುವುದರಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಇದರ ಬದಲು ಸಂತ್ರಸ್ತ ಬಡಕುಟುಂಬಗಳಿಗೆ ಬಸವ ಕಲ್ಯಾಣ ಯೋಜನೆಯಡಿ 4 ಸೆಂಟ್ಸ್ ಸರಕಾರಿ ಜಾಗ ಒದಗಿಸಿದಲ್ಲಿ ಅನುಕೂಲವಾಗಬಹುದು.

Rain_havy_2016_8 (1) Rain_havy_2016_8 (2) Rain_havy_2016_8 (3) Rain_havy_2016_8 (4)

ಕಳೆದ ಹಲವು ವರ್ಷಗಳಿಂದ ಉಚ್ಚಿಲದಲ್ಲಿ ಕಡಲಿನಬ್ಬರ ಜೋರಾಗಿದ್ದರೂ. ಈ ಭಾಗದ ಜನರ ಗೋಳು ಕೇಳುವ ಜನಪ್ರತಿನಿಧಿಗಳು ಇಲ್ಲ. ಕಡಲ್ಕೊರೆತ ಸಂಭವಿಸಿದಾಗ ಪ್ರಚಾರಕ್ಕೆ ಭೇಟಿ ಕೊಡುವ ಜನಪ್ರತಿನಿಧಿಗಳು ಈವರೆಗೆ ಯಾವುದೇ ಶಾಶ್ವತ ಪರಿಹಾರಕ್ಕೆ ಯೋಜನೆ ಹಾಕಿಲ್ಲ. ಅದಕ್ಕಾಗಿ ಸೋಮೇಶ್ವರ ಸಮುದ್ರ ತೀರದಿಂದ ತಲಪಾಡಿವರೆಗಿನ 6 ಕಿ.ಮೀ ಪ್ರದೇಶವನ್ನು ಕೇರಳ ರಾಜ್ಯಕ್ಕೆ ಬಿಟ್ಟುಬಿಡಲಿ ಎಂದು ಮನೆ ಕಳೆದುಕೊಂಡ ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಉಳ್ಳಾಲದ ಕೋಟೆಪುರ, ಕೈಕೋ, ಹಿಲೇರಿಯಾನಗರ, ಸುಭಾಷ್‌ನಗರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಸುಮಾರು 20ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿ ಸಿಲುಕಿವೆ.

ಪ್ರತಿವರ್ಷವೂ ಉಳ್ಳಾಲದ ಮೊಗವೀರಪಟ್ನ, ಕೋಟೆಪುರದಲ್ಲಿ ಕಡಲ್ಕೊರೆತ ಜಾಸ್ತಿ ಇರುತ್ತಿತ್ತು. ಈ ಬಾರಿ ಉಚ್ಚಿಲ ಭಾಗದಲ್ಲಿ ಕಡಲಿನಬ್ಬರ ತೀವ್ರಗೊಂಡು ಹೆಚ್ಚು ಮನೆಗಳಿಗೆ ಹಾನಿಯಾಗುತ್ತಲೇ ಇದೆ. ಈ ಬಾರಿ ಉಳ್ಳಾಲದ ಮೊಗವೀರಪಟ್ನ ಹಾಗೂ ಕೋಟೆಪುರದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಹಿನ್ನೆಲೆಯಲ್ಲಿ ದೊಡ್ಡ ಮಟ್ಟಿನ ಹಾನಿ ಕಂಡು ಬಂದಿಲ್ಲ. ಕಡಲ್ಕೊರೆತ ಆರಂಭವಾಗಿ ವಾರ ಕಳೆದರೂ ಯಾವುದೇ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಅದೇ ಉಳ್ಳಾಲ ಭಾಗದಲ್ಲಿ ಕಡಲಬ್ಬರ ತೀವ್ರಗೊಂಡಿದ್ದರೆ ಜನಪ್ರತಿನಿಧಿಗಳ ಜತೆಗೆ ಅಧಿಕಾರಿಗಳೇ ದಂಡೇ ಬಂದು ಪರಿಹಾರ ಹಾಗೂ ಗಂಜಿ ಕೇಂದ್ರವನ್ನು ತೆರೆಯುತಿತ್ತು ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

Rain_havy_2016_8 (5) Rain_havy_2016_8 (6)

ಸುಳ್ಯದಲ್ಲಿ ಬಾರೀ ಮಳೆ ಹಾನಿ :

ಸುಳ್ಯ ತಾಲೂಕಿನಲ್ಲಿ ಗಾಳಿ-ಮಳೆಯ ಅಬ್ಬರ ಮುಂದುವರಿದಿದ್ದು, 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದೆ. ಹಲವೆಡೆ ಮರಗಳು ಬಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ. ಬೆಟ್ಟಂಪಾಡಿಯ ಆಟೊಚಾಲಕ ಸುನೀಲ್ ಎಂಬವರ ಮನೆಯ ತಡೆಗೋಡೆ ಕುಸಿದಿದ್ದು, ಮನೆಯೂ ಅಪಾಯದ ಸ್ಥಿತಿಯಲ್ಲಿದೆ. ಇದರಿಂದ ಸುಮಾರು 50 ಸಾವಿರ ರೂ. ನಷ್ಟ ಅಂದಾಜು ಮಾಡಲಾಗಿದೆ.

ಗಾಂಧಿನಗರ ಶಾಲಾ ಮೈದಾನದ ಎದುರಿನ ಟಿಂಬರ್ ಶಂಸುದ್ದೀನ್ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ. ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ದಕ್ಷಿಣ ಬೀರಮಂಗಲದಲ್ಲಿ ಸುಳ್ಯಕ್ಕೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ. ಲೈನ್ ಮೇಲೆ ಮರಬಿದ್ದ ಪರಿಣಾಮ 3 ಕಂಬಗಳು ಮುರಿದುಬಿದ್ದಿದ್ದು, ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ರವೀಂದ್ರ ಕೊಯಿಂಗೋಡಿ ಎಂಬವರ ಮನೆಗೆ ಮಾವಿನಮರ ಮುರಿದುಬಿದ್ದು ಹಾನಿಯಾಗಿದೆ. ಲತೀಫ್ ಎಂಬವರ ಮನೆಯ ಶೀಟ್ಗಳು ಮತ್ತು ಕೆಲವು ಹೆಂಚು ಗಳು ಹಾರಿಹೋಗಿವೆ. ಹಸನ್ ಹಾಜಿ ಎಂಬವರ ಮನೆಯೆದುರಿದ್ದ ಮರ ಬುಡ ಸಮೇತ ಉರುಳಿ ಬಿದ್ದ ಪರಿಣಾಮ ಪಕ್ಕದ ಮನೆಯ ಟೆರೇಸ್ಗೆ ಹಾನಿಯಾಗಿದೆ.

ಸುಳ್ಯ ಮುಖ್ಯರಸ್ತೆಯಲ್ಲಿ ಸೋಮವಾರ ಲಾರಿಯ ಮೇಲೆ ಮರ ಉರುಳಿ ಬಿದ್ದಾಗ ಹಲವು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಇದರಿಂದಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ. ಪಂಜಿಗುಂಡಿಯಲ್ಲಿ ರಾಜ್ಯ ಹೆದ್ದಾರಿಗೆ ಮರ ಬಿದ್ದು ಅರ್ಧಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುಳ್ಯ ಮಹಿಳಾ ಸಮಾಜದ ಎದುರಿನ ಗೂಡಂಗಡಿಯೊಂದರ ಮೇಲೆ ಮರಬಿದ್ದು ಹಾನಿಯಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ :

ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ನದಿಗಳು ತುಂಬಿ ಹರಿದಿವೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಕುಮಾರಧಾರಾ ಸೇತುವೆ ಮುಳುಗಡೆ ಭೀತಿಯಲ್ಲಿದೆ. ಸುಳ್ಯ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದಂತೆಯೇ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆ ಸುರಿದ ಪರಿಣಾಮ ನದಿಗಳು ತುಂಬಿ ಹರಿದಿವೆ. ಇದರ ಪರಿಣಾಮ ಕುಮಾರಧಾದಾ ನದಿ ಹಾಗೂ ಗುಂಡ್ಯ ಹೊಳೆ ತುಂಬಿ ಹರಿಯುತ್ತಿವೆ. ಇದೀಗ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಪ್ರಮುಖ ರಸ್ತೆಯ ಸೇತುವೆ ಮುಳುಗಡೆ ಭೀತಿಯಲ್ಲಿದ್ದರೆ, ಗುಂಡ್ಯ ಹೊಳೆ ತುಂಬಿ ಹರಿದ ಕಾರಣ ಕಡಬ ಸಂಪರ್ಕಿಸುವ ಹೊಸಮಠ ಸೇತುವೆ ಕೂಡಾ ಮುಳುಗುವ ಭೀತಿಯಲ್ಲಿದೆ.

Comments are closed.