ಹೊಸದಿಲ್ಲಿ: ಜಮ್ಮುಕಾಶ್ಮೀರದ ಉಧಂಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ವಾಹನದ ಮೇಲೆ ಬುಧವಾರ ದಾಳಿ ನಡೆಸಿದ ಉಗ್ರರ ಪೈಕಿ ಒಬ್ಬ ಜೀವಂತ ಸೆರೆ ಸಿಕ್ಕಿದ್ದು, ಒತ್ತೆಯಾಳುಗಳು ಸುರಕ್ಷಿತವಾಗಿ ಬಿಡುಗಡೆ ಆಗಿದ್ದಾರೆ.
ಮುಂಬಯಿ ದಾಳಿಕೋರ ಅಜ್ಮಲ್ ಕಸಬ್ ನಂತರ ದೇಶದಲ್ಲಿ ಜೀವಂತ ಸೆರೆ ಸಿಕ್ಕಿರುವ ಉಗ್ರನನ್ನು ಉಸ್ಮಾನ್(20) ಎಂದು ಗುರುತಿಸಲಾಗಿದೆ. ಕೆಲವು ಸುದ್ದಿ ವಾಹಿನಿಗಳಲ್ಲಿ ಆತನನ್ನು ಖಾಸಿಮ್ ಖಾನ್ ಎಂದು ಗುರುತಿಸಿವೆ. ತಾನು ಪಾಕಿಸ್ತಾನದ ಫೈಸ್ಲಾಬಾದ್ ಮೂಲದವನೆಂದು ಉಸ್ಮಾನ್ ಭದ್ರತಾ ಪಡೆಗೆ ತಿಳಿಸಿದ್ದಾನೆ ಎನ್ನಲಾಗಿದೆ.
‘ಒಬ್ಬ ಉಗ್ರನನ್ನು ಜೀವಂತ ಸೆರೆ ಹಿಡಿದಿದ್ದು, ಮೂವರು ಒತ್ತೆಯಾಳುಗಳು ಸುರಕ್ಷಿತವಾಗಿ ಬಿಡುಗಡೆ ಆಗಿದ್ದಾರೆ,’ಎಂದು ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ದೃಢಪಡಿಸಿದ್ದಾರೆ. ಮತ್ತೊಬ್ಬ ಉಗ್ರ ಬಿಎಸ್‌ಎಫ್ ಪಡೆ ನಡೆಸಿದ ಪ್ರತಿದಾಳಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ವಾರದ ಹಿಂದೆ ಭಾರತ ಪ್ರವೇಶಿಸಿದ್ದಾಗಿ ತಿಳಿಸಿರುವ ಉಗ್ರ, ಪಾಕಿಸ್ತಾನ ಆಡುಭಾಷೆಯಲ್ಲಿ ಮಾತನಾಡಿದ್ದಾನೆ. ಆತನ ಬಳಿಯಿಂದ ಎಕೆ 47 ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ಗುರುದಾಸ್‌ಪುರದಲ್ಲಿ ದಾಳಿ ನಡೆಸಿದ ಗುಂಪಿನಲ್ಲಿದ್ದ ಉಸ್ಮಾನ್ ಅವರ ಜತೆ ಭಾರತ ಪ್ರವೇಶಿಸಿದ್ದ. ಬಿಎಸ್‌ಎಫ್ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ ನಂತರ ಉಸ್ಮಾನ್ ಕಾಡಿನಲ್ಲಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಆದರೆ, ಮೂವರು ಒತ್ತೆಯಾಳುಗಳ ಜತೆ ಶಾಲೆಯೊಳಗೆ ನುಗ್ಗಿದ್ದ ಉಸ್ಮಾನ್‌ನನ್ನು ಬಿಎಸ್‌ಎಫ್, ಸಿಆರ್‌ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಗೆ ಸ್ಥಳೀಯ ಯುವಕರು ಸಹಕರಿಸಿದ್ದರು ಎನ್ನಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ, ಒತ್ತೆಯಾಳುಗಳೇ ಉಗ್ರರ ಹಾದಿ ತಪ್ಪಿಸಿ ಪೊಲೀಸ್ ಠಾಣೆ ತಲುಪುವಂತೆ ಮಾಡಿದ್ದರು ಎಂದು ಹೇಳಲಾಗಿದೆ.
ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರರು ನಡೆಸಿದ ದಾಳಿಗೆ ಬಿಎಸ್‌ಎಫ್‌ನ ಇಬ್ಬರು ಯೋಧರು ಮೃತಪಟ್ಟು, ಇತರ 8 ಮಂದಿ ಗಾಯಗೊಂಡಿದ್ದರು.