ಬೆಂಗಳೂರು, ಸೆ.15: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹಗಳಲ್ಲಿರುವ ಸನ್ನಡತೆಯ ಕೈದಿಗಳನ್ನು ಅಕ್ಟೋಬರ್ 2ರಂದು ಬಿಡುಗಡೆ ಗೊಳಿಸಲು ಸಹಕಾರ ನೀಡುವೆನೆಂದು ರಾಜ್ಯಪಾಲ ವಜುಭಾಯಿ ವಾಲಾ ಭರವಸೆ ನೀಡಿದ್ದಾರೆಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸನ್ನಡತೆಯ ಕೈದಿಗಳ ಬಿಡುಗಡೆಯ ಸಂಬಂಧ ರಾಜ್ಯಪಾಲ ವಜುಭಾಯಿ ವಾಲಾರೊಂದಿಗೆ ಸಮಾಲೋಚನೆ ನಡೆಸಿದ್ದು, ಅರ್ಹ ಕೈದಿಗಳ ಬಿಡುಗಡೆಗೆ ಅವರು ತೆರದ ಮನಸ್ಸಿನಿಂದ ಇದ್ದಾರೆಂದರು.
ಸಂಘರ್ಷವಿಲ್ಲ: ರಾಜಭವನ ಹಾಗೂ ಸರಕಾರದ ಮಧ್ಯೆ ಯಾವುದೇ ರೀತಿಯ ಸಂಘರ್ಷ ಇಲ್ಲ. ಸನ್ನಡತೆಯ ಕೈದಿಗಳ ಬಿಡುಗಡೆಯ ವಿಷಯದಲ್ಲಿ ಯಾವುದೇ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗಿಲ್ಲ ಎಂದ ಜಯಚಂದ್ರ, ಸನ್ನಡತೆಯ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ನ ಆದೇಶ ಪಾಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2006 ರಿಂದಲೂ ಯಾವುದೇ ಕೈದಿ ಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಹಿರಿಯ ನಾಗರಿಕರು, ಅಂಗವಿಕಲರಿದ್ದರೆ ಕನಿಷ್ಠ 10 ವರ್ಷ ಶಿಕ್ಷೆ ಅನುಭವಿಸಿರುವವರ ಬಿಡುಗಡೆಗೆ ಮಾರ್ಗಸೂಚಿಗೆ ತಿದ್ದುಪಡಿ ತರಲಾಗಿದೆ. ಆದರೆ, ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿಲ್ಲ ಎಂದವರು ಹೇಳಿದರು. ಸನ್ನಡತೆಯ ಕೈದಿಗಳ ಬಿಡುಗಡೆಗೆ ಕಲಂ 161ರನ್ವಯ ಕ್ರಮ ಕೈಗೊಳ್ಳುವುದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ ಎಂದ ಜಯಚಂದ್ರ, ರಾಜ್ಯಪಾಲರೊಂದಿಗೆ ಸರಕಾರ ಯಾವುದೇ ಸಂದರ್ಭದಲ್ಲಿಯೂ ಸಂಘರ್ಷಕ್ಕೆ ಇಳಿಯುವುದಿಲ್ಲ. ಬದಲಿಗೆ ಮಾತುಕತೆಯ ಮೂಲಕ ಸಮಸ್ಯೆಯಿದ್ದರೆ ಪರಿಹರಿಸಿಕೊಳ್ಳುತ್ತೇವೆ ಎಂದರು.
ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ: ಸರಕಾರಿ ಭೂಮಿ ಒತ್ತುವರಿದಾರರನ್ನು ಶಿಕ್ಷೆಗೆ ಗುರಿಪಡಿಸುವ ವಿಧೇಯಕವನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸುವ ಸಂಬಂಧ ನಾಳೆ (ಸೆ.16) ಕೇಂದ್ರ ಗೃಹ ಸಚಿವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದರು.
ವಿಧಾನ ಮಂಡಲದ ಉಭಯ ಸದನಗಳಲ್ಲಿ 2007ರಲ್ಲಿ ಸರಕಾರಿ ಭೂ ಒತ್ತುವರಿ ನಿಯಂತ್ರಣ ವಿಧೇಯಕ ಅನುಮೋದಿಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ಆ ವಿಧೇಯಕ ಕೇಂದ್ರ ಗೃಹ ಇಲಾಖೆಯಲ್ಲೇ ಬಾಕಿಯಿದ್ದು ನಾಳೆ ಕೇಂದ್ರ ಗೃಹ ಸಚಿವರನ್ನು ಖುದ್ದು ಭೇಟಿ ಮಾಡಿ ವಿಧೇಯಕವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲು ಕೋರಲಾಗುವುದು ಎಂದು ಸಚಿವರು ಹೇಳಿದರು.
27 ಮಂದಿ ಕನ್ನಡಿಗರು ನಾಪತ್ತೆ ‘ಜಮ್ಮು-ಕಾಶ್ಮೀರ ಪ್ರವಾಹದಲ್ಲಿ ಸಿಲುಕಿದ್ದ ಒಟ್ಟು 663 ಮಂದಿ ಕನ್ನಡಿಗರ ಪೈಕಿ ಈವರೆಗೂ 595 ಮಂದಿಯನ್ನು ರಕ್ಷಣೆ ಮಾಡಿದ್ದು, ಅವರೆಲ್ಲರನ್ನು ಅವರವರ ಮನೆ ಹಾಗೂ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ, 27 ಮಂದಿ ಕನ್ನಡಿಗರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅವರೆಲ್ಲರೂ ನಾಪತ್ತೆ ಆಗಿರುವ ಸಾಧ್ಯತೆಯಿದೆ.
ಈಗಾಗಲೇ ಜಮ್ಮು-ಕಾಶ್ಮೀರಕ್ಕೆ 5 ಕೋಟಿ ರೂ.ನೆರವು ನೀಡಲಾಗಿದ್ದು, ಅಲ್ಲಿನ ಸರಕಾರ ಕೋರಿದರೆ ವೈದ್ಯರು ಹಾಗೂ ಔಷಧಿ ಸಾಮಗ್ರಿಗಳ ರವಾನೆಗೆ ರಾಜ್ಯ ಸರಕಾರ ಸಿದ್ಧವಿದೆ. ಸಾರ್ವಜನಿಕರು ಸಂತ್ರಸ್ತರಿಗಾಗಿ ಸಂಗ್ರಹಿಸುವ ಹಣ, ಬಟ್ಟೆ ಹಾಗೂ ಆಹಾರ ಪದಾರ್ಥಗಳನ್ನು ಸರಕಾರವೇ ಪಡೆದು ಸಂತ್ರಸ್ತರಿಗೆ ತಲುಪಿಸಲಿದೆ’
– ಟಿ.ಬಿ.ಜಯಚಂದ್ರ, ಕಾನೂನು ಸಚಿವ