ಕರ್ನಾಟಕ

ವಿಶೇಷ ಅಧಿವೇಶನ : ಗೊಂದಲದಲ್ಲಿ ಜೆಡಿಎಸ್

Pinterest LinkedIn Tumblr

Jds_hdk

ಬೆಂಗಳೂರು, ಏ.18- ಬಿಬಿಎಂಪಿ ವಿಭಜನೆ ಮಾಡುವ ಸಂಬಂಧ ಸೋಮವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೇ..? ಇಲ್ಲವೆ ಬಹಿಷ್ಕಾರ ಮಾಡಬೇಕೆ ಎಂಬುದರ ಬಗ್ಗೆ ಜೆಡಿಎಸ್ ಗೊಂದಲದ ಸ್ಥಿತಿಗೆ ಸಿಲುಕಿದೆ. ಸೋಮವಾರ ನಡೆಯಲಿರುವ ಒಂದು ದಿನದ ವಿಶೇಷ ಅಧಿವೇಶನವನ್ನು ಬಹಿಷ್ಕಾರ ಮಾಡಬೇಕೆಂದು ಪಕ್ಷದ ಶಾಸಕರಿಗೆ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸೂಚಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಶಾಸಕರು ಪಾಲ್ಗೊಳ್ಳದೆ ದೂರ ಉಳಿಯುವಂತೆ ಸಂದೇಶ ರವಾನಿಸಿದ್ದರು.

ಕಲಾಪದಲ್ಲಿ ನಮ್ಮ ಪಕ್ಷದ ಶಾಸಕರು ಭಾಗವಹಿಸುವುದಿಲ್ಲ. ಅಧಿವೇಶನ ಬಹಿಷ್ಕಾರ ಮಾಡುತ್ತೇವೆಂದು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು. ಈ ಸಂಬಂಧ ಪಕ್ಷದ  ಶಾಸಕರ ಜತೆ ಮಾತುಕತೆ ನಡೆಸಿ ತೀರ್ಮಾನಿಸಲು ಶಾಸಕಾಂಗ ಸಭೆ ಕರೆಯಲಾಗಿತ್ತು.

ಆದರೆ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಕರೆಕೊಟ್ಟ ಹಿನ್ನಲೆಯಲ್ಲಿ ಶಾಸಕಾಂಗ ಸಭೆಯನ್ನು ಸೋಮವಾರ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಕಚೇರಿಯಲ್ಲಿ ಕರೆಯಲಾಗಿದೆ. ಕೈ ಕೊಟ್ಟ ಬಿಜೆಪಿ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಧಾನಸೌಧದ ಒಳಗೆ ಮತ್ತು ಹೊರಗೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಈಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ಮೊದಲು ಕಲಾಪದಲ್ಲಿ ಭಾಗವಹಿಸಲೇಬಾರದೆಂದು ಜೆಡಿಎಸ್ ನಾಯಕರು ತೀರ್ಮಾನಿಸಿದ್ದರು. ತಮ್ಮ ನಿರ್ಧಾರಕ್ಕೆ ಬಿಜೆಪಿಯಿಂದಲೂ ಬೆಂಬಲ ಸಿಗುತ್ತದೆ ಎಂಬುದು ತೆನೆಹೊತ್ತ ಮಹಿಳೆಯ ಲೆಕ್ಕಚಾರವಾಗಿತ್ತು. ಆದರೆ, ಯಾವಾಗಲೂ ಪ್ರಚಾರದ ಹುಚ್ಚು ಬಯಸುವ ಕಮಲ ಪಕ್ಷದ ನಾಯಕರು ಜೆಡಿಎಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಲು ಹೊರಟರು.  ಕಲಾಪದಲ್ಲಿ  ಭಾಗವಹಿಸಿ ಸರ್ಕಾರದ ವಿರುದ್ಧ ಸದನದಲ್ಲೇ ತರಾಟೆಗೆ ತೆಗೆದುಕೊಳ್ಳುವ ಉದ್ದೇಶ ಬಿಜೆಪಿಯದ್ದಾಗಿತ್ತು.

ಕಲಾಪದಲ್ಲಿ ಪಾಲ್ಗೊಂಡರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಬಿಬಿಎಂಪಿ ವಿಭಜನೆಗೆ ನಾವು ಅವಕಾಶ ನೀಡದೆ ಪ್ರತಿರೋಧ ತೋರಿದರೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಲೆಕ್ಕಾಚಾರದಿಂದಲೇ ಬಿಜೆಪಿ ಅಧಿವೇಶನದಲ್ಲಿ ಭಾಗವಹಿಸಲು ಮುಂದಾಗಿದೆ. ನಾವು ಬಹಿಷ್ಕಾರ ಮಾಡಿದರೆ ಬಿಜೆಪಿಯೂ ನಮ್ಮ ಜತೆ ಕೈ ಜೋಡಿಸಲಿದೆ ಎಂಬ ಜೆಡಿಎಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಇದೀಗ ಮುಂದಿನ ಕ್ರಮಗಳನ್ನು ಚರ್ಚಿಸುವ ಬಗ್ಗೆ ಸೋಮವಾರ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ತೀರ್ಮಾನವಾಗಲಿದೆ.
ಕಲಾಪ ಬಹಿಷ್ಕಾರವೋ ಇಲ್ಲವೇ ಭಾಗವಹಿಸುವುದೋ ಎಂಬುದು ಕುಮಾರಸ್ವಾಮಿ ಮತ್ತು ಶಾಸಕರ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

ಸಂಧಾನ ಸಾಧ್ಯತೆ: ಮೂಲಗಳ ಪ್ರಕಾರ, ಕಲಾಪದಲ್ಲಿ ಜೆಡಿಎಸ್ ಶಾಸಕರು ಭಾಗವಹಿಸುವಂತೆ ಅಧಿಕೃತ ವಿರೋಧ ಪಕ್ಷ ಬಿಜೆಪಿ ಕುಮಾರಸ್ವಾಮಿ ಅವರನ್ನು ಮನವೊಲಿಸುವ ಸಾಧ್ಯತೆಯಿಂದೆ ಎಂದು ತಿಳಿದು ಬಂದಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ಪಕ್ಷದ ಕೆಲ ಹಿರಿಯ ನಾಯಕರು ಕುಮಾರಸ್ವಾಮಿಯವರ ಮನವೊಲಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಅಧಿವೇಶನದಲ್ಲಿ ಭಾಗವಹಿಸಿ ನಿಮ್ಮ ಪಕ್ಷದ ನಿಲುವನ್ನು ಸದನದಲ್ಲೇ ತಿಳಿಸಬೇಕು. ಬಿಬಿಎಂಪಿ ವಿಭಜನೆ ಮಾಡಲು ನಮ್ಮ ಪಕ್ಷವು ಅವಕಾಶ ನೀಡುವುದಿಲ್ಲ. ಎರಡೂ ಪಕ್ಷಗಳು ಒಟ್ಟಾಗಿ ಸೇರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಆದ್ದರಿಂದ ಬಹಿಷ್ಕಾರ ಮಾಡದೆ ಪಾಲ್ಗೊಳ್ಳುವಂತೆ ಮನವಿ ಮಾಡುವ ಸಾಧ್ಯತೆಯಿದೆ.

Write A Comment