ಪ್ರಮುಖ ವರದಿಗಳು

ಬಾಲಂಗೋಚಿಗಳ ಭರ್ಜರಿ ಬ್ಯಾಟಿಂಗ್: ಎರಡನೆ ಟೆಸ್ಟ್‌ನ 3ನೆ ದಿನ: ಸೊರಗಿದ ಭಾರತದ ದಾಳಿ, ಆಸ್ಟ್ರೇಲಿಯ ಮೇಲುಗೈ; ನಾಯಕ ಸ್ಮಿತ್ ಶತಕ , ಜಾನ್ಸನ್, ಸ್ಟಾರ್ಕ್ ಅರ್ಧಶತಕ

Pinterest LinkedIn Tumblr

smith____

ಬ್ರಿಸ್ಬೇನ್, ಡಿ.19: ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್‌ನಲ್ಲಿ ನಾಯಕ ಸ್ಟೀವನ್ ಸ್ಮಿತ್ ಶತಕ, ಬೌಲರ್‌ಗಳಾದ ಮಿಚೆಲ್ ಜಾನ್ಸನ್ ಮತ್ತು ಮಿಚೆಲ್ ಸ್ಟಾರ್ಕ್ ಅರ್ಧಶತಕದ ಕೊಡುಗೆಯ ನೆರವಿನಲ್ಲಿ ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 97 ರನ್‌ಗಳ ಮೇಲುಗೈ ಸಾಧಿಸಿದೆ.

ಎರಡನೆ ಟೆಸ್ಟ್‌ನ ಮೂರನೆ ದಿನದ ಆಟ ಕೊನೆಗೊಂಡಾಗ ಭಾರತ ತಂಡ ಎರಡನೆ ಇನಿಂಗ್ಸ್‌ನಲ್ಲಿ 23 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 71ರನ್ ಗಳಿಸಿದೆ.

ಆರಂಭಿಕ ದಾಂಡಿಗ ಶಿಖರ್ ಧವನ್ ಔಟಾಗದೆ 26 ಮತ್ತು ಚೇತೇಶ್ವರ ಪೂಜಾರ ಔಟಾಗದೆ 15 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ ಮೊತ್ತವನ್ನು ಸರಿಗಟ್ಟಲು ಇನ್ನೂ 26 ರನ್ ಗಳಿಸಬೇಕಾಗಿದೆ. ಆರಂಭಿಕ ದಾಂಡಿಗ ಮುರಳಿ ವಿಜಯ್ 27 ರನ್ ಗಳಿಸಿ ಔಟಾಗಿದ್ದಾರೆ. ಎರಡನೆ ದಿನದಾಟದಂತ್ಯಕ್ಕೆ 52 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 221 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡ ಮೂರನೆ ದಿನ ಭಾರತದ ದುರ್ಬಲ ಬೌಲಿಂಗ್ ದಾಳಿಯ ಪ್ರಯೋಜನ ಪಡೆದುಕೊಂಡು ಈ ಮೊತ್ತಕ್ಕೆ 284 ರನ್ ಸೇರಿಸಿತು. ನಾಯಕರಾಗಿ ಸ್ಮಿತ್ ಚೊಚ್ಚಲ ಶತಕ ದಾಖಲಿಸಿದರು.

ಗುರುವಾರದ ಆಟ ಮುಗಿದಾಗ ಔಟಾಗದೆ ಕ್ರೀಸ್‌ನಲ್ಲಿದ್ದ ಸ್ಮಿತ್ ಮತ್ತು ಮಿಚೆಲ್ ಮಾರ್ಷ್ ಬ್ಯಾಟಿಂಗ್ ಮುಂದುವರಿಸಿ 5ನೆ ವಿಕೆಟ್‌ಗೆ 24 ರನ್ ಸೇರಿಸಿದರು. ಮಾರ್ಷ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 11 ರನ್ ಗಳಿಸಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಗಮಿಸಿದ ವಿಕೆಟ್ ಕೀಪರ್ ಬ್ರಾಡ್ ಹಡಿನ್ 6 ರನ್ ಗಳಿಸಿ ವಾಪಸಾದರು. 4 ವಿಕೆಟ್ ನಷ್ಟದಲ್ಲಿ 221 ರನ್ ಮಾಡಿದ್ದ ಆಸ್ಟ್ರೇಲಿಯ 247ಕ್ಕೆ 6 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಮಿಚೆಲ್ ಜಾನ್ಸನ್ ಅವರು ಸ್ಮಿತ್‌ಗೆ ಜೊತೆಯಾಗಿ ತಂಡವನ್ನು ಆಧರಿಸಿದರು. ಜಾನ್ಸನ್ ಕ್ರೀಸ್‌ಗೆ ಆಗಮಿಸಿದ ಬಳಿಕ ಭಾರತದ ಹಿಡಿತ ಸಡಿಲಗೊಂಡಿತು.

ಜಾನ್ಸನ್ ಭಾರತದ ಮೊದಲ ಇನಿಂಗ್ಸ್‌ನಲ್ಲಿ 21 ಓವರ್‌ಗಳ ಬೌಲಿಂಗ್ ದಾಳಿ ನಡೆಸಿ 81 ರನ್ ನೀಡಿದ್ದರೂ ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡಿದ್ದರು. ಆದರೆ ತನ್ನ ಬೌಲಿಂಗ್‌ನಲ್ಲಿ ಆಗಿದ್ದ ಹಾನಿಯನ್ನು ಬ್ಯಾಟಿಂಗ್‌ನಲ್ಲಿ ಸರಿಪಡಿಸಿದರು.

ಸ್ಮಿತ್ ಮತ್ತು ಜಾನ್ಸನ್ ಜೊತೆಯಾಗಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 61.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 247 ರನ್ ಗಳಿಸಿದ್ದ ಆಸ್ಟ್ರೇಲಿಯಕ್ಕೆ ಏಳನೆ ವಿಕೆಟ್‌ಗೆ 148 ರನ್‌ಗಳ ಕೊಡುಗೆ ನೀಡಿದರು.

ಜಾನ್ಸನ್ 119 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿ 93 ಎಸೆತಗಳನ್ನು ಎದುರಿಸಿದರು. 13 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 88 ರನ್ ಗಳಿಸಿದರು. ಶತಕ ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದ ಜಾನ್ಸನ್‌ಗೆ ಇಶಾಂತ್ ಶರ್ಮ ಪೆವಿಲಿಯನ್ ಹಾದಿ ತೋರಿಸಿದ್ದರೂ, ಅಷ್ಟು ಹೊತ್ತಿಗೆ ಅವರು ಆಸ್ಟ್ರೇಲಿಯವನ್ನು ಒತ್ತಡದ ಪರಿಸ್ಥಿತಿಯಿಂದ ಪಾರು ಮಾಡಿದ್ದರು.

1975ರಲ್ಲಿ ಗ್ರೇಗ್ ಚಾಪೆಲ್ ನಾಯಕರಾಗಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು. ಆ ಬಳಿಕ ಮೈಕಲ್ ಕ್ಲಾರ್ಕ್ ಶತಕದ ದಾಖಲಿಸಿ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಗಾಯಗೊಂಡು ತಂಡದಿಂದ ಹೊರಗುಳಿದಿರುವ ಕ್ಲಾರ್ಕ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಸ್ಮಿತ್ ಅವರು ನಾಯಕರಾಗಿ ಚೊಚ್ಚಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಸಾಧನೆ ಮಾಡಿದ ಆಸ್ಟ್ರೇಲಿಯದ 10ನೆ ದಾಂಡಿಗ ಎನಿಸಿಕೊಂಡರು. ಮೊದಲ ಟೆಸ್ಟ್‌ನಲ್ಲೇ ಆಸ್ಟ್ರೇಲಿಯಕ್ಕೆ ಸಮರ್ಥ ನಾಯಕತ್ವ ನೀಡುವ ಸೂಚನೆ ನೀಡಿದ್ದಾರೆ.

ಭಾರತದ ವಿರುದ್ಧ ಸರಣಿ ಆರಂಭಕ್ಕೂ ಮುನ್ನ ಸ್ಮಿತ್ ಬ್ಯಾಟಿಂಗ್‌ನಲ್ಲಿ ಸವಾಲಾಗುವುದನ್ನು ನಿರೀಕ್ಷಿಸಲಾಗಿತ್ತು. ಸ್ಮಿತ್‌ಗೆ ಇದೀಗ ನಾಯಕತ್ವದ ಹೆಚ್ಚುವರಿ ಹೊರೆ ಹೆಗಲ ಮೇಲೇರಿದ್ದರೂ ಅವರ ಬ್ಯಾಟಿಂಗ್‌ಗೆ ತೊಂದರೆಯಾಗಿಲ್ಲ. ಕಳೆದ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 162 ಮತ್ತು ಎರಡನೆ ಇನಿಂಗ್ಸ್‌ನಲ್ಲಿ 52 ರನ್ ಗಳಿಸಿ ಔಟಾಗದೆ ಉಳಿದಿದ್ದ ಸ್ಮಿತ್ ಸರಣಿಯಲ್ಲಿ ಮೊದಲ ಬಾರಿ ಔಟಾದರು.ಇಶಾಂತ್ ಶರ್ಮ ಅವರ ವಿಕೆಟ್ ಕಬಳಿಸಿದರು. 191 ಎಸೆತಗಳನ್ನು ಎದುರಿಸಿದ್ದ ಸ್ಮಿತ್ 13 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 133 ರನ್ ಸೇರಿಸಿದರು. 24ನೆ ಟೆಸ್ಟ್ ಆಡುತ್ತಿರುವ ಸ್ಮಿತ್ 147 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 6ನೆ ಶತಕ ಪೂರೈಸಿದರು. ಸ್ಮಿತ್ 90 ರನ್ ಮಾಡಿದ್ದಾಗ ಔಟಾಗುವ ಸಾಧ್ಯತೆ ಇತ್ತು. ಆದರೆ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳುವುದರಿಂದ ಬಚಾವಾಗಿದ್ದರು.

ಜಾನ್ಸನ್ ಮತ್ತು ಸ್ಮಿತ್ ಔಟಾದರೂ ಬೌಲರ್‌ಗಳು ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಮಿಚೆಲ್ ಸ್ಟಾರ್ಕ್ ಮತ್ತು 9ನೆ ವಿಕೆಟ್‌ಗೆ 56ರನ್, ಅಂತಿಮ ವಿಕೆಟ್‌ಗೆ ಸ್ಟಾರ್ಕ್ ಮತ್ತು ಹೇಝ್ಲಾವುಡ್ 51 ರನ್ ಸೇರಿಸಿ ಆಸ್ಟ್ರೇಲಿಯಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಮಿಚೆಲ್ ಸ್ಟಾರ್ಕ್ 52 ರನ್, ನಥನ್ ಲಿನ್ 23 ರನ್ ಮತ್ತು ಚೊಚ್ಚಲ ಟೆಸ್ಟ್ ಆಡುತ್ತಿರುವ ಜೋಶ್ ಹೇಝ್ಲಿವುಡ್ ಔಟಾಗದೆ 32 ರನ್ ಸೇರಿಸಿ ತಂಡದ ಸ್ಕೋರ್‌ನ್ನು 500ರ ಗಡಿ ದಾಟಿಸಿದರು. ಭಾರತದ ಇಶಾಂತ್ ಶರ್ಮ 117ಕ್ಕೆ 3, ಉಮೇಶ್ ಯಾದವ್ 101ಕ್ಕೆ 3, ಆರ್ ಅಶ್ವಿನ್ 128/ಕ್ಕೆ 2 ಮತ್ತು ವರುಣ್ ಆ್ಯರೊನ್ 145ಕ್ಕೆ 2 ವಿಕೆಟ್ ಗಿಟ್ಟಿಸಿಕೊಂಡರು.

ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನಿಂಗ್ಸ್109.4 ಓವರ್‌ಗಳಲ್ಲಿ ಆಲೌಟ್ 408
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 109.4 ಓವರ್‌ಗಳಲ್ಲಿ ಆಲೌಟ್ 505

ಕ್ರಿಸ್ ರೋಜರ್ಸ್‌ ಸಿ ಧೋನಿ ಬಿ ಯಾದವ್ 55, ಡೇವಿಡ್ ವಾರ್ನರ್ ಸಿ ಅಶ್ವಿನ್ ಬಿ ಯಾದವ್ 29, ಶೇನ್ ವ್ಯಾಟ್ಸನ್ ಸಿ ಧವನ್ ಬಿ ಅಶ್ವಿನ್ 25, ಸ್ಟೀವನ್ ಸ್ಮಿತ್ ಬಿ ಇಶಾಂತ್ ಶರ್ಮ 133, ಶಾನ್ ಮಾರ್ಷ್ ಸಿ ಅಶ್ವಿನ್ ಬಿ ಯಾದವ್ 32, ಮಿಚೆಲ್ ಮಾರ್ಷ್ ಬಿ ಇಶಾಂತ್ ಶರ್ಮ 11, ಬ್ರಾಡ್ ಹಡಿನ್ ಸಿ ಪೂಜಾರ ಬಿ ಆ್ಯರೊನ್ 6, ಮಿಚೆಲ್ ಜಾನ್ಸನ್ ಸಿ ಧೋನಿ ಬಿ ಇಶಾಂತ್ ಶರ್ಮ 88, ಮಿಚೆಲ್ ಸ್ಟಾರ್ಕ್ ಬಿ ಅಶ್ವಿನ್ 52, ನಥನ್ ಲಿನ್ ಸಿ ರೋಹಿತ್ ಶರ್ಮ ಬಿ ಆ್ಯರೊನ್ 23, ಹೇಝ್ಲಿವುಡ್ ಔಟಾಗದೆ 32, ಇತರೆ 19.

ವಿಕೆಟ್ ಪತನ: 1-47, 2-98, 3-121, 4-208, 5-232, 6-247, 7-395, 8-398, 9-454, 10-505.
ಬೌಲಿಂಗ್ ವಿವರ: ಇಶಾಂತ್ ಶರ್ಮ 23-2-117-3, ವರುಣ್ ಆ್ಯರೊನ್ 26-1-145-2, ಉಮೇಶ್ ಯಾದವ್ 25-4-101-3, ಆರ್.ಅಶ್ವಿನ್ 33.4-4-128-2, ರೋಹಿತ್ ಶರ್ಮ 2-0-10-0.
ಭಾರತ ಎರಡನೆ ಇನಿಂಗ್ಸ್ 23 ಓವರ್‌ಗಳಲ್ಲಿ 1 ವಿಕೆಟ್‌ಗೆ 71.
ಮುರಳಿ ವಿಜಯ್ ಬಿ ಸ್ಟಾರ್ಕ್ 27, ಶಿಖರ್ ಧವನ್ ಔಟಾಗದೆ 26, ಚೇತೇಶ್ವರ ಪೂಜಾರ ಔಟಾಗದೆ 15, ಇತರೆ 3.
ವಿಕೆಟ್ ಪತನ: 1-41.
ಬೌಲಿಂಗ್:    ಜಾನ್ಸನ್ 8-3-29-0, ಹೇಝ್ಲವುಡ್ 6-0-24-0, ಸ್ಟಾರ್ಕ್ 4-1-10-1, ಮಿಚೆಲ್ ಸ್ಟಾರ್ಕ್ 4-1-10-1, ವ್ಯಾಟ್ಸನ್ 5-3-6-0.

Write A Comment