ಕರಾವಳಿ

ಗಣೇಶ ಮತ್ತೆ ಬಂದ… ಇಲ್ಲಿದೆ ಗಣಪತಿ ಪುರಾಣ..

Pinterest LinkedIn Tumblr

Ganapati-Story_News_1

ಶ್ರೀ ಗಣೇಶ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ

ಮಂಗಳೂರು : ಆಷಾಢ ಮಾಸ ಕಳೆದು ಶ್ರಾವಣ ಮಾಸ ಪ್ರಾರಂಭವಾಯಿತು ಎಂದರೆ ಹಿಂದು ಧರ್ಮಿಯರಿಗೆ ಹಬ್ಬ ಹರಿದಿನಗಳ ಸಂಭ್ರಮ. ನಾಗರ ಪಂಚಮಿಯಿಂದ ಪ್ರಾರಂಭವಾಗಿ, ಶ್ರೀಕೃಷ್ಣ ಜನ್ಮಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ದೀಪಾವಳಿ ನೂರಾರು ಹಬ್ಬಗಳ ಸಂಭ್ರಮ ಅದರಲ್ಲೂ ಭಾದ್ರಪದ ಶುಕ್ಲಪಕ್ಷದ ಚತುರ್ಥಿಯೆಂದು ಬರುವ ಗಣೇಶ ಚತುರ್ಥಿ ಭಾರತ ಮಾತ್ರವಲ್ಲದೇ ದೇಶವಿದೇಶಗಳಲ್ಲಿ ವೈವಿಧ್ಯಮಯವಾಗಿ ಗಣೇಶನನ್ನು ನಾನಾ ವಿಧಗಳಲ್ಲಿ ಪೂಜಿಸಿ ತಮಗೆ ಬೇಕು ಬೇಕಾದ ವರಗಳನ್ನು ಬೇಡಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಪ್ರಥಮ ವಂದಿತ, ಆಧಿಪೂಜಿತೆ, ಬುದ್ಧಿಪ್ರದಾಯಕ, ಸಿದ್ಧಿ ವಿನಾಯಕ, ಗಣಗಳ, ಆದೀಶ್ವರ, ಚಿಣ್ಣರ ಪ್ರಿಯದೇವ, ಮೋದಕ-ಗರಿಕೆಯ ಪ್ರಿಯ, ವಿಘ್ನಹರ, ಗಜವದನ, ಲಂಬೋದರ ಎಲ್ಲವೂ ಆದ ಶ್ರೀ ಗಣೇಶ ಚೌತಿ ಉತ್ಸವ ಸಡಗರ ನಾಡಿಗೆ ನಾಡೇ ಸಂಭ್ರಮದಿಂದ ಆಚರಿಸುತ್ತಾರೆ.

ದೇಶವಿದೇಶಗಳಲ್ಲಿ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿಯು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಗಣೇಶ ಹಬ್ಬದ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯ ಕಿಡಿಯನ್ನು ಹೊತ್ತಿಸಲು ೧೮೯೩ರಲ್ಲಿ ಬಾಲಗಂಗಾಧರ ತಿಲಕರವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ಪೂರ್ಣಸ್ವರೂಪವನ್ನು ನೀಡಿ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲು ನಾಂದಿಯನ್ನು ಹಾಕಿಕೊಟ್ಟ ಮಹಾನ್ ವ್ಯಕ್ತಿ ಎಂದರೆ ತಪ್ಪಾಗಲಾರದು.

ಗಣೇಶ ಚತುರ್ಥಿಯನ್ನು ಆಚರಿಸಲು ಒಂದು ತಿಂಗಳ ಹಿಂದೆಯೇ ಪೂರ್ವ ತಯಾರಿ ಪ್ರಾರಂಭಿಸುತ್ತಾರೆ. ಮನೆ ಮನೆಗಳಲ್ಲಿ ಸಾರ್ವಜನಿಕ ರಂಗಳಲ್ಲಿ ಭರದಿಂದ ಸಿದ್ಧತೆಯನ್ನು ನಡೆಸುತ್ತಾರೆ. ಕಲಾವಿದರು ಎರಡು ಮೂರು ತಿಂಗಳ ಮೊದಲೇ ವಿಗ್ರಹ ರಚನೆಯ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ಸ್ಥಳೀಯ ಕಾರ್ಖಾನೆಗಳಿಂದ ಹದಪಡಿಸಿದ ಆವೆ ಮಣ್ಣನ್ನು ತಂದು ೬ ಇಂಚಿನಿಂದ ಪ್ರಾರಂಭಿಸಿ ಸುಮಾರು ಹತ್ತು ಹನ್ನೆರಡು ಅಡಿಯವರೆಗೆ ವಿಗ್ರಹಗಳ ರಚನೆಯನ್ನು ಮಾಡಿ ತಮ್ಮ ಕರಕೌಶಲ್ಯಗಳನ್ನು ವಿಭಿನ್ನವಾಗಿ ಪ್ರದರ್ಶಿಸುತ್ತಾರೆ.

Ganapati-Story_News_2 Ganapati-Story_News_4

ಗಣೇಶನ ಹಬ್ಬ ಬಂತೆಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರಿಗೆ ಸಂಭ್ರಮ. ಹೊಸ ಬಟ್ಟೆ, ತಿಂಡಿ ತಿನಿಸುಗಳ ತಯಾರಿ ಗಣೇಶನ ಸ್ವಾಗತಕ್ಕೆ ಬರದ ಸಿದ್ಧತೆ ನಡೆಯುತ್ತಿದೆ. ಮೋದಕ ಪ್ರಿಯನಿಗೆ ಬಗೆ ಬಗೆಯ ಭಕ್ಷ್ಯ ತಯಾರಿ, ಸುಮಂಗಲೆಯರು ತಮ್ಮ ಪತಿಯ ಆಯುಷ್ಯ ವೃದ್ಧಿಗೆ ಗೌರಿ ಪೂಜೆಯನ್ನು ಗಣೇಶ ಚತುರ್ಥಿಯ ಮುನ್ನಾ ದಿನ ಆಚರಿಸುತ್ತಾರೆ. ಗಣೇಶನನ್ನು ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ. ವಕ್ರತುಂಡ ಎಂದು ಈತನನ್ನು ವಕ್ರತುಂಡೋಕ್ತಿಗಳ ಮೂಲಕ ಅವಾಹಿಸಿದ್ದಾರೆ, ಸ್ತುತಿಸಿದ್ದಾರೆ, ಭಜಿಸಿದ್ದಾರೆ, ಆರ್ಚಿಸಿದ್ದಾರೆ, ಪೂಜಿಸಿದ್ದಾರೆ, ಮೆಚ್ಚಿಸಿದ್ದಾರೆ. ಅದೇ ರೀತಿ ಈತನ ಮಹಾಕಾಯದ ಸ್ವರೂಪವನ್ನು ಕೂಡ ಭಜಕ ಜನತೆ ತಮ್ಮದೇ ಆದ ವ್ಯಾಖ್ಯಾನ ಮೂಲಕ ಭಕ್ತಿಯ ಸಾಗರದಲ್ಲಿ ಮಿಂದು ತೇಲಾಡುತ್ತಾರೆ.

ಪರಮತತ್ವ, ಓಂಕಾರನಾದ ಸಾಕ್ಷಾತ್ ಸ್ವರೂಪ, ಬುದ್ಧಿ-ಸಿದ್ಧಿ ಪ್ರದಾಯಕ ಸಚ್ಚೀದಾನಂದ ಸ್ವರೂಪಿ ಶ್ರೀ ಗಣೇಶನ ಸ್ತುತಿ ಮಾತೃದಿಂದಲೇ ಆತ್ಮವು ಆಧ್ಯಾತ್ಮ ಸುಧಾ ಸಿಂಧುವಿನಲ್ಲಿ ಸ್ನಾನ ಮಾಡಿ ಪಾವನವಾದ ಅನುಭೂತಿಯಾಗುತ್ತದೆ. ಶ್ರೀ ಗಣೇಶನ ಪುಣ್ಯ ಸ್ಮರಣೆಯು ಜ್ಞಾನ ಮಾರ್ಗವನ್ನು ಸುಗಮಗೊಳಿಸಿ ಜೀವನವನ್ನು ಪರಮಾತ್ಮನ ಚಿಂತನೆಗೆ ದಾರಿಯನ್ನ ಮಾಡುತ್ತದೆ. ಮಹಾಭಾರತದ ರಚನೆಕಾರರಾದ ವೇದ ವ್ಯಾಸರು, ಜ್ಞಾನೇಶ್ವರ, ಏಕನಾಥ ಸ್ವಾಮಿ ರಾಮದಾಸ, ಮುಂತಾದ ಅನೇಕ ಸಂತರು ಶ್ರೀ ಗಣೇಶನ ಓಂಕಾರ ಸ್ವರೂಪದ ಗುಣಗಾನ ಮಾಡಿದ್ದಾರೆ. ಸಂತ ತುಳಸೀದಾಸ ತನ್ನ ಪ್ರಖ್ಯಾತ ಕೃತಿಯಾದ ಶ್ರೀರಾಮಚರಿತ ಮಾಸ ಗ್ರಂಥದಲ್ಲಿ ಎಲ್ಲಕ್ಕಿಂತ ಮೊದಲಾಗಿ ಶ್ರೀ ವಿಘ್ನನಿವಾರಕ ಗಣೇಶನನ್ನು ವಂದಿಸಿದ್ದು ನಾವು ಕಾಣಬಹುದಾಗಿದೆ.

ಸುಮಂಗಲೆಯರೆಲ್ಲರೂ ಗಣೇಶ ಚತುರ್ಥಿಯ ಮುಂಚಿನ ದಿನ ತದಿಗೆಯಂದು ಗೌರಿ ಹಬ್ಬವನ್ನು ಆಚರಿಸುತ್ತಾರೆ. ಗೌರಿ ಹಬ್ಬ ಮುತ್ತೈದೆಯರಿಗೆಲ್ಲ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಹಬ್ಬವು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸುತ್ತಾರೆ. ಗಣೇಶ ಹಬ್ಬದ ರೀತಿಯಲ್ಲಿ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸುತ್ತಾರೆ.

Ganapati-Story_News_3 Ganapati-Story_News_6 Ganapati-Story_News_7

ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿಪೂಜೆಯೆಂದು ಇದನ್ನು ಕರೆಯುತ್ತಾರೆ. ಇದಕ್ಕೆ ಪೂರ್ವಕ ಒಂದು ಕಥೆಯು ಇದೆ. ಚಂದ್ರಪ್ರಭ ಎನ್ನುವ ಅರಸನು ಬೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಸಂಪತ್ತುಳ್ಳ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿದ್ದು, ಪೂಜೆಯ ನಂತರ ತನಗೆ ಈ ಪೂಜೆಯ ಮಹತ್ವ ತಿಳಿಸಬೇಕೆಂದು ಎಂದು ಕೇಳಿದಾಗ ಅಪ್ಸರೆಯರು ಸ್ವರ್ಣಗೌರಿ ವ್ರತದ ಬಗ್ಗೆ ಈ ರೀತಿಯಾಗಿ ತಿಳಿಸುತ್ತಾರೆ.

ಈ ವ್ರತವನ್ನು ಯಾವ ಸ್ತ್ರೀಯು ಆಚರಿಸುತ್ತಾಳೋ ಅಂತಹ ಸ್ತ್ರೀಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ ಈ ಸಂದರ್ಭದಲ್ಲಿ ಕೆಂಪುದಾರವನ್ನು ೧೬ ಗಂಟು ಹಾಕಿ ಪೂಜಿಸಿ ಕುತ್ತಿಗೆಗೆ ಕಟ್ಟಿಕೊಂಡಲ್ಲಿ ಸಕಲ ಐಶ್ವರ್ಯವೂ, ಸಂತಾನ ಭಾಗ್ಯವೂ ಪ್ರಾಪ್ತಿಯಾಗುತ್ತದೆ ಎಂದು ತಿಳಿಸುತ್ತಾರೆ.

ರಾಜನು ಅರಮನೆಗೆ ಬಂದು ತನ್ನ ಇಬ್ಬರು ಪತ್ನಿಯರಿಗೆ ಈ ದಾರವನ್ನು ನೀಡಲು ಮೊದಲ ಪತ್ನಿಯು ಇದನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆಯಲು ಆ ಗಿಡವೂ ದಾರದ ಮಹಿಮೆಯಿಂದ ಮತ್ತೆ ಚಿಗುರು ಒಡೆಯಿತು. ಇದನ್ನು ಕಂಡ ಎರಡನೇ ಪತ್ನಿಯು ಆ ದಾರವನ್ನು ಭಕ್ತಿಯಿಂದ ಪೂಜಿಸಿ ಸಂತಾನ ಭಾಗ್ಯವನ್ನು ಪಡೆದಳು. ಗೌರಿಹಬ್ಬ ದಿನ ಈ ಶ್ಲೋಕವನ್ನು ೧೦೮ ಬಾರಿ ಶ್ರದ್ಧಾಭಕ್ತಿಯಿಂದ ಪಠಿಸಿದರೆ ತಮ್ಮ ಕೋರಿಕೆ ಈಡೇರುತ್ತದೆ ಎಂದು ಹೇಳುತ್ತಾರೆ.

ಸರ್ವಮಂಗಲೇ ಮಾಂಗಲ್ಯ ಶಿವೇ ಸರ್ವಾಥ ಸಾಧಿಕೆ 
ಶರಣ್ಯೇ ತ್ರ್ಯಂಬಿಕೇ ಗೌರಿ ನಾರಾಯಣಿ ನಮೋಸ್ತುತೇ.

Ganapati-Story_News_8 Ganapati-Story_News_9 Ganapati-Story_News_10

ಗಣೇಶ ಪುರಾಣ :

ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಆರಂಭದಲ್ಲಿ ಪ್ರಥಮ ಪೂಜೆ ಗಣೇಶನಿಗೆ ಸಲ್ಲುವುದು ಸಂಪ್ರದಾಯ. ಮಹಾಭಾರತ ಕಾಲದಿಂದಲೂ ಗಣೇಶ ಪೂಜೆ ಅಭಾವ ಗಣೇಶ ವೃತ ಆಚರಣೆ ಇತ್ತೆಂಬುದಕ್ಕೆ ಪೌರಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣ ಪರಮಾತ್ಮನೇ ಗಣೇಶ ವ್ರತವನ್ನು ಆಚರಿಸಿದ್ದಾನೆ ಎಂದು ಉಲ್ಲೇಖವಿದೆ.

ಗಣೇಶನು ಮಂಗಳಕಾರಕನು, ವಿಘ್ನ ನಿವಾರಕನು, ವಿದ್ಯೆ, ಬುದ್ಧಿ, ಅಭೀಷ್ಟ ಪ್ರದಾಯಕನು ಆಗಿದ್ದಾನೆ. ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ತಿಥಿಯೆಂದು ಭಗವಾನ್ ಶ್ರೀ ಗಣೇಶನ ಅವತಾರವಾಯಿತು ಎಂದು ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಉಲ್ಲೇಖವಿದೆ. ಈತನಿಗೆ ಅನೇಕ ನಾಮಗಳಿಂದ ಕರೆಯುತ್ತಿದ್ದು. ಗಜಾನನ, ವಿನಾಯಕ, ಗಣೇಶ, ಗಣಪತಿ, ಲಂಬೋದರ ಮುಂತಾದ 108 ನಾಮಗಳಿಂದ ಸ್ತುತಿಸುತ್ತಾರೆ. ಗಣಪತಿಯನ್ನು ಸಂಕಟ ನಿವಾರಕನೆಂದು ಕರೆಯುತ್ತಾರೆ.

ಈತನಿಗೆ ಪ್ರಿಯವಾದ ಚತುರ್ಥಿ ಸಂಕಷ್ಟ ಚತುರ್ಥಿ ಭಗವದ್ಭಕ್ತರು ಈ ದಿನವನ್ನು ವೃತವನ್ನು ಆಚರಿಸುತ್ತಾರೆ. ಅಲ್ಲದೆ ಮಂಗಳವಾರ ಸಂಕಷ್ಟ ಚತುರ್ಥಿ ಬಂದ ಈ ದಿನ ವೃತವನ್ನು ಆಚರಿಸಿದರೆ ೧೦೦೮ ಬಾರಿ ವೃತ ಆಚರಣೆಯ ಫಲ ದೊರೆಯುತ್ತದೆ.

ಭವಿಷ್ಯ ಪುರಾಣದ ಪ್ರಕಾರ ಶ್ರೀ ಗಣೇಶ ಪೂಜಾವೃತವೂ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದು ಗಣಪತಿ ಉಪನಿಷತ್ತಿನಲ್ಲಿ ಗಣಪತಿಗೆ ಸಂಬಂಧಿಸಿದ ಧಾರ್ಮಿಕ ಹಬ್ಬಗಳ ಕುರಿತು ವಿವರಣೆಯನ್ನು ನೀಡಿದ್ದಾರೆ. ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಭಾದ್ರಪದ ಶುಕ್ಲ ಮಾಸವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.

ಗಣೇಶನ ಹುಟ್ಟಿನ ಬಗ್ಗೆ ಅನೇಕ ಪುರಾಣ ದಂತ ಕಥೆಗಳಿವೆ. ವೈಷ್ಣವ ಸಂಹಿತೆಯಲ್ಲಿ ಗಣೇಶ ಸಂಹಿತೆಯ ಉಲ್ಲೇಖವಿದೆ. ಇದರಲ್ಲಿ ಗಣೇಶ ಸ್ತುತಿಗಳ ಸಂಗ್ರಹವಿದ್ದು ಗಣೇಶನ ಸ್ತೋತ್ರಗಳು, ವಿಘ್ನೇಶ್ವರನಿಗೆ ಸಂಬಂಧಿಸಿದ ಅದೆಷ್ಟು ಪುರಾಣ ಕಥೆಗಳು ಕಂಡುಬರುತ್ತದೆ. ಒಂದು ಕಥೆಯ ಪ್ರಕಾತ ಜಗನ್ಮಾತೆ ಪಾರ್ವತಿಗೆ ವಿವಾಹ ನಂತರ ಸಂತಾನ ಪ್ರಾಪ್ತಿಯಾಗಿಲ್ಲ ಎಂದು ಆಕೆಯು ಭಗವಾನ್ ವಿಷ್ಣುವಿನಲ್ಲಿ ಸಂತಾನಕ್ಕಾಗಿ ಪ್ರಾರ್ಥಿಸಿದಾಗ ಶ್ರೀ ವಿಷ್ಣುವೇ ಜನಿಸಿದ, ಈತನೇ ಗಣೇಶನ ಅವತಾರವೆಂದು ಹೇಳುತ್ತಾರೆ.

ಇನ್ನೊಂದು ಕಥೆಯ ಪ್ರಕಾರ ಶನಿದೇವನ ದೃಷ್ಟಿಯು ಬಾಲ ಗಣೇಶನ ಮೇಲೆ ಬಿದ್ದರಿಂದ ಗಣೇಶನ ಶಿರವು ಆಕಾಶ ಅಂತರ್ಧಾನವಾಯಿತು ನಂತರ ಬಾಲಕ ಗಣಪತಿಗೆ ಆನೆಯ ಶಿರವನ್ನು ಜೋಡಿಸಲಾಯಿತು, ಮುಂದಕ್ಕೆ ಈತ ಗಜಾನನ ಎಂದು ಕರೆದರು. ಮತ್ತೊಂದು ಕಥೆಯ ಪ್ರಕಾರ ಪಾರ್ವತಿಯು ಸ್ನಾನ ಮಾಡಲೆಂದು ಹೋಗುವಾಗ ಮಣ್ಣಿನಿಂದ ಒಂದು ಶಿಶುವಿನ ವಿಗ್ರಹ ಮಾಡಿ ಅದಕ್ಕೆ ಜೀವ ನೀಡಿ ಸ್ನಾನ ಗೃಹದ ದ್ವಾರದಲ್ಲಿ ಕಾವಲಿಟ್ಟು ತಾನು ಸ್ನಾನ ಮಾಡಲು ಹೋಗುತ್ತಾಳೆ.

ಆ ಸಂದರ್ಭದಲ್ಲಿ ಆಗಮಿಸಿದ ಶಿವನನ್ನು ಶಿಶುವು ತಡೆದಾಗ ಕುಪಿತಗೊಂಡ ಶಿವನು ಶಿಶುವಿನ ರುಂಡವನ್ನು ತನ್ನ ತ್ರಿಶೂಲದಿಂದ ಛೇದಿಸುತ್ತಾನೆ. ಜಗನ್ಮಾತೆ ಪಾರ್ವತಿ ದೇವಿ ಮತ್ತು ಎಲ್ಲಾ ದೇವತೆಗಳು ಪರಶಿವನನ್ನು ಪ್ರಾರ್ಥಿಸಿದಾಗ ಉತ್ತರ ಭಾಗದಲ್ಲಿ ತಲೆಯನ್ನಿಟ್ಟು ಮಲಗಿದ ಯಾವುದೇ ಪ್ರಾಣಿಯ ತಲೆಯನ್ನು ತನ್ನಿ ಎಂದು ತನ್ನ ಗಣಗಳಿಗೆ ಅಪ್ಪಣೆ ನೀಡಿದಾಗ ಆನೆಯೊಂದರ ಶಿರವನ್ನು ತಂದು ನೀಡಿ ಜೋಡಣೆಯನ್ನು ಶಿವನು ಮಾಡುತ್ತಾನೆ. ಈ ಕಾರಣಕ್ಕೆ ಇಂದಿಗೂ ಆನೆಯನ್ನು ಗಣೇಶನ ಪ್ರತಿರೂಪವೆಂದು ಗೌರವಿಸುತ್ತಾರೆ.

ಹಿಂದಿನ ಕಾಲದಲ್ಲಿ ಗಣೇಶ ಚತುರ್ಥಿಯನ್ನು ಭಯಭಕ್ತಿಗಳಿಂದ ಆಚರಿಸುತ್ತಿದ್ದರು. ಇಂದು ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಭಯ-ಭಕ್ತಿ, ಶ್ರದ್ಧೆ ಧರ್ಮಕ್ಕೆ ಮಹತ್ವ ಇಲ್ಲ. ಪ್ರತಿಷ್ಠೆ ಹಣ ಬಲ ತೋಳ್ಬಲವೇ ಪ್ರಧಾನ. ಸುಮಾರು ೨೫-೩೦ ವರ್ಷಗಳ ಹಿಂದೆ ನಿಸರ್ಗಕ್ಕೆ ಯಾವುದೇ ಧಕ್ಕೆ ತಾರದ ರೀತಿಯಲ್ಲಿ ಕಲಾಕಾರರು ಜೇಡಿ ಮಣ್ಣಿನಿಂದ ತಯಾರಿಸಿದ ಗಣಪನ ವಿಗ್ರಹಗಳನ್ನು ಪೂಜಿಸುತ್ತಿದ್ದರು.

ಕಾಲಚಕ್ರ ಉರುಳಿದ ಹಾಗೇ ಗಣೇಶೋತ್ಸವ ಕೂಡ ನವ್ಯ ಹಾದಿ ತುಳಿದ ಪರಿಣಾಮ ಇವತ್ತು ಜೇಡಿ ಮಣ್ಣಿನ ವಿಗ್ರಹಕ್ಕೆ ಕವಡೆ ಕಾಸು ಬೆಲೆ ಇಲ್ಲದಾಗಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ, ಭಟ್ಕಳ, ಕಾರವಾರ ಮುಂತಾದ ಕಡೆಗಳಲ್ಲಿ ಇಂದಿಗೂ ಜೇಡಿ ಮಣ್ಣಿನ ವಿಗ್ರಹವನ್ನು ನಾವು ಕಾಣಬಹುದು.

ಆದರೆ ಮುಂಬಯಿ ಮತ್ತು ದೇಶದ ಇನ್ನಿತರ ಕಡೆಯಲ್ಲೆಲ್ಲಾ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂಲಕ ಗಣಪತಿಯ ವಿಗ್ರಹಗಳನ್ನು ತಯಾರಿಸಿ ಕೆಮಿಕಲ್ ಮಿಶ್ರಿತ ಬಣ್ಣಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಿಗೆ ಕಬ್ಬಿಣದ ಸಲಾಕೆ ಉಪಯೋಗಿಸುತ್ತಾರೆ. ಹೆಚ್ಚಿನ ರಾಜ್ಯದ ಮಹಾನಗರಗಳಲ್ಲಿನ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ರಾರಾಜಿಸುವ ಗಣಪನ ಹುಟ್ಟು ಪ್ಲಾಸ್ಟರ್ ಆಫ್ ಪ್ಯಾರಿಸ್‌ನದ್ದು. ಭಾರೀ ಪ್ರಮಾಣದಲ್ಲಿ ಗಣಪತಿ ವಿಗ್ರಹಗಳನ್ನು ಪೂಜಿಸಿ ನದಿ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ.

ಇದರಿಂದ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದ್ದು, ನೀರು ವಿಷಯುಕ್ತವಾಗುತ್ತದೆ. ಈ ಕಾರಣಕ್ಕಾಗಿ ಕೆಲವು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಗಣೇಶೋತ್ಸವವನ್ನು ಆಚರಿಸುವ ಸಂಘಟನೆಗಳು ನಿಸರ್ಗಕ್ಕೆ ಬಾಧಕವಾಗದ ಜೇಡಿಮಣ್ಣಿನಿಂದ ಗಣೇಶನ ಮೂರ್ತಿಯನ್ನು ಮತ್ತು ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸುವಂತೆ ಸೂಚಿಸಿದರೂ ಪೈಪೋಟಿಗೆ ಬಿದ್ದಿರುವ ಸಮಾಜವು ಲೆಕ್ಕಕ್ಕೇ ತೆಗೆದುಕೊಳ್ಳದೇ ಕೋಟ್ಯಾಂತರ ಹಣವನ್ನು ವ್ಯಯಿಸಿ ಅದ್ಧೂರಿಯಾಗಿ ‘ಗಣಪತಿ ಬಪ್ಪ ಮೋರ್ಯ’ ಎಂದು ಕೂಗುತ್ತಾ ಗಣೇಶನ ಮೆರವಣಿಗೆ ನಿರಂತರ ನಡೆದು ನೀರಿನಲ್ಲಿ ವಿಸರ್ಜಿಸುವ ಪರಿಪಾಠ ಮುಂದುವರಿದರೆ, ಕಾಲಕ್ರಮೇಣ ಎಲ್ಲವೂ ವಿಷಯುಕ್ತವಾಗುವುದು ಖಚಿತ.

ಕೆಲವು ಮಹಾನಗರಗಳಲ್ಲಿ ಗಣೇಶ ಚತುರ್ಥಿ ಕೇವಲ ಸೂಕ್ಷ್ಮಪ್ರದೇಶಗಳಲ್ಲಿ ಆತಂಕಕ್ಕೂ ಕಾರಣವಾಗಿದ್ದು ಪೊಲೀಸ್ ಅಧಿಕಾರಿಗಳಿಗೆ ಬಂದೋಬಸ್ತ್ ಹೊರೆಬೇರೆ ಮೆರವಣಿಗೆ ಸಂದರ್ಭದಲ್ಲಿ ಏನಾಗುತ್ತೋ ಎಂಬ ಅವ್ಯಕ್ತ ಭಯ ಜನರನ್ನು ಒಳಗೊಳಗೆ ಕಾಡುವುದು ಒಂದೆಡೆಯಾದರೆ ಮತ್ತೊಂದೆಡೆ ಉಗ್ರರ ಅಟ್ಟಹಾಸ ಹೀಗೆಯೇ ಇಂತಹ ವಿಘ್ನಗಳನ್ನು ನಿವಾರಿಸಿಕೊಂಡು ಚೌತಿ ಶಾಂತಿಯುತವಾಗಿ ಮುಕ್ತಾಯಗೊಳ್ಳುವುದೇ ‘ವಿಘ್ನ’ ನಿವಾರಕನಿಗೊಂದು ಸವಾಲು.

ಏನೇ ಆಗಲಿ. ಶ್ರೀ ಗಣೇಶನು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ನಮ್ಮ ಹಾರೈಕೆ.

__ ರಾಮಚಂದ್ರ ಭಟ್.

Comments are closed.