ಕರ್ನಾಟಕ

ಮಾನ್ಯತಾ ಟೆಕ್‌ಪಾರ್ಕ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Pinterest LinkedIn Tumblr

manyataಬೆಂಗಳೂರು, ಅ.8- ರಾಜ ಕಾಲುವೆ ಒತ್ತುವರಿ ಮಾಡಿ ಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮೇಯರ್ ಮಂಜುನಾಥ್ ರೆಡ್ಡಿ ತಿಳಿಸಿದರು. ವಸಂತನಗರ ವಾರ್ಡ್‌ನಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸ ಲಾಗಿರುವ ವಾಣಿಜ್ಯ ಸಮುಚ್ಛಯವನ್ನು ಉದ್ಘಾಟಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಮಾನ್ಯತಾ ಟೆಕ್‌ಪಾರ್ಕ್‌ನವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಿಲ್ಲ. ಹೀಗಾಗಿಯೇ ಇಂದು ಪ್ರಕಾಶ್ ಎಂಬ ಬಾಲಕ ರಾಜಕಾಲುವೆಯಲ್ಲಿ ಕೊಚ್ಚಿಹೋದ ಪ್ರಕರಣ ನಡೆದಿದೆ. ಮಾನ್ಯತಾ ಟೆಕ್‌ಪಾರ್ಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸೂಚಿಸಲಾಗಿದೆ ಎಂದರು.

ಟೆಕ್‌ಪಾರ್ಕ್‌ನವರು ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಯನ್ನು ಈ ಕೂಡಲೇ ತೆರವುಗೊಳಿಸಲು ಸೂಚಿಸಿದ್ದೇವೆ. ಇದರ ಜತೆಗೆ ನಗರದಲ್ಲಿ ಒತ್ತುವರಿ ಯಾಗಿರುವ ಎಲ್ಲ ರಾಜಕಾಲುವೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಆಯಾ ವಾರ್ಡ್‌ಗಳಲ್ಲಿ ಚರಂಡಿ ವ್ಯವ್ಥೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿರುವುದು ಕಂಡುಬಂದಿದೆ. ಇನ್ನು ಮುಂದೆ ಯಾವುದೇ ಚರಂಡಿಗಳಲ್ಲಿ ಅನಾಹುತ, ಪ್ರಾಣಹಾನಿ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟ ಬಾಲಕ ಪ್ರಕಾಶ್ ಕುಟುಂಬ ವರ್ಗದವರಿಗೆ ಮಾನ್ಯತಾ ಟೆಕ್‌ಪಾರ್ಕ್ ವತಿಯಿಂದಲೇ ಪರಿಹಾರ ಕೊಡಿಸುವುದಾಗಿ ಮೇಯರ್ ಅವರು ಭರವಸೆ ನೀಡಿದರು.

ಇದಕ್ಕೂ ಮುನ್ನ ವಾಣಿಜ್ಯ ಸಮುಚ್ಛಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೇಯರ್ ಅವರು, 60 ಲಕ್ಷ ರೂ. ವೆಚ್ಚದಲ್ಲಿ 32 ಮಳಿಗೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಮಳಿಗೆಗಳಿಗೂ 6 ಸಾವಿರ ರೂ. ಬಾಡಿಗೆ ನಿಗದಿಪಡಿಸ ಲಾಗಿದೆ. ಈ ಸಮುಚ್ಛಯದಲ್ಲಿ ಬೆಂಗಳೂರು ಒನ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಸಮಾರಂಭದಲ್ಲಿ ಸಚಿವ ರೋಷನ್‌ಬೇಗ್, ಸಂಸದ ಪಿ.ಸಿ.ಮೋಹನ್, ಸ್ಥಳೀಯ ಪಾಲಿಕೆ ಸದಸ್ಯ ವಸಂತ್‌ಕುಮಾರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Write A Comment