ಕರ್ನಾಟಕ

ಸಮಾಜಘಾತುಕ ಶಕ್ತಿಗಳನ್ನು ದಮನ ಮಾಡಿ : ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

Pinterest LinkedIn Tumblr

siddaramaiah_0_0_0_0_0_0_0_0_0

ಬೆಂಗಳೂರು, ನ.26: ಸಮಾಜದಲ್ಲಿ ಹೊಸ ಹೊಸ ಅಪರಾಧಗಳು ಸೃಷ್ಟಿಯಾಗುತ್ತಿದ್ದು, ವಿಕೃತ ಮನಸ್ಸಿನವರಿಂದಾಗಿ ಲೈಂಗಿಕ ದೌರ್ಜನ್ಯದಂತಹ ಕೃತ್ಯಗಳು ಹೆಚ್ಚುತ್ತಿವೆ, ಪೊಲೀಸರು ಇಂತಹ ಸಮಾಜಘಾತುಕ ಶಕ್ತಿಗಳನ್ನು ದಮನ ಮಾಡುವಂತಹ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದರು.

ರಾಜಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪತಿಯವರ ಪೊಲೀಸ್ ಶೌರ್ಯ ಪ್ರಶಸ್ತಿ ಸೇರಿದಂತೆ ವಿವಿಧ ಸೇವಾ ಪದಕಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಕೃತ ಮನಸ್ಸಿನವರ ಹೇಯಕೃತ್ಯಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂತಹವರ ದಮನ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ವ್ಯವಸ್ಥೆಯಲ್ಲಿ ಪೊಲೀಸರಿಗೆ ಮಹತ್ತರ ಜವಾಬ್ದಾರಿಯಿದೆ. ಹಲವು ಸಂದರ್ಭಗಳಲ್ಲಿ ಅದರಲ್ಲೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶೌರ್ಯ, ಸಾಹಸ ಪ್ರದರ್ಶನ ಅಗತ್ಯವಾಗಿರುತ್ತದೆ. ಅಂತಹವರನ್ನು ಗುರುತಿಸಿ ಗೌರವಿಸುವುದು ಸರ್ಕಾರ ಹಾಗೂ ಸಮಾಜ ಜವಾಬ್ದಾರಿ ಎಂದು ನುಡಿದರು.

ಕಾನೂನು, ಪೊಲೀಸರಿಗೆ ಜನರು ಸಹ ಗೌರವ ನೀಡಬೇಕು. ಕಾನೂನಿಗೆ ಅಗೌರವ ತೋರುವವರ ವಿರುದ್ಧ ಪೊಲೀಸರು ತಪ್ಪದೇ ಕ್ರಮ ವಹಿಸಬೇಕು. ಆಗ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವುದಿಲ್ಲ. ಶಾಂತಿ ಸುವ್ಯವಸ್ಥೆ ನೆಲೆಸಿರುತ್ತದೆ ಎಂದು ಹೇಳಿದರು. ವೈವಿದ್ಯಮಯ ಸಂಸ್ಕೃತಿಗಳ ನಾಡಿನಲ್ಲಿ ಅಸಮಾನತೆ ಹೆಚ್ಚಲು ಜಾತಿ ನಡುವಿನ ವೈಮನಸ್ಯವೇ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಾತ್ಯಾತೀತ ಮನೋಭಾವಕ್ಕೆ ಎಲ್ಲರೂ ಬೆಲೆ ಕೊಡಬೇಕು. ಸಮಾನತೆಯಿಂದ ಕಾಣಬೇಕು ಎಂದು ಕರೆ ನೀಡಿದರು.

ದಕ್ಷತೆ, ಪ್ರಮಾಣಿಕತೆಯಿಂದ ಸೇವೆ ಸಲ್ಲಿಸುವುದೇ ದೊಡ್ಡ ಸಾಧನೆ. ಇದಕ್ಕಿಂತ ಬೇರೆ ಗೌರವವಿಲ್ಲ. ಹೀನ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರು ಹೆಚ್ಚು ಕಾರ್ಯಪ್ರವೃತ್ತರಾಗಬೇಕಿದೆ. ರಾಜ್ಯದ ಆರೂವರೆ ಕೋಟಿ ಜನರು ಭಯ, ಭೀತಿ ಇಲ್ಲದೆ ಸುರಕ್ಷಿತವಾಗಿ ಜೀವಿಸಲು ಅನುವಾಗುವಂತೆ ರಕ್ಷಣೆ ಒದಗಿಸುವಲ್ಲಿ ಕಂಕಣಬದ್ಧರಾಗಬೇಕೆಂದು ಹೇಳಿದರು.

ವಿವಿಧ ಇಲಾಖೆಗಳ ೯೪ ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದರು. ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸರಿಗಾಗಿ 11 ಸಾವಿರ ಮನೆ ನಿರ್ಮಾಣ, ಗುಂಪು ವಿಮೆ, ಮಕ್ಕಳ ವಸತಿ ಶಾಲೆ ನಿರ್ಮಾಣ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪೊಲೀಸರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಸಾರ್ವಜನಿಕರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು. ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್, ಪೊಲೀಸ್ ಮಹನಿರ್ದೇಶಕ ಲಾಲ್‌ರುಕ್ಮುಂ ಪಚಾವೋ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು. ಇದೇ ವೇಳೆ ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪ್ರಶಸ್ತಿಯನ್ನು 5 ಮಂದಿಗೆ, ಶ್ಲಾಘನೀಯ ಸೇವಾ ಪದಕವನ್ನು 35 ಮಂದಿಗೆ, ವಿಶಿಷ್ಟ ಸೇವಾ ಪದಕವನ್ನು 7 ಮಂದಿಗೆ ಪ್ರದಾನ ಮಾಡಲಾಯಿತು.

Write A Comment