ಕರಾವಳಿ

ಚಿತ್ರೀಕರಣಕ್ಕೆ ಹಣಕಾಸಿನ ತೊಂದರೆ ಎದುರಾದಾಗ ಉದ್ಯಮಿ ಪುತ್ರನ ಅಪಹರಿಸಿ ಜೈಲು ಸೇರಿದ ಹೀರೋ ಅಂಡ್ ಗ್ಯಾಂಗ್ ! ಪೊಲೀಸರ ಯಶಸ್ವಿ ಕಾರ್ಯಾಚರಣೆ

Pinterest LinkedIn Tumblr

Hero-0

ಬೆಂಗಳೂರು: ಪ್ರತಿಷ್ಠಿತ ಕಿರ್ಲೊಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನಾಯಕ್ ಬಾಪೆಟ್ ಅವರ ಪುತ್ರ ಇಶಾನ್ ಬಾಪೆಟ್‌ನನ್ನು ಅಪಹರಿಸಿದ ಅಪಹರಣಕಾರರ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಈಶಾನ್ಯ ವಲಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆಆರ್‌ಪುರಂನ ಮುನಿಯಪ್ಪ ಆಲಿಯಾಸ್ ಮುನ್ನ ತಾನು ನಾಯಕನಾಗಿ ನಟಿಸುತ್ತಿರುವ ಚಾಲೆಂಜರ್ ಚಿತ್ರದ ಚಿತ್ರೀಕರಣವನ್ನು ಮುಂದುವರೆಸಲು ಗ್ಯಾಂಗ್ ಕಟ್ಟಿಕೊಂಡು ನಿಟ್ಟೆ ಮೀನಾಕ್ಷಿ ಕಾಲೇಜಿನ ಎಂಜನಿಯರ್ ವಿದ್ಯಾರ್ಥಿ ಇಶಾನ್ ಬಾಪೆಟ್‌ನನ್ನು ಅಪಹರಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ತಿಳಿಸಿದರು.

Film-03

Film-01

ಮುನಿಯಪ್ಪ ಆಲಿಯಾಸ್ ಮುನ್ನ (29)ನ ಜೊತೆ ನಾಯಕಿ ಶುಭಾ ಪೂಂಜಾ ಅವರ ಆಪ್ತ ಸಹಾಯಕನಾಗಿದ್ದ ಕೊಡಿಗೇಹಳ್ಳಿಯ ಹಸನ್ ಡೋಂಗ್ರಿ (26), ಗಂಟಿಗಾನಹಳ್ಳಿಯ ಜಗದೀಶ (32), ಚಿಕ್ಕ ಬೊಮ್ಮಸಂದ್ರದ ಜಗನ್ನಾಥ ಆಲಿಯಾಸ್ ಡುಮ್ಮಜಗ್ಗ (28), ಮನೋಜ್ ಆಲಿಯಾಸ್ ಕೆಂಚ (19) ಅವರನ್ನೊಳಗೊಂಡ ಅಪಹರಣ ಗ್ಯಾಂಗ್‌ನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.

ಪ್ರಮುಖ ಆರೋಪಿ ಮುನಿಯಪ್ಪ 2008ರಲ್ಲಿ ಮಾಜಿ ಶಾಸಕರೊಬ್ಬರ ಪುತ್ರಿಯನ್ನು ಅಪಹರಿಸಿ ವಿವಾಹವಾಗಿದ್ದು, ಈ ವಿವಾಹ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು. ಆಗಲೇ ಈತನ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಸರ ಅಪಹರಣ ಮಾಡುವ ಗ್ಯಾಂಗ್‌ನೊಂದಿಗೆ ಸೇರಿ ಗಂಗಮ್ಮನಗುಡಿ, ಜಾಲಹಳ್ಳಿ, ಸೋಲದೇವನಹಳ್ಳಿ, ಯಶವಂತಪುರ ಇನ್ನಿತರ ಕಡೆಗಳಲ್ಲಿ ಸರ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಹಾಸನದಲ್ಲಿ ಡಕಾಯಿತಿ, ಸರ ಅಪಹರಣಗಳಲ್ಲಿ ಭಾಗಿಯಾಗಿ ಮತ್ತಿಕೆರೆಯಲ್ಲಿ ನೆಲೆಸಿ ಅವರ್ ಎಜುಕೇಷನ್ ಸೆಂಟರ್‌ ಹೆಸರಿನಲ್ಲಿ ಕಚೇರಿ ತೆಗೆದು ಕೆಲಸ ಕೊಡಿಸುವುದಾಗಿ ಹಲವು ವಿದ್ಯಾರ್ಥಿಗಳನ್ನು ನಂಬಿಸಿ ವಂಚನೆ ಮಾಡುತ್ತಿದ್ದ. ಇದಲ್ಲದೇ, ಪತ್ರಕರ್ತನೆಂದು ಹೇಳಿಕೊಂಡು ಕಸ್ತೂರಿ ಚಾನೆಲ್‌ನಲ್ಲಿ ಅಶೋಕ್ ದಿಂಡ ಎಂಬುವರ ನೇತೃತ್ವದ `ಇದು ಕಥೆಯಲ್ಲ ಜೀವನ’ ಎಂಬ ಅಪರಾಧ ಧಾರವಾಹಿಯ ನಿರ್ಮಾಣದಲ್ಲಿ ತೊಡಗಿದ್ದ ಎಂದು ವಿವರಿಸಿದರು.

ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದ ಆರೋಪಿ ಮುನಿಯಪ್ಪ ನಾಯಕ ನಟನಾಗಿ ಚಾಲೆಂಜರ್ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದು, ಇದಕ್ಕೆ ಈಗಾಗಲೇ `ಭೀರ’ ಚಿತ್ರ ತಂಡದಲ್ಲಿದ್ದ ಶುಭಾಪೂಂಜಾ ಅವರ ಆಪ್ತ ಸಹಾಯಕ ಮತ್ತೊಬ್ಬ ಆರೋಪಿ ಹಸನ್ ಡೋಂಗ್ರಿ ಕೂಡ ಸೇರಿಕೊಂಡಿದ್ದನು.

ಚಿತ್ರೀಕರಣಕ್ಕೆ ಹಣಕಾಸಿನ ತೊಂದರೆ ಎದುರಾದಾಗ ಸರ ಅಪಹರಣ ಮಾಡುವ ಯೋಜನೆ ರೂಪಿಸಿ ಸೋಲೂರಿನ ಬಳಿ ಮಹಿಳೆಯೊಬ್ಬರ ಸರ ಅಪಹರಣ ಮಾಡಿ ಅದರಿಂದ ಬಂದ ಹಣವನ್ನು ಚಿತ್ರೀಕರಣಕ್ಕೆ ಬಳಸಿಕೊಂಡಿದ್ದರು.

ಚಿತ್ರೀಕರಣಕ್ಕೆ ಹೆಚ್ಚಿನ ಹಣ ಅಗತ್ಯವಿದ್ದಿದ್ದರಿಂದ ಅಪಹರಣದ ಯೋಜನೆಯನ್ನು ಈ ಇಬ್ಬರೂ ಆರೋಪಿಗಳು ರೂಪಿಸಿದ್ದರು.

ಮತ್ತಿಕೆರೆಯ ತನ್ನ ಹಳೆಯ ಕಚೇರಿಯ ಬಳಿ ಅಂಗಡಿ ಮಾಲೀಕರೊಬ್ಬರನ್ನು ಅಪಹರಿಸಲು ರೂಪಿಸಿದ್ದ ಸಂಚು ಕೈಗೂಡದ ಹಿನ್ನೆಲೆಯಲ್ಲಿ ಹಳೆಯ ಸ್ನೇಹಿತರಾದ ಡುಮ್ಮಜಗ್ಗ ಹಾಗೂ ಕೆಂಚ ಅವನನ್ನು ಕರೆಸಿಕೊಂಡು ಮತ್ತೊಬ್ಬ ಆರೋಪಿ ಜಗದೀಶ ಎಂಬಾತನ ಜತೆ ಸೇರಿ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಓದುತ್ತಿದ್ದ ಇಶಾನ್ ಬಾಪೆಟ್ ದುಬಾರಿ ಕಾರಿನಲ್ಲಿ ಹೋಗುತ್ತಿದ್ದುದ್ದನ್ನು ಗಮನಿಸಿ ಆತನ ಮನೆ ನೋಡಿಕೊಂಡು ಬಂದು ಕಳೆದ ಆ. 23 ರಂದು ಸಂಜೆ ಇಶಾನ್‌ನನ್ನು ಮೊದಲೇ ಖರೀದಿಸಿದ್ದ ಮಾಲ್ಟೀಸ್ ಕಾರಿನಲ್ಲಿ ಅಪಹರಿಸಿ ನಗರದ ಹೊರ ವಲಯದ ಕುಣಿಗಲ್ ರಸ್ತೆಯಲ್ಲಿ ರಾತ್ರಿಯೆಲ್ಲ ಓಡಾಡಿಸಿ ವಿನಾಯಕ್ ಬಾಪೆಟ್ ಅವರಿಗೆ ಕರೆ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದರು. ಮುಂಜಾನೆ ಹೆಬ್ಬಾಳ ರಸ್ತೆಯಲ್ಲಿ ಇಶಾನ್‌ನನ್ನು ಕರೆದುಕೊಂಡು ಬರುವಾಗ ಹಿಂದೆ ವೇಗವಾಗಿ ಬರುತ್ತಿದ್ದ ಕಾರೊಂದನ್ನು ನೋಡಿ ಆರೋಪಿ ಹಸನ್ ‌ಡೋಂಗ್ರಿ ಮಫ್ತಿಯಲ್ಲಿರುವ ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದು ಆತಂಕಗೊಂಡು ಜಾಲಹಳ್ಳಿ ಬಳಿ ಇಶಾನ್‌ನನ್ನು ಬಿಟ್ಟು ಪರಾರಿಯಾಗಿದ್ದರು.

ಪ್ರಕರಣವನ್ನು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಪತ್ತೆಗಾಗಿ ರಚಿಸಲಾಗಿದ್ದ ಎಸಿಪಿ ನಾರಾಯಣಸ್ವಾಮಿ, ಇನ್ಸ್‌ಪೆಕ್ಟರ್‌ಗಳಾದ ನಾಗರಾಜ್, ಕೇಶವಮೂರ್ತಿ, ಅಂಜನಮೂರ್ತಿ, ಸತೀಶ್, ನವೀನ್ ಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಗ್ಯಾಂಗ್‌ನ್ನು ಪತ್ತೆಹಚ್ಚಿದ ಈಶಾನ್ಯ ವಲಯದ ಡಿಸಿಪಿ ಡಾ. ಹರ್ಷ ಅವರ ತಂಡಕ್ಕೆ ನಗದು ಬಹುಮಾನ ನೀಡಿ ಮೇಘರಿಕ್ ಅವರು ಗೌರವಿಸಿದರು.

Comments are closed.