ಕುಂದಾಪುರ: ಇತಿಹಾಸ ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವೈಭವದ ಶ್ರೀ ಮನ್ಮಹಾರಥೋತ್ಸವ ಶನಿವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀ ದೇವಿಯ ವಿಜ್ರಂಭಣೆಯ ಉತ್ಸವಕ್ಕೆ ಆಸು ಪಾಸಿನ ಗ್ರಾಮಗಳಿಂದ ಬಂದಿದ್ದ ದೊಡ್ಡ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗರ ನೇತ್ರತ್ವದಲ್ಲಿ ಪೂಜಾ ವಿಧಿಗಳನ್ನು ನಡೆಸಲಾಯಿತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ 1.05 ಕ್ಕೆ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಯಿತು. ಅರ್ಚಕರಾದ ಕೆ.ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ಎನ್.ಸುಬ್ರಮಣ್ಯ ಅಡಿಗ, ಮೂರ್ತಿ ಕಾಳಿದಾಸ್ ಭಟ್, ಶ್ರೀನಾಥ ತ್ರಿವಿಕ್ರಮ ಅಡಿಗ ಇದ್ದರು.
ಕೋವಿಡ್ ಮಾರ್ಗಸೂಚಿಯಂತೆ ನಡೆದ ಜಾತ್ರೆ….
ರಾಜ್ಯದಲ್ಲಿ ಹರಡುತ್ತಿರುವ ಕರೊನಾ ವೈರಸ್ ತಡೆಗಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಾಂತ ಉತ್ಸವ ಆಚರಣೆ ಸೇರಿದಂತೆ ವಿವಿಧ ಸಾರ್ವಜನಿಕ ಆಚರಣೆಗೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವವನ್ನು ಸರಳವಾಗಿ ಸೀಮಿತ ಸಂಖ್ಯೆಯ ಉಪಸ್ಥಿತಿಯಲ್ಲಿ ಆರೋಹಣಾ ಹಾಗೂ ಅವರೋಹಣವನ್ನು ನಡೆಸುವಂತೆ ಜಿಲ್ಲಾಡಳಿತ ದೇಗುಲದ ಆಡಳಿತ ಪ್ರಮುಖರಿಗೆ ಸಾಕಷ್ಟು ಮೊದಲೆ ಸೂಚನೆ ನೀಡಿತ್ತು.ಶನಿವಾರ ಬೆಳಿಗ್ಗೆಯಿಂದಲೆ ಕೊಲ್ಲೂರು ಹಾಗೂ ಆಸುಪಾಸಿನ ಗ್ರಾಮಸ್ಥರು ಶ್ರೀ ಮನ್ಮಹಾರಥೋತ್ಸವದ ಕಟ್ಟ ಕಟ್ಟಳೆ ಪೂಜೆಗೆ ದೇಗುಲಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು,ಹಣ್ಣು ಕಾಯಿ ಹಾಗೂ ಇತರ ಸೇವೆಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಎಲ್ಲಾ ಭಕ್ತರು ಮಾಸ್ಕ್ ಧರಿಸಿದ್ದರು.
ಗಣ್ಯರ ಉಪಸ್ಥಿತಿ…
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಆಡಳಿತಾಧಿಕಾರಿ, ಉಪ ವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣ ನಾಡ, ರತ್ನ ಕುಂದರ್, ಸಂದ್ಯಾ ರಮೇಶ್, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕೃಷ್ಣಪ್ರಸಾದ ಅಡ್ಯಂತಾಯ, ಮಾಜಿ ಧರ್ಮದರ್ಶಿಗಳಾದ ವಂಡಬಳ್ಳಿ ಜಯರಾಮ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು ಇದ್ದರು.
ವೈಭವ ರಥಯಾತ್ರೆ ಇರಲಿಲ್ಲ…..
ಪ್ರತಿ ವರ್ಷದ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಬೆಳಿಗ್ಗೆಯ ಧಾರ್ಮಿಕ ವಿಧಿ ಆಚರಣೆಯ ಬಳಿಕ ದೇವಸ್ಥಾನ ಮುಂಭಾಗದಲ್ಲಿ ಇರುವ ಬ್ರಹ್ಮ ರಥದಲ್ಲಿ ದೇವರನ್ನು ಕುಳ್ಳಿರಿಸಿ ಬೀದಿ ಗಣಪತಿ ದೇವಸ್ಥಾನದವರೆಗೆ ರಥವನ್ನು ಎಳೆದು ರಥೋತ್ಸವ ನಡೆಸಲಾಗುತ್ತೆ. ಸಂಜೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥ ಬೀದಿಯಲ್ಲಿ ಬ್ರಹ್ಮ ರಥವನ್ನು ಶಂಕರಾಶ್ರಮದ ವರೆಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ರಥ ಬೀದಿಯಲ್ಲಿ ತೇರು ಎಳೆಯುವುದಕ್ಕೆ ನಿರ್ಬಂಧ ವಿಧಿಸಿದ್ದರಿಂದ ಸಂಜೆ ಗಣಪತಿ ದೇವಸ್ಥಾನದಿಂದಲೆ ರಥಾವರೋಹಣ ನಡೆಸಿ ಶ್ರೀ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.
ಕೊರೊನಾ ಭೀತಿ ಹಾಗೂ ರಥೋತ್ಸವಕ್ಕೆ ನಿರ್ಬಂಧದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಕೊಲ್ಲೂರು ಎಸ್.ಐ ನಾಸೀರ್ ಹುಸೇನ್ ಅವರ ನೇತ್ರತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
(ವರದಿ- ಯೋಗೀಶ್ ಕುಂಭಾಸಿ)
Comments are closed.