ಕರ್ನಾಟಕ

ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ಎಷ್ಟೊಂದು ಸುಂದರ!

Pinterest LinkedIn Tumblr

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

ದಕ್ಷಿಣ ಭಾರತದ ಕಾಶ್ಮಿರ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ನಿತ್ಯ ಹರಿಧ್ವರ್ಣ ಗಗನ ಚುಂಬಿ ಮರ ಗಿಡಗಳು ಬೆಟ್ಟ ಗುಡ್ಡಗಳೊಂದಿಗೆ ಇರುವ ಶ್ರೀಗಂಧದ ಮರಗಳಿರುವ ಕಾನನ, ಕಾಫಿ,ಯಾಲಕ್ಕಿ, ಕರಿ ಮೆಣಸು, ಕಿತ್ತಳೆ ತೋಟ, ಭತ್ತದ ಗದ್ದೆ ಪಚ್ಚೆ ಪೈರಿನ ಹಾಸಿನ ನಯನ ಮನೋಹರ ವಿಹಂಗಮ ದೃಶ್ಯ ಸಾಲು, ಮಂಜು ಮುಸುಕಿನ ನಡುವೆ ಕಣ್ಣು ಮುಚ್ಚಲೆಯಾಡುವ ಸೂರ್ಯನ ಕಿರಣಗಳು, ಅಹ್ಲಾದಕರ ತಂಪು ಹವೆ ಹೊಂದಿರುವ ಪ್ರಕೃತಿ ಮಾತೆಯ ಮಡಿಲಿನಲ್ಲಿ ಮಂಜಿನ ನಗರಿ ಮಡಿಕೇರಿ ಪಟ್ಟಣ ಪ್ರವಾಸಿಗರನ್ನು ತನ್ನೆಡೆ ಕೈಬೀಸಿ ಕರೆಯುತ್ತಿದೆ.

Madikeri Raja Seat view

ಭಾರತದ ಸೇನೆಯಲ್ಲಿ ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿರುವ ಸೈನಿಕರನ್ನು, ಮಹಾ ದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಜನಿಸಿದ ನಾಡು. ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಅತ್ಯಂತ ಹೆಚ್ಚು ಹಣವನ್ನು ಸುರಿಯುವ ಶ್ರೀಮಂತ ಜಿಲ್ಲೆ ತನ್ನ ಆಚಾರ ವಿಚಾರದೊಂದಿಗೆ ಆಚರಿಸುವ ಹಬ್ಬ ಹರಿದಿನಗಳು, ಕೈಲ್ ಪೋದ್, ಕಾವೇರಿ ಸಂಕ್ರಮಣ, ಸುಬ್ರಮಣ್ಯ ಸೃಷ್ಠಿ, ಹುತ್ತರಿ, ಊರ ಜಾತ್ರೆಗಳು, ಸಂದರ್ಭಕ್ಕೆ ಅನುಸಾರವಾಗಿ ಪದ್ದತಿಯಂತೆ ನಡೆದುಕೊಂಡು ಬರುತ್ತಿದೆ. ಇದರ ಜೊತೆಯಲ್ಲಿ ನವರಾತ್ರಿ ಉತ್ಸವ, ಮಡಿಕೇರಿ ಕರಗ, ಮಡಿಕೇರಿ ದಸರಾ ಪ್ರಸಿದ್ದಿಯನ್ನು ಪಡೆದಿದೆ.

ಇತಿಹಾಸ ಪುಟದಲ್ಲಿ ಕೊಡಗು….

OLYMPUS DIGITAL CAMERA

ಕರ್ನಾಟಕದ ಸುಂದರ ಕೊಡಗು ಜಿಲ್ಲೆ ಹದಿನಾರನೆಯ ಶತಮಾನದಲ್ಲಿ ಲಿಂಗಾಯುತ ರಾಜರಿಂದ ಆಳ್ವಿಕೆಯಲ್ಲಿತ್ತು. 1681 ರಲ್ಲಿ ಮುದ್ದುರಾಜನಿಂದ ಮಡಿಕೇರಿ ಮುಖ್ಯ ಪಟ್ಟಣವಾಗಿ ನಿರ್ಮಾಣವಾಯಿತು. ಊರಿನ ಮದ್ಯಭಾಗದಲ್ಲಿ ಸುಂದರ ಅರಮನೆ, ಅರಮನೆಯ ಮುಂದೆ ಕೋಟೆ ಬಾಗಿಲಿನಲ್ಲಿ ಕೋಟೆಗಣಪತಿ ದೇವಸ್ಥಾನ, ಕೋಟೆಯ ಹೊರಭಾಗದ ಸುತ್ತಲು ಓಂಕಾರೇಶ್ವರ ದೇವಾಲಯ, ಕುಂದುರು ಮೊಟ್ಟೆ ಚಾಮುಂಡೇಶ್ವರಿ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಪೇಟೆ ಶ್ರೀ ರಾಮ ಮಂದಿರ ಇತ್ಯಾದಿ ದೇವಾಲಯಗಳು ರಾಜರ ಆಡಳಿತದಲ್ಲಿ ನಿರ್ಮಾಣವಾಗಿದೆ.ಪೂಜಾ ವಿಧಿ ವಿಧಾನಗಳು ಅಂದಿನಿಂದಲೇ ಕ್ರಮ ಬದ್ದವಾಗಿ ನಡೆದುಕೊಂಡು ಬರುತಿದೆ. ಕೊಡಗನ್ನು ಆಳಿದ ರಾಜರುಗಳಲ್ಲಿ ವೀರ ರಾಜೇಂದ್ರ, ಲಿಂಗ ರಾಜೇಂದ್ರ, ಚಿಕ್ಕ ವೀರ ರಾಜೇಂದ್ರ (ಮಾಸ್ತಿಯವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿಯಲ್ಲಿರುವ ರಾಜ) ರವರೆಗೆ, ಬ್ರಿಟಿಷರು ಅಧಿಕಾರವನ್ನು ಈ ರಾಜರಿಂದ ತೆಗೆದು ಕೊಳ್ಳುವವರೆಗೆ ಆಳ್ವಿವಿಕೆ ನಡೆಸಿದ್ದಾರೆ.

ಸ್ವಾತಂತ್ರ್ಯ ದೊರಕುವ ವೇಳೆ ನಂತರ 1956 ರ ವರೆಗೆ ಕೊಡಗು ಪ್ರತ್ಯೆಕ ರಾಜ್ಯವಾಗಿತ್ತು. ಭಾಷಾವಾರು ಪ್ರಾಂತ್ಯ ರಚನೆಯಾಗುವಾಗ, ಕೊಡಗು ಜಿಲ್ಲೆಯಾಗಿ ಅಂದಿನ ಮೈಸೂರು ರಾಜ್ಯದೊಡನೆ ವೀಲಿನವಾಯಿತು. ಕೊಡವ ಜನಾಂಗದವರ ’ಕೊಡವ’ ಭಾಷೆ, ಗೌಡ ಜನಾಂಗದವರ ಕನ್ನಡದಲ್ಲಿಯ ಉಪಭಾಷೆ ’ಅರೆ ಬಾಸೆ’ ಇನ್ನಿತರ ಜನಾಂಗದವರ ತುಳು, ಕೊಂಕಣಿ, ಬ್ಯಾರಿ, ಉರ್ದು ಭಾಷಿಗರು ನೆಲೆಸಿರುವ ಸುಂದರ ನಾಡು ಕೊಡಗು ಜಿಲ್ಲೆಯಾಗಿದೆ.

ಮಡಿಕೇರಿ ಕರಗ ಉತ್ಸವ

KPN photo

ಪ್ರತಿವರ್ಷ ಮಹಾಲಯ ಅಮವಾಸ್ಯೆಯ ನಂತರ ಪ್ರಾರಂಭವಾಗುವ ನವರಾತ್ರಿ ಉತ್ಸವದ ಪ್ರಥಮ ದಿನದಂದು ಮಡಿಕೇರಿಯಲ್ಲಿ ರಾಜರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕುಂದುರುಮೊಟ್ಟೆ ಚಾಮುಂಡೇಶ್ವರಿ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ಈ ನಾಲ್ಕು ದೇವಾಲಗಳ ವೃತಧಾರಿ ಅರ್ಚಕರು ಕೇಶ ಮುಂಡನ ಮಾಡಿಸಿಕೊಂಡು ಮೈಗೆಲ್ಲ ಹಳದಿ ಪೂಸಿಕೊಂಡು, ಹಳದಿ ಕಚ್ಚೆ ಪಂಚೆಯನ್ನು ಧರಿಸಿ, ಕರಗ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಮಡಿಕೇರಿಯಲ್ಲಿರುವ ರಾಜರ ಸಮಾಧಿ ಇರುವ ರಾಜರ ಗದ್ದುಗೆಯ ಬಳಿ ಇರುವ ಪಂಪಿನ ಕೆರೆಯ ಹತ್ತಿರ ಶಕ್ತಿ ದೇವತೆಯನ್ನು ಪೂಜಿಸುತ್ತಾರೆ. ನಂತರ ತಾಮ್ರದ ಬಿಂದಿಗೆಯ ಮೇಲೆ ಕರಗವನ್ನು ದೇವಿಯ ಬೆಳ್ಳಿಯ ವಿಗ್ರಹ ಅಳವಡಿಸಿ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಹೂವುಗಳಿಂದ ಅಲಂಕರಿಸಿ ಕರಗವನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ.

OLYMPUS DIGITAL CAMERA

ಒಂದು ಕೈಯಲ್ಲಿ ಕಠಾರಿ, ಇನ್ನೊಂದು ಕೈಯಲ್ಲಿ ಬೆಳ್ಳಿಹಿಡಿಕೆಯ ಬೆತ್ತವನ್ನು ಹಿಡಿದು ತಲೆಯ ಮೆಲಿರುವ ಕರಗವನ್ನು ಕೈಯಲ್ಲಿ ಮುಟ್ಟದೆ ಕೊಡಗಿನ ವಾದ್ಯ, ಓಲಗದ ಧ್ವನಿಗೆ ತಕ್ಕಂತೆ ಹೆಜ್ಜೆಯನ್ನಿಟ್ಟು ನೃತ್ಯ ಮಾಡಿಕೊಂಡು ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ನಾಲ್ಕು ಕರಗಗಳು ಮೆರವಣಿಗೆಯಲ್ಲಿ ಬಂದು ಪೇಟೆ ಶ್ರೀ ರಾಮ ಮಂದಿರದಲ್ಲಿ ಪ್ರಥಮ ಪೂಜೆಯನ್ನು ಸಲ್ಲಿಸಿ ನಂತರ ಮನೆ ಮನೆಗಳಿಗೆ ತೆರಳಿ ಪೂಜೆಯನ್ನು ಸ್ವೀಕರಿಸುತ್ತಾರೆ.

3. Madikeri Karaga

ನವರಾತ್ರಿಯ ಆಯುಧ ಪೂಜೆಯವರೆಗೆ ಮಡಿಕೇರಿ ನಗರದ ಎಲ್ಲಾ ಮನೆಗಳಿಗೆ ಕರಗ ಉತ್ಸವದ ಮೆರವಣಿಗೆ ಹೋಗುತ್ತಿರುತ್ತದೆ. ಮನೆಯ ಅಂಗಳವನ್ನು ಶುಚಿ ಗೊಳಿಸಿ ರಂಗವಲ್ಲಿ ಹಾಕಿ ಮನೆಯ ಬಾಗಿಲಿಗೆ ಬರುವ ದೇವಿಯನ್ನು ಸ್ವಾಗತಿಸಿ ಪೂಜಿಸಲು ಮನೆಯ ಮಂದಿಯಲ್ಲರೂ ಕರಗವನ್ನು ಬರ ಮಾಡಿಕೊಳ್ಳುತ್ತಾರೆ. ಕರಗ ಹೊತ್ತ ಅರ್ಚಕರನ್ನು ಒಂದು ಮಣೆಯ ಮೇಲೆ ನಿಲ್ಲಿಸಿ ಕಾಲು ತೊಳೆದು ಪಾದಪೂಜೆ ಮಾಡಿ ನಂತರ ಹಣ್ಣು ಕಾಯಿ ಸಮರ್ಪಿಸಿ, ದೇವಿಗೆ ಮಂಗಳಾರತಿಯನ್ನು ಮಾಡಿ ಮನೆ ಮಂದಿಯಲ್ಲರೂ ಪ್ರಾರ್ಥನೆ ಸಲ್ಲಿಸಿ ಕರಗವನ್ನು ಬಿಳ್ಕೊಡುತ್ತಾರೆ.
ಹಲವಾರು ವರ್ಷಗಳಿಂದ ದೇವಿಯ ಕರಗವನ್ನು ಭಕ್ತಿ, ಶ್ರದ್ಧೆಯಿಂದ ಹೊತ್ತು ಸೇವೆ ಮಾಡಿದ ನಾಲ್ಕು ದೇವಾಲಯದ ಅರ್ಚಕರಾದ ಶ್ರೀಯುತರುಗಳಾದ ಪಾಪಯ್ಯ, ಗಗ್ಗಯ್ಯ, ಮಧುರಯ್ಯ, ಅಣ್ಣಯ್ಯ ಇವರುಗಳನ್ನು ಮಡಿಕೇರಿ ದಸರಾ ಸಮಿತಿ ಗೌರವ ಪೂರ್ವಕವಾಗಿ ಸನ್ಮಾನಿಸಿದೆ.

ಜನಮನ ಸೆಳೆದಿರುವ ಮಡಿಕೇರಿ ದಸರಾ ಉತ್ಸವ

Madikeri Dasara 11

OLYMPUS DIGITAL CAMERA

ಮಡಿಕೇರಿಯ ದಸರಾ ಉತ್ಸವದ ರುವಾರಿ ರಾಜಸ್ಥಾನದ ಮೂಲದಿಂದ ಮಡಿಕೇರಿಗೆ ಬಂದು ನೆಲೆಸಿದ್ದ ಶ್ರೀ ಭೀಮ್ ಸಿಂಗ್ ರವರು. 1950 ರ ವರ್ಷಗಳಲ್ಲಿ ನವರಾತ್ರಿಯ ಕೊನೆಯ ದಿನ ವಿಜಯ ದಶಮಿಯಂದು ಭೀಮ್ ಸಿಂಗ್ ರವರು ತಮ್ಮ ತಲೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ದೇವರಿಗೆ ಪೂಜೆಯನ್ನು ಮಾಡಿಸಿ ಕೊಳ್ಳುತಿದ್ದರು. ನಂತರ ದೇವರ ಮೂರ್ತಿ ಪಲ್ಲಕ್ಕಿಯ ಮೇಲೆ ಹೋಗುಂತಾಯಿತು. 1958 ರಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಶಿಲ್ಪಕಲಾವಿದರಿಂದ ಮಾಡಿಸಿ ತರಿಸಿದ ಚಾಮುಂಡೇಶ್ವರಿ ಮೂರ್ತಿಯನ್ನು ಟ್ರಾಕ್ಟರ್ ಮೇಲೆ ಇರಿಸಿ ಹೂವಿನಿಂದ ಅಲಂಕಾರ ಮಾಡಿದ ಮಂಟಪದ ಮೆರವಣಿಗೆ ವಾದ್ಯಗಳೊಂದಿಗೆ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ದಸರ ಉತ್ಸವಕ್ಕೆ ಚಾಲನೆ ನೀಡಿದಂತಾಯಿತು. ಅಂದಿನ ಕೊಡಗಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಐ. ಸಿ. ಸುಬ್ಬಯ್ಯನವರು ಮಂಟಪವನ್ನು ನೋಡಿ ಹರ್ಷಿತರಾಗಿ ಪಾರಿತೋಷಕವನ್ನು ನೀಡಿ ಗೌರವಿಸಿದರು. ಅಂದಿನ ದಿನದಿಂದ ಮಂಟಪಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಪದ್ದತಿ ಪ್ರಾರಂಭವಾಯಿತು.

OLYMPUS DIGITAL CAMERA

ಮಡಿಕೇರಿಯಲ್ಲಿರುವ ದೇವಾಲಯಗಳ ಪೈಕಿ, ಪೇಟೆ ಶ್ರೀ ರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಬಾಲಕ ಶ್ರೀ ರಾಮ ಮಂದಿರ ಮತ್ತು ಭೀಮ್ ಸಿಂಗ್ ರವರ ರಘುರಾಮ ಮಂದಿರಗಳ ನಾಲ್ಕು ಮಂಟಪಗಳು ಅಂದಿನ ಮಡಿಕೇರಿಯ ದಸರದ ಆಕರ್ಷಕ ಮಂಟಪಗಳಾಗಿದ್ದವು. ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ನಡೆಸಿಕೊಂದು ಬರುತಿದ್ದ ದಸರಾದ ಮಂಟಪಗಳು ನುರಿತ ಕಲಕಾರರ ಕೈಚಳಕದಿಂದ ಸುಗಂಧರಾಜ, ಸೆವಂತಿಗೆ ಹೂವುಗಳಿಂದ ಹೂವಿನ ಮಂಟಪ, ಫ್ಲೈಉಡ್ ಶೀಟಿನಲ್ಲಿ ಡಿಸೈನ್ ಕೊರೆದು, ಜಗಜಗಿಸುವ ಛುಮುಕಿ ಪುಡಿಗಳನ್ನು ಅಂಟಿಸಿ ರಚಿಸಿದ ಮಂಟಪ, ಇವುಗಳನ್ನು ಮಡಿಕೇರಿಯ ನಾಗಪ್ಪ ಆಚಾರ್ ಮತ್ತು ಸಿದ್ದು ರವರು ತಮ್ಮ ತಂಡದೊಂದಿಗೆ ವಿವಿಧ ಬಣ್ಣಗಳ ಮಣಿಗಳನ್ನು ಬಳಸಿ ಮಂಟಪ ರಚಿಸುತಿದ್ದರು. ಪೇಪರ್ ಪಲ್ಪ್ ನಿಂದ ತಯಾರಿಸಲಾದ ವಿಗ್ರಹಗಳು ಮಂಟಪಕ್ಕೆ ಸೇರ್ಪಡೆಯಾಯಿತು. ಈ ಮಂಟಪಗಳಿಗೆ ವಿವಿಧ ಭಂಗಿಯ, ವಿವಿಧ ಅಳತೆಗಳಲ್ಲಿ ಪೇಪರ್ ಪಲ್ಪ್ ಕಲಾಕೃತಿಗಳನ್ನು ತಯಾರು ಮಾಡುವವರು, ಮಡಿಕೇರಿಯ ದಸರಾ ಮಂಟಪಗಳನ್ನು ಮಾಡುವ ಎಲ್ಲಾ ದೇವಾಲಯಗಳ ಉತ್ಸವ ಸಮಿತಿಯವರು ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ. ಉತ್ಸವದ ಮೂರ್ತಿಗಳನ್ನು ನಿರ್ಮಾಣ ಮಾಡುವವರು ಮೈಸೂರಿನ ಆಚಾರ್, ರಾಜು ಮತ್ತು ಮಕ್ಕಳು, ಮಡಿಕೇರಿಯ ಶಿಲ್ಪ ಕಲಾವಿದರಾದ ಪಿ. ಕೆ. ಅಣ್ಣು ಮತ್ತು ಮಕ್ಕಳು, ಹಾಗೂ ಬಿ. ಕೆ. ಗಣೇಶ್ ರೈ ಇವರುಗಳು. ದಸರಾ ಮಂಟಪಗಳ ಬಹುಮಾನ ನೀಡಲು ಆಯ್ಕೆ ಮಾಡುವ ತೀರ್ಪುಗಾರರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಈ ಕಲಾವಿದರನ್ನು ಮಡಿಕೇರಿ ದಸರಾ ಸಮಿತಿ ಸನ್ಮಾನಿಸಿದ್ದು ಕಲೆಗೆ ಸಂದ ಗೌರವವಾಗಿದೆ.

Untitled-1

Untitled-2

ದಸರಾ ಮಂಟಪಗಳಲ್ಲಿ ಐತಿಹಾಸಿಕವಾಗಿ ಶಿವಾಜಿ ಖಡ್ಗವನ್ನು ದೇವಿ ಅಂಬಾ ಭಾವಾನಿಯಿಂದ ಪಡೆಯುವ ಮೂರ್ತಿ, ಭಾರತ ಮಾತೆಯ ಪದತಲದಲ್ಲಿ ಮಹಾತ್ಮ ಗಾಂಧಿ ಚರಕದಲ್ಲಿ ನೂಲು ತೆಗೆಯುತ್ತಿರುವ ಮೂರ್ತಿ, ಪೌರಾಣಿಕವಾಗಿ ಶ್ರೀ ರಾಮ ಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವ ಭಂಗ, ಮತ್ಸ್ಯ ಅವತಾರ, ಗಜೇಂದ್ರ ಮೋಕ್ಷ, ಮಹಿಷಾಸುರ ಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣ ಕಥೆಗಳನ್ನು ಅಳವಡಿಸಿಕೊಂಡು ದಸರಾ ಆಚರಿಸಲಾಗುತಿತ್ತು. 1970 ರ ದಶಕಗಳಲ್ಲಿ ಇನ್ನೂ ಹಲವು ದೇವಾಲಯದ ಮಂಟಪಗಳು ಸೇರ್ಪಡೆಯಾಗಿ ಹತ್ತು ಮಂಟಪಗಳೊಂದಿಗೆ ದಸರಾ ಉತ್ಸವ ಹೆಚ್ಚು ಹೆಚ್ಚು ಆಕರ್ಷಣೀಯವಾಯಿತು.

Madikeri Dasara 5

ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂ ಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ. ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ. ಹೆಚ್ಚು ಹೆಚ್ಚು ಜಾತ್ರಾ ವಿಶೇಷ ಸರ್ಕಾರಿ ಬಸ್ ವ್ಯವಸ್ಥೆ ಇರುತ್ತದೆ. ಬೇರೆ ಬೇರೆ ಊರುಗಳಿಂದ ಲಕ್ಷಾಂತರ ಮಂದಿ ಮಡಿಕೇರಿ ದಸರ ವೀಕ್ಷಿಸಲು ಬರುತ್ತಾರೆ.

ಮಡಿಕೇರಿಯ ದಸರಾ ನಡೆಯುತ್ತಿರುವುದು ಜನರು ಭಕ್ತಿ ಪ್ರೀತಿಯಿಂದ ನೀಡುತ್ತಿರುವ ವಂತಿಗೆಯ ಹಣದಿಂದ. ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಮಾನ್ಯ ಆರ್. ಗುಂಡೂರಾವ್ ರವರು ಮಡಿಕೇರಿ ದಸರ ಉತ್ಸವಕ್ಕೆ 1980 ರಲ್ಲಿ ಕರ್ನಾಟಕ ಸರ್ಕಾರದಿಂದ ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡುವಂತೆ ವ್ಯವಸ್ಥೆ ಮಾಡಿದರು ನಂತರ ಪ್ರತಿವರ್ಷ ಸಹಯಾ ಧನವನ್ನು ಹೆಚ್ಚಿಸುತ್ತಾ ಬಂದು ಇಂದಿನ ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ನೀಡಲಾಗುತ್ತಿದೆ. ಪ್ರತಿಯೊಂದು ಮಂಟಪಗಳಿಗೆ ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಮಂಟಪಕ್ಕೆ ಸುಮಾರು 4 ರಿಂದ 24 ಲಕ್ಷದವರೆಗೆ ಖರ್ಚು ತಗಲುತ್ತದೆ. ಒಂದು ಮಂಟಪ ನಿರ್ಮಾಣ ಮಾಡಲು 2 – 3 ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತದೆ. ವಿವಿಧ ವಿನ್ಯಾಸದ ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ವಿವಿಧ ಕಥಾ ಪ್ರಸಂಗಗಳ ದೇವತಾ ಮೂರ್ತಿಗಳು 8 ರಿಂದ 15 ಅಡಿಗಳವರೆಗೆ ಇರುತ್ತದೆ.

OLYMPUS DIGITAL CAMERA

ತಾಂತ್ರಿಕವಾಗಿ ಚಲನವಲನಗಳನ್ನು ನೀಡಿ ಧ್ವನಿ ಬೆಳಕಿನ ವ್ಯವಸ್ಥೆಯೊಂದಿಗೆ, ಕೃತಕ ಮೋಡಗಳು, ಮಿಂಚು, ಧೂಮ ಸೃಷ್ಟಿಗಳು ಒಂದಕಿಂತ ಒಂದು ಮೀರಿಸುವಂತಿರುತ್ತದೆ. ವಿದ್ಯುತ್ ದೀಪಾಲಂಕಾರದ ಬೃಹತ್ ಸೆಟ್ಟಿಂಗ್ಸ್ ಗಳು ಬೆಂಗಳೂರು, ಮಂಗಳೂರು, ತಮಿಳುನಾಡಿನ ದಿಂಡಿಗಲ್, ಚೆನ್ನೈನ ಸಿನೆಮಾ ಸ್ಟುಡಿಯೋಗಳಿಂದ ಬರುತ್ತದೆ. ಮಂಟಪಗಳ ಮುಂದೆ ತಂಜಾವೂರಿನಿಂದ ಕೀಲು ಕುದುರೆ, ಮೈಸೂರು ಪ್ಯಾಲೆಸ್ ಬ್ಯಾಂಡ್, ಕೇರಳದ ತ್ರಿಶೂರಿನಿಂದ ಬೆಂಕಿಯೊಂದಿಗೆ ಸರಸವಾಡುತ್ತ ನುಡಿಸುವ ಗರಡಿ ಬ್ಯಾಂಡ್ ಗಳು ಉತ್ಸವದಲ್ಲಿ ಭಾಗಿಯಾಗಿರುವ ಸಾವಿರಾರು ಯುವಕರು ರಾತ್ರಿಯಿಂದ ಬೆಳಗಿನವರೆಗೆ ಮೆರವಣಿಗೆಯ ಜೊತೆಗೆ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ.

OLYMPUS DIGITAL CAMERA

ದಸರಾ ಹಬ್ಬದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರಾಜ್ಯದಿಂದ, ಹೊರ ರಾಜ್ಯದಿಂದ ಸಾವಿರಾರು ಪೋಲಿಸ್, ಹೊಂಗಾರ್ಡ್ಸ್ ಸಿಬ್ಬಂದಿಗಳು ಕಾರ್ಯ ಪ್ರವೃತರಾಗಿರುತ್ತಾರೆ, ದಸರಾದ ದಿನ ಮದ್ಯ ಮಾರಾಟ, ಬಾರ್ ಗಳು ಸಂಪೂರ್ಣ ಬಂದ್ ಆಗಿರುತ್ತದೆ. ಅಮಲಿನಲ್ಲಿ ನಡೆದಾಡುವವರ ಭಯವಿಲ್ಲದೆ, ಮನೆ ಮಂದಿಯಲ್ಲರೂ ರಾತ್ರಿಯಿಂದ ಬೆಳಗಿನವರೆಗೆ ಉತ್ಸವದಲ್ಲಿ ಪಾಲ್ಗೊಂಡಿರುತ್ತಾರೆ.

Madikeri Dasara 4

ಮಡಿಕೇರಿ ನಗರ ಸಭೆಯ ಅಧ್ಯಕ್ಷರ ನೇತ್ರತ್ವದಲ್ಲಿ ರಚನೆಯಾಗುವ ಮಡಿಕೇರಿ ದಸರಾ ಉತ್ಸವ ಸಮಿತಿ ನಾಡ ಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ, ಕ್ರಮಬದ್ದವಾಗಿ ಆಚರಿಸಿಕೊಂಡು ಬರುತ್ತಿದೆ.

ದಸರಾ ಉತ್ಸವದ ಸಂದರ್ಭದಲ್ಲಿ ದಸರಾ ಕ್ರೀಡಾ ಕೂಟ, ಕವಿಗೋಷ್ಠಿ, ಸಂಗೀತ, ನೃತ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊದಲ ಏಳು ದಿವಸ ಮಡಿಕೇರಿ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದರೆ, ಉಳಿದ ಮೂರು ದಿನಗಳ ಕಾರ್ಯಕ್ರಮ ರಾಜಾಸೀಟ್ ಬಳಿ ಇರುವ ಗಾಂಧಿ ಮಂಟಪ (ಮಹಾತ್ಮ ಗಾಂಧಿಜಿಯ ಚಿತಾ ಭಸ್ಮ ಇಟ್ಟು
ಕಟ್ಟಲಾದ ಭಾರತದ ಎರಡನೆಯ ಸ್ಮಾರಕ) ಮೈದಾನದಲ್ಲಿರುವ ಬಯಲು ರಂಗ ಮಂದಿರದಲ್ಲಿ ನಡೆಯುತ್ತದೆ. ವಿಜಯ ದಶಮಿಯ ದಿನ ರಾತ್ರಿಯಿಂದ ಬೆಳಗಿನ ವರೆಗೆ ರಸಮಂಜರಿ, ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದು ಬೆಳಗಿನ ಜಾವದಲ್ಲಿ ದಸರಾ ಮಂಟಪಗಳಿಗೆ ಮೂರು ಬಹುಮಾನಗಳನ್ನು ನೀಡುತ್ತಾರೆ. ಬಹುಮಾನ ಪಡೆಯಲು ಮಂಟಪಗಳ ಪೂರ್ವ ತಯಾರಿ ಯೋಜನೆಗಳು ಹಲವಾರು ತಿಂಗಳಿನಿಂದ ನಡೆಯುತ್ತದೆ.

ದಸರಾ ದಶ ಮಂಟಪಗಳ ಶೋಭಾಯಾತ್ರೆ

Madikeri Dasara 7

ಮಡಿಕೇರಿ ದಸರಾ ವೀಕ್ಷಿಸಲು ಬಂದಂತಹ ಲಕ್ಷಾಂತರ ಜನರಿಗೆ ವಿವಿಧ ದೇವಾಲಯಗಳ ವೈವಿಧ್ಯಮಯ ಮಂಟಪಗಳನ್ನು ನಿರ್ಮಾಣ ಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ ನಂತರ ಪೂಜಾ ವಿದಿ ವಿಧಾನಗಳನ್ನು ಮುಗಿಸಿ ಜನಸಾಗರದೊಂದಿಗೆ ದಶ ಮಂಟಪಗಳು ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ರಾತ್ರಿಯಿಂದಲೇ ಮೆರವಣಿಗೆ ಪ್ರಾರಂಭವಾಗುತ್ತದೆ. ದಸರವನ್ನು ಉತ್ಸವವನ್ನು ಆಚರಿಸಿಕೊಂಡು ಬರುತಿರುವ 150 ವರ್ಷದ ಇತಿಹಾಸ ಇರುವ ಪೇಟೆ ಶ್ರೀರಾಮ ಮಂದಿರ, 96 ವರ್ಷದ ದೇಚೂರು ಶ್ರೀರಾಮ ಮಂದಿರ , 85 ವರ್ಷದ ದಂಡಿನ ಮಾರಿಯಮ್ಮ ದೇವಾಲಯ, 52 ವರ್ಷದ ಚೌಡೇಶ್ವರಿ ದೇವಾಲಯ, 51 ವರ್ಷದ ಕಂಚಿ ಕಾಮಾಕ್ಷಿ ದೇವಾಲಯ, 41 ವರ್ಷದ ಕುಂದುರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ, 39 ವರ್ಷದ ಕೋಟೆ ಮಾರಿಯಮ್ಮ ದೇವಾಲಯ, 39 ಕೋಟೆ ಗಣಪತಿ ದೇವಾಲಯ, 40 ವರ್ಷದ ಮಲ್ಲಿಕಾರ್ಜುನ ಶ್ರೀ ರಾಮ ಮಂದಿರ, 19 ವರ್ಷದ ಕರವಾಲೆ ಭಗವತಿ ದೇವಾಸ್ಥಾನಗಳ ಮಂಟಪಗಳು ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ನಾಲ್ಕು ಕರಗಗಳ ಸಮೇತ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತದೆ. ಜಾತಿ ಮತ ಭೇದ ವಿಲ್ಲದೆ ದಸರಾ ನಾಡ ಹಬ್ಬವು ಶಾಂತಿಪ್ರಿಯ ಮಡಿಕೇರಿಯಲ್ಲಿ ಶತಮಾನದಿಂದ ಮತಿಯ ಸೌಹಾರ್ದತೆಯನ್ನು ಎತ್ತಿ ಹಿಡಿದು ವೈಭಯುತವಾಗಿ ನಡೆದುಕೊಂಡು ಬರುತ್ತಿದೆ.

6. Madikeri Karaga

Madikeri Dasara 1

Madikeri Dasara 3a Madikeri Dasara 5

ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು
“ಸರ್ವೇಜನಾ: ಸುಖಿನೋಭವಂತು”

1 Comment

  1. Suresh, Madikeri.

    ನಮ್ಮ ಅಚ್ಚುಮೆಚ್ಚಿನ ಮಡಿಕೇರಿ ದಸರಾ ಉತ್ಸವದ ಬಗ್ಗೆ ಪೂರ್ಣ ಪರಿಚಯದ ಲೇಖನ ಪ್ರಕಟಿಸಿದ ಶ್ರೀ ಗಣೇಶ್ ರೈ ಮತ್ತು ಕನ್ನಡಿಗ ವರ್ಲ್ಡ್ ಗೆ ಧನ್ಯವಾದಗಳು.

Write A Comment