ಮನೋರಂಜನೆ

ಸ್ಲಂಡಾಗ್‌ ಖ್ಯಾತಿಯ ರಸೂಲ್‌ ಪೂಕ್ಕುಟ್ಟಿ ಕನ್ನಡಕ್ಕೆ

Pinterest LinkedIn Tumblr

slamರಸೂಲ್‌ ಪೂಕ್ಕುಟ್ಟಿ ಕನ್ನಡಕ್ಕೆ ಬಂದಿದ್ದಾರೆ. ಯಾರು ಅಂತ ಮಾತ್ರ ಕೇಳಬೇಡಿ. “ಸ್ಲಂಡಾಗ್‌ ಮಿಲಿಯನೇರ್‌’ನ ಸೌಂಡ್‌ ಡಿಸೈನ್‌ಗೆ ಆಸ್ಕರ್‌ ಪ್ರಶಸ್ತಿ ಪಡೆದಿರುವ ಮತ್ತು ದೇಶದ ಜನಪ್ರಿಯ ಸೌಂಡ್‌ ಡಿಸೈನರ್‌ ಆಗಿರುವ ರಸೂಲ್‌ ಪೂಕ್ಕುಟ್ಟಿ ಇದೀಗ ಭಾವನಾ ನಿರ್ಮಾಣದ “ನಿರಂತರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಸೌಂಡ್‌ ಡಿಸೈನ್‌ ಎನ್ನುವ ವಿಭಾಗವೇ ನಶಿಸಿ ಹೋಗುತ್ತಿರುವಾಗ, “ನಿರಂತರ’ ಚಿತ್ರದ ಸೌಂಡ್‌ ಡಿಸೈನಿಂಗ್‌ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ರಸೂಲ್‌ ಕನ್ನಡ ಚಿತ್ರಗಳನ್ನು ನೋಡಿಲ್ಲವಂತೆ. ಆದರೆ, ಇತ್ತೀಚಿನ ಕೆಲವು ಹೊಸ ನಿರ್ದೇಶಕರು ಒಳ್ಳೊಳ್ಳೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬ ವಿಷಯವನ್ನು ಕೇಳಿದ್ದಾರಂತೆ. “ಈ ಚಿತ್ರದಲ್ಲಿ ಸಂಗೀತ, ಸೌಂಡು ಎರಡೂ ಇದೆ. ಇದೊಂದು ಟ್ರಾವಲ್‌ ಕಥೆ. ಇಲ್ಲಿ ಶುರುವಾಗುವ ಪಯಣ ರಾಜಾಸ್ಥಾನ, ಹಿಮಾಚಲ ಪ್ರದೇಶ ಮುಂತಾದ ಕಡೆಗಳೆಲ್ಲಾ ಸಾಗುತ್ತದೆ. ಆ ಪ್ರಯಾಣ ಮತ್ತು ಪ್ರಯಾಣದಲ್ಲಿನ ಹಲವು ಧ್ವನಿಗಳನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಧ್ವನಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜೊತೆಜೊತೆಗೆ ಕೆಲವು ಧ್ವನಿಗಳು ಸಹ ಮುಖ್ಯ. ಅದನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಒಂದು ದೃಶ್ಯವನ್ನು ಕ್ಯಾಮೆರಾಮ್ಯಾನ್‌ ಹೇಗೆ ಕ್ಯಾಮೆರಾ ಮೂಲಕ ಕಟ್ಟಿಕೊಡುತ್ತಾನೋ, ಅದನ್ನು ನಾವು ಧ್ವನಿಯ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇವೆ. ಒಂದು ದೃಶ್ಯವನ್ನು ನೋಡಿದಾಗ ಸಂತೋಷ ಅಥವಾ ನೋವು ಆಗಬಹುದು. ನಾವು ಅದನ್ನು ಧ್ವನಿಯ ಮೂಲಕ ಕಟ್ಟಿಕೊಡುತ್ತೇವೆ.’ ಎಂದರು.

ನಿರ್ದೇಶಕ ಅಪೂರ್ವ ಕಾಸರವಳ್ಳಿ, ರಸೂಲ್‌ಗೆ ಚಿತ್ರ ತೋರಿಸಿದಾಗ, ರಸೂಲ್‌ ಈ ತರಹ ಚಿತ್ರ ಮಾಡುವುದಕ್ಕೆ ಸಾಧ್ಯವಿಲ್ಲ ಎಂದರಂತೆ. ಬೇರೆ ತರಹ ಎಡಿಟ್‌ ಮಾಡಿಕೊಂಡು ಬಂದರೆ, ಏನಾದರೂ ಮಾಡಬಹುದು ಅಂದರಂತೆ. “ಆದರೆ, ನಿರ್ದೇಶಕರಿಗೆ ತಮ್ಮ ಚಿತ್ರ ಹೀಗೇ ಬರಬೇಕೆಂಬ ಕಲ್ಪನೆ ಇದೆ. ಚಿತ್ರ ಗೆದ್ದರೂ ಸರಿ, ಸೋತರೂ ಸರೀ, ಚಿತ್ರವನ್ನು ಹೀಗೇ ಕಟ್ಟಿಕೊಡಬೇಕೆಂಬ ಆಸೆ ಇದೆ. ಅದರಂತೆ ಚಿತ್ರವನ್ನು ಮಾಡಿದ್ದಾರೆ. ಇಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ ಎಲ್ಲ ಕಡೆ ಚಿತ್ರೀಕರಣ ಆಗಿದೆ. ಅಲ್ಲಿಯ ಧ್ವನಿಯನ್ನು ಮತ್ತು ಅಲ್ಲಿಯ ಎಸೆನ್ಸ್‌ನು ಹಾಗಾಗೆ ಕೊಡಬೇಕು. ಅದನ್ನು ಕೊಡುವ ಪ್ರಯತ್ನವನ್ನು ಮಾಡಿದ್ದೇವೆ’ ಎನ್ನುತ್ತಾರೆ ರಸೂಲ್‌ ಪೂಕ್ಕುಟ್ಟಿ.

“ನಿರಂತರ’ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಬಹುಶಃ ಸೆಪ್ಟೆಂಬರ್‌ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರವನ್ನು ಭಾವನಾ ನಿರ್ಮಿಸುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಹುಲ್‌ ಬೋಸ್‌, ಐಂದ್ರಿತಾ ರೇ, ಕಿರಣ್‌ ಮುಂತಾದವರಿದ್ದಾರೆ. ನೀಲಾದ್ರಿ ಕುಮಾರ್‌ ಸಂಗೀತ, ಎಚ್‌.ಎಂ. ರಾಮಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

-ಉದಯವಾಣಿ

Comments are closed.