ಮನೋರಂಜನೆ

ಮೇರಿ ಕೋಮ್ ಫೈನಲ್‌ಗೆ

Pinterest LinkedIn Tumblr

Mary_Kom

ಇಂಚೋನ್, ಸೆ.30: ಏಷ್ಯನ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಬಾಕ್ಸರ್ ಮೇರಿ ಕೋಮ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಇಂದು ಇಲ್ಲಿ ನಡೆದ ವನಿತೆಯರ ಫ್ಲೈವೇಟ್(48-51ಕೆಜಿ) ವಿಭಾಗದ ಸೆಮಿಫೈನಲ್‌ನಲ್ಲಿ 31 ರ ಹರೆಯದ ಮಣಿಪುರದ ಬಾಕ್ಸರ್ ಮೇರಿ ಕೋಮ್ ವಿಯೆಟ್ನಾಂನ ಲೆ ಥಿ ಬಾಂಗ್ ಅವರನ್ನು 3-0 ಅಂತರದಿಂದ ಮಣಿಸಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ವಿವಿಧ ಬಗೆಯ ಪಂಚ್‌ನ ಮೂಲಕ ಎದುರಾಳಿ ಬಾಕ್ಸರ್ ತಲೆ ಎತ್ತದಂತೆ ನೋಡಿಕೊಂಡರು.

ಸತೀಶ್, ವಿಕಾಸ್ ಉಪಾಂತ್ಯಕ್ಕೆ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಸತೀಶ್ ಕುಮಾರ್ ಹಾಗೂ ವಿಕಾಸ್ ಕೃಷ್ಣನ್ ಸೆಮಿಫೈನಲ್‌ಗೆ ತಲುಪಿದ್ದಾರೆ. ಮಂಗಳವಾರ ಇಲ್ಲಿ ನಡೆದ ಸೂಪರ್ ಹೇವಿ ವೇಟ್ ವಿಭಾಗ(+91 ಕೆಜಿ)ದಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸತೀಶ್ ಕುಮಾರ್ ಜೋರ್ಡನ್‌ನ ಹುಸೈನ್ ಇಶೈಶ್ ಅವರನ್ನು 2-1 ಅಂತರದಿಂದ ಸೋಲಿಸಿದ್ದಾರೆ.
ಸತೀಶ್ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕಝಕಿಸ್ತಾನದ ಇವಾನ್ ಡೈಚೊ ಅವರನ್ನು ಎದುರಿಸಲಿದ್ದಾರೆ. ಪುರುಷರ ಮಿಡ್ಲ್‌ವೇಟ್(75ಕೆಜಿ)ನಲ್ಲಿ ಉಜ್ಬೇಕಿಸ್ತಾನದ ಹ್ಯೂರಿಶಿಡಾಕ್ಕ್ ನಾರ್ಮಟೊವ್‌ರನ್ನು 3-0 ಅಂತರದಿಂದ ಮಣಿಸಿದ ವಿಕಾಸ್ ಕೃಷ್ಣನ್ ಸೆಮಿಫೈನಲ್‌ಗೆ ತಲುಪಿದ್ದಾರೆ. ಇದಕ್ಕೂ ಮೊದಲು 56 ಕೆಜಿ ಬಾಟಮ್‌ವೇಟ್ ವಿಭಾಗದಲ್ಲಿ ಭಾರತದ ಶಿವ ಥಾಪ ಫಿಲಿಪ್ಪೈನ್ಸ್‌ನ ಮಝರಿಯೊ ಫೆರ್ನಾಂಡಿಸ್ ಅವರ ವಿರುದ್ಧ 0-3 ಅಂತರದಿಂದ ಸೋತರು.

ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಎಲ್. ದೇವೇಂದ್ರೊ ಸಿಂಗ್ ಅವರು ಪುರುಷರ ಲೈಟ್ ಫ್ಲೈ(46-49 ಕೆಜಿ) ವಿಭಾಗದಲ್ಲಿ ದಕ್ಷಿಣ ಕೊರಿಯಾದ ಜಾಂಗುನ್ ಶಿನ್ ವಿರುದ್ಧ 2-0 ಅಂತರದಿಂದ ಸೋತಿದ್ದಾರೆ.

Write A Comment