ಕರಾವಳಿ

ಮಹಾದಾಯಿ ನ್ಯಾಯಾಧಿಕರಣ ತೀರ್ಪಿನ ವಿರುದ್ಧ ನಾಳೆ ಚಿತ್ರೋದ್ಯಮ ಬಂದ್; ಬೀದಿಗಿಳಿಯಲಿರುವ ತಾರೆಯರು

Pinterest LinkedIn Tumblr

kannada film indus

ಬೆಂಗಳೂರು: ಮಹಾದಾಯಿ ನ್ಯಾಯಾಧಿಕರಣ ರಾಜ್ಯಕ್ಕೆ ವಿರೋಧವಾಗಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ರೈತರ ಪರವಾಗಿ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು,ನಾಳೆ ರಾಜ್ಯ ಬಂದ್‌ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು ಇದಕ್ಕೆ ಚಿತ್ರರಂಗವೂ ಧ್ವನಿ ಗೂಡಿಸಿದ್ದು ನಾಳೆ ಇಡೀ ಚಿತ್ರೋದ್ಯಮವನ್ನು ಬಂದ್ ಮಾಡಲು ನಿರ್ಧರಿಸಿದೆ.

ಕಳಸಾ ಬಂಡೂರಿ ಹೋರಾಟ, ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರಿನ ವಿಷಯ ಸೇರಿದಂತೆ ನಾಡು,ನುಡಿಯ ವಿಚಾರದಲ್ಲಿ ಚಿತ್ರರಂಗ ರಾಜ್ಯದ ಜನರ ಪರವಾಗಿ ನಿಲ್ಲುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.ಅಲ್ಲದೆ ನಟ ನಟಿಯರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ.

ಟೌನ್‌ಹಾಲ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದು, ಚಿತ್ರರಂಗದ ಘಟಾನುಘಟಿ ನಾಯಕ,ನಟಿಯರು,ನಿರ್ಮಾಪಕರು,ತಂತ್ರಜ್ಞರು,ಕಲಾವಿದರು,ಕಾರ್ಮಿಕರು ಭಾಗಿಯಾಗುವ ಮೂಲಕ ತಮ್ಮ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತ ಪಡಿಸಲು ಮುಂದಾಗಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು, ನಟರಾದ ಶಿವರಾಜ್ ಕುಮಾರ್,ಪ್ರೇಮ್, ದುನಿಯಾ ವಿಜಯ್,ನಟಿ ರಾಗಿಣಿ ಸೇರಿದಂತೆ ಅನೇಕರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ರಾಜೀನಾಮೆ ನೀಡಲಿ
“ರಾಜ್ಯದ ಸಾಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಮಹಾದಾಯಿ ನದಿ ನೀರಿನ ಹಂಚಿಕೆ ಸಮಸ್ಯೆಯನ್ನು ಬಗೆಹರಿಸಬೇಕು,ಅಲ್ಲದೆ ರಾಜ್ಯ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಿ ಜನರ ಹಿತ ಕಾಪಾಡಲು ಮುಂದಾಗಬೇಕು.ನಾಳೆ ಚಿತ್ರೋದ್ಯಮ ಬಂದ್‌ಗೆ ನಿರ್ಧಾರ”.
ಸಾ.ರಾ.ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಪಕ್ಷ ರಾಜಕಾರಣ ಅಡ್ಡಿಯಾಗಬಾರದು
ಕುಡಿಯುವ ನೀರು ಒದಗಿಸುವ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗುವ ಮೂಲಕ ಸಮಸ್ಯೆ ಬಗೆಹರಿಸಬೇಕೇ ಹೊರತು ಪಕ್ಷ ರಾಜಕಾರಣ ಅಡ್ಡಿಯಾಗಬಾರದು.ರೈತರ ಪರ ಹೋರಾಟಕ್ಕೆ ಸದಾ ಸಿದ್ದ,ನಾಳೆಯ ಚಿತ್ರರಂಗ ಪ್ರತಿಭಟನೆಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.ಬಂದರೆ ಭಾಗವಹಿಸುತ್ತೇನೆ”.
ಶಿವರಾಜ್ ಕುಮಾರ್, ಹಿರಿಯ ನಟ

ಮಲತಾಯಿ ಧೋರಣೆ
ಕುಡಿಯುವ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ.ಒಂದು ರೀತಿಯಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.ನಮ್ಮ ನದಿಯ ನೀರು ಕೇಳಲು ಅಂಗಲಾಚಬೇಕಾಗಿದೆ ಇದು ಖಂಡನಾರ್ಹ.
ಪ್ರೇಮ್, ನಟ

ಕರಳು ಕಿತ್ತು ಬರುತ್ತೆ
ಕುಡಿಯುವ ನೀರಿಗಾಗಿ ಉತ್ತರ ಕರ್ನಾಟಕದ ಜನ ಹೋರಾಟ ಮಾಡುತ್ತಿರುವುದನ್ನು ನೋಡಿದರೆ ಕರುಳು ಕಿತ್ತು ಬರುತ್ತೆ.ನೀರಿಲ್ಲದೆ ಪರದಾಡುತ್ತಿರುವುದು ನೋವಿನ ಸಂಗತಿ. ಅವರಿಗೆ ನ್ಯಾಯ ಸಿಗುವರೆಗೂ ತಾರ್ಕಿಕ ಹೋರಾಟ ಮಾಡುವುದು ಅಗತ್ಯ.
ದುನಿಯಾ ವಿಜಯ್, ನಟ

ನೋವಿನ ಸಂಗತಿ
“ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಿವ ಅಗತ್ಯವಿದೆ.ಅದರಲ್ಲಿಯೂ ರಾಜ್ಯ ಸರ್ಕಾರ ದಿಟ್ಟ ನಿಲುವು ಪ್ರದರ್ಶಿಸಿ ರೈತರ ನೆರವಿಗೆ ಧಾವಿಸಲು ಮುಂದಾಗಬೇಕು.ನ್ಯಾಯಾಧಿಕರಣದ ತೀರ್ಪು ನೋವಿನ ಸಂಗತಿ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗಿದೆ.ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ”.
ರಾಗಿಣಿ, ನಟಿ

Comments are closed.