ಮಂಗಳೂರು, ಆ.22: ಕೇಂದ್ರ ಸರಕಾರದ ನರ್ಮ್ (ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮಿಷನ್) ಯೋಜನೆಯಡಿ ಮಂಗಳೂರು ನಗರಕ್ಕೆ 35 ಕೆಎಸ್ಸಾರ್ಟಿಸಿ ಸಿಟಿ ಬಸ್‌ಗಳಿಗೆ ಪರವಾನಿಗೆ ನೀಡಲು ಅನುಮತಿ ದೊರಕಿ ಎರಡು ವರ್ಷಗಳ ಬಳಿಕ ಇದೀಗ ಕೊನೆಗೂ ಸಾರ್ವಜನಿಕರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
2013ರ ಸೆಪ್ಟಂಬರ್ 11ರಂದು ಹೊರಡಿ ಸಲಾಗಿದ್ದ ಜಿಲ್ಲಾ ದಂಡಾಧಿಕಾರಿ (ಡಿಎಂ) ಅಧಿಸೂಚನೆಯಿಂದಾಗಿ ನರ್ಮ್ ಬಸ್ಸುಗಳಿಗೆ ಪರವಾನಿಗೆ ನೀಡುವ ಕಾರ್ಯ ವಿಳಂಬವಾಗಿತ್ತು. ಇದೀಗ ಡಿಎಂ ನೋಟಿಫಿಕೇಶನ್ ಸಡಿಲಗೊಳಿಸಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಧಿಕಾರಿಯಾದ ಎ.ಬಿ. ಇಬ್ರಾಹೀಂ ಆದೇಶ ಹೊರಡಿಸಿದ್ದಾರೆ.
2013ರ ಅಧಿಸೂಚನೆ ಹೊರಡಿಸುವಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರಿಗೆ ನರ್ಮ್ ಯೋಜನೆಯಡಿ 35 ಬಸ್ಸುಗಳು ಮಂಗಳೂರು ನಗರಕ್ಕೆ ಮಂಜೂರಾಗುವ ಕಲ್ಪನೆ ಜಿಲ್ಲಾಡಳಿತಕ್ಕೆ ಇರಲಿಲ್ಲ. ಹಾಗೂ ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಅನೇಕ ಶಾಲಾ ಕಾಲೇಜುಗಳು, ಕೈಗಾರಿಕಾ ಕೇಂದ್ರಗಳು, ವಸತಿ ಬಡಾವಣೆಗಳು ಹೆಚ್ಚುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವ ಜನಿಕರ ಹಿತದೃಷ್ಟಿಯಿಂದ ಈಗಾಗಲೇ ವಿವಿಧ ಪ್ರದೇಶಗಳಿಗೆ ಸಾರ್ವಜನಿಕರು ಸಲ್ಲಿಸಿರುವ ಸಾವಿರಾರು ಮನವಿಗಳನ್ನು ಪುರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ವಿರುವುದರಿಂದ ಕೆಎಸ್ಸಾರ್ಟಿಸಿ ಸಲ್ಲಿಸಿರುವ ಒಟ್ಟು 35 ಅರ್ಜಿಗಳ ಪೈಕಿ 18 ಅರ್ಜಿ ಗಳಿಗೆ ಮಂಜೂರಾತಿ ನೀಡಬಹುದಾದ ಪರವಾನಿಗೆಗಳನ್ನು ಸದರಿ ಅಧಿಸೂಚನೆಯಿಂದ ವಿನಾಯಿತಿ ನೀಡಿ ಮಾರ್ಪಾಟು ಮಾಡಿ ಸ್ಟೇಟ್‌ಬ್ಯಾಂಕ್‌ವರೆಗೆ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ಅಂತಹ ವಿನಾಯಿತಿ ನೀಡಬಹುದಾದ 18 ಅರ್ಜಿಗಳನ್ನು ಪ್ರಾಧಿ ಕಾರವು ಗುರುತಿಸಿ ವಿನಾಯಿತಿ ನೀಡಲು ಸೂಚಿಸಿದೆ. ಉಳಿದ 17 ಅರ್ಜಿಗಳಲ್ಲಿ ತಿಳಿಸಿದ ಮಾರ್ಗಗಳ ಸರ್ವಿಸ್‌ಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದಲೇ ಕಾರ್ಯಾಚರಿಸತಕ್ಕದ್ದು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಸರಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಜಲು ವಾಹನಗಳನ್ನು ಹೊರತುಪಡಿಸಿ ಉಳಿದಂತೆ ಬೇರೆ ಎಲ್ಲಾ ಮಜಲು ವಾಹನಗಳಿಗೆ 2013ರ ಅಧಿಸೂಚನೆಯಲ್ಲಿ ನಮೂದಿಸಿರುವ ಆದೇಶಗಳು ಅನ್ವಯ ವಾಗಲಿವೆ. ಮೋಟಾರ್ ವಾಹನ ಕಾಯ್ದೆ ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾಳಿ ಯಡಿ ಅಗತ್ಯವಿರುವ ಸೂಚನೆ, ಫಲಕಗಳನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಧಿಕಾರ ಹೊಂದಿರುತ್ತಾರೆ. ಈ ಆದೇಶವು ಆಗಸ್ಟ್ 20ರಿಂದ ಮುಂದಿನ ಆದೇಶ ಹೊರಡಿಸುವವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಖಾಸಗಿ ಬಸ್ಸುಗಳೇ ಅಧಿಕ ಸಂಖ್ಯೆಯಲ್ಲಿರುವ ದ.ಕ. ಜಿಲ್ಲೆಯಲ್ಲಿ ನರ್ಮ್ ಯೋಜನೆಯಡಿ ಮಂಗಳೂರು ನಗರದೊಳಗೆ 20 ಕಿ.ಮೀ. ವ್ಯಾಪ್ತಿಗೆ 35 ಬಸ್‌ಗಳು ಹಾಗೂ ಉಡುಪಿಗೆ 30 ಬಸ್‌ಗಳು ಮಂಜೂರಾಗಿತ್ತು. ಇದಕ್ಕಾಗಿ ಕೆಎಸ್ಸಾರ್ಟಿಸಿಗೆ 12 ಕೋಟಿ ರೂ. ಮಂಜೂರು ಕೂಡಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ 35 ಕೆಎಸ್ಸಾರ್ಟಿಸಿ ಸಿಟಿ ಬಸ್‌ಗಳಿಗೆ ಪರವಾನಿಗೆ ನೀಡುವ ಕುರಿತಂತೆ ಸಾರ್ವಜನಿಕರಿಗೆ ಅಗತ್ಯವಿರುವ ರೂಟ್‌ಗಳ ಬಗ್ಗೆ ಕೆಎಸ್ಸಾರ್ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗೆ ಲಿಖಿತ ಮನವಿ ಸಲ್ಲಿಸಲು ಎಪ್ರಿಲ್ 9ರವರೆಗೆ ಕಾಲಾವಕಾಶವನ್ನು ಕಳೆದ ಮಾರ್ಚ್ 30ರಂದು ನಡೆದ ಆರ್‌ಟಿಎ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಇಬ್ರಾಹೀಂ ನೀಡಿದ್ದರು.
ಇದಕ್ಕೆ ಉತ್ಸಾಹದಿಂದ ಸ್ಪಂದಿಸಿದ್ದ ಸಾರ್ವಜನಿಕರಿಂದ ಒಟ್ಟು 155 ರೂಟ್‌ಗಳಿಗೆ ಬಸ್ ಕೋರಿ ಕೆಎಸ್ಸಾರ್ಟಿಸಿಗೆ 1,147 ಹಾಗೂ ಆರ್‌ಟಿಒಗೆ 1,157 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳನ್ನು ಪರಿಶೀಲಿಸಿ ಸಾರ್ವಜನಿಕರಿಂದ ಅಧಿಕ ಬೇಡಿಕೆ ಬಂದ ರೂಟ್‌ಗಳನ್ನು ಪರಿಗಣಿಸಿ 17 ರೂಟ್‌ಗಳಲ್ಲಿ ಪರವಾನಿಗೆ ನೀಡುವಂತೆ ಆಗಸ್ಟ್ 5ರಂದು ನಡೆದ ಆರ್‌ಟಿಎ ಸಭೆಯಲ್ಲಿ ಕೆಎಸ್ಸಾರ್ಟಿಸಿ ಮನವಿ ಮಾಡಿತ್ತು. ಆದರೆ ಕೆಎಸ್ಸಾರ್ಟಿಸಿ ಪ್ರಸ್ತಾವಿತ ರೂಟ್‌ಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಜತೆ ಚರ್ಚಿಸಿ ಸೂಕ್ತ ರೂಟ್‌ಗಳ ಪಟ್ಟಿ ಸಿದ್ಧಡಿಸುವಂತೆ ಸಭೆಯಲ್ಲಿ ಕೆಎಸ್ಸಾರ್ಟಿಸಿಗೆ ಸೂಚಿಸಲಾಗಿತ್ತು. ಈ ಮಧ್ಯೆ, ಆ.22ರಂದು ನಿಗದಿಯಾಗಿದ್ದ ಸಭೆಗೆ ಒಂದು ದಿನ ಮುಂಚಿತವಾಗಿ ಜಿಲ್ಲಾ ದಂಡಾಧಿಕಾರಿ ಎ.ಬಿ.ಇಬ್ರಾಹೀಂರವರು ಡಿಎಂ ನೋಟಿಫಿಕೇಶನ್ ಸಡಿಲಿಕೆಗೆ ಮುಂದಾಗಿರುವುದು ನರ್ಮ್ ಬಸ್‌ಗಾಗಿನ ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ದೊರಕಿದಂತಾಗಿದೆ.
ನಾಲ್ಕು ಬಸ್ ಬೇಕು : ಮುಡಿಪು ಸಾರ್ವಜನಿಕರ ಆಗ್ರಹ
‘‘ಕೆಎಸ್ಸಾರ್ಟಿಸಿಯಿಂದ ಮುಡಿಪು ರೂಟ್‌ಗೆ ಕಳೆದ 3 ವರ್ಷಗಳ ಹಿಂದೆ ಮಂಜೂರಾಗಿದ್ದ ಆರು ಬಸ್ಸುಗಳಲ್ಲಿ ನಾಲ್ಕು ಮಂಜೂರಾಗಿದ್ದು, ಅವುಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ನರ್ಮ್ ಯೋಜನೆಯಡಿ ಈ ರೂಟ್‌ಗೆ ಬಸ್ಸುಗಳನ್ನು ನೀಡುವಂತೆ 200ಕ್ಕೂ ಅಧಿಕ ಅರ್ಜಿಗಳನ್ನು ನಾವು ಸಲ್ಲಿಸಿದ್ದೆವು. ಕಳೆದ ಆರ್‌ಟಿಎ ಸಭೆಯಲ್ಲಿ ಕೆಎಸ್ಸಾರ್ಟಿಸಿಯಿಂದ ನಮ್ಮ ರೂಟ್‌ಗೆ ನಾಲ್ಕು ಬಸ್ಸುಗಳನ್ನು ಪ್ರಸ್ತಾಪಿಸಲಾಗಿದೆ.
ಅದನ್ನು ಆರ್‌ಟಿಎ ನಮಗೆ ನೀಡುವ ಮೂಲಕ ಇಲ್ಲಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’’ ಎಂದು ಮುಡಿಪು ಸಾರ್ವಜನಿಕರ ಪರವಾಗಿ ಜನಾರ್ದನ ಜಿ. ಮುಡಿಪು ಆಗ್ರಹಿಸಿದ್ದಾರೆ. ‘‘ಈ ಮಾರ್ಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, 400ಕ್ಕೂ ಅಧಿಕ ಮಂದಿ ಈಗಾಗಲೇ ಕೆಎಸ್ಸಾರ್ಟಿಸಿಯಿಂದ ಪಾಸ್ ಮಾಡಿಸಿಕೊಂಡಿದ್ದಾರೆ. ಇಲ್ಲಿ ಮತ್ತಷ್ಟು ಬಸ್ಸುಗಳಿದ್ದಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಇತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನಾವು ಈಗಾಗಲೇ ಆರ್‌ಟಿಒ, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದೇವೆ’’ ಎಂದು ಮುಡಿಪು ನಿವಾಸಿ ಇಸ್ಮಾಯೀಲ್ ಹೇಳಿದ್ದಾರೆ.
ನರ್ಮ್ ಬಸ್‌ಗಳಿಗೆ ಬೇಡಿಕೆ ಏಕೆ.?
ಸರಕಾರಿ ಸ್ವಾಮ್ಯದ ಬಸ್ಸುಗಳಲ್ಲಿ ಹಲವು ದರ ರಿಯಾಯಿತಿಯ ಸೌಲಭ್ಯವಿರುತ್ತವೆ. ಅದಕ್ಕಿಂತಲೂ ಮುಖ್ಯವಾಗಿ ನಗರದಲ್ಲಿ ಓಡಾಡುವ ಖಾಸಗಿ ಬಸ್‌ಗಳ ಫುಟ್‌ಬೋರ್ಡ್ ಗಳು ಎತ್ತರದಲ್ಲಿರುತ್ತವೆ. ವಯೋ ವೃದ್ಧರು, ಮಹಿಳೆಯರು ಮಕ್ಕಳ ಪ್ರಯಾಣಕ್ಕೆ ಇದರಿಂದ ತೊಂದರೆಯಾಗುತ್ತವೆ ಎಂಬ ದೂರುಗಳು ಆರ್‌ಟಿಒ ಸಭೆಯಲ್ಲಿ ಸಾರ್ವಜನಿಕರಿಂದ ಸದಾ ವ್ಯಕ್ತವಾಗುತ್ತಿರುತ್ತವೆ. ಆದರೆ ನರ್ಮ್ ಬಸ್ಸುಗಳ ಫುಟ್‌ಬೋರ್ಡ್‌ಗಳು ತಳಮಟ್ಟದಲ್ಲಿರುವುದು ಈ ಬಸ್‌ಗಳಿಗೆ ಸಾರ್ವಜನಿಕರು ಹಾತೊರೆಯಲು ಪ್ರಮುಖ ಕಾರಣವಾಗಿದೆ.
ನರ್ಮ್ ಬಸ್‌ಗಳು ಎಲ್‌ಇಡಿ, ವಾಯ್ಸಿ ಅನೌನ್ಸಿಂಗ್ ಮಾದರಿಯ ವಾಹ ನಗಳಾಗಿರುವ ಕಾರಣ ಕನಿಷ್ಠ ಮಾಲಿನ್ಯ ಉಂಟು ಮಾಡುತ್ತದೆ. ಈ ಬಸ್ಸು ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿ ರುತ್ತವೆ. ಖಾಸಗಿ ಬಸ್ಸುಗಳಲ್ಲಿ ಇಂತಹ ಸೌಲಭ್ಯ ಗಳು ಇರುವುದಿಲ್ಲ. ಮಾತ್ರವಲ್ಲದೆ ಕೆಎಸ್ಸಾರ್ಟಿಸಿಯಿಂದ ಲಭ್ಯ ವಿರುವ ಹಲವಾರು ಸೌಲಭ್ಯಗಳು ಈ ಬಸ್ಸುಗಳ ಪ್ರಯಾಣಿಕರಿಗೂ ಲಭ್ಯವಾಗಲಿವೆ.
ಪ್ರಾಥಮಿಕ ಶಾಲಾ ಮಕ್ಕಳಿಗೆ ವರ್ಷವಿಡೀ ಉಚಿತ ಪಾಸ್:
ಪ್ರೌಢಶಾಲಾ ಬಾಲಕರಿಗೆ 700 ರೂ., ಬಾಲಕಿಯರಿಗೆ 500 ರೂ.ಗೆ ವರ್ಷವಿಡೀ ರಿಯಾಯಿತಿ ಪಾಸ್. ಕಾಲೇಜು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವರ್ಷಕ್ಕೆ 1,000 ರೂ.ಗೆ ಪಾಸ್. ಐಟಿಐ ವಿದ್ಯಾರ್ಥಿಗಳಿಗೆ 1,254 ರೂ.ಗೆ, ಸಂಧ್ಯಾ ಕಾಲೇಜು ವಿದ್ಯಾರ್ಥಿ ಗಳಿಗೆ 1,300 ರೂ., ವೃತ್ತಿಪರ ಎಂಜಿನಿಯ ರಿಂಗ್ ವಿದ್ಯಾರ್ಥಿಗಳಿಗೆ 1,500 ರೂ., ವಿಕಲ ಚೇತನರಿಗೆ 600 ರೂ.ಗೆ ವರ್ಷವಿಡೀ ಪಾಸ್.
ಎಂಡೋಸಲ್ಫಾನ್ ಪೀಡಿತ ಮತ್ತು ಸಹಾಯಕ ಸಹಿತ ಇಬ್ಬರಿಗೆ, ಅಂಧ ಮತ್ತು ಸಹಾಯಕ ಸಹಿತ ಇಬ್ಬರಿಗೆ, ಸ್ವಾತಂತ್ರ ಹೋರಾಟಗಾರ ಹಾಗೂ ಸಹಾಯಕ ಸಹಿತ ಇಬ್ಬರಿಗೆ ಉಚಿತ ಪಾಸ್. ಉದ್ಯೋಗಿಗಳಿಗೆ ಮತ್ತು ಇತರ ರಿಗೆ ದಿನಕ್ಕೆ ಎಷ್ಟು ಸಲ ಬೇಕಾದರೂ ಪ್ರಯಾಣಿ ಸಬಹುದಾದ ಏಕ ಮುಖ ಟಿಕೆಟ್‌ನ ತಿಂಗಳ ಜನರಲ್ ಪಾಸ್ ಸೌಲಭ್ಯ ಈ ಬಸ್‌ಗಳಲ್ಲಿ ದೊರೆಯಲಿದೆ.
ಆರ್‌ಟಿಎ ಸಭೆಯಲ್ಲಿ ನಿರ್ಧಾರ
ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯು ಇಂದು ಬೆಳಗ್ಗೆ ನಡೆದಿದ್ದು, ಸಭೆಯಲ್ಲಿ ನರ್ಮ್ ಯೋಜನೆಯಡಿ ಸರಕಾರಿ ಸಿಟಿ ಬಸ್‌ಗಳಿಗೆ ಪರವಾನಿಗೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ವರದಿ ಕೃಪೆ : ವಾಭಾ