ಮನೋರಂಜನೆ

ನಟಿ ಕೇವಲ ಮಾರುಕಟ್ಟೆ ಸರಕು: ನಂದಿತಾ ದಾಸ್‌

Pinterest LinkedIn Tumblr

psmec17nandithadas2-CutNew

-ಅನಿತಾ ಈ.
ನಟಿ, ನಿರ್ದೇಶಕಿ, ಸಾಮಾಜಿಕ ಕಾರ್ಯಕರ್ತೆ ಹೀಗೆ ನಾನಾ ಕ್ಷೇತ್ರಗಳಲ್ಲಿ  ತೊಡಗಿಸಿಕೊಂಡಿರುವ ಕೃಷ್ಣ ಸುಂದರಿ ನಂದಿತಾ ದಾಸ್‌. ಅಪರಾಂಜೆ ಜ್ಯೂವೆಲ್ಲರಿ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಂದಿತಾ ನಗರಕ್ಕೆ ಬಂದಿದ್ದರು. ‘ನನಗೆ ಕನ್ನಡ ಗೊತ್ತಿಲ್ಲ’ ಎನ್ನುತ್ತಾ ಮಾತಿಗಿಳಿದ ಇವರು  ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕಾಲೇಜಿನಲ್ಲಿ ಓದುವಾಗ ಮೊದಲ ಬಾರಿಗೆ ಕೇವಲ ತನ್ನ ಖುಷಿಗಾಗಿ ಕಲಾತ್ಮಕ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶಿಸಿದ ನಂದಿತಾ, ಅವರ ಅಭಿನಯ ಕೌಶಲಕ್ಕೆ ಹಲವಾರು ಪ್ರಶಸ್ತಿಗಳು ಸಂದಿವೆ. ಹಿಂದಿಯ ‘ಅರ್ಥ್‌’, ‘ಫಿರಾಕ್‌’,  ಕನ್ನಡದ ‘ದೇವೀರಿ’, ಇಂಗ್ಲಿಷ್‌ನ ‘ಫೈರ್‌’, ತೆಲುಗಿನ ‘ಕಮಲಿ’ ಸೇರಿದಂತೆ ತಮಿಳು, ಬಂಗಾಳಿ, ಒರಿಯಾ ಭಾಷೆಯ ಚಿತ್ರಗಳಲ್ಲಿ ಅವರು ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ.

ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದು ತುಂಬಾ ಕಡಿಮೆಯಾಗಿದೆಯಲ್ಲವೇ?
ಸದ್ಯಕ್ಕೆ ನಾನು ನಿರ್ದೇಶನ ಮಾಡುವತ್ತ ಹೆಚ್ಚಿನ ಗಮನ ವಹಿಸುತ್ತಿದ್ದೇನೆ. ಯಾವುದಾದರೂ ಅವಕಾಶ ಸಿಕ್ಕರೆ ನಿರ್ದೇಶನ ಮಾಡಲು ಸಿದ್ಧ. ಸದ್ಯಕ್ಕೆ  ಒಂದು ಚಿತ್ರಕ್ಕೆ ಕಥೆಯನ್ನೂ ಬರೆಯುತ್ತಿದ್ದೇನೆ. ಸಾಕಷ್ಟು ಅಭಿನಯದ ಅವಕಾಶ ಬರುತ್ತಿದ್ದರೂ ಕಥೆ ಬರೆಯವುದರಲ್ಲಿ ನಿರತಳಾಗಿರುವ ಕಾರಣ ಅಭಿನಯಿಸಲು ಸಮಯದ ಕೊರತೆ ಆಗುತ್ತಿದೆ.

ಮುಂದಿನ ಯೋಜನೆಗಳೇನು?
ಆಸ್ಟ್ರೇಲಿಯಾದ ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಚಿತ್ರ ಭಾರತದ ಮಹಿಳೆ ಹಾಗೂ ಆಸ್ಟ್ರೇಲಿಯಾದ ಮೂಲ ಆದಿವಾಸಿಗಳ ಸುತ್ತ ನಡೆಯಲಿದೆ. ಮೊದಲು ಈ ಅವಕಾಶ ಬಂದಾಗ ನಾನು ಅದನ್ನು ನಿರಾಕರಿಸಿದ್ದೆ. ಕಾರಣ ಆಗ ಸಾದತ್‌ ಹಸನ್‌ ಅವರ ಚಿತ್ರಕಥೆಯಲ್ಲಿ ಬ್ಯುಸಿಯಾಗಿದ್ದೆ. ಕೆಲಸ ಮುಗಿದ ನಂತರ ಮತ್ತೆ ಅದನ್ನು ಒಪ್ಪಿಕೊಂಡಿದ್ದೇನೆ. ಅದಕ್ಕಾಗಿ ಆಸ್ಟ್ರೇಲಿಯಾಗೂ ಭೇಟಿ ನೀಡಿ ಅಲ್ಲಿ ಅಧ್ಯಯನ ನಡೆಸಿ ಬಂದಿದ್ದೇನೆ.  ‌‌‌‌‌‌‌‌‌‌‌‌‌‌

ಕರಾಚಿಯ ಬರಹಗಾರ ಸಾದತ್‌ ಹಸನ್‌ ಮಾಂಟೊ ಅವರನ್ನು ಕುರಿತಂತೆ ಒಂದು ಚಿತ್ರವನ್ನು ನಿರ್ದೇಶಿಸಲಿದ್ದೇನೆ. ಅವರ ಜೀವನದ ಪ್ರಮುಖ ಭಾಗಗಳು ಹಾಗೂ ಘಟನೆಗಳನ್ನು ಆಧರಿಸಿ ಈ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಬಾಂಬೆ ಹಾಗೂ ಕರಾಚಿಯಲ್ಲಿ ಅವರು ಕಳೆದ ಹತ್ತು ವರ್ಷದ ಜೀವನನ್ನು ಇಲ್ಲಿ ಚಿತ್ರಿಸಲಾಗುತ್ತದೆ. ಅವರು ತಮ್ಮ ಬರಹಗಳಲ್ಲಿ ಹೆಚ್ಚಾಗಿ ಮಹಿಳೆಯರ ಬಗ್ಗೆ ಇದೆ. ಅದರಲ್ಲೂ ವೇಶ್ಯಾವಾಟಿಕೆ ನಡೆಸುವ ಮಹಿಳೆಯರ ಬಗ್ಗೆ ಬರೆದಿದ್ದಾರೆ. ಅವರು 400ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದಾರೆ.

ಈ ಚಿತ್ರದ ಕಥೆ ಬರೆಯುವ ಮುನ್ನ ನಾನು ಕರಾಚಿಗೆ ಭೇಟಿ ನೀಡಿದ್ದು, ಹಸನ್‌ ಅವರ ಮೂವರು ಹೆಣ್ಣು ಮಕ್ಕಳು ಹಾಗೂ ಅವರ ಸಂಬಂಧಿಕರನ್ನು ಭೇಟಿ ಮಾಡಿ ಬಂದಿದ್ದೇನೆ. ಈ ಚಿತ್ರವನ್ನು ಆದಷ್ಟು ಕರಾಚಿಯಲ್ಲಿ ಚಿತ್ರೀಕರಿಸಲು ಪ್ರತ್ನಿಸುತ್ತೇನೆ. ಈ ಚಿತ್ರಕ್ಕೆ ಮಾಂಟೊ ಎಂಬ ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ ಅದರ ಹಕ್ಕನ್ನು ಈಗಾಗಲೇ ಬಾಲಿವುಡ್‌ನ ನಿರ್ಮಾಪಕರೊಬ್ಬರು ಪಡೆದಿದ್ದಾರೆ.

ಬಾಲಿವುಡ್‌ನಲ್ಲಿ ಬಿಳಿ ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆಯೇ?
ಬಾಲಿವುಡ್‌ನ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಾಯಕಿ ಆಗಲು ಪರ್ಫೆಕ್ಟ್‌ ಬಾಡಿ, ಬಿಳಿ ಬಣ್ಣ, ಸುಂದರವಾದ ನಗು ಇದ್ದರೆ ಸಾಕು. ಪ್ರತಿಭೆ ಇಲ್ಲದಿದ್ದರೂ ಕೆಲವೊಮ್ಮೆ ನಡೆಯುತ್ತದೆ. ಹೀಗಾಗಿಯೇ ಕಪ್ಪಗಿರುವ ನಟಿಯರು ಬಾಲಿವುಡ್‌ಗೆ ಬಂದ ನಂತರ ಅವರೂ ಬಣ್ಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಆರಂಭಿಸುತ್ತಾರೆ. ಎಷ್ಟೇ ಬೆಳ್ಳಗಿರುವ ನಟಿಯರಿದ್ದರೂ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಾಯಕಿ ಕೇವಲ ಗ್ಲಾಮರ್ ಹಾಗೂ ಮಾರ್ಕೆಟಿಂಗ್‌ ವಸ್ತುವಾಗುತ್ತಾಳೆ. ಇಲ್ಲಿ ಕೇವಲ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಹೀಗಾಗಿಯೇ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಸ್ಟಾರ್‌ ಎನಿಸಿಕೊಂಡಿರುವ ನಟರು ಅಭಿನಯಿಸುವುದಿಲ್ಲ.

ಕಲಾತ್ಮಕ ಚಿತ್ರಗಳತ್ತ ಆಸಕ್ತಿ ಮೂಡಲು ಕಾರಣ?
ಜನರಿಗೆ ಉತ್ತಮ ಸಂದೇಶ ನೀಡುವ ಚಿತ್ರಗಳಲ್ಲಿ ಅಭಿನಯಿಸುವುದು ನನಗೆ ಇಷ್ಟ. ಅದಕ್ಕಾಗಿಯೇ ಕಲಾತ್ಮಕ ಚಿತ್ರಗಳನ್ನು ಆಯ್ಕೆ ಮಾಡಿಕೊಂಡೆ. ಕಮರ್ಷಿಯಲ್‌ ಚಿತ್ರಗಳಲ್ಲಿ ನಟಿಯರನ್ನು ಕೇವಲ ಮಾರ್ಕೆಟಿಂಗ್‌ ವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಅವರ ಪಾತ್ರಗಳಿಗೆ ಮಹತ್ವ ಇರುವುದು ತುಂಬಾ ಕಡಿಮೆ. ಅದರಲ್ಲೂ ಕರ್ಮಷಿಯಲ್‌ ಚಿತ್ರಗಳಿಂದ ನನಗೆ ಮನರಂಜನೆ ಸಿಗುವುದಿಲ್ಲ. ನನ್ನನ್ನು ರಂಜಿಸಿದ ಚಿತ್ರಗಳಲ್ಲಿ ಅಭಿನಯಿಸುವುದು ನನಗೆ ಇಷ್ಟ ಇಲ್ಲ. ಆದರೆ ಒಳ್ಳೆಯ ಕಾಮಿಡಿ ಚಿತ್ರಗಳಲ್ಲಿ ಅವಕಾಶ ಸಿಕ್ಕರೆ ಮಾತ್ರ ಅಭಿನಯಿಸಲು ಸಿದ್ಧ. ಈಗಿರುವ ನಟಿಯರು ಸಹ ಮಹಿಳಾ ಪ್ರದಾನ ಚಿತ್ರಗಳು ಸಿಕ್ಕರೆ ಅಭಿನಯಿಸಲು ತುದಿಗಾಲಲ್ಲಿ ನಿಂತಿರುತ್ತಾರೆ.

ಪದವಿ ಮುಗಿಸುತ್ತಿದ್ದಂತೆ ಸೋಷಿಯಲ್‌ ವರ್ಕ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡೆ. ಇಲ್ಲಿಂದ ನನ್ನ ಸಾಮಾಜಿಕ ಕೆಲಸಗಳಲ್ಲಿ ತೊಡಗುಕೊಳ್ಳುವಿಕೆ ಪ್ರಾರಂಭವಾಯಿತು. ಇದರೊಂದಿಗೆ ರಂಗಭೂಮಿಯಲ್ಲಿ ಆಸಕ್ತಿ ಇತ್ತು. ಕಾಲೇಜಿನಲ್ಲಿ ಓದುವಾಗಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆಗ ಕೇವಲ ನನ್ನ ಖುಷಿಗಾಗಿ ನಟಿಸಿದ್ದೆ. ಹೀಗಾಗಿ ನನಗೆ ಕಲಾತ್ಮಕ ಚಿತ್ರಗಳತ್ತ ಆಸಕ್ತಿ ಬೆಳೆಯಿತು.

ಚಿನ್ನ ಎಂದಕೂಡಲೇ ನೆನಪಾಗುವ ವಿಷಯ?
ನನ್ನ ಅಮ್ಮನ ಬಳಿ ಇದ್ದ ಚಿನ್ನದ ಆಭರಣಗಳು ಕಳವಾಗಿದ್ದು. ಅಜ್ಜಿಯಿಂದ ಪರಂಪರಾಗತವಾಗಿ ಬಂದಿದ್ದ ಸಾಕಷ್ಟು ಹಳೆಯ ಆಭರಣಗಳು ಕಳವಾದವು. ಆಗ ಅಮ್ಮನಿಗೆ ಆದ ಬೇಸರ ಚೆನ್ನಾಗಿ ನೆನಪಿದೆ. ನಮ್ಮ ಮನೆತನದಲ್ಲಿ ಬಹಳ ಹಿಂದಿನಿಂದಲೂ ಬಂದಿದ್ದ ಆಭರಣಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಹಾಗೆಂದು ನನಗೆ ಆಭರಣಗಳೆಂದರೆ ತುಂಬಾ ಇಷ್ಟ ಇಲ್ಲ. ಅದು ನನ್ನ ಟಾಪ್‌ 20 ಪ್ರಯಾರಿಟಿಯಲ್ಲಿ ಕೊನೆಯ ಸ್ಥಾನ ಪಡೆಯುತ್ತದೆ. ಎಲ್ಲಾದರೂ ಸುಂದರವಾಗಿ ಕಂಡರೆ ಅದನ್ನು ಧರಿಸುತ್ತೇನೆ.

ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ಇಲ್ಲೇ ಇರಬೇಕು ಎಂದು ಬಯಸಿದ್ದ ನಗರ. ಆದರೆ ನನ್ನ ವೃತ್ತಿ ಹಾಗೂ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇಲ್ಲಿನ ವಾತಾವರಣ ತುಂಬಾ ಇಷ್ಟ. ಆದರೆ ಟ್ರಾಫಿಕ್‌ ನಿಜಕ್ಕೂ ಕಿರಿಕಿರಿ ಎನಿಸುತ್ತದೆ.

“ಬಾಲಿವುಡ್‌ನ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಾಯಕಿ ಆಗಲು ಪರ್ಫೆಕ್ಟ್‌ ಬಾಡಿ, ಬಿಳಿ ಬಣ್ಣ, ಸುಂದರವಾದ ನಗು ಇದ್ದರೆ ಸಾಕು. ಪ್ರತಿಭೆ ಇಲ್ಲದಿದ್ದರೂ ಕೆಲವೊಮ್ಮೆ ನಡೆಯುತ್ತದೆ.”

“ಬೇರೆಯವರ ಮೆಚ್ಚುಗೆ ಗಳಿಸಲು ಮಾಡುವ ಕೆಲಸಕ್ಕಿಂತ, ನಮ್ಮ ಮನಸ್ಸಿಗೆ ಖುಷಿ ನೀಡುವ ಕೆಲಸಗಳನ್ನು ಮಾಡುವುದು ಒಳ್ಳೆಯದು. ನಮಗೆ ನಂಬಿಕೆ ಇರುವಲ್ಲಿ ಮಾತ್ರ ಕೆಲಸ ಮಾಡಿದರೆ, ಮನಸ್ಸಿನಲ್ಲಿ ಒಳ ಯುದ್ಧ ಇರುವುದಿಲ್ಲ. ಆಗ ಬೇರೆಯವರಿಗೆ ಉತ್ತರ ನೀಡುವ ಅಗತ್ಯ ಇರುವುದಿಲ್ಲ.”

ಪುರುಷರ ಮನಸ್ಥಿತಿ ಬದಲಾಗಬೇಕು
ಆಧುನಿಕ ಮಹಿಳೆ ಇಂದಿಗೂ ತನಗಿಷ್ಟವಾದ ಜೀವನವನ್ನು ನಡೆಸಲು ಇನ್ನೂ ಸಾಧ್ಯವಾಗುತ್ತಿಲ್ಲ. ಕಾರಣ ಮಹಿಳೆಯರು ಎಷ್ಟೇ ಮುಂದುವರೆದರೂ ಸದ್ಯದ ಕೌಟುಂಬಿಕ ವ್ಯವಸ್ಥೆಯಲ್ಲಿ ಗೃಹಿಣಿಯರು ಕೆಲವು ಕೆಲಸಗಳನ್ನು ಮಾಡಲೇಬೇಕಾಗಿದೆ. ಇದರಿಂದಾಗಿ ಕೆಲಸ ಮಾಡುವ ಮಹಿಳೆಯರು ಮನೆಯಲ್ಲಿ ಮಕ್ಕಳಿಗೆ ತಾಯಿಯಾಗಿ, ಗೃಹಿಣಿಯಾಗಿ, ಸೊಸೆಯಾಗಿ, ಪತ್ನಿಯಾಗಿ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಆಕೆಯ ಆಸೆಗಳನ್ನು ನೆರವೇರಿಸಿಕೊಳ್ಳಲು ಅಗತ್ಯ ಕಾಲಾವಕಾಶ ಸಿಗುತ್ತಿಲ್ಲ. ಮನೆಯಲ್ಲಿನ ಪುರುಷರು ಮಹಿಳೆಯರ ಸಮಸ್ಯೆಗಳನ್ನು ಅರಿತು ಅವರಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡಲು ಪ್ರಾರಂಭಿಸಿದಾಗ ಮಾತ್ರ ಗೃಹಿಣಿಯ ಸ್ಥಿತಿ ಸ್ವಲ್ಪ ಸುಧಾರಿಸಬಹುದು. ಮನೆ ಕೆಲಸಗಳಲ್ಲಿ ಸಹಾಯ ಮಾಡುವುದು ಹೆಂಡತಿಗೆ ಗುಲಾಮಗಿರಿ ಮಾಡಿದಂತೆ ಅಲ್ಲ ಎನ್ನುವ ಭಾವನೆ ಪುರುಷರಲ್ಲಿ ಹೋಗಬೇಕು. ದುಡಿಯುವ ಮಹಿಳೆಯರು ಮನೆಲ್ಲಿದ್ದಾಗ ಪುರುಷರು ಮನೆಯ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಂಡಾಗ ಮಹಿಳೆಯರ ಮೇಲಿನ ಭಾರ ಕೊಂಚ ಕಡಿಮೆಯಾಗಿ, ಆಕೆಯ ಕನಸುಗಳನ್ನು ನೆರವೇರಿಸಕೊಳ್ಳಲು ಅವಕಾಶ ದೊರೆಯುತ್ತದೆ. ಆದರೆ ಹೀಗೆ ಪತ್ನಿಯ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವ ಪುರುಷರನ್ನು ಕೀಳಾಗಿ ಕಾಣುವುದನ್ನು ಈ ಸಮಾಜ ಬಿಡಬೇಕು. ಆಗ ಆ ಕುಟುಂಬ ಸುಖಿ ಕುಟುಂಬವಾಗುತ್ತದೆ.

Write A Comment