ಕನ್ನಡ ವಾರ್ತೆಗಳು

ಇಸ್ಕಾನ್ ಅರ್ಚಕರ ಶವ ನೇತ್ರಾವತಿ ನದಿಯಲ್ಲಿ ಪತ್ತೆ : ಕೊಲೆ ಶಂಕೆ..?

Pinterest LinkedIn Tumblr

iskon_ravi_kumar

ಮಂಗಳೂರು : ಇಸ್ಕಾನ್‌ನ ಅರ್ಚಕರೊಬ್ಬರ ಶವ ಬಾನುವಾರ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಕೊಲೆಯೊ ಎಂಬ ಶಂಕೆ ವ್ಯಕ್ತವಾಗಿದೆ. ಮೃತ ಅರ್ಚಕರನ್ನು ಬೆಂಗಳೂರಿನ ಇಸ್ಕಾನ್‌ನ ಸಿಬ್ಬಂದಿ ರಾಘವ ಗೋವಿಂದದಾಸ್ (28) ಎಂದು ಗುರುತಿಸಲಾಗಿದೆ.

ರಾಘವ ಗೋವಿಂದದಾಸ್ ಬೆಂಗಳೂರಿನ ನಿವಾಸಿಯಾಗಿದ್ದು ಅವರು ಮಂಗಳೂರು ಇಸ್ಕಾನ್‌ನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಸ್ಕಾನ್‌ಗೆಂದು ಅವರ ಅಣ್ಣ ಮಂಗಳೂರಿಗೆ ಕೆಲ ದಿನ ಹಿಂದೆ ಬಂದಿದ್ದರು. ಭಾನುವಾರ ಆಡಂಕುದ್ರು ಬಳಿಯಲ್ಲಿ ನೇತ್ರಾವತಿ ನದಿಯತ್ತ ತೆರಳಿದ ಸಂದರ್ಭ ನದಿಗೆ ಬಿದ್ದು ನಾಪತ್ತೆಯಾಗಿದ್ದರು.

ಈ ಮಾಹಿತಿ ಪೊಲೀಸರಿಗೆ ದೊರೆತು ಅವರನ್ನು ಹುಡುಕಾಡಿದಾಗ ಮೃತದೇಹ ಆಡಂಕುದ್ರು ಬಳಿ ಸಿಕ್ಕಿದೆ. ಮೃತದೇಹ ಹೊರತೆಗೆದಾಗ ಅವರ ಬೆನ್ನ ಹಿಂದೆ ಹಾಕಿಕೊಂಡ ಬ್ಯಾಗೊಂದು ದೊರೆತಿದ್ದು, ಬ್ಯಾಗ್‌ನ ಕೈಯಲ್ಲಿ ಕಟ್ಟಿದ ಕಲ್ಲು ಇತ್ತು. ಅವರು ಬ್ಯಾಗ್‌ಗೆ ಕಲ್ಲನ್ನು ಕಟ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಆ ಬಗ್ಗೆ ಅವರ ಅಣ್ಣ ನರೇಂದ್ರ ಅವರು, ತನ್ನ ತಮ್ಮ ರಾಘಗೋವಿಂದದಾಸ್‌ರನ್ನು ಕೊಲೆ ಮಾಡಿ ಯಾರೋ ದುಷ್ಕರ್ಮಿಗಳು ನದಿಗೆ ಎಸೆದಿದ್ದಾರೆ; ಇದೊಂದು ಕೊಲೆ ಕೃತ್ಯ ಎಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಅವರ ಬ್ಯಾಗ್‌ನಲ್ಲಿ ಕಲ್ಲು ಸಿಕ್ಕಿರುವುದರಿಂದ ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಿ ಮತ್ತೆ ಅದನ್ನು ಬ್ಯಾಗ್‌ಗೆ ಕಟ್ಟಿ ನೀರಿಗೆ ಅವರನ್ನು ಎಸೆದಿರಬೇಕೆಂದು ದೂರಿನಲ್ಲಿ ವಿವರಿಸಿದ್ದಾರೆ.

ಮೃತ ಗೋವಿಂದದಾಸ್ ಅವರ ಅಣ್ಣ ನರೇಂದ್ರ ಕಾಮತ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Write A Comment