ಕರಾವಳಿ

ಎಷ್ಟೇ ಕಾನೂನುಗಳಿದ್ದರೆ ಏನು ಪ್ರಯೋಜನ..?

Pinterest LinkedIn Tumblr

kattada_karmaika_protest

ಮಂಗಳೂರು,ಜೂನ್.29 : ಕಾರ್ಮಿಕ ಸವಲತ್ತುಗಳು ಸಮರ್ಪಕವಾಗಿ ಕಾರ್ಮಿಕರಿಗೆ ವಿತರಣೆಯಾಗದಿದ್ದರೇ ಎಷ್ಟೇ ಕಾನೂನುಗಳಿದ್ದರೆ ಏನು ಪ್ರಯೋಜನ ಎಂದು ಸಿ‌ಐಟಿಯು ದ.ಕ. ಜಿಲ್ಲಾ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿಯವರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯುತ್ತಿರುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ 3ನೇ ದಿನಕ್ಕೆ ಕಾಲಿರಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರು ಸಿ‌ಐಟಿಯು ನೇತೃತ್ವದಲ್ಲಿ ನಡೆಸಿದ ಹೋರಾಟದ ಫಲವಾಗಿ ಬಂದ ಕಾರ್ಮಿಕ ಕಾನೂನು ಸವಲತ್ತು ಸರಕಾರಗಳ ನಿತ್ರಾಣದಿಂದಾಗಿ ಜಾರಿಯಾಗುತ್ತಿಲ್ಲ. 4,500 ಕೋಟಿ ರೂಪಾಯಿ ಕಲ್ಯಾಣ ಮಂಡಳಿಯಲ್ಲಿ ಜಮಾವಾಗಿದ್ದರೂ ಕಾರ್ಮಿಕರಿಗೆ ಸವಲತ್ತು ನಿರಾಕರಣೆಯಾಗುತ್ತಿರುವುದು ಇದಕ್ಕೆ ಸಾಕ್ಷಿ ಎಂದರು. ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಗಳು ಕಾರ್ಮಿಕ ವಿರೋಧಿಗಳಾಗಿವೆ. ಅದರ ವಿರುದ್ಧವಾಗಿ ದೇಶವ್ಯಾಪಿ ಕಾರ್ಮಿಕರು ಹೋರಾಟ ನಡೆಸಿ ಹಿಮ್ಮೆಟ್ಟಿಸಬೇಕಾಗಿದೆ ಎಂದು ಅವರು ಕಟ್ಟಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.

ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರನೇ ದಿನ ನಡೆಯುತ್ತಿದೆ. ಆದರೆ 4ನೇ ದಿನಕ್ಕೆ ಈ ಹೋರಾಟ ಅಮರಣಾಂತ ಉಪವಾಸ ಸತ್ಯಾಗ್ರಹವಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಸರಕಾರ ಕಟ್ಟಡ ಕಾರ್ಮಿಕರ ಬೇಡಿಕೆಗಳು ಸಮರ್ಪಕವಾಗಿ ಪರಿಹರಿಸದಿದ್ದರೆ ಹೋರಾಟವನ್ನು ತೀಕ್ಷ್ಣಗೊಳಿಸಬೇಕು. ಎಲ್ಲಾ ಕಡೆಗಳಲ್ಲಿ ರಸ್ತೆ ತಡೆ ಚಳುವಳಿ ನಡೆಸಬೇಕೆಂದು ಕರೆ ನೀಡಿದರು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮುಂದಾಳುಗಳಾದ ರಾಮಣ್ಣ ವಿಟ್ಲ, ಯು. ಜಯಂತ ನಾಕ್, ಚಂದ್ರಹಾಸ ಪಿಲಾರ್, ಸದಾಶಿವದಾಸ್, ಅಶೋಕ ಶೆಟ್ಟಿ, ಸುನೀಲ್ ಕುಮಾರ್, ಪ್ರೇಮನಾಥ, ಕೃಷ್ಣಪ್ಪ ಸಾಲಿಯಾನ್, ಪದ್ಮಾವತಿ ಶೆಟ್ಟಿ, ಸಂತೋಷ್ ನೀತಿನಗರ ಮುಂತಾದವರು ಮಾತನಾಡಿದರು..ಯು. ಜಯಂತ ನಾಯ್ಕ್‌ ಸ್ವಾಗತಿಸಿದರು. ಅಶೋಕ್ ಶೆಟ್ಟಿ ವಂದಿಸಿದರು.

ಜನಾರ್ಧನ ಕುತ್ತಾರ್, ಯು. ಜಯಂತ ನಾಕ್, ಬಾಬು ಪಿಲಾರ್, ಚಂದ್ರಹಾಸ ಪಿಲಾರ್, ಇಬ್ರಾಹಿಂ, ರೋಹಿದಾಸ್ ಭಟ್ನಗರ, ವಾಲ್ಟರ್ ಡಿ’ಸೋಜ, ನವೀನ್ ಕುತ್ತಾರ್, ರಾಮಚಂದ್ರ ಪಜೀರು ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.