ಕರ್ನಾಟಕ

ಕಳಂಕಿತ ಸಚಿವರ ವಿಷಯ ಪ್ರಸ್ತಾಪಕ್ಕೆ ವಿರೋಧ ಪಕ್ಷ ಪಟ್ಟು; ಉಭಯ ಸದನಗಳಲ್ಲಿ ಕೋಲಾಹಲ

Pinterest LinkedIn Tumblr

tara

ಸುವರ್ಣ ವಿಧಾನಸೌಧ (ಬೆಳಗಾವಿ): ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮೂವರು ಸಚಿವರ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರಿಂದ ಶುಕ್ರವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾಯಿತು.

ಎರಡೂ ಸದನಗಳಲ್ಲಿ ಬಿಜೆಪಿ ಸದ-ಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿ-ದರು. ವಿಧಾನ ಪರಿಷತ್‌ನಲ್ಲಿ ಬೆಳಿಗ್ಗೆಯಿಂದ ಯಾವುದೇ ಕಲಾಪ ನಡೆಯಲು ಸದ-ಸ್ಯರು ಅವಕಾಶ ನೀಡಲಿಲ್ಲ. ಗದ್ದಲದ ನಡುವೆಯೇ ಕೆಲವು ಮಸೂದೆಗಳನ್ನು ಅಂಗೀಕರಿಸಲಾಯಿತು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದರು. ಅಲ್ಲಿಯೂ ಪ್ರತಿಪಕ್ಷಗಳ ಧರಣಿ ನಡುವೆಯೇ ಮಸೂದೆಗಳನ್ನು ಅಂಗೀಕರಿಸಲಾಯಿತು.

ಸಚಿವರಾದ ದಿನೇಶ್ ಗುಂಡೂರಾವ್, ಖಮರುಲ್ ಇಸ್ಲಾಂ ಮತ್ತು ಎಚ್.ಎಸ್. ಮಹಾದೇವ ಪ್ರಸಾದ್ ವಿರುದ್ಧ ವಿವಿಧ ಸ್ವರೂಪದ ಆರೋಪಗಳಿವೆ. ಈ ವಿಚಾರ ಈಗ ಲೋಕಾಯುಕ್ತರ ಮುಂದಿದೆ. ಹಾಗಾಗಿ, ಈ ಬಗ್ಗೆ ನಿಯಮ 60ರ ಅಡಿ ಚರ್ಚೆ ನಡೆಸಲು ಅವಕಾಶ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಲ್ಲಿ ಆಗ್ರಹಿಸಿದರು.

‘ಪ್ರಕರಣ ಈಗ ಲೋಕಾಯುಕ್ತರ ಮುಂದಿದೆ. ಈ ಹಂತದಲ್ಲಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವುದು ಸರಿಯೇ ಎಂಬ ಆತಂಕ ನನ್ನಲ್ಲಿದೆ. ನ್ಯಾಯಾಲಯದ ಮುಂದಿರುವ ಪ್ರಕರಣಗಳ ಕುರಿತು ಸದನದಲ್ಲಿ ಚರ್ಚೆ ನಡೆಸುವುದು ಸರಿಯಲ್ಲ’ ಎಂದು ಸ್ಪೀಕರ್‌ ಅವರು ಶೆಟ್ಟರ್‌ ಅವರಿಗೆ ವಿವರಿಸಿ ಹೇಳಿದರು.

ಪಟ್ಟುಬಿಡದ ಶೆಟ್ಟರ್, ‘ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಸಂಪುಟದಲ್ಲಿ ಮುಂದುವರಿಯುವುದು ಸರಿಯಲ್ಲ. ಅವರು ಬಲಾಢ್ಯರು. ತನಿಖೆ ಮೇಲೆ ಪ್ರಭಾವ ಬೀರುವ ಶಕ್ತಿ ಅವರಿಗೆ ಇದೆ. ಹೀಗಾಗಿ ಅವರನ್ನು ಸಂಪುಟ­ದಿಂದ ಕೈಬಿಡಬೇಕು. ಚರ್ಚೆಗೆ ನಿಯಮ 60ರ ಅಡಿ ಅವಕಾಶ ಕೊಡಲೇಬೇಕು’ ಎಂದು ಒತ್ತಾಯಿಸಿದರು.

ಕೋರ್ಟ್‌ ಮುಂದಿದೆ: ಈ ಹಂತದಲ್ಲಿ ಮಧ್ಯ-ಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ‘ನ್ಯಾಯಾಲಯದ ಮುಂದಿರುವ ವಿಚಾರವನ್ನು ಸದನದಲ್ಲಿ ಚರ್ಚಿಸಲಾಗದು. ಅಲ್ಲದೆ, ನಿಯಮ 60ರ ಅಡಿ ತುರ್ತು ವಿಚಾರಗಳನ್ನು ಮಾತ್ರ ಚರ್ಚಿಸ-ಬಹುದು. ಬಿಜೆಪಿ ಪ್ರಸ್ತಾಪಿಸಿರುವ ವಿಚಾರ ಈಗ ಬಹಿರಂಗವಾಗಿದ್ದಲ್ಲ. ಕಳೆದ ಕೆಲವು ತಿಂಗಳುಗಳಿಂದ ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಬರುತ್ತಲೇ ಇವೆ. ಹಾಗಾಗಿ ಈ ಹಂತದಲ್ಲಿ ಚರ್ಚೆಗೆ ಅವಕಾಶ ನೀಡುವುದು ಸರಿಯಲ್ಲ’ ಎಂದರು. ಅದನ್ನು ಸ್ಪೀಕರ್‌ ಕೂಡ ಒಪ್ಪಿದರು. ಚರ್ಚೆಗೆ ಅವಕಾಶ ಇಲ್ಲ ಎಂದು ರೂಲಿಂಗ್ ನೀಡಿದರು.

ಇದರಿಂದ ಕುಪಿತರಾದ ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದೆದುರು ಇರುವ ಅಂಗಳಕ್ಕೆ ನುಗ್ಗಿ ಧರಣಿ ಆರಂಭಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಹಂತದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಕೂಡ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಧರಣಿ ವಾಪಸ್ ತೆಗೆದು­ಕೊಂಡು, ಕಲಾಪ ಮುಂದು­ವರಿಸಲು ಅವಕಾಶ ಕೊಡಬೇಕು ಎಂದು ಕಾಗೋಡು ತಿಮ್ಮಪ್ಪ ಮತ್ತೆ ಮತ್ತೆ ಮಾಡಿಕೊಂಡ ಮನವಿ ವಿಫಲವಾ­ಯಿತು. ಹಾಗಾಗಿ ಸದನವನ್ನು ಹತ್ತು ನಿಮಿಷಗಳವರೆಗೆ ಮುಂದೂಡಿದರು.

ಸದನ ಮತ್ತೆ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದು­ವರಿಸಿ ಸರ್ಕಾ-ರದ ವಿರುದ್ಧ ಘೋಷಣೆ ಕೂಗಿದರು. ‘ಇದು ಅರ್ಥ-ವಿಲ್ಲದ ಧರಣಿ, ಕಲಾಪ ಮುಂದೂಡಿ’ ಎಂಬ ಕೋರಿಕೆ ಕಾಂಗ್ರೆಸ್ ಸದಸ್ಯರ ಕಡೆ-ಯಿಂದಲೂ ಬಂತು. ಆಗ ಸ್ಪೀಕರ್ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಶಿವಶಂಕರ ರೆಡ್ಡಿ ಕಲಾಪವನ್ನು ಶನಿವಾರಕ್ಕೆ ಮುಂದೂಡಿದರು.

Write A Comment