ಮಂಗಳೂರು / ಬೆಳ್ತಂಗಡಿ ,ಅ.07: ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕರ ಒಕ್ಕೂಟ ಬೆಳ್ತಂಗಡಿ ತಾಲೂಕು ಇವರ ವತಿಯಿಂದ ನೇತ್ರಾವತಿ ತಿರುವು ಯೋಜನೆ ವಿರುದ್ಧ ಇಂದು ಕರೆ ನೀಡಿದ ಬೆಳ್ತಂಗಡಿ ತಾಲೂಕು ಬಂದ್‍೬ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ವ್ಯಾಪಾರಿಗಳು ಸ್ವಯಂ ಇಚ್ಛೆಯಿಂದ ಬಂದ್ ನಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಭಟನಕಾರರು ರಸ್ತೆ ಮಧ್ಯೆಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ವಾಹನ ಸಂಚರಕ್ಕೂ ಅಡಚಣೆಯುಂಟಾಯಿತು. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಕೆಲವರು ಕೋಳಿ ಅಂಕ ನಡೆಸಿದರೆ ಮತ್ತೆ ಕೆಲವರು ಕಂಬಳದ ಕೋಣಗಳ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನಕಾರರ ಅಕ್ರೋಷಕ್ಕೆ ಮಣಿದ ರಾಜ್ಯ ರಸ್ತೆ ಸಾರಿಗೆ ಬಸ್ ಡಿಪೋ ಸೆರಿದ ಹಿನ್ನೆಲೆಯಲ್ಲಿ ಪ್ರತಿಭಟನ ನಿರತರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿ, ಬಸ್ ನಿಲ್ದಾಣವನ್ನು ಆಟದ ಮೈದಾನವಾಗಿ ಪರಿವರ್ತಿಸಿ ಯೋಜನೆಯ ವಿರುದ್ಧ ಗೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಂದ್ ಶಾಂತಿಯುತವಾಗಿ ನಡೆದಿದ್ದು, ಕೆಲವರು ಮಾತ್ರ ಕೆಲವುಕಡೆಗಳಲ್ಲಿ ರಸ್ತೆ ಮಧ್ಯೆ ಟಯರ್ ಗಳನ್ನು ಸುಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಿ ಎತ್ತಿನಹೊಳೆ ಯೋಜನೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮುಂಜಾಗೃತ ಕ್ರಮವಾಗಿ ತಾಲೂಕಿನಾದ್ಯಂತ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಕರಾವಳಿಯಲ್ಲಿ ಇನ್ನಷ್ಟು ಕಾವು ಪಡೆದುಕೊಂಡ ಜೀವನದಿ ನೇತ್ರಾವತಿ ಪರ ಹೋರಾಟ :
ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸಿ ‘ನೇತ್ರಾವತಿ ಉಳಿಸಿ ಹೋರಾಟ ಸಮಿತಿ’ ಬೆಳ್ತಂಗಡಿ ಮತ್ತು ಸಮಾನ ಮನಸ್ಕರ ಒಕ್ಕೂಟ ಇಂದು ಬೆಳಗ್ಗೆ 6ರಿಂದ ಸಂಜೆ 6ರ ತನಕ ಕರೆ ನೀಡಿರುವ ಬೆಳ್ತಂಗಡಿ ತಾಲೂಕು ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಕರಾವಳಿಯನ್ನು ಕತ್ತಲಾಗಿಸುವ ಯೋಜನೆಯನ್ನು ಖಂಡಿಸಿ ತಾಲೂಕಿಗೆ ತಾಲೂಕೇ ಮೌನಕ್ಕೆ ಶರಣಾಗಿದೆ.
ಇಂದು ಬೆಳಗ್ಗಿನಿಂದಲೇ ತಾಲೂಕಿನಾದ್ಯಂತ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿವೆ. ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ನೀಡಿಲ್ಲವಾದರೂ ವಿದ್ಯಾರ್ಥಿಗಳ ಹಾಜರಾತಿ ಕಂಡು ಬಂದಿಲ್ಲ. ಬಂದ್ ಗೆ ಆಟೋರಿಕ್ಷಾ, ಟೂರಿಸ್ಟ್ ವಾಹನಗಳು, ಖಾಸಗಿ ಬಸ್ ಗಳು ಬೆಂಬಲ ಸೂಚಿಸಿರುವುದರಿಂದ ಸಾರಿಗೆ ವ್ಯವಸ್ಥೆ ಕೂಡಾ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸರ್ಕಾರಿ ಬಸ್ ಗಳು ಕೂಡಾ ರಸ್ತೆಗಿಳಿದಿಲ್ಲ.
ಬೆಳ್ತಂಗಡಿ ತಾಲೂಕನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದ್ದು, ಮೂರು ಮಾರ್ಗದ ಬಳಿ ಟಯರ್ ಗೆ ಬೆಂಕಿ ಹಚ್ಚಿದ್ದು, ಸಂತೆಕಟ್ಟೆ ಬಳಿ ಬೆಂಕಿ ಇಕ್ಕಿ ಪ್ರತಿಭಟನಾ ನಿರತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಪ್ರವೇಶಿಸುವ ವಾಹನಗಳನ್ನು ಪುಂಜಾಲಕಟ್ಟೆ, ನಾರಾವಿ, ಚಾರ್ಮಾಡಿ, ಕೊಕ್ಕಡ ಪರಿಸರಗಳಲ್ಲಿಯೇ ತಡೆಹಿಡಿಯಲಾಗುತ್ತಿದೆ. ಆಂಬುಲೆನ್ಸ್ ಸೇರಿದಂತೆ ತುರ್ತು ಅವಶ್ಯಕತೆಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿ ಕಾಪಾಡಿಕೊಳ್ಳಲಾಗಿದೆ. ಆದರೂ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂದಿನ ಬಂದ್ ಕರೆಯ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಮೊದಲೇ ಅಂಗಡಿ, ಹೊಟೇಲ್ ಮಾಲೀಕರನ್ನು, ವಿವಿಧ ಕಚೇರಿಗಳನ್ನು ಸಂಪರ್ಕಿಸಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ವೇಳೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಟ್ಟಿನಲ್ಲಿ ಎತ್ತಿನಹೊಳೆ ಯೋಜನೆ ಅನುಷ್ಠಾನ ವಿರುದ್ಧ ಕರಾವಳಿ ಭಾಗದಲ್ಲಿ ಸಂಘಟಿತ ಹೋರಾಟ ಆರಂಭಗೊಂಡಿದ್ದು, ಈ ಹಿಂದೆ ಬಿಡಿ ಬಿಡಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂಘಟನೆಗಳು ಇದೀಗ ಒಂದೇ ವೇದಿಕೆಯಲ್ಲಿ ಹೋರಾಟಕ್ಕೆ ಮುಂದಾಗಿರುವುದು ಇನ್ನಷ್ಟು ಬಲ ತಂದುಕೊಟ್ಟಿದೆ. ವಿವಾದಿತ ಯೋಜನೆಗೆ ತೀಕ್ಣ ಪರವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗ ಇಕ್ಕಟ್ಟಿಗೆ ಸಿಲುಕಿದ್ದು, ಯಾವ ನಿರ್ಧಾರಕ್ಕೆ ಬದ್ಧವಾಗುತ್ತದೆ ಎಂಬ ಕುತೂಹಲ ಹುಟ್ಟಿಸಿದೆ.
ಭಕ್ತರ ಪರದಾಟ: ಎತ್ತಿನಹೊಳೆ ಯೋಜನೆ ಅನುಷ್ಠಾನ ವಿರೋಧಿಸಿ ಇಂದು ನಡೆಯುತ್ತಿರುವ ಬಂದ್ ನಿಂದಾಗಿ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಯಾತ್ರಾರ್ಥಿಗಳು ಪರದಾಟ ನಡೆಸುವಂತಾಯಿತು. ವಾಹನ ವ್ಯವಸ್ಥೆ ಇಲ್ಲದೆ ಕ್ಷೇತ್ರದಿಂದ ತಮ್ಮ ಊರುಗಳಿಗೆ ಮರಳಬೇಕಾದವರು ಹಾಗೂ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತಾದಿಗಳು ತೀವ್ರ ಸಂಕಷ್ಟ ಎದುರಿಸಿದರು.