ಬೆಂಗಳೂರು,ಫೆ.26: ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಅವರಿಗೆ ಎಲ್ಲ ರಾಷ್ಟ್ರಗಳಿಗೂ ಪ್ರಯಾಣ ಬೆಳೆಸಲು ಅನುಕೂಲವಾಗುವ ಪಾಸ್ ಪೋರ್ಟ್ ನೀಡುವ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಭೂಗತಲೋಕದ ಹಿನ್ನೆಲೆ ಇದ್ದ ಕಾರಣ ಪಾಸ್ ಪೋರ್ಟ್ ಇಲಾಖೆ ಅವರ ಪಾಸ್ ಪೋರ್ಟ್ಅನ್ನು ವಶಕ್ಕೆ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಮುತ್ತಪ್ಪ ರೈ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಜೀರ್ ಅವರಿದ್ದ ಪೀಠ, ಪಾಸ್ಪೋರ್ಟ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ಪರಿಶೀಲಿಸಿ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಗೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಭೂಗತ ಲೋಕದ ನಂಟು ಹೊಂದಿದ್ದ ಕಾರಣ ಪಾಸ್ ಪೋರ್ಟ್ ಇಲಾಖೆ ಮುತ್ತಪ್ಪ ರೈ ಪಾಸ್ ಪೋರ್ಟ್ ವಶಕ್ಕೆ ಪಡೆದಿತ್ತು. ತಮ್ಮ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳು ಖುಲಾಸೆಗೊಂಡಿದ್ದು, ಪಾಸ್ ಪೋರ್ಟ್ ಹಿಂತಿರುಗಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.