ಕರ್ನಾಟಕ

ಆಗಸ್ಟ್.18: ರಕ್ಷಾ ಬಂಧನಕ್ಕೆ ಹೊಸ ಮೈಲಿಗಲ್ಲು :ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರಿಂದ ಬೆಂಗಳೂರಿನಲ್ಲಿ ವಿಶ್ವದಾಖಲೆ

Pinterest LinkedIn Tumblr

Raksha-Bandana_News

ಬೆಂಗಳೂರು, ಆಗಸ್ಟ್ 16 : ಆಗಸ್ಟ್ 18, ಗುರುವಾರ ಶ್ರಾವಣ ಹುಣ್ಣಿಮೆ. ಅಂದು ಸಹೋದರತೆಯನ್ನ ಸಾರುವ ರಕ್ಷಾಬಂಧನ. ಪರಸ್ಪರ ಭ್ರಾತೃತ್ವವನ್ನು ಸಾರುವ ರಾಖಿ ಹಬ್ಬದ ಮೂಲಕ ವಿಶ್ವದಾಖಲೆ ನಿರ್ಮಿಸ ಹೊರಟಿದ್ದಾರೆ ಪರಮಪೂಜ್ಯ ದಿಗಂಬರ ಸಂತಶ್ರೇಷ್ಠ ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರು.

ಅಸೂಯೆ ಬದಲು ಸ್ನೇಹ, ಅಹಂ ಬದಲು ವಿನಮ್ರತೆ, ದ್ವೇಷಿಸುವ ಬದಲು ಪ್ರೀತಿಸುವ; ಮುರಿಯುವ ಬದಲು ಮನಸ್ಸುಗಳನ್ನು ಸೇರಿಸುವ, ಒಂದಾಗಿಸುವ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಆಯೋಜಿಸಿರುವ ಈ ವಿಶ್ವದಾಖಲೆಯ ರಾಖಿ ಹಬ್ಬದ ಆಚರಣೆಗೆ ಕರ್ನಾಟಕ ಜೈನ ಅಸೋಷಿಯೇಷನ್, ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ, ಶ್ರೀಖಂಡೇವಾಲಾ ಜೈನ ಸಮಾಜ ಹಾಗೂ ಸಕಲ ಜೈನ ಸಮಾಜ, ತ್ಯಾಗಿ ಸೇವಾ ಸಮಿತಿಗೆ ಕೈಜೋಡಿಸುತ್ತಿದೆ.

ಈ ಅಭೂತಪೂರ್ವ ರಾಖಿ ಹಬ್ಬವನ್ನು ದಾಖಲಿಸಲೆಂದೇ ವಿಶ್ವದಾಖಲೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಲಿದ್ದು, ಈ ತಂಡದ ಉಪಸ್ಥಿತಿಯಲ್ಲಿ ಎರಡು ವಿಶ್ವ ದಾಖಲೆಗಳು ಸೃಷ್ಟಿಯಾಗಲಿವೆ. ಮೊದಲ ಸುತ್ತಿನಲ್ಲಿ 400ಕ್ಕೂ ಹೆಚ್ಚು ಯುವತಿಯರು ಏಕಕಾಲಕ್ಕೆ ತಮ್ಮ ಒಡಹುಟ್ಟಿದ ಅಣ್ಣಂದಿರಿಗೆ ರಾಖಿ ಕಟ್ಟಿ ದಾಖಲೆ ಬರೆಯಲಿದ್ದಾರೆ.

2ನೇ ಸುತ್ತಿನಲ್ಲಿ 400ಕ್ಕೂ ಹೆಚ್ಚು ಅಣ್ಣಂದಿರು ತಮ್ಮ ಒಡಹುಟ್ಟಿದ ಪ್ರೀತಿಯ ತಂಗಿಯರಿಗೆ ರಕ್ಷೆ ಕಟ್ಟಿ ಸಹೋದರತೆಯ ಸಂದೇಶ ಸಾರಲಿದ್ದಾರೆ. ಮೂರನೇ ಸುತ್ತಿನಲ್ಲಿ 400ಕ್ಕೂ ಹೆಚ್ಚು ಸಹೋದರಿಯರು ತಮ್ಮ ಸಹೋದರಿಯರಿಗೆ ರಕ್ಷೆ ಕಟ್ಟಲಿದ್ದು, ಕೊನೆಯದಾಗಿ ಸಹೋದರರು, ತಮ್ಮ ಸ್ನೇಹಿತರು, ಆತ್ಮೀಯರಿಗೆ ರಾಖಿ ಕಟ್ಟಿ ದಾಖಲೆ ಬರೆಯಲಿದ್ದಾರೆ.

ಧರ್ಮ ಧ್ವಜಾರೋಹಣದೊಂದಿಗೆ ವಿಶ್ವದಾಖಲೆಯ ರಕ್ಷಾಬಂಧನ : ಇದಕ್ಕೂ ಮುನ್ನ ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್, ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್, ಕ್ಷುಲ್ಲಕ 105 ಶ್ರೀ ಪರ್ವಸಾಗರ್ಜೀ ಮಹಾರಾಜ್ ಅವರಿಂದ ‘ಅಹಿಂಸಾ ಸಂಸ್ಕಾರ ಪಾದಯಾತ್ರೆ’ ನಡೆಯಲಿದೆ.

ವಿವಿಪುರಂನ ಮಹಾವೀರ ಧರ್ಮಶಾಲಾದಿಂದ ಆರಂಭಗೊಳ್ಳುವ ಈ ಪವಿತ್ರ ಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಕ್ತಾಯ ಗೊಳ್ಳಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಜೈನ ಮನಿಶ್ರೀಗಳಿಂದ ಧರ್ಮ ಧ್ವಜಾರೋಹಣ ನಡೆಯಲಿದ್ದು, ಈ ಮೂಲಕ ವಿಶ್ವದಾಖಲೆಯ ‘ಅಂತರ್ಮನ ರಕ್ಷಾಬಂಧನ ಮಹೋತ್ಸವ’ಕ್ಕೆ ಚಾಲನೆ ದೊರೆಯಲಿದೆ.

ಇದೇವೇಳೆ, ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್ಜೀ ಅವರಿಗೆ ಜೈನ ಬಂಧುಗಳು ಚಿನ್ನ ಮತ್ತ ಬೆಳ್ಳಿಯ ಎಳೆಗಳಿಂದ ಮಾಡಿದ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್ಜೀ ಅವರು ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಲಿದ್ದಾರೆ.

ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ನೀವೂ ಸಹ ನಿಮ್ಮ ಒಡಹುಟ್ಟಿದ ಸಹೋದರಿಗೆ/ ಸಹೋದರನಿಗೆ ರಾಖಿ ಕಟ್ಟುವ ಮೂಲಕ ವಿಶ್ವ ದಾಖಲೆಗೆ ಸೇರ್ಪಡೆಗೊಳ್ಳಬಹುದು.

ಈ ಬೃಹತ್ ವಿಶೇಷ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಸಂಘಟಕ ಗುಣಪಾಲ್ ಜೈನ್ – 98451 30374, ಸಮಂತ ಜೈನ್ – 90360 23568, ಕೆ. ಜಯರಾಜ ಆರಿಗಾ – 99452 57575, ಆಶಾ ಪ್ರಭು – 80955 88466 ಸಂಪರ್ಕಿಸಲು ಕೋರಲಾಗಿದೆ.

ವರದಿ ಕೃಪೆ : ಕನ್ನಡ ಓನ್ ಇಂಡಿಯಾ

Comments are closed.