ಮನೋರಂಜನೆ

‘ಅಗಸಿ ಪಾರ್ಲರ್‌’: ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಹೃದಯರ ಮೆಚ್ಚುಗೆ

Pinterest LinkedIn Tumblr

crec19agasi-parlor1

‘ಅಗಸಿ ಪಾರ್ಲರ್‌’ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಸಹೃದಯರ ಮೆಚ್ಚುಗೆ ಗಳಿಸುವುದರ ಜೊತೆಗೆ, ಜೂರಿಗಳ ಮೆಚ್ಚುಗೆಯ ವಿಶೇಷ ಪ್ರಶಸ್ತಿಯನ್ನೂ ಪಡೆದ ಸಿನಿಮಾ. ಆದರೆ, ಈ ಸಿನಿಮಾದ ನಿರ್ದೇಶಕ ಮಹಾಂತೇಶ್‌ ರಾಮದುರ್ಗ ಅವರಿಗೆ ತಮ್ಮ ಕನಸನ್ನು ಚಿತ್ರದ ರೂಪಕ್ಕೆ ತರುವುದು ಸುಲಭದ ವಿಷಯವೇನೂ ಆಗಿರಲಿಲ್ಲ. ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಹೋರಾಡುವ ಕಥಾನಾಯಕನಂತೆ, ಮಹಾಂತೇಶ್‌ ಕೂಡ ತಮ್ಮ ಕನಸು ನನಸು ಮಾಡಿಕೊಳ್ಳಲು ಕಷ್ಟಪಡಬೇಕಾಯಿತು.

ಕಥೆ, ಚಿತ್ರಕಥೆ ಸಿದ್ಧಪಡಿಸಿಟ್ಟುಕೊಂಡಿದ್ದ ಮಹಾಂತೇಶ್‌ ಅವರಿಗೆ ನಿರ್ಮಾಪಕರು ಸಿಗಲಿಲ್ಲ. ಆಗ ಅವರಿಗೆ ಹೊಳೆದದ್ದು, ರಂಗಭೂಮಿಯ ತಮ್ಮ ನಂಟನ್ನು ನಿರ್ಮಾಪಕರ ಹುಡುಕಾಟಕ್ಕೆ ಬಳಸಿಕೊಳ್ಳುವ ಉಪಾಯ. ನಾಟಕದ ನೆಪದಲ್ಲಿ ಊರೂರು ತಿರುಗುವಾಗ ಅಲ್ಲಿನ ಸಿರಿವಂತರನ್ನು ಬಂಡವಾಳ ಹೂಡುವಂತೆ ಮನವೊಲಿಸುವ ಹಾಗೂ ಅವರಿಗೊಂದು ಪಾತ್ರವನ್ನೂ ನೀಡುವ ಉಪಾಯವದು. ಹೀಗೆ ಹತ್ತಾರು ಊರುಗಳ ಸಿರಿವಂತರಿಂದ ತಲಾ ಒಂದೆರಡು ಲಕ್ಷ ರೂಪಾಯಿ ಸಂಗ್ರಹಿಸಿ ಸಿನಿಮಾಕ್ಕೆ ಬೇಕಾದ ಹಣ ಒಟ್ಟುಗೂಡಿಸುವ, ‘ಕ್ರೌಡ್‌ ಫಂಡಿಂಗ್‌’ನ ಇನ್ನೊಂದು ರೂಪದಂತಿರುವ ಯೋಜನೆ ಇದು. ಅವರ ಗುರಿ ಯಶಸ್ವಿಯಾಗುವ ಲಕ್ಷಣಗಳೂ ಕಂಡುಬಂದಿದ್ದವು. ಆದರೆ ಅದಕ್ಕೂ ಮೊದಲೇ ನಾಟಕದ ಗೆಳೆಯ ಕೆ. ಶಿವಮೂರ್ತಿ ಹಣ ಹೂಡಲು ಮುಂದೆ ಬಂದರು.

ಅಂದಹಾಗೆ, ‘ಅಗಸಿ ಪಾರ್ಲರ್‌’ ಚಿತ್ರದ ಕಥೆ ಆಧುನಿಕತೆಯ ತೆಕ್ಕೆಯೊಳಗೆ ನಿಧಾನವಾಗಿ ಸಿಲುಕಿಕೊಳ್ಳುತ್ತಿರುವ ಹಳ್ಳಿಯೊಂದರಲ್ಲಿನ ಕ್ಷೌರಿಕನ ಬದುಕಿಗೆ ಸಂಬಂಧಿಸಿದ್ದು. ಊರಲ್ಲಿ ಇರುವ ಏಕೈಕ ಕ್ಷೌರದ ಅಂಗಡಿ ಮಾಲೀಕನಾತ. ಮಗ ಮನೆ ಬಿಟ್ಟು ಓಡಿಹೋದವನಾದರೆ, ಮಗಳು ಗಂಡನನ್ನು ಬಿಟ್ಟು ತವರಿಗೆ ಮರಳಿದವಳು. ಸಾಹುಕಾರನ ಸಾಲ ಒಂದೆಡೆಯಾದರೆ, ತನ್ನ ಮನೆ ಹಿತ್ತಲಲ್ಲಿ ಮೊಬೈಲ್‌ ಫೋನ್ ಟವರ್‌ ಹಾಕುವ ವಿಚಾರದಲ್ಲಿ ಉಭಯ ಸಂಕಟಕ್ಕೆ ಸಿಲುಕುವ ಆತನ ಬದುಕನ್ನು ಕಸಿದುಕೊಳ್ಳುವುದು ಆಧುನಿಕ ಸೌಲಭ್ಯಗಳೊಂದಿಗೆ ಪ್ರಾರಂಭವಾಗುವ ಬ್ಯೂಟಿ ಪಾರ್ಲರ್‌. ಮುಗ್ಧ ಕ್ಷೌರಿಕನ ತೊಳಲಾಟ, ಸಂಕಷ್ಟದಲ್ಲಿಯೂ ಬಿಡದ ಸ್ವಾಭಿಮಾನ, ಬದುಕಿನ ಆಕಸ್ಮಿಕ ಪಲ್ಲಟಗಳು– ಹೀಗೆ ಹಲವು ಭಾವ ಸ್ಥಿತ್ಯಂತರಗಳನ್ನು ‘ಅಗಸಿ ಪಾರ್ಲರ್‌’ ಹೃದ್ಯವಾಗಿ ಕಟ್ಟಿಕೊಡುತ್ತದೆ.

ಮಹಾಂತೇಶ್‌ ಬೆಳಗಾವಿಯ ರಾಮದುರ್ಗದವರು. ಊರಿನಲ್ಲಿ ನಿರಂತರವಾಗಿ ನಡೆಯುತ್ತಿದ್ದ ನಾಟಕಗಳಿಂದಾಗಿ ಬಾಲ್ಯದಲ್ಲಿಯೇ ರಂಗಭೂಮಿಯತ್ತ ಸೆಳೆತ.  ಪಿಯುಸಿಯಲ್ಲಿದ್ದಾಗ ಕಂಡ ‘ನೀನಾಸಂ’ನ ಜಾಹೀರಾತು ಅವರ ದಿಕ್ಕು ಬದಲಿಸಿತು. ಒಂದು ವರ್ಷ ವಿದ್ಯಾರ್ಥಿಯಾಗಿ, ಎರಡು ವರ್ಷ ‘ತಿರುಗಾಟ’ದ ಸಂಗಡ ಊರೂರು ಸುತ್ತಿದರು.

‘ಅವಸ್ಥೆ’, ‘ರಾಜ–ರಾಣಿ’, ‘ದ್ಯಾವನೂರು’, ‘ಆ ಮನಿ’ ಮುಂತಾದ ನಾಟಕಗಳಿಗೆ ಬಣ್ಣಹಚ್ಚಿದರು. ಮರಳಿ ಊರಿನ ಹಾದಿ ಹಿಡಿದು ನಾಟಕದ ನಿರ್ದೇಶನಕ್ಕಿಳಿದರು. ಧಾರವಾಡದಲ್ಲಿ ಜಿ.ಬಿ. ಜೋಶಿ ಅವರ ‘ಕದಡಿದ ನೀರು’ ನಾಟಕದ ವೇಳೆ ಏಣಗಿ ನಟರಾಜ್‌ ಕಣ್ಣಿಗೆ ಬಿದ್ದರು. ಧಾರಾವಾಹಿ ಮಾಡುವ ತುಡಿತದಲ್ಲಿದ್ದ ಏಣಗಿ, ಮಹಾಂತೇಶ್‌ರನ್ನು ತಮ್ಮ ಜತೆ ಸೇರಿಸಿಕೊಂಡರು. ಏಣಗಿಯವರ ಜತೆ ಒಂದು ವರ್ಷ ಕೆಲಸ ಮಾಡಿದ ಮಹಾಂತೇಶ್‌, ನಂತರ ಬೆಂಗಳೂರಿನತ್ತ ಮುಖ ಮಾಡಿದರು. ಕಿರುತೆರೆ, ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಗೇಯ್ಮೆ ಮಾಡಿದರು. ಈ ಕೆಲಸ ಹೊಟ್ಟೆಪಾಡಿಗೂ ನೆರವಾಗಲಿಲ್ಲ. ಹಿಂದಿನದೇ ಸರಿ ಎನಿಸಿ ನಾಟಕದ ಹಾದಿಗೆ ಮರಳಿದರು. ಈ ಹಾದಿಯಲ್ಲಿ ಸಾಗುವಾಗಲೇ ‘ಅಗಸಿ ಪಾರ್ಲರ್‌’ ಸಿದ್ಧವಾಗಿದ್ದು.

‘ಅಗಸಿ ಪಾರ್ಲರ್‌’ನ ವಸ್ತು ಮತ್ತು ಪಾತ್ರಗಳು ಅವರ ಸುತ್ತಲಿನ ಜೀವನದಿಂದಲೇ ಹುಟ್ಟಿದ್ದು. ‘ಅತ್ಯಂತ ಸಾಂಪ್ರದಾಯಿಕ ಊರು ನಮ್ಮದು. ಹೆಚ್ಚಿನ ಪ್ರಮಾಣದ ಕೈಮಗ್ಗ ನೇಕಾರರು ಇರುವ ಊರು. ವಿದ್ಯುತ್‌ ಮಗ್ಗ ಬಂದ ಬಳಿಕ ಕೈಮಗ್ಗದವರ ಬದುಕು ತಲ್ಲಣಗೊಂಡಿತು. ಮದುವೆಯಾಗಿ ನಮ್ಮೂರಿಗೆ ಬಂದ ಮಹಿಳೆಯೊಬ್ಬರು ಲೇಡೀಸ್‌ ಬ್ಯೂಟಿ ಪಾರ್ಲರ್‌ ಪ್ರಾರಂಭಿಸಿದರು.

ಕದ್ದುಮುಚ್ಚಿ ಎಲ್ಲರೂ ಅಲ್ಲಿಗೆ ಹೋಗಲಾರಂಭಿಸಿದರು. ಇದೆಲ್ಲವೂ ಕಣ್ಣೆದುರು ಘಟಿಸಿದವು. ಸಾತ್ವಿಕವಾಗಿ ಬದುಕು ಕಟ್ಟಿಕೊಳ್ಳಲು ಬಯಸುವ ಮನುಷ್ಯ ಅದಕ್ಕೆ ಪರ್ಯಾಯವಾದದ್ದೊಂದು ಬಂದಾಗ ಅದನ್ನು ಒಪ್ಪಿಕೊಳ್ಳಬೇಕೊ ಅಥವಾ ವಿರೋಧಿಸಬೇಕೊ ಎಂಬ ಗೊಂದಲದಲ್ಲಿ ಸಿಲುಕುತ್ತಾನೆ. ಅಂತಹ ಸನ್ನಿವೇಶಗಳೇ ‘ಅಗಸಿ ಪಾರ್ಲರ್‌’ ಸೃಷ್ಟಿಗೆ ಸ್ಫೂರ್ತಿಯಾದವು’ ಎಂದು ಮಹಾಂತೇಶ್‌ ಚಿತ್ರದ ಹುಟ್ಟಿನ ಬಗೆಯನ್ನು ತೆರೆದಿಡುತ್ತಾರೆ.

ಕಥೆಗೆ ಪೂರಕವಾದ ಚಿತ್ರೀಕರಣದ ಸ್ಥಳ ಸಿಕ್ಕಿದ್ದು ಗದಗದ ಲಕ್ಷ್ಮೇಶ್ವರದ ಬಳಿಯ ಯಡವತ್ತಿ ಎಂಬ ಊರಿನಲ್ಲಿ. ಯಡವತ್ತಿ ಶಿಶುನಾಳ ಷರೀಫರು, ನಿಜಲಿಂಗ ಯೋಗಿಗಳು ರಿಯಾಜ್‌ ಮಾಡಿದ ಸ್ಥಳ. ಅಲ್ಲಿನ ಆಧ್ಮಾತ್ಮಿಕ ವಾಸನೆ ನಮ್ಮ ಅನುಭವಕ್ಕೂ ದಕ್ಕುತ್ತಿತ್ತು ಎಂದು ಮಹಾಂತೇಶ್‌ ಹೇಳುತ್ತಾರೆ.

‘ಬಣ್ಣದ ಬದುಕಿನಲ್ಲಿ ನನ್ನ ತಾಂತ್ರಿಕ ಗುರು ಏಣಗಿ ನಟರಾಜ್‌’ ಎನ್ನುವ ಮಹಾಂತೇಶ್‌, ಸಿನಿಮಾ ವ್ಯಾಕರಣ ಕಲಿತದ್ದು ವ್ಯಾಪಾರಿ ಸಿನಿಮಾದ ಜತೆಯಲ್ಲಿ ಆದರೂ ಆಲೋಚಿಸುವುದು ರಂಗಭೂಮಿ, ಓದಿನ ಹಿನ್ನೆಲೆಯಲ್ಲಿ. ನಿಮ್ಮದು ಕಲಾತ್ಮಕ ಚಿತ್ರ ಎಂದು ಹಲವರು ಹೇಳುವಾಗ ಅವರಿಗೆ ಇರುಸುಮುರುಸುಂಟಾಗುತ್ತದೆ. ಏಕೆಂದರೆ ಈ ಚಿತ್ರಕ್ಕೆ ನಾವು ರೊಕ್ಕ ಹಾಕಿರುವುದರಿಂದ ಇದೂ ವ್ಯಾಪಾರಿ ಸಿನಿಮಾ. ಹಾಕಿದ ರೊಕ್ಕ ಹಿಂದಕ್ಕೆ ಪಡೆಯಬೇಕು ಎನ್ನುವುದರಲ್ಲಿ ವ್ಯಾಪಾರಿತನವಿದೆ. ನಾವು ಅದನ್ನು ಬಿಂಬಿಸುವ ಮಾಧ್ಯಮ ಚೌಕಟ್ಟನ್ನು ಕಡಿಮೆ ಮಾಡಿಕೊಂಡಿದ್ದೇವಷ್ಟೇ ಎನ್ನುತ್ತಾರೆ ಅವರು.

ಚಿತ್ರೋತ್ಸವದಲ್ಲಿ ದೊರೆತ ಪ್ರಶಸ್ತಿ ಅವರಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆಯಂತೆ. ಇನ್ನಷ್ಟು ಸೃಜನಶೀಲತೆಯಿಂದ ಆಲೋಚಿಸಲು ಸ್ಫೂರ್ತಿಯಾಗಿದೆ. ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಹೋಗಿದ್ದು, ಅವರಿಂದ ಬಂದ ಪ್ರತಿಕ್ರಿಯೆಗಳು ಅವರಿಗೆ ವಿಶಿಷ್ಟ ಅನುಭವ ನೀಡಿದೆ. ರಾಷ್ಟ್ರಪ್ರಶಸ್ತಿ ಮತ್ತು ಪನೋರಮಾಗಳಲ್ಲಿಯೂ ಪ್ರಶಸ್ತಿ ದೊರಕಬೇಕಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಈ ಚಿತ್ರೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ ಪ್ರಶಸ್ತಿ ಖಚಿತ ಎಂಬ ನಿರೀಕ್ಷೆ ಇತ್ತು ಎನ್ನುವ ಅವರು, ಕಲಾತ್ಮಕ ಚಿತ್ರವರ್ಗದಲ್ಲಿ ಹೊಸ ಬದಲಾವಣೆ ಆಗುತ್ತಿದೆ ಎಂದು ಸಂತಸದಿಂದ ಹೇಳುತ್ತಾರೆ. ಸ್ಪರ್ಧೆಯಲ್ಲಿ ಪೈಪೋಟಿ ಇತ್ತು. ಹೊಸಬರಿಂದ ತಯಾರಾದ ಒಳ್ಳೆಯ ಸಿನಿಮಾಗಳಿದ್ದವು. ಮಿಗಿಲಾಗಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಆನಂದಿಸಿದವರು ಯುವ ಜನರು. ಈ ಪೀಳಿಗೆ ಹೊಸತನ್ನು ಹುಡುಕುತ್ತಿದೆ, ಭಾಷೆಯನ್ನೂ ಮೀರಿ ಯಾವುದೋ ಹೊಸತನಕ್ಕೆ ತುಡಿಯುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ವಿಶ್ಲೇಷಿಸುತ್ತಾರೆ.

ಫೆಬ್ರುವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಇರಾದೆ ಅವರದು. ಊರೂರಿಗೆ ಸಿನಿಮಾ ಕೊಂಡೊಯ್ದು ಪ್ರದರ್ಶಿಸಿ ಹಣ ಸಂಗ್ರಹಿಸುವ ಯೋಜನೆಯೂ ಇದೆ. ಹಲವು ಕಥೆಗಳನ್ನು ಸಿದ್ಧಪಡಿಸಿಕೊಂಡಿರುವ ಅವರು ಮತ್ತೆ ನಿರ್ಮಾಪಕರ ಹುಡುಕಾಟಕ್ಕಿಳಿಯಲಿದ್ದಾರೆ. ಅದರ ನಡುವೆಯೇ ಒಂದೆರಡು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತಿದೆ. ನೀನಾಸಂ ಸತೀಶ್‌ ನಿರ್ಮಾಣ, ನಟನೆಯ ‘ರಾಕೆಟ್‌’ನಲ್ಲಿ ಒಂದು ಮುಖ್ಯ ಪಾತ್ರ ಅವರದು.

Write A Comment