ಕರ್ನಾಟಕ

ಡಿನೋಟಿಫಿಕೇಷನ್ `ಚಕ್ರವ್ಯೂಹ’ದಲ್ಲಿ ಒಬ್ಬಂಟಿಯಾದ ಬಿ.ಎಸ್.ವೈ

Pinterest LinkedIn Tumblr

5579Yeddyurappaರಾಜಕೀಯದಲ್ಲಿ ಅವಕಾಶ ಮತ್ತು ಅಧಿಕಾರಗಳಿಂದ ದೂರ ಸರಿದ ವ್ಯಕ್ತಿ ಇತಿಹಾಸದ ಭಾಗವಾಗುವುದು ತೀರಾ ಸಾಮಾನ್ಯ. ಕೆಲವೇ ವರ್ಷಗಳ ಹಿಂದೆ ರಾಜ್ಯವಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಕೂಡ ಬಿಜೆಪಿಯ ಪ್ರಬಲ ನಾಯಕರಂತೆ ಬಿಂಬಿತರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ ಇಂತಹ ಐತಿಹಾಸಿಕ ಸತ್ಯದ ಒಂದು ನಿದರ್ಶನದಂತೆ ಗೋಚರಿಸತೊಡಗಿದ್ದಾರೆ ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಹೌದು, ನಲವತ್ತು ವರ್ಷಗಳ ಕಾಲ ಪಕ್ಷದ ಏಕಮೇವಾದ್ವಿತೀಯ ಮುಂಚೂಣಿ ಮುಖವಾಗಿದ್ದ ಯಡಿಯೂರಪ್ಪ 2007 ರಿಂದ 2012 ರವರೆಗೆ ಕರ್ನಾಟಕ ಬಿಜೆಪಿಯ ಬಹುತೇಕ ಪ್ರಶ್ನಾತೀತ ನಾಯಕರಾಗಿದ್ದರು. ಅಷ್ಟೇ ಅಲ್ಲ, ಅವರು ಒಮ್ಮೆ ಮುಖ್ಯಮಂತ್ರಿಯಾಗುತ್ತಲೇ ರಾಷ್ಟ್ರಮಟ್ಟದಲ್ಲಿ ಕೂಡ ಗಮನ ಸೆಳೆದು ಭವಿಷ್ಯದ ರಾಷ್ಟ್ರೀಯ ನಾಯಕರು ಎಂಬಷ್ಟರ ಮಟ್ಟಿಗೆ ಬಿಂಬಿತರಾಗಿದ್ದರು.

ಆದರೆ, ಯಾವಾಗ ಅವರ ವಿರುದ್ಧದ ಭ್ರಷ್ಟಾಚಾರ ಮತ್ತು ಅಕ್ರಮ ಹಗರಣಗಳು ಒಂದೊಂದಾಗಿ ಅನಾವರಣಗೊಳ್ಳತೊಡಗಿದವೋ ಆಗ ಅವರನ್ನು ಬಿಜೆಪಿ ಅಧಿಕಾರದ ಗದ್ದುಗೆ ಮತ್ತು ಪಕ್ಷದ ನಾಯಕತ್ವದಿಂದ ಬಹಳ ವ್ಯವಸ್ಥಿತವಾಗಿ ದೂರಮಾಡುತ್ತಾ ಬಂತು. ಪಕ್ಷದೊಳಗೇ ತಮ್ಮನ್ನು ಹಣಿಯಲಾಗುತ್ತಿದೆ ಎಂದರಿತ ಅವರು ಒಂದು ಹಂತದಲ್ಲಿ ಬಿಜೆಪಿ ಸಂಬಂಧ ಕಡಿದುಕೊಂಡು ಹೊರ ನಡೆದು ಸ್ವಂತ ಪಕ್ಷ ಕಟ್ಟಿದರು.

ಯಾವಾಗ ಬಿಜೆಪಿ ಮತ್ತು ಬಿ.ಎಸ್.ವೈ. ಇಬ್ಬರಿಗೂ ಹೊಸ ಪಕ್ಷದ ಪ್ರಯೋಗ ಲಾಭಕ್ಕಿಂತ ನಷ್ಟ ತಂದಿತೋ ಆಗ ಮತ್ತೆ ಬಿಜೆಪಿ ಬಿ.ಎಸ್.ವೈ. ಅವರನ್ನು ಬರಸೆಳೆದುಕೊಂಡಿತು. ಕಳೆದ ವಿಧಾನಸಭಾ ಚುನಾವಣೆ ವೇಳೆ ಸೋತು ಸುಣ್ಣವಾಗಿದ್ದ ಬಿಜೆಪಿ, ಲೋಕಸಭಾ ಚುನಾವಣೆ ವೇಳೆ ಬಿ.ಎಸ್.ವೈ. ಮುಂದಿಟ್ಟುಕೊಂಡು ಆಗಬಹುದಾದ ಮುಖಭಂಗದಿಂದ ಪಾರಾಗಿತ್ತು.

ಚುನಾವಣಾ ಗೆಲುವಿಗೆ ಬಿ.ಎಸ್.ವೈ. ಫೇಸ್ ವ್ಯಾಲ್ಯೂ ಬಳಸಿಕೊಂಡ ಬಿಜೆಪಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ತನ್ನ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ. ಇದೀಗ ಕಳೆದ ಒಂದು ತಿಂಗಳಲ್ಲಿ ಮತ್ತೆ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಬಿ.ಎಸ್.ವೈ. ವಿರುದ್ಧ ಸಾಲು- ಸಾಲು ಎಫ್ಐಆರ್ ಗಳು ದಾಖಲಾಗುತ್ತಿದ್ದಂತೆ ಮತ್ತೆ ಬಿಜೆಪಿ ತನ್ನ ಹಳೇ ವರಸೆಗೆ ಜಾರಿದಂತಿದೆ.

ಬಿ.ಎಸ್.ವೈ. ಪರವಾಗಿ ಅವರ ದಶಕಗಳ ಪರಮಶತ್ರು ಎನಿಸಿಕೊಂಡಿದ್ದ ಜೆಡಿಎಸ್ ಕುಮಾರಸ್ವಾಮಿಯೇ ಬ್ಯಾಟಿಂಗ್ ಮಾಡಿದ್ದರೂ, ಬಿಜೆಪಿ ರಾಜ್ಯ ನಾಯಕರಾಗಲೀ, ರಾಷ್ಟ್ರೀಯ ನಾಯಕತ್ವವಾಗಲೀ ಚಕಾರವೆತ್ತಿಲ್ಲ.

ಸದ್ಯಕ್ಕೆ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿ.ಎಸ್.ವೈ. ಅವರಿಂದ ಏಕಕಾಲಕ್ಕೆ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರೆಲ್ಲ ಸಮಾನ ಅಂತರ ಕಾಯ್ದುಕೊಳ್ಳುತ್ತಿದ್ದು, ಅಕ್ಷರಶಃ ಅವರೀಗ ಒಬ್ಬಂಟಿಯಾಗಿದ್ದಾರೆ ಎಂಬುದು ರಾಜಕೀಯ ವಲಯದ ಚರ್ಚೆ.

ಇತ್ತೀಚೆಗೆ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ವಿ. ಸೋಮಣ್ಣ ಮತ್ತಿತರ ಬಿ.ಎಸ್.ವೈ. ನಿಷ್ಠರು, ತಮ್ಮ ನಾಯಕನ ವಿರುದ್ಧ ದಾಖಲಾಗುತ್ತಿರುವ ಎಫ್ಐಆರ್ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿದೆ. ಅದನ್ನು ಬೆಳಗಾವಿ ಅಧಿವೇಶನದ ವೇಳೆ ಸದನದಲ್ಲಿ ಪ್ರಸ್ತಾಪಿಸಿ ಎಂದು ಪಕ್ಷದ ನಾಯಕರಿಗೆ ಮನವಿ ಮಾಡಿದರು. ಅಲ್ಲದೆ, ಕಳೆದ ಒಂದು ತಿಂಗಳಿಂದ ಎಫ್ಐಆರ್ ದಾಖಲಾಗುತ್ತಿದ್ದರೂ ಯಾವೊಬ್ಬ ನಾಯಕರೂ ಬಿ.ಎಸ್.ವೈ. ಬೆಂಬಲಿಸಿ ಮಾತನಾಡಿಲ್ಲ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು ಕೂಡ.

ಆದರೂ, ಈವರೆಗೆ ಯಾವೊಬ್ಬ ಬಿಜೆಪಿ ನಾಯಕರೂ ಬಿ.ಎಸ್.ವೈ. ಬೆನ್ನಿಗೆ ನಿಂತಿಲ್ಲ. ಅತ್ತ ಕುಮಾರಸ್ವಾಮಿ ನೀಡುತ್ತಿರುವ ಬಿ.ಎಸ್.ವೈ. ಪರ ಹೇಳಿಕೆಗಳು ಸಾಂತ್ವಾನಕ್ಕಿಂತ ಕುಹಕದ ಮಾತಾಗಿಯೇ ಪ್ರತಿಧ್ವನಿಸುತ್ತಿವೆ. ಹಾಗಾಗಿ, 40 ವರ್ಷ ಕಾಲ ಪಕ್ಷ ಕಟ್ಟಿ ಬೆಳೆಸಿದ ನಾಯಕ ಇದೀಗ ಮತ್ತೆ ಅಧಿಕಾರ- ಅವಕಾಶಗಳಿಂದ ದೂರವಾಗುತ್ತಾ ವಿರೋಧಿಗಳು ಹೆಣೆದ ಚಕ್ರವ್ಯೂಹದಲ್ಲಿ ಒಂಟಿಯಾಗಿಬಿಟ್ಟಿದ್ದಾರೆ.

3 Comments

  1. Mr yadiyurappa pls come to JDS HDK with you. HDK Not like BJP leaders he is supporting to you and you both Old frnds….. BSY just think now a days political is very bad condition because of Siddaramayya he is mad CM of Karnataka….HDK is king of Karnataka he is always with farmers…..

    • Mad people saying HDK King of Karnataka. He may king for you and Radika. not for karnataka. Karnataka people are not mad like you.

    • Mad people saying HDK King of Karnataka. He may king for you and Radika. not for karnataka. Karnataka people are not mad like you. Once he cheat BSY and now showing sympathy On Him. Ethic less people met Ethic less person.

Write A Comment