ಕರ್ನಾಟಕ

ಇಂದು ರಾಘವೇಶ್ವರಶ್ರೀ ವಿರುದ್ಧ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ

Pinterest LinkedIn Tumblr

Raghaveshwara_ಬೆಂಗಳೂರು, ಸೆ.25: ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ತನಿಖಾ ಹಂತದಲ್ಲಿಯೇ ನನೆಗುದಿಗೆ ಬಿದ್ದಿದ್ದು, ಕೇಂದ್ರ ಮಹಿಳಾ ಆಯೋಗ ತರಾಟೆಗೆ ತೆಗೆದು ಕೊಂಡ ಬಳಿಕ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಸುಮಾರು 680 ಪುಟಗಳ ಆರೋಪ ಪಟ್ಟಿಯನ್ನು ಸಿದ್ಧಪಡಿಸಿರುವ ಸಿಐಡಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ದೂರಿನಲ್ಲಿನ ಅಂಶಗಳನ್ನು ಪರಿಗಣಿಸಿ ಪೊಲೀಸರು ಸುಮಾರು 48 ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ, ರಾಘವೇಶ್ವರ ಶ್ರೀಗಳ ಫೋನ್ ಕರೆಗಳ ಪಟ್ಟಿ ಹಾಗೂ ಸಂಭಾಷಣೆ, ದಾಖಲಾತಿ ಪುಸ್ತಕಗಳಲ್ಲಿನ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಸಂಬಂಧ ಸಿಐಡಿ ಪೊಲೀಸರು ಕಾನೂನು ತಜ್ಞರ ಸಲಹೆಯನ್ನು ಪಡೆದಿದ್ದು, ಕಾನೂನು ತಜ್ಞರು ಚಾರ್ಜ್‌ಶೀಟ್ ಸಲ್ಲಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಂತ್ರಸ್ಥೆಯ ಮೇಲೆ ರಾಘವೇಶ್ವರ ಶ್ರೀಗಳು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪಕ್ಕೆ ಸಾಕ್ಷಗಳು ಲಭ್ಯವಾಗಿವೆ. ಸಂತ್ರಸ್ತೆಯ ಒಳ ಉಡುಪಿನ ಮೇಲೆ ಶ್ರೀಗಳ ವೀರ್ಯ ಪತ್ತೆಯಾಗಿರುವುದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ತಿಳಿದು ಬಂದಿದ್ದು, ರಾಘವೇಶ್ವರ ಶ್ರೀಗಳು ಅತ್ಯಾಚಾರ ಮಾಡಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ.
ಅಂತೆಯೇ ರಾಮಚಂದ್ರಾಪುರ ಮಠದ ಭಕ್ತರಿಂದ ಪ್ರಕರಣದ ಸಂಬಂಧ ಮಾಹಿತಿ ಕಲೆಹಾಕಲಾಗಿದೆ. ಈ ಸಾಕ್ಷಿಗಳ ಪ್ರಕಾರ ಶ್ರೀಗಳ ಕೊಠಡಿಗೆ ಸಂತ್ರಸ್ತೆ ಆಗಾಗ ಹೋಗುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

Write A Comment