Entertainment

ದಿನೇಶ್‌ಬಾಬು ಪುನರಾಗಮನದ ಸಿನಿಮಾ ‘ಪ್ರಿಯಾಂಕ’

Pinterest LinkedIn Tumblr

crec17Priyanka4_0

ದಿನೇಶ್‌ಬಾಬು ಪುನರಾಗಮನದ ಸಿನಿಮಾ ‘ಪ್ರಿಯಾಂಕ’. ಈ ಚಿತ್ರದ ಗೀತೆಗಳು ತಮ್ಮ ಸಾಹಿತ್ಯಗುಣದಿಂದ ಗಮನಸೆಳೆಯುವಂತಿವೆ.

ಸದಭಿರುಚಿಯ ಚಿತ್ರಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಅಗ್ಗಳಿಕೆಯ ನಿರ್ದೇಶಕ ದಿನೇಶ್ ಬಾಬು, ಸದ್ದುಗದ್ದಲವಿಲ್ಲದೇ ‘ಪ್ರಿಯಾಂಕ’ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅದರ ಹಾಡುಗಳನ್ನು ತೋರಿಸಲು ಸುದ್ದಿಮಿತ್ರರನ್ನು ಅವರು ಆಹ್ವಾನಿಸಿದ್ದರು. ಈಗ ಸಾಮಾನ್ಯ ಎಂಬಂತಿರುವ ಅಬ್ಬರದ ಸಂಗೀತದ ಮಧ್ಯೆ, ಮಾಧುರ್ಯ ತುಂಬಿಕೊಂಡ ಮೂರು ಹಾಡುಗಳನ್ನು ತೋರಿಸಲಾಯಿತು.

ಚಿತ್ರತಂಡವನ್ನು ಪರಿಚಯಿಸಿದ ಬಳಿಕ ಮೊದಲು ಮಾತಾಡಿದ್ದು ಪ್ರಕಾಶ ರೈ. ‘ಸಾಹಿತ್ಯ ಕೇಳಿಸ್ತಾ ಇದೆ’ ಎಂದು ಅವರು ಉದ್ಗರಿಸಿದ್ದು ಇತ್ತೀಚಿನ ಹಾಡುಗಳ ಕುರಿತ ವಿಮರ್ಶೆಯಂತಿತ್ತು! ದಿನೇಶ್ ಬಾಬು ಸಿನಿಮಾಗಳನ್ನು ನೋಡುತ್ತಲೇ ಬಂದ ಅವರಿಗೆ, ‘ಪ್ರಿಯಾಂಕ’ ಸಿನಿಮಾ ಒಳ್ಳೆಯ ಅವಕಾಶ ಅನಿಸಿದೆಯಂತೆ. ಚಿತ್ರದಲ್ಲಿ ಅವರದು ತನಿಖಾಧಿಕಾರಿ ಪಾತ್ರ. ತಮ್ಮ ನಿರ್ದೇಶನದ ‘ಒಗ್ಗರಣೆ’ಯಲ್ಲಿ ಅಭಿನಯಿಸಿದ ತೇಜಸ್‌ಗೆ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕನ ಗರಡಿಯಲ್ಲಿ ಕೆಲಸ ಮಾಡಲು ಅವಕಾಶ ದಕ್ಕಿರುವುದಕ್ಕೆ ಪ್ರಕಾಶ್ ರೈ ಸಂತಸಪಟ್ಟರು.

ಮೂರು ವರ್ಷಗಳಿಂದಲೂ ಸಿನಿಲೋಕದಿಂದ ದೂರವಿದ್ದ ಕೃಪಾಕರ, ಈ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ‘ಸಂಗೀತದ ಬಗ್ಗೆ ದಿನೇಶ ಬಾಬು ಅವರಿಗೆ ಇರುವ ಜ್ಞಾನ ಅಗಾಧವಾದದ್ದು. ಅವರೊಂದಿಗೆ ಹಾಗೂ ಪ್ರಕಾಶ್ ರೈ ಅವರಂಥ ಮೇರು ಕಲಾವಿದನ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಅವರು ಹೇಳಿಕೊಂಡರು. ‘ಒಂದು ಹಾಡು ಬರೆಯಲು ಆಹ್ವಾನ ಸಿಕ್ಕಿತ್ತಾದರೂ ಎಲ್ಲ ನಾಲ್ಕೂ ಹಾಡುಗಳನ್ನು ನಾನು ಬರೆದೆ. ಕನ್ನಡ ಪದಗಳ ಕುರಿತು ನಿರ್ದೇಶಕರಿಂದ ನಾನು ಸಾಕಷ್ಟು ಕಲಿತೆ’ ಎಂದು ಕೇಶವಚಂದ್ರ ನುಡಿದರು.

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪ್ರಿಯಾಂಕ ಉಪೇಂದ್ರ, ಸಾಕಷ್ಟು ತಡವಾಗಿ ಬಂದರು. ಇದು ಅವರ 35ನೇ ಸಿನಿಮಾ ಆಗಿದ್ದು, ಬೆಂಗಾಲಿ ಚಿತ್ರದಂತೆ ಇದೆ ಎಂದು ಬಣ್ಣಿಸಿದರು. ‘ಒಗ್ಗರಣೆ’ ನಂತರ ಎರಡನೇ ಚಿತ್ರದಲ್ಲೂ ಪ್ರಕಾಶ್ ರೈ ಜತೆ ಕೆಲಸ ಮಾಡುತ್ತಿರುವುದಕ್ಕೆ ತೇಜಸ್ ಸಂತಸ ವ್ಯಕ್ತಪಡಿಸಿದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕ ಮೋಹನ್ ಮಾತನಾಡಿದರು.

Write A Comment