ಕರ್ನಾಟಕ

ಜಲಾಶಯಗಳಲ್ಲಿ ಕುಸಿಯುತ್ತಿರುವ ನೀರಿನ ಪ್ರಮಾಣ

Pinterest LinkedIn Tumblr

Dam-sಬೆಂಗಳೂರು, ಆ.30- ಕಾವೇರಿ ನದಿ ನೀರು ಹಂಚಿಕೆಗಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ತಿಕ್ಕಾಟ ನಡೆಯುತ್ತಿರುವ ಬೆನ್ನಲ್ಲೆ ಕಾವೇರಿ ಜಲಾನಯನ ಭಾಗದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯತೊಡಗಿದೆ. ಮುಂಗಾರು ಅವಧಿಯಲ್ಲೇ ಜಲಾನಯನ ಭಾಗದ ನಾಲ್ಕೂ ಜಲಾಶಯಗಳು ಭರ್ತಿಯಾಗದೆ ಖಾಲಿಯಾಗತೊಡಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೆಆರ್ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಒಳಹರಿವು ಇಳಿಮುಖವಾಗುತ್ತಿದೆ. ಸೆಪ್ಟೆಂಬರ್ನಲ್ಲೂ ಜಲಾಶಯಗಳಿಗೆ ನೀರು ತರುವಂತಹ ಉತ್ತಮ ಮಳೆಯಾಗುವ ನಿರೀಕ್ಷೆ ಇಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರೂ ಹೊರ ಹರಿವು ಮಾತ್ರ ನಿಂತಿಲ್ಲ. ಕೆಆರ್ಎಸ್ನಿಂದ ನಿತ್ಯ 9 ಸಾವಿರ ಕ್ಯೂಸೆಕ್ಸ್ಗೂ ಅಧಿಕ ನೀರು ಹರಿದು ಹೋಗುತ್ತಿದೆ. ಅದೇ ರೀತಿ ಕಬಿನಿಯಲ್ಲಿ 4 ಸಾವಿರ ಕ್ಯೂಸೆಕ್ಸ್ಗೂ ಹೆಚ್ಚು ನೀರು ಹರಿದು ಹೋಗುತ್ತಿದೆ. ಒಟ್ಟಾರೆ ಈ ಎರಡೂ ಜಲಾಶಯಗಳಿಂದ 14 ಲಕ್ಷ ಕ್ಯೂಸೆಕ್ಸ್ಗೂ ಹೆಚ್ಚು ನೀರು ಹರಿದು ಹೋಗುತ್ತಿದೆ. ಈಗಾಗಲೇ ಬೇಸಾಯಕ್ಕೆ ನೀರು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕುಡಿಯುವ ನೀರಿಗೆ ಮಾತ್ರ ಜಲಾಶಯಗಳ ನೀರನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಆದರೂ ಇಷ್ಟೊಂದು ಪ್ರಮಾಣದ ನೀರು ಹರಿದು ಹೋಗುತ್ತಿರುವುದು ರೈತ ಸಮುದಾಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕೆಆರ್ಎಸ್ನಲ್ಲಿ ನೀರಿನ ಮಟ್ಟ ಏರಿಕೆಯಾಗುವ ಬದಲು ದಿನದಿಂದ ದಿನಕ್ಕೆ ಇಳಿಕೆಯಾಗತೊಡಗಿದೆ. 92 ಅಡಿಗೆ ನೀರಿನ ಮಟ್ಟ ಮಳೆಗಾಲದಲ್ಲಿಯೇ ಇಳಿಕೆಯಾಗಿದೆ. ಉಳಿದ ಮೂರೂ ಜಲಾಶಯಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆಗಸ್ಟ್ ಅಂತ್ಯದವರೆಗೆ 75 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಆಗ್ರಹಿಸಿ ಇಂದು ತಮಿಳುನಾಡು ಬಂದ್ ನಡೆಸಲಾಗಿದೆ.
ಈಗಾಗಲೇ 50 ಟಿಎಂಸಿ ಅಡಿ ನೀರು ಬಿಡಲು ಕರ್ನಾಟಕಕ್ಕೆ ಆದೇಶಿಸಬೇಕೆಂದು ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ನಡುವೆ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಸರ್ಕಾರ ಪದೇ ಪದೇ ಪುನರುಚ್ಚರಿಸುತ್ತಾ ಬಂದಿದೆ.
ಹೀಗಾಗಿ ಉಭಯ ರಾಜ್ಯಗಳ ನೀರಿನ ಸಂಘರ್ಷ ಮುಗಿಯುವ ಲಕ್ಷಣಗಳಿಲ್ಲ. ಕುಡಿಯುವ ನೀರಿಗಾಗಿ ಬೇಸಿಗೆಯಲ್ಲಿ ಪರದಾಡಬೇಕಾಗುತ್ತದೆಯೋ ಎಂಬ ಆತಂಕ ಈಗಲೇ ಕಾಡತೊಡಗಿದೆ.

Comments are closed.