ಕರ್ನಾಟಕ

ಇನ್ನೇನು ಮುಟ್ಟಿನ ದಿನಗಳು ಸಮೀಪಿಸುತ್ತಿವೆ: ಅಬ್ಬಾ… ಆ ನೋವು

Pinterest LinkedIn Tumblr

bhec21Novu

ಇಪ್ಪತ್ತು ವರ್ಷದ ಕಾವ್ಯ ಮನೆಯ ಒಬ್ಬಳೇ ಮುದ್ದಿನ ಮಗಳು. ಹೆತ್ತವರ ಕಣ್ಮಣಿ. ಚೂಟಿಯಾಗಿ ಮನೆಯ ತುಂಬಾ ಲವಲವಿಕೆಯಿಂದ ಓಡಾಡಿಕೊಂಡಿರುವ ಕಾವ್ಯ ಇನ್ನೇನು ಮುಟ್ಟಿನ ದಿನಗಳು ಸಮೀಪಿಸುತ್ತಿವೆ ಎನ್ನುವಾಗ ಕಾರಣವಿಲ್ಲದೆ ಸಿಡಿಮಿಡಿಗುಟ್ಟುತ್ತಾಳೆ. ಆಡುವ ಪ್ರತಿ ಮಾತೂ ಅತಿರೇಕ, ರೋಷದಿಂದ ಕೂಡಿದ್ದು, ಪ್ರತಿಯೊಂದಕ್ಕೂ ಹೆತ್ತವರನ್ನು ದೂರುವುದು ಸಾಮಾನ್ಯ. ಇದು ಅವಳ ವಯೋಸಹಜ ಬದಲಾವಣೆ ಎಂದು ಅನಿಸಿದರೂ, ಈಚೆಗೆ ಅವರ ವರ್ತನೆ ತೀರ ಅತಿಯಾದಂತೆನಿಸಿ, ಮದುವೆ ವಯಸ್ಸಿನ ಹುಡುಗಿಯ ಬಗ್ಗೆ ಯಾರಲ್ಲಿ ಹೇಳಿಕೊಳ್ಳಲಾಗದೆ ತಳಮಳಗೊಂಡಿದ್ದಾರೆ. ಇದಕ್ಕೆ ಮಾನಸಿಕ ತಜ್ಞರಲ್ಲಿ ಹೋಗುವುದೋ, ಮಾಟ– ಮಂತ್ರ ಮಾಡಿಸುವುದೋ ಎಂದು ತಿಳಿಯದೆ ದಿಕ್ಕು ತೋಚದಂತಾಗಿದ್ದಾರೆ.

ಪ್ರೀತಿಸಿ, ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾದ ಇಪ್ಪತ್ತಾರರ ಆರತಿ ಮತ್ತು ಆದಿಯರ ಜೋಡಿ ಎಲ್ಲರ ಕಣ್ಣು ಕುಕ್ಕುವಂತಿತ್ತು. ಲವಲವಿಕೆಯಿಂದ ಓಡಾಡಿಕೊಂಡು ಮನೆ, ಮನ ತುಂಬಿದ ಪತ್ನಿ ಋತುಸ್ರಾವ ಸಮೀಪಿಸುತ್ತಿರುವಾಗ ದುಃಖಿತಳಾಗಿ, ಖಿನ್ನಳಾಗಿ, ಯಾವುದರಲ್ಲೂ ಆಸಕ್ತಿಯಿಲ್ಲದೆ ಶೂನ್ಯ ದೃಷ್ಟಿ ಬೀರುವುದು ನೋಡಿ ಆದಿ ಕಳವಳಗೊಳ್ಳುತ್ತಾನೆ. ಆ ದಿನಗಳಲ್ಲಿ ಕ್ಷುಲ್ಲಕ ವಿಷಯಗಳಿಗೂ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಳುವಾಗ ಅವನಿಗೆ ದಿಕ್ಕೇ ತೋಚದಂತಾಗುತ್ತದೆ. ಇದು ಏಕೆ ಹೀಗೆ? ಏನು? ಇವಳ ಈ ವೈಪರೀತ್ಯಕ್ಕೆ ಕಾರಣವೇನು ಎಂದು ಆತಂಕಕ್ಕೊಳಗಾಗುತ್ತಾನೆ.

ಈ ಮೇಲೆ ಹೇಳಿದ ಎರಡೂ ಸನ್ನಿವೇಶಗಳು ಮನೋ ರೋಗಗಳಂತೆ ಅನಿಸಿದರೂ, ಇದು ಋತುಸ್ರಾವದ ಮುಂಚಿನ ದಿನಗಳಲ್ಲಿ ಮಾತ್ರ ಕಂಡುಬರುವುದರಿಂದ ‘ಪ್ರಿಮೆನ್‌ಸ್ಟ್ರುವಲ್‌ ಸಿಂಡ್ರೋಮ್‌’ ಎಂದು ಕರೆಯಲಾಗುತ್ತದೆ. ಪ್ರಿಮೆನ್‌ಸ್ಟ್ರುವಲ್‌ ಸಿಂಡ್ರೋಮ್‌ ಅಥವಾ ಪ್ರಿಮೆನ್‌ಸ್ಟ್ರುವಲ್‌  ಟೆನ್ಶನ್‌ ಎಂಬುದು ಹೆಣ್ಣುಮಕ್ಕಳ ಋತುಚಕ್ರಕ್ಕೆ ಸಂಬಂಧಿಸಿದ ಒಂದು ದೈಹಿಕ/ ಮಾನಸಿಕ ಸ್ಥಿತಿ. ಎಲ್ಲ ಹೆಂಗಸರೂ ಪಿಎಂಎಸ್‌ನಿಂದ ನರಳುತ್ತಾರಾದರೂ, ಹೆಚ್ಚಿನವರು ತಮ್ಮ ಈ ದಿನಗಳಲ್ಲಿ ಕೊಂಚ ಹೆಚ್ಚಿನ ಮುಜುಗರ, ಇರುಸುಮುರುಸು ಅನುಭವಿಸುತ್ತಾರೆ. ಕೆಲವರಲ್ಲಿ ಅತೀವ ತೀವ್ರತರ ದೈಹಿಕ ಮತ್ತು  ಮಾನಸಿಕ ಏರುಪೇರುಂಟಾಗಿ ಸಾಮಾನ್ಯ/ ದಿನನಿತ್ಯದ ಬದುಕು ಅಸಹನೀಯವಾಗಿ ನರಕವನ್ನು ಅನುಭವಿಸುತ್ತಾರೆ. ಆದ್ದರಿಂದ ಪ್ರತಿ ಮಹಿಳೆಯೂ ಈ ಸ್ಥಿತಿಯ ಬಗ್ಗೆ ತಿಳಿದಿದ್ದು ಅದನ್ನು ಎದುರಿಸಲು ಮಾನಸಿಕವಾಗಿ ತಯಾರಾಗಿರುವುದು ಒಳಿತು.

ಈ ಸ್ಥಿತಿಗೆ ಸಂಬಂಧಪಟ್ಟಂತೆ ಇನ್ನೂರಕ್ಕೂ ಹೆಚ್ಚು ಲಕ್ಷಣಗಳನ್ನು ಗುರುತಿಸಲಾಗಿದೆಯಾದರೂ, ವಿಪರೀತ ಸಿಡುಕು, ಮಾನಸಿಕ ಉದ್ವೇಗ, ಖಿನ್ನತೆ, ಅತೀವ ದುಃಖವನ್ನನುಭವಿಸುತ್ತಿದ್ದರೆ ಪಿಎಂಎಸ್‌ನಿಂದ ನರಳುತ್ತಿರುವುದಾಗಿ ಗುರುತಿಸಲಾಗುತ್ತದೆ. ಬೇರೆ ದಿನಗಳಲ್ಲಿ ಲವಲವಿಕೆಯ ಜೀವನ ಹೊಂದಿದ್ದು,  ಮುಟ್ಟಿನ ಐದು – ಹತ್ತು ದಿನಗಳ ಮುಂಚೆ ಮಾತ್ರ ಮೇಲೆ ಹೇಳಿದ ಚಿಹ್ನೆಗಳನ್ನು ಹೊಂದಿದ್ದು, ಮುಟ್ಟಿನ ಕೆಲ ಸಮಯದ ಮೊದಲು ಇಲ್ಲವೆ ಮುಟ್ಟಾದ ಕೆಲ ಸಮಯದಲ್ಲಿ ಈ ಎಲ್ಲ ಚಿಹ್ನೆಗಳು ಮಾಯವಾಗಿ ಮೊದಲಿನ ಲವಲವಿಕೆ ಕಾಣಿಸಿಕೊಂಡರೆ ಅದನ್ನು ಪಿಎಂಎಸ್‌ ಎಂದು ತೀರ್ಮಾನಿಸಲಾಗುತ್ತದೆ.

ಕೆಲವರು ಈ ದಿನಗಳಲ್ಲಿ ತೀವ್ರ ಮಾನಸಿಕ ಒತ್ತಡ, ದುಗುಡ, ಆತಂಕ, ನಿದ್ರಾಹೀನತೆ, ತಲೆಶೂಲೆ, ತೀವ್ರ ಸುಸ್ತು, ಮಾನಸಿಕ ಅಸಮತೋಲನ, ಮಾನಸಿಕವಾಗಿ ಸೂಕ್ಷ್ಮಮತಿಗಳಾಗುವರು. ಲೈಂಗಿಕ ನಿರಾಸಕ್ತಿಯಿಂದ ನರಳಬಹುದು. ಇದಲ್ಲದೆ ದೇಹ ಭಾರವಾದಂತೆನಿಸುವುದು. ಕಿಬ್ಬೊಟ್ಟೆಯಲ್ಲಿ ಛಳುಕು, ಮಲಬದ್ಧತೆ, ಎದೆ ಭಾರವಾಗುವುದು ಮತ್ತು ಮಾಂಸಖಂಡ/ ಕೀಲು ನೋವಿನಿಂದ ನರಳುತ್ತಾರೆ. ಬೇರೆ ಬೇರೆ ಮಹಿಳೆಯರು ಈ ಮೇಲೆ ಹೇಳಿದ ಲಕ್ಷಣಗಳಲ್ಲಿ ಒಂದು/ಕೆಲವು ತೊಂದರೆಗಳಿಂದ ನರಳಬಹುದು, ಆದರೆ ಪ್ರತಿ ಸಲವೂ ಅದೇ ಲಕ್ಷಣ ಕಾಣಿಸಿಕೊಳ್ಳುತ್ತದೆ.

ಕಾವ್ಯಳ ಕಥೆಯಲ್ಲಿ ಋತುಸ್ರಾವದ ಕೆಲ ದಿನ ಮುಂಚೆ ಉದ್ವೇಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮತ್ತು ಪ್ರತಿ ತಿಂಗಳೂ ಈ ಲಕ್ಷಣ ಕಾಣಿಸಿಕೊಂಡಾಗ ಇನ್ನೇನು ಋತುಸ್ರಾವದ ದಿನ ಸಮೀಪಿಸಿವೆಯೆಂದು ಅರ್ಥ. ಋತುಸ್ರಾವದ ದಿನ  ಸಮೀಪಿಸುತ್ತಿದ್ದಂತೆ ಅವಳಿಗೇ ಅರಿವಿಲ್ಲದೆ ಪ್ರತಿ ವಿಷಯಕ್ಕೂ ಸಿಡಿಮಿಡಿಗೊಳ್ಳುತ್ತಾಳೆ. ಹಾಗೆ ಆರತಿಯ ವಿಷಯದಲ್ಲಿ ಆಕೆ ಖಿನ್ನತೆಯಿಂದ ನರಳುತ್ತಾಳೆ. ಹೀಗೆ ಪಿಎಂಎಸ್‌ನಿಂದ ನರಳುವ ಪ್ರತಿ ಮಹಿಳೆ ನಿರ್ದಿಷ್ಟ ಲಕ್ಷಣಗಳಿಂದ ನರಳಿ, ಋತುಚಕ್ರಕ್ಕೆ ಮುನ್ನ ತನ್ನಲ್ಲಾಗುವ ಬದಲಾವಣೆಗಳನ್ನು ಗುರುತಿಸಬಲ್ಲಳು.

ಯಾವುದೇ ಮಹಿಳೆಯನ್ನು ಪಿಎಂಎಸ್‌ ನಿಂದ ನರಳುತ್ತಿದ್ದಾಳೆಂದು ದೃಢೀಕರಿಸಲು ಆಕೆ ಋತುಸ್ರಾವದ ಕನಿಷ್ಠ ಐದತ್ತು (5–10) ದಿನಗಳ ಮುಂಚೆ ಈ ಲಕ್ಷಣಗಳು ಅವಳ ಬದುಕನ್ನು ಅಸಹನೀಯವಾಗಿಸುವ ಮಟ್ಟಿಗಿದ್ದು ಋತುಸ್ರಾವ ಶುರುವಾದ ನಂತರ ಎಲ್ಲ ಲಕ್ಷಣಗಳು ಮಾಯವಾಗಬೇಕು. ಇದಲ್ಲದೆ ಮುಟ್ಟಾದ ನಂತರ ಎರಡು ವಾರಗಳಲ್ಲಿ ಯಾವುದೇ ಅತಿರೇಕದ ಲಕ್ಷಣ ಕಾಣಿಸಿಕೊಳ್ಳದೆ ಸಾಮಾನ್ಯ ನಿರಾತಂಕ ಜೀವನ ನಡೆಸುತ್ತಿರಬೇಕು. ಈ ಲಕ್ಷಣಗಳು ಕನಿಷ್ಠ ಎರಡು ಚಕ್ರಗಳಲ್ಲಿ ಕಾಣಿಸಿಕೊಂಡರೆ, ವೈದ್ಯರು ‘ಪ್ರಿಮೆನ್‌ಸ್ಟ್ರುವಲ್‌ ಸಿಂಡ್ರೋಮ್‌’ ಇದೆಯೆಂದು ದೃಢೀಕರಿಸುತ್ತಾರೆ.

ಕಾರಣಗಳು: ಪಿಎಂಎಸ್‌ ಕಾರಣಗಳೇನೆಂದು ನಿಖರವಾಗಿ ತಿಳಿದಿಲ್ಲವಾದರೂ, ಇದು ಋತುಚಕ್ರದ ಆಸುಪಾಸಿನಲ್ಲಿ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ವ್ಯತ್ಯಾಸದಿಂದಾಗುತ್ತದೆಂದು ನಂಬಲಾಗಿದೆ. ನಮ್ಮ  ಮೆದುಳಿನಲ್ಲಿರುವ  ‘ಸೆರಟೋನಿನ್‌  ಎಂಬ ನರವಾಹಕದ ಏರುಪೇರಿನಿಂದಾಗಿ  ಈ ಸ್ಥಿತಿಯುಂಟಾಗುತ್ತದೆಂದು ಕೆಲ ಸಂಶೋಧನೆಗಳು ದೃಢೀಕರಿಸಿವೆ. ಇನ್ನು ಕೆಲವರು ಬೀಟಾ ಎಂಡಾರ್ಫಿನ್‌ ಎಂಬ ವಸ್ತು ರಕ್ತದಲ್ಲಿ ಕಡಿಮೆಯಾದಾಗ ಪಿಎಂಎಸ್‌ ತಲೆದೋರುತ್ತದೆಂದು ಕಂಡುಹಿಡಿದಿದ್ದಾರೆ. ಪಿಎಂಎಸ್‌ ಆನುವಂಶಿಕ ವಾಗಿಯೂ ಬರುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇವಲ್ಲದೆ, ಆಹಾರದಲ್ಲಿ ಜೀವಸತ್ವ,   ಖನಿಜಗಳ (ಮೆಗ್ನೀಷಿಯಂ, ಮ್ಯಾಂಗನೀಸ್‌, ಸತು) ಕೊರತೆಯಾದಾಗ ಪಿಎಂಎಸ್‌ನಿಂದ ನರಳುತ್ತಾರೆಂದು ನಂಬಲಾಗಿದೆ. ಅತಿಯಾಗಿ ಕೆಫಿನ್‌ ಸೇವಿಸುವವರು, ಖಿನ್ನತೆ, ಉದ್ವೇಗಗಳಂತಹ ಮಾನಸಿಕ ರೋಗ ಇರುವವರಲ್ಲಿ ಪಿಎಂಎಸ್‌ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

ಪಿಎಂಎಸ್‌- ಅನ್ನು ದೃಢೀಕರಿಸಲು ಯಾವುದೇ ನಿರ್ದಿಷ್ಟ ರಕ್ತ ಪರೀಕ್ಷೆಗಳಿಲ್ಲವಾದರೂ, ರೋಗಿಯ ಹೇಳಿಕೆ, ನಿರ್ದಿಷ್ಟ ಲಕ್ಷಣಗಳು ಮತ್ತು ಅವು ಋತುಚಕ್ರದ ಯಾವ ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನಾಧರಿಸಿ ರೋಗವನ್ನು ನಿರ್ಧರಿಸಲಾಗುತ್ತದೆ.

ಚಿಕಿತ್ಸೆ: ಪಿಎಂಎಸ್‌ನ ನಿರ್ದಿಷ್ಟ ಕಾರಣಗಳೇನೆಂದು ತಿಳಿದಿಲ್ಲವಾದ್ದರಿಂದ, ಹಲವಾರು ಸಲಹೆಗಳನ್ನು ಪ್ರಸ್ತಾಪಿಸಲಾಗಿದೆ. ಒಬ್ಬೊಬ್ಬ ಮಹಿಳೆಯಲ್ಲಿ ಒಂದೊಂದು ಸಲಹೆ ಯುಕ್ತವಾಗಿರುತ್ತದೆ.

*ಒಳ್ಳೆಯ ಆಹಾರ ಕ್ರಮ ಮತ್ತು ವ್ಯಾಯಾಮಗಳಿಂದ  ಇದನ್ನು ಹತೋಟಿಗೆ ತರಬಹುದೆಂದು ಹಲವಾರು ಸಂಶೋಧನೆಗಳು ಪ್ರತಿಪಾದಿಸಿವೆ.  ಹೆಚ್ಚಾಗಿ ಜೀವಸತ್ವವಿರುವ ಆಹಾರ ಸೇವನೆ ಉತ್ತಮವೆಂದು ನಂಬಲಾಗಿದೆ.

*ಕ್ಯಾಲ್ಷಿಯಂ ಕೊರತೆಯಿದ್ದರೂ ಈ ಸಮಸ್ಯೆ ಇರುತ್ತದೆ. ಪ್ರತಿ ದಿನ ಕ್ಯಾಲ್ಷಿಯಂ ಮಾತ್ರೆ ಸೇವನೆಯನ್ನು ಸೂಚಿಸಲಾಗಿದೆ.

*ಅತಿಯಾದ ಉಪ್ಪು, ಸಕ್ಕರೆ, ಕೆಫಿನ್‌ ಸೇವನೆ ವ್ಯರ್ಜಿಸುವುದು ಉತ್ತಮ. ದೇಹದಲ್ಲಿ ಉಪ್ಪಿನ ಅಂಶ ಜಾಸ್ತಿಯಾದಾಗ  ನೀರಿನಂಶವೂ ಹೆಚ್ಚಿ, ದೇಹ ಭಾರವಾದಂತೆನಿಸಿ ಮಂಕು ಕವಿದಂತಾಗಬಹುದು.

*ಜೀವನಶೈಲಿ ಬದಲಾಯಿಸುವುದಿಂದ ಯಾವುದೇ ಬದಲಾವಣೆ ಕಾಣದಿದ್ದಾಗ , ವೈದ್ಯರ ಸಲಹೆ ಪಡೆಯುವುದು ಉತ್ತಮ. ಪಿಎಂಎಸ್‌ ತೀವ್ರತೆ, ಅದರಿಂದ ಆಕೆಯ ಜೀವನಕ್ರಮದ ಮೇಲಾದ ಹಾನಿಯನ್ನು ಅವಲೋಕಿಸಿ ಮಾತ್ರೆಗಳನ್ನು ನಿರ್ಧರಿಸಲಾಗುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ ಪಿಎಂಎಸ್‌ನಿಂದ ನರಳುವ ಮಹಿಳೆಗೆ ಮನೆಯವರ ಸಹಕಾರ, ಸಂಯಮ ಅತ್ಯಗತ್ಯ. ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಪಿಎಂಎಸ್‌ನ್ನು ದೃಢೀಕರಿಸುವುದು ಉತ್ತಮ. ಅಲ್ಲದೆ ಪಿಎಂಎಸ್‌ನಿಂದ ನರಳುವವರನ್ನು ಈ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಮನೆಯವರ ಸಹಕಾರವಿಲ್ಲದೆ, ತಮ್ಮ ನಡವಳಿಕೆಗಳಿಂದ ಮೂದಲಿಕೆಗೆ ಒಳಗಾದಾಗ ಈ ದಿನಗಳಲ್ಲಿ ಆತ್ಮಹತ್ಯೆಯಂಥ ವಿಪರೀತದ ಹಂತ ತಲುಪಬಹುದು. ಆದ್ದರಿಂದ ಪಿಎಂಎಸ್‌ನಿಂದ  ನರಳುವ ರೋಗಿಗಳನ್ನು ಮನೆಯವರು ಅರ್ಥಮಾಡಿಕೊಂಡು ಅವರಿಗೆ ಆ ದಿನಗಳಲ್ಲಿ ಸಾಂತ್ವನ ಹೇಳಿ, ಮೊದಲೇ ದೈಹಿಕವಾಗಿ  ಮಾನಸಿಕವಾಗಿ ನರಳುತ್ತಿರುವವರಿಗೆ ಅವರ ಪರಿಸ್ಥಿತಿಯನ್ನೆದುರಿಸಲು ಸಹಕರಿಸಿ, ಸಂಯಮ ಕಾಪಾಡಿಕೊಳ್ಳಬೇಕು.
ಪಿಎಂಎಸ್‌–– ಯಾವುದೇ ಕಾಯಿಲೆ ಅಲ್ಲ ಮತ್ತು ಅದಕ್ಕೆ ನಿರ್ದಿಷ್ಟ ಚಿಕಿತ್ಸೆಯೂ ಇಲ್ಲ. ಆದ್ದರಿಂದ ಮಹಿಳೆಯರು ತಮ್ಮ ದೇಹದಲ್ಲಾಗುವ  ಬದಲಾವಣೆಗಳನ್ನು ಅರಿತು, ಆ ದಿನಗಳಲ್ಲಿ ಪೌಷ್ಟಿಕ ಆಹಾರ ಸೇವಿಸಿ, ವ್ಯಾಯಾಮ, ಇಷ್ಟದ ಸಂಗೀತವನ್ನಾಲಿಸುವುದು ಅಥವಾ ತಮ್ಮ ಮನಸ್ಸನ್ನು ಸ್ಥಿಮಿತದಲ್ಲಿಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ.

1 Comment

Write A Comment