ಕರ್ನಾಟಕ

ಮೇಯರ್ ಆಯ್ಕೆ ನಿಯಮಾವಳಿ ಬದಲಾವಣೆ;ಬಿಜೆಪಿಯಿಂದ ಹೈಕೋರ್ಟ್‌ಗೆ ಅರ್ಜಿ

Pinterest LinkedIn Tumblr

high court1ಬೆಂಗಳೂರು, ಸೆ.1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗೆದ್ದಿದ್ದರೂ ಮೇಯರ್ ಹಾಗೂ ಉಪಮೇಯರ್ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯವಾಗದ ಪರಿಣಾಮ ಮೇಯರ್ ನೇಮಕಕ್ಕಿರುವ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕು ಎಂದು ಕೋರಿ ಬಿಜೆಪಿ ಪಕ್ಷದ ಸದಸ್ಯರು ಹೈಕೋರ್ಟ್ ಕದ ತಟ್ಟಿದ್ದಾರೆ.

ಕರ್ನಾಟಕ ಪುರಸಭೆ ಕಾಯ್ದೆ 7ರಲ್ಲಿರುವ ಮೇಯರ್ ಹಾಗೂ ಉಪಮೇಯರ್‌ಗಳ ಆಯ್ಕೆ ಮಾಡುವ ಪ್ರಕ್ರಿಯೆಗೆ ಪಾಲಿಕೆ ವ್ಯಾಪ್ತಿಯ ಇತರೆ ಜನ ಪ್ರತಿನಿಧಿಗಳ (ಎಂಎಲ್‌ಎ, ಎಂಎಲ್‌ಸಿ, ಎಂಪಿ) ಸಹಮತ ಅಗತ್ಯವಿರುವ ನಿಯಮವನ್ನು ಬದಲಾವಣೆ ಮಾಡುವಂತೆ ಕೋರಿ ಇದೇ ಮೊದಲಬಾರಿಗೆ ಆಯ್ಕೆಯಾಗಿರುವ ಪರಿಮಳಾ ಸೇರಿದಂತೆ ಇತರೆ ನಾಲ್ಕು ಜನ ಮಹಿಳಾ ಪಾಲಿಕೆ ಸದಸ್ಯರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾ.ರಾಘವೇಂದ್ರ ಎಸ್.ಚೌಹಾಣ್ ಅವರಿದ್ದ ನ್ಯಾಯಪೀಠ ನಡೆಸಿತು.

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಇತರೆ ಜನಪ್ರತಿನಿಧಿಗಳಾದ ಲೋಕಸಭೆ, ರಾಜ್ಯಸಭೆ, ವಿಧಾನ ಸಭೆ, ವಿಧಾನಪರಿಷತ್ ಸದಸ್ಯರು ಮತದಾನದಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ. ಆದರೆ, ಮಹಾನಗರ ಪಾಲಿಕೆಗಳಲ್ಲಿ ಮಾತ್ರ ಈ ರೀತಿಯ ಕಾನೂನಿದೆ. ಆದುದರಿಂದಾಗಿ ಈ ಕಾನೂನನ್ನು ರದ್ದುಪಡಿಸಬೇಕು ಎಂದು ವಕೀಲ ಅಶೋಕ್ ಹಾರನಹಳ್ಳಿ ಅರ್ಜಿದಾರರ ಪರ ವಾದ ಮಂಡಿಸಿದರು.

ವಿಚಾರಣೆ ವೇಳೆ ಹಾಜರಾಗಿದ್ದ ರಾಜ್ಯ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ನಗರಸಭೆ ಹಾಗೂ ಪುರಸಭೆಗಳಿಗಿರುವ ಸಮಸ್ಯೆಗಳು ವಿಭಿನ್ನವಾಗಿವೆ. ಕಳೆದ 22 ವರ್ಷಗಳಿಂದ ಇದೇ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಈ ಅರ್ಜಿ ರಾಜಕೀಯ ಪ್ರೇರಿತವಾಗಿದ್ದು, ಸೂಕ್ಷ್ಮತೆಯಿಂದ ಕೂಡಿದೆ. ಆದ್ದರಿಂದ ಅರ್ಜಿಯನ್ನು ವಜಾ ಮಾಡಬೇಕು ಎಂದು ವಾದ ಮಂಡಿಸಿದರು.

ವಾದ ಆಲಿಸಿದ ನ್ಯಾಯಪೀಠ, ಪಾಲಿಕೆಗಳಿಗಿರುವ ನಿಯಮ ಪುರಸಭೆಗಳಿಗೆ ಯಾಕೆ ಅಳವಡಿಸಿಲ್ಲ ಎಂದು ಸರಕಾರವನ್ನು ಪ್ರಶ್ನಿಸಿತು. ಅಲ್ಲದೆ, ಒಂದು ಪ್ರದೇಶದಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ತಮ್ಮ ಜನರ ಸಮಸ್ಯೆಗಳನ್ನು ಚರ್ಚೆ ನಡೆಸುವುದಕ್ಕೆ ಅವಕಾಶವಿಲ್ಲವೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Write A Comment