ಕರಾವಳಿ

ತಾಯಿ -ಮಗಳ ಜೋಡಿ ಕೊಲೆಗೆ 5 ವರ್ಷ : ಪ್ರಕರಣ ಭೇದಿಸುವಲ್ಲಿ ಪೋಲೀಸ್ ಇಲಾಖೆ ವಿಫಲ – ಇನ್ನಾದರೂ ನ್ಯಾಯ ಸಿಗಬಹುದೇ…

Pinterest LinkedIn Tumblr

Panjimogeru_dmurder_cbi

ಮಂಗಳೂರು, ಜೂ. 29 : ಮಂಗಳೂರಿನ ಪಂಜಿಮೊಗರು ಎಂಬಲ್ಲಿ ಐದು ವರ್ಷಗಳ ಹಿಂದೆ ನಿಗೂಡವಾಗಿ ನಡೆದ ತಾಯಿ -ಮಗಳ ಜೋಡಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿರುವ ನಾಗರಿಕರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರು ಎಂಬಲ್ಲಿ ತಾಯಿ-ಮಗಳ ಬರ್ಬರ ಕೊಲೆ ನಡೆದು  ಐದು ವರ್ಷವಾಗುತ್ತಿದೆ. ಆದರೆ ಪ್ರಕರಣದ ಆರೋಪಿಗಳ ಪತ್ತೆ ಮಾತ್ರ ಇನ್ನೂ ಆಗಿಲ್ಲ. ಫಾತಿಮಾ ರಜಿಯಾ ಹಾಗೂ ಜುವಾ ಎಂಬ ಮುಗ್ಧ ತಾಯಿ-ಮಗಳ ಕೊಲೆ ಹಾಡಹಗಲೇ ನಡೆದಿದ್ದರೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲೀಸ್ ಇಲಾಖೆ ವಿಫಲವಾಗಿರುವುದು ನಾಗರಿಕರಲ್ಲಿ ಇನ್ನೂ ಅನೇಕ ಸಂದೇಹಗಳನ್ನು ಹಾಗೇ ಉಳಿಸಿಕೊಂಡಿದೆ.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಪಂಜಿಮೊಗರಿನ ನಾಗರಿಕರು ಡಿವೈಎಫ್‌ಐ ಸಂಘಟನೆ ಜೊತೆ ಸೇರಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಹಲವಾರು ಪ್ರತಿಭಟನೆ, ಕಾಲ್ನಡಿಗೆ ಜಾಥಾ ನಡೆಸಿ ಪ್ರಕರಣ ಸಿಐಡಿ ಇಲಾಖೆಗೆ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸಿಐಡಿ ತನಿಖೆಯಲ್ಲೂ ಯಾವುದೇ ರೀತಿಯ ಪ್ರಗತಿ ಕಂಡುಬಂದಿಲ್ಲ. ಸಿಐಡಿ ತನಿಖೆಯ ಪ್ರಗತಿಯ ಕಡೆ ರಾಜ್ಯ ಸರಕಾರದ ಪ್ರತಿನಿಧಿ ಶಾಸಕರಾದ ಮೊಯ್ದೀನ್ ಬಾವಾ ಗಮನ ಹರಿಸಿಲ್ಲ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ.

ಜೋಡಿ ಕೊಲೆ ನಡೆದ ಸಂದರ್ಭ ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ಆಡಳಿತದಲ್ಲಿತ್ತು ಆ ಸಂದರ್ಭ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಚುನಾವಣೆ ದೃಷ್ಟಿಕೋಣವನ್ನಿರಿಸಿ ಮೊಯ್ದೀನ್ ಬಾವಾ ನೇತೃತವದಲ್ಲಿ ಪ್ರತಿಭಟನೆ ಕೂಡ ಮಾಡಿತ್ತು. ಮೊಯ್ದೀನ್ ಬಾವಾ ಚುನಾವನಾ ಪ್ರಚಾರ ಸಂದರ್ಭ ಪಂಜಿಮೊಗರು ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಎಲ್ಲಾ ರೀತಿಯ ಪ್ರಯತ್ನ ನಡೆಸುವುದಾಗಿ ಆಶ್ವಾಸನೆ ನೀಡಿದ್ದು ಗೆದ್ದ ನಂತರ ಮಾತನ್ನೇ ಮರೆತಿದ್ದಾರೆ. ಜಿಲ್ಲೆಯ ಇತರ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ತಮ್ಮದೇ ರಾಜ್ಯ ಸರಕಾರವಿದ್ದರೂ ಸಿಐಡಿ ತನಿಖೆಯ ಪ್ರಗತಿಯನ್ನೂ ಪರಿಶೀಲಿಸದ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಭಾಗವಾಗಿರುವ ಸಚಿವರು ಇದ್ದು ಏನು ಪ್ರಯೋಜನ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯ ಹಲಾವಾರು ಪ್ರಕರಣಗಳು ಸಿಐಡಿ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ವಿಫಲವಾಗುತ್ತಿರುವ ಸಿಐಡಿ ಮೇಲಿನ ನಂಬಿಕೆಯನ್ನು ಜನ ಕಳೆದುಕೊಳ್ಳುತಿದ್ದಾರೆ. ಪಂಜಿಮೊಗರು ಜೋಡಿ ಕೊಲೆ ಪ್ರಕರಣದಲ್ಲಿ ವಿಫಲವಾಗಿರುವ ಸಿಐಡಿ ತನಿಖೆಯನ್ನು ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ನ್ಯಾಯ ಸಿಗಬಹುದೇ…

ಪಂಜಿಮೊಗರಿನಲ್ಲಿ ತಾಯಿ-ಮಗಳ ಬರ್ಬರ ಹತ್ಯೆಯಾದಾಗ ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. ಪಂಜಿಮೊಗರು ಪೇಟೆಯ ಅಂಚಿನಲ್ಲಿರೋ ಮನೆಯಲ್ಲಿ ದುಷ್ಕರ್ಮಿಗಳು ರಾಜಾರೋಷವಾಗಿ ಕೃತ್ಯವೆಸಗಿ ಪರಾರಿಯಾಗಿದ್ದರು. ಮನೆಯ ಮಾಲಕ ರಜಿಯಾ ಪತಿ ಗುಜರಿ ವ್ಯಾಪಾರಿ ಹಮೀದ್ ಊಟಕ್ಕೆ ಬರುವಾಗ ಕೃತ್ಯ ಬೆಳಕಿಗೆ ಬಂದಿದ್ದು, ಕಾವೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸ್ ತನಿಖೆ ಮುಂದುವರಿಯುವಷ್ಟರಲ್ಲಿ ಕಾವೂರು ಠಾಣೆಯ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು. ಆನಂತರ ಸಂಘಟನೆಗಳು ಎಷ್ಟು ಹೋರಾಟ ಮಾಡಿದರೂ ಅದಿನ್ನೂ ಫಲ ಸಿಕ್ಕಿಲ್ಲ. ಕಾಟಾಚಾರಕ್ಕೆ ಸಿಐಡಿಗೆ ತನಿಖೆಯನ್ನು ವರ್ಗಾಯಿಸಲಾಗಿದ್ದು, ಅದರ ವರದಿ ಇನ್ನೂ ಬಂದಿಲ್ಲ.

ಪ್ರಕರಣಕ್ಕೆ ಐದು ವರ್ಷ ತುಂಬುವ ಹೊತ್ತಿನಲ್ಲಿ ದಕ್ಷ ಹಾಗೂ ನಿಷ್ಠಾವಂತರಾಗಿರುವ ಜಿಲ್ಲೆಯ ನೂತನ ಪೊಲೀಸ್ ಕಮಿಷನರ್ ಹಾಗೂ ಎಸ್.ಪಿ.ಯವರು ಪ್ರಕರಣದ ಮರುತನಿಖೆಗೆ ಮುಂದಾಗುವ ಮೂಲಕ ಅತೃಪ್ತ ಆತ್ಮಗಳಿಗೆ ನ್ಯಾಯ ದೊರಕಿಸಿಕೊಟ್ಟು ಪ್ರಕರಣದ ಬಗ್ಗೆ ಸಾರ್ವಜನಿಕರಿಗೆ ಇರುವ ಸಂದೇಹ ನಿವಾರಿಸಬಹುದೇ…!!

Comments are closed.