ಕರಾವಳಿ

ವಿವಿಧ ಬೇಡಿಕೆಗೆ ಆಗ್ರಹಿಸಿ ಜುಲೈ 2ರಂದು ರಾಜ್ಯಾದ್ಯಂತ ಛಾಯಾಗ್ರಹಣ ಬಂದ್‌ಗೆ ಕರೆ

Pinterest LinkedIn Tumblr

photoghaer_stike_pic

ಪುತ್ತೂರು, ಜೂ.29: ರಾಜ್ಯದ ಸುಮಾರು 3ಲಕ್ಷ ಛಾಯಾಗ್ರಾಹಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜುಲೈ 2ರಂದು ಸಂಪೂರ್ಣ ಛಾಯಾಗ್ರಾಹಣ ಬಂದ್‌ಗೆ ಕರೆ ನೀಡಿದೆ ಎಂದು ಸೌತ್ ಕೆನರಾ ಫೊಟೋಗ್ರಾಫರ‍್ಸ್ ಅಸೋಸಿಯೇಶನ್ ಪುತ್ತೂರು ವಲಯ ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.

ಛಾಯಾಚಿತ್ರೋದ್ಯಮವನ್ನು ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಹಲವಾರು ಜೀವನ ನಿರ್ವಹಿಸುತ್ತಿದ್ದಾರೆ. ಛಾಯಾಗ್ರಾಹಕರು ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಹಾಗಿದ್ದು ದಿನನಿತ್ಯ ಛಾಯಾಗ್ರಾಹಕರ ಮೇಲೆ ಶೋಷಣೆ ನಡೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಟಸ್ಥ ಧೋರಣೆ ತಳೆದಿರುವುದಕ್ಕೆ ಖಂಡನೆಯಿದೆ. ಆದ್ದರಿಂದ ನಮ್ಮ ಇರುವಿಕೆಯ ಬಗ್ಗೆ ಎಚ್ಚರ ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ಸಮಸ್ತ ಛಾಯಾಚಿತ್ರೋದ್ಯಮದಿಂದ ಒಂದು ದಿನದ ಶಾಂತಿಯುತ ಛಾಯಾಗ್ರಹಣ ಬಂದ್‌ಗೆ ಕರೆ ನೀಡಲಾಗಿದೆ ಎಂದು ನಿನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಂದ್‌ನ ದಿನ ಸಹಾಯಕ ಆಯುಕ್ತ ಹಾಗೂ ಶಾಸಕರಿಗೆ ಮನವಿ ನೀಡಲಾಗುವುದು. ಮನವಿಯಲ್ಲಿ- ಛಾಯಾಗ್ರಾಹಣ ಒಂದು ಕಲೆ ಆಗಿರುವುದರಿಂದ ಉಳಿಸಿ- ಬೆಳೆಸುವ ದೃಷ್ಟಿಯಿಂದ ಇತರ ರಾಜ್ಯಗಳಲ್ಲಿ ಇರುವಂತೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕು. ಎಲ್ಲಾ ಸರ್ಕಾರಿ ಅವಶ್ಯಕತೆಗಳಿಗೆ ಸ್ಟುಡಿಯೋದಲ್ಲಿ ತೆಗೆಯುವ ಸ್ಪಷ್ಟ ಭಾವಚಿತ್ರಗಳನ್ನು ಸ್ವೀಕರಿಸಬೇಕು.

ಪ್ರತಿ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳ ಛಾಯಾಗ್ರಹಣವನ್ನು ಹೊರಗುತ್ತಿಗೆ ನೀಡದೇ ಸ್ಥಳೀಯರಿಗೆ ನೀಡಬೇಕು. ರಾಜ್ಯದ ಛಾಯಾಗ್ರಾಹಕರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ್ದು, ಜೀವವಿಮೆ, ಆರೋಗ್ಯವಿಮೆ, ಇಎಸ್‌ಐ, ಯಶಸ್ವಿನಿ ಹಾಗೂ ಪಿಂಚಣಿ ಯೋಜನೆಯಡಿ ಸೌಲಭ್ಯ ದೊರಯುವಂತಾಗಬೇಕು. ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಪ್ರತ್ಯೇಕ ಕಲ್ಯಾಣ ನಿಧಿ ಸ್ಥಾಪನೆ ಅಗತ್ಯದ ಬಗ್ಗೆ ಒತ್ತಾಯಿಸಲಾಗುವುದು ಎಂದರು.

ಸರ್ಕಾರಿ ವೃತ್ತಿಯಲ್ಲಿದ್ದು ಛಾಯಾಗ್ರಾಹಣ ಮಾಡುತ್ತಿರುವ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಲು ಬೇಡಿಕೆ ಮುಂದಿಟ್ಟಿವೆ. ಜಿಲ್ಲೆಯಲ್ಲಿ 4500 ಸದಸ್ಯರಿದ್ದು, ಪುತ್ತೂರು ವಲಯದಲ್ಲಿ 225 ಸದಸ್ಯರಿದ್ದಾರೆ. ಇಷ್ಟು ಮಂದಿ ಜುಲೈ 2ರಂದು ತಮ್ಮ ಸ್ಟುಡಿಯೋವನ್ನು ಬಂದ್ ಮಾಡಲಿದ್ದಾರೆ ಎಂದರು.

ಮಾಜಿ ಅಧ್ಯಕ್ಷರಾದ ಸುದರ್ಶನ್, ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ನವೀನ್ ರೈ ಪಂಜಳ, ಕಾರ್ಯದರ್ಶಿ ಗುಣಕರ್ ಉಪಸ್ಥಿತರಿದ್ದರು.

Comments are closed.