ಮಂಗಳೂರು,ನ. 28 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಕಿ ಮೀ ಗೂ ಹೆಚ್ಚು ತೀರ ಪ್ರದೇಶವಿದ್ದು, ಇಲ್ಲಿಯ ಸೋಮೇಶ್ವರ, ಹೊಸಬೆಟ್ಟು, ಸಸಿಹಿತ್ತಲು,ಮೂಲ್ಕಿಗಳಲ್ಲಿ ಚಂಡಮಾರುತ ಸಂತ್ರಸ್ಥರಿಗೆ ಅಶ್ರಯ ತಾಣಗಳಿಗಾಗಿ ಶಾಲೆಗಳು, ಸಮುದಾಯಭವನಗಳನ್ನು ಗುರ್ತಿಸುವಂತೆ ಹಾಗೂ ಇವುಗಳನ್ನು ಸಮೀಪಿಸಲು ಇರುವ ಮಾರ್ಗದಾರಿಗಳ ಸ್ಥಿತಿಗತಿಗಳನ್ನು ಜಿಲ್ಲಾಧಿಕಾರಿಗಳಿಗೆ ಡಿ.1 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎ.ಬಿ,ಇಬ್ರಾಹಿಂ ಅವರು ತಮ್ಮ ಕಚೇರಿಯಲ್ಲಿ ಈ ಸಂಬಂದ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ 320 ಕಿ.ಮೀ. ಕರಾವಳಿ ತೀರ ಪ್ರದೇಶವನ್ನು ಹೊಂದಿದು, ಕರಾವಳಿ ಪ್ರದೇಶ ಉದ್ದಕ್ಕೂ ಸುಮಾರು 5 ಮಿಲಿಯನ್ ಜನರು ವಾಸವಾಗಿದ್ದಾರೆ. ಈ ಜನರ ಬದುಕು ಒಂದು ರೀತಿಯಲ್ಲಿ ಕಡಲಿನ ಅಲೆಗಳ ಕೃಪೆಯ ಮೇಲೆ ಅವಲಂಬಿತವಾಗಿದೆ. ಕಾರಣ ಪ್ರಾಕೃತಿಕ ವಿಕೋಪಗಳು ಆಗಿಂದಾಗೆ ಸಂಭವಿಸುತ್ತಲೇ ಇರುತ್ತದೆ. ಇವರು ಕಡಲಿನೊಂದಿಗೆ ಜೀವನ ಕಟ್ಟಿಕೊಂಡವರಾಗಿದ್ದು, ಚಂಡಮಾರುತಗಳೇನಾದರೂ ಸಂಭವಿಸಿದಲ್ಲಿ ಇವರನ್ನು ಕಡಲ ಕಿನಾರೆಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕರಾವಳಿ ಜಿಲ್ಲಾಡಳಿತಗಳು ಸನ್ನದ್ಧವಾಗಿರಬೇಕು. ಎಂಬುದು ಸರ್ಕಾರಗಳ ಉದ್ದೇಶ ಅದಕ್ಕಾಗಿ ಕರಾವಳಿ ತೀರ ಪ್ರದೇಶದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಸಂತ್ರಸ್ಥರಿಗೆ ವಿವಿದೋದ್ದೇಶ ಚಂಡಮಾರುತ ಆಶ್ರಯತಾಣಗಳನ್ನು ಗುರ್ತಿಸಲು ಜಿಲ್ಲಾಡಳಿತಕ್ಕೆ ಸರಕಾರ ಸೂಚಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸೇರಿದಂತೆ ಇತರೆ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.