ಅಂತರಾಷ್ಟ್ರೀಯ

ಉಗ್ರ ಲಖ್ವಿಗೆ ಜೈಲೇ ಗಟ್ಟಿ: ಭಾರತದ ಒತ್ತಡಕ್ಕೆ ಮಣಿದ ಪಾಕ್‌: ಭಾರತದ ಒತ್ತಡಕ್ಕೆ ಮಣಿದು ಮುಖಭಂಗ ತಪ್ಪಿಸಿಕೊಂಡ ಪಾಕ್/ ಲಷ್ಕರೆ ಉಗ್ರನಿಗೆ 3 ತಿಂಗಳು ಜೈಲು

Pinterest LinkedIn Tumblr

PAKISTAN-INDIA_ATT_2249685e

ಇಸ್ಲಾಮಾಬಾದ್/ಹೊಸದಿಲ್ಲಿ: ಭಾರತದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ರೂವಾರಿ ಲಷ್ಕರೆ ತಯ್ಬಾದ ಕಮಾಂಡರ್ ಜಾಕಿರ್ ರೆಹಮಾನ್ ಲಖ್ವಿಯನ್ನು ಮತ್ತೆ ಮೂರು ತಿಂಗಳ ಕಾಲ ಜೈಲಿಗಟ್ಟಿದೆ.

26/11ರ ಭಯೋತ್ಪಾದಕ ದಾಳಿ ಸಂಬಂಧ ಬಂಧನದಲ್ಲಿದ್ದ ಲಖ್ವಿಗೆ ಪಾಕಿಸ್ತಾನದ ಕೆಳ ನ್ಯಾಯಾಲಯ ಗುರುವಾರ ಜಾಮೀನು ನೀಡಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಭಾರತ, ಮೇಲ್ಮನವಿ ಸಲ್ಲಿಸುವಂತೆ ನವಾಜ್ ಷರೀಫ್ ಸರಕಾರದ ಮೇಲೆ ಒತ್ತಡ ಹೇರಿತ್ತು. ಲಖ್ವಿಗೆ ಜಾಮೀನು ನೀಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆ ವ್ಯಕ್ತವಾಗಿತ್ತು. ಇದೆಲ್ಲದರ ಪರಿಣಾಮವಾಗಿ ಲಖ್ವಿ ಇನ್ನೂ ಮೂರು ತಿಂಗಳ ಕಾಲ ಜೈಲಿನಲ್ಲೇ ಮುಂದುವರಿಯುವಂತಾಗಿದೆ.

ಸಾಮಾಜಿಕ ಶಾಂತಿ ಪಾಲನಾ ಕಾಯಿದೆಯ 16ನೇ ವಿಧಿಯಡಿ ಲಖ್ವಿಯನ್ನು ಪಾಕಿಸ್ತಾನ ಸರಕಾರ ವಶಕ್ಕೆ ಪಡೆದುಕೊಂಡು ಅಡಿಯಾಲ ಜೈಲಿನಲ್ಲೇ ಆತನ ವಾಸವನ್ನು ಮುಂದುವರಿಸಿದೆ ಎಂದು ಲಷ್ಕರೆ ಉಗ್ರನ ಪರ ವಾದಿಸಿದ್ದ ವಕೀಲ ರಿಜ್ವಾನ್ ಅಬ್ಬಾಸಿ ಹೇಳಿದ್ದಾರೆ.

ಲಖ್ವಿಗೆ ಇಸ್ಲಾಮಾಬಾದ್‌ನ ಉಗ್ರ ನಿಗ್ರಹ ಕೋರ್ಟ್ (ಎಟಿಸಿ) ಜಾಮೀನು ನೀಡಿದ ಆದೇಶವನ್ನು ಅಬ್ಬಾಸಿ ಅವರು ರಾವಲ್ಪಿಂಡಿಯ ಜೈಲಿಗೆ ತಲುಪಿಸಿ ಆತನ ಬಿಡುಗಡೆ ಮಾಡಿಸುವ ಮುನ್ನವೇ ಮೂರು ತಿಂಗಳ ವಶದ ಆದೇಶವನ್ನು ಪಾಕ್ ಸರಕಾರ ಜೈಲಿನ ಅಧಿಕಾರಿಗಳಿಗೆ ತಲುಪಿಸಿ, ಆಗಬಹುದಾಗಿದ್ದ ಭಾರಿ ಮುಖಭಂಗವನ್ನು ತಪ್ಪಿಸಿಕೊಂಡಿದೆ. ಪೇಶಾವರ ಉಗ್ರ ದಾಳಿಯ ಬೆನ್ನಿಗೆ ನಿಷೇಧಿತ ಲಷ್ಕರೆ ಉಗ್ರನಿಗೆ ಜಾಮೀನು ನೀಡಿದ್ದರಿಂದ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಘನತೆಗೆ ಆಗಿದ್ದ ಹಾನಿಯನ್ನು ಸರಿಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ”ಎಟಿಸಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಈ ಸಂಬಂಧ ಸೋಮವಾರ ಅರ್ಜಿ ಸಲ್ಲಿಸಲಾಗುವುದು,” ಎಂದು ಮುಂಬಯಿ ದಾಳಿ ವಕಾಲತ್ತು ವಹಿಸಿರುವ ಪಾಕ್ ಸರಕಾರಿ ವಕೀಲ ಮಂಡಳಿಯ ಮುಖ್ಯಸ್ಥ ಚೌಧರಿ ಅಝರ್ ಹೇಳಿದ್ದಾರೆ.

ಲಖ್ವಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದ ಇಸ್ಲಾಮಾಬಾದ್‌ನ ಉಗ್ರ ನಿಗ್ರಹ ಕೋರ್ಟ್, ಲಖ್ವಿಗೆ ಜಾಮೀನು ನೀಡಿತ್ತು. ಪ್ರಕರಣದ ಇನ್ನುಳಿದ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ಜ.6ರಂದು ಕೈಗೆತ್ತಿಕೊಳ್ಳಲಿತ್ತು.

ಕಂತೆ ಕಂತೆ ಸಾಕ್ಷ್ಯ ಒದಗಿಸಲಾಗಿತ್ತು ಲಖ್ವಿ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎಂಬ ನೆಪವನ್ನು ಪಾಕಿಸ್ತಾನ ಹೇಳುತ್ತಿದೆ. ಆದರೆ, 166 ಮಂದಿಯನ್ನು ಬಲಿ ತೆಗೆದುಕೊಂಡ 2008 ನ.26ರ ಮುಂಬಯಿ ಮೇಲಿನ ದಾಳಿಯಲ್ಲಿ ಲಖ್ವಿ ನೇರಪಾತ್ರ ವಹಿಸಿದ್ದನ್ನು ಸಾಬೀತುಪಡಿಸುವ ಸಾಕಷ್ಟು ಸಾಕ್ಷ್ಯಗಳನ್ನು ಭಾರತ ಒದಗಿಸಿದೆ. ಈ ಸಂಬಂಧ ಲಷ್ಕರೆ ಸೂತ್ರಧಾರ ಡೇವಿಡ್ ಹೇಡ್ಲಿ ನೀಡಿದ್ದ ಹೇಳಿಕೆಗಳು. ದಾಳಿ ವೇಳೆ ಜೀವಂತ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ. ದಾಳಿ ವೇಳೆ ಉಗ್ರರಿಗೆ ನೇರ ಮಾರ್ಗದರ್ಶನ ನೀಡುತ್ತಿದ್ದ ಲಖ್ವಿಯ ಧ್ವನಿ ಪರೀಕ್ಷೆಯ ವರದಿ… ಹೀಗೆ ಕಂತೆ ಕಂತೆ ಸಾಕ್ಷ್ಯಗಳನ್ನು ಭಾರತ ಒದಗಿಸಿದೆ. ಆದರೂ, ಲಖ್ವಿ ವಿರುದ್ಧ ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಎಟಿಸಿ ಹೇಳಿತ್ತು.

ಮಾನವೀಯತೆಗೆ ಆಘಾತ ಹೊಸದಿಲ್ಲಿ: ಪೇಶಾವರದಲ್ಲಿ 132 ಮಕ್ಕಳ ಕಗ್ಗೊಲೆ ನಡೆದು 48 ಗಂಟೆ ಕಳೆಯುವ ಮೊದಲು ಮುಂಬಯಿನಲ್ಲಿ ಇಂತಹಾದ್ದೇ ಹತ್ಯಾಕಾಂಡಕ್ಕೆ ಕಾರಣನಾದ ಲಷ್ಕರೆ ಉಗ್ರ ಲಖ್ವಿಗೆ ಜಾಮೀನು ನೀಡಿದ್ದು ಮಾನವೀಯತೆಯಲ್ಲಿ ನಂಬಿಕೆ ಇರಿಸಿದ ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಮಕ್ಕಳ ಹತ್ಯೆಗೆ ಭಾರತವು ಪಾಕ್‌ಗಿಂತಲೂ ಹೆಚ್ಚಿನ ಕಣ್ಣೀರು ಹಾಕಿತು.ಇದಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭದ್ರತೆಗೆ ಸೂತ್ರ ಹೊಸದಿಲ್ಲಿ: ಭಯೋತ್ಪಾದಕ ದಾಳಿಯಿಂದ ಶಾಲೆ ಮಕ್ಕಳನ್ನು ರಕ್ಷಿಸುವ ಕುರಿತಂತೆ ಕೇಂದ್ರ ಸರಕಾರವು ಸುಮಾರು 16 ಅಂಶಗಳ ಕಾರ‌್ಯಸೂಚಿಯನ್ನು ರಾಜ್ಯ ಸರಕಾರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಿಗೆ ರವಾನಿಸಿದೆ. ಶಾಲೆಗಳಲ್ಲಿ ಭದ್ರತಾ ವ್ಯವಸ್ಥೆ, ಮಕ್ಕಳಿಗೆ ನೀಡಬೇಕಾದ ತರಬೇತಿ, ಪೋಷಕರಿಗೆ ನೀಡಬೇಕಾದ ಮಾಹಿತಿ, ಶಾಲಾ ಆಡಳಿತ ಮತ್ತು ಸನಿಹದ ಪೊಲೀಸ್ ಠಾಣೆ ಮಧ್ಯೆ ಇರಬೇಕಾದ ಸಮನ್ವಯಗಳ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.
—–

ಲಖ್ವಿಯನ್ನು ಜೈಲಲ್ಲಿ ಉಳಿಸಿಕೊಂಡಿರುವ ಪಾಕ್ ಕ್ರಮ ಬರೀ ಕಣ್ಣೊರೆಸುವ ತಂತ್ರ. ಪಾಕ್‌ನ ವಿಶ್ವಾಸದ ಬಗ್ಗೆ ನಾನು ಅನುಮಾನ ವ್ಯಕ್ತಪಡಿಸುತ್ತಿಲ್ಲ. ಆದರೆ, ಯಾವ ಪರಿಸ್ಥಿತಿಯ ಆಧಾರದಲ್ಲಿ ಲಖ್ವಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಬಗ್ಗೆ ನನಗೆ ಸಂಶಯವಿದೆ.
-ಉಜ್ವಲ್ ನಿಕ್ಕಂ, ಮುಂಬಯಿ ದಾಳಿ ವಕಾಲತ್ತು ವಹಿಸಿರುವ ಸರಕಾರಿ ವಕೀಲ

Write A Comment