ಕರಾವಳಿ

ಕುಂದಾಪುರ ಬನ್ಸ್ ರಾಘು ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್‌ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್‌ ಬಳಿ ಅ.1 ರವಿವಾರ ಸಂಜೆ ಚೂರಿ ಇರಿದು ಕುಂದಾಪುರದ ನಿವಾಸಿ ರಾಘವೇಂದ್ರ ಶೇರುಗಾರ್‌ (42) ಅಲಿಯಾಸ್ ಬನ್ಸ್ ರಾಘು ಎನ್ನುವರನ್ನು ಕೊಲೆಗೈದ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಶಿವಮೊಗ್ಗ ಜಿಲ್ಲೆಯವರಾದ ಶಫಿವುಲ್ಲ ಅಲಿಯಾಸ್ ಆಟೋ ಶಫಿ (40), ಮಹಮ್ಮದ್ ಇಮ್ರಾನ್ (43) ಅ.5ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದು ಅ.6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕೊಲೆ ಯಾಕಾಗಿ..?
ಆರೋಪಿಗಳ ಕಾರು ಮತ್ತು ಮೃತ ರಾಘವೇಂದ್ರ ಶೇರಿಗಾರ್ ಅಲಿಯಾಸ್ ಬನ್ಸ್ ರಾಘು ಅವರ ಕಾರಿಗೆ ತಾಗಿದ ವಿಚಾರಕ್ಕೆ ಗಲಾಟೆಯಾಗಿದ್ದು ಆರೋಪಿತ ಶಫಿವುಲ್ಲಾ ಚಾಕುವಿನಿಂದ ರಾಘವೇಂದ್ರ ಶೇರಿಗಾರ್‌ರವರಿಗೆ ಇರಿದಿದ್ದು ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದರು‌. ಆರೋಪಿಗಳು ಮತ್ತು ರಾಘವೇಂದ್ರ ಶೇರಿಗಾರ್ ನಡುವೆ ಬೇರೆ ಯಾವುದೇ ವೈಷಮ್ಯ, ಪೂರ್ವದ್ವೇಷ, ವ್ಯವಹಾರ ಮತ್ತು ಯಾವುದೇ ಸಂಘರ್ಷ ಇಲ್ಲದಿರುವುದು ತನಿಖೆಯಿಂದ ಕಂಡುಬಂದಿದೆ.

ಆರೋಪಿ ಶಾಫಿವುಲ್ಲಾಗೆ ಜುಗಾರಿ ಆಡುವ ಚಟವಿದ್ದು ಆತನ ಸ್ನೇಹಿತ ಇಮ್ರಾನ್‌ನನ್ನು ಜೊತೆಯಲ್ಲಿ ಕರೆದುಕೊಂಡು ಕಾರಿನಲ್ಲಿ ಬೇರೆ ಕಡೆ ಹೊಗಿ ಜುಗಾರಿ ಆಡುತ್ತಿದ್ದ. ಅ.1ರಂದು ಕುಂದಾಪುರದಿಂದ ಮರಳಿ ಶಿವಮೊಗ್ಗಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ. ಶಫಿವುಲ್ಲಾ ಬಳಿ ಶಿವಮೊಗ್ಗದಲ್ಲಿ ನಾಲ್ಕು ಆಟೋಗಳಿದ್ದು ಇಮ್ರಾನ್ ಅದರಲ್ಲಿ ಒಂದು ಆಟೋದ ಚಾಲಕನಾಗಿದ್ದ.

ಉಡುಪಿ ಎಸ್ಪಿ ಡಾ. ಅರುಣ್ ಕೆ., ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ದಲಿಂಗಪ್ಪ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು
ಮಾರ್ಗದರ್ಶನದಲ್ಲಿ ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸರ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತೆರಳಿದ್ದರು. ಕುಂದಾಪುರ ಪೊಲೀಸ್ ಠಾಣೆ ನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಕುಂದಾಪುರ ಠಾಣೆಯ ಪಿಎಸ್ಐ ವಿನಯ ಕೊರ್ಲಹಳ್ಳಿ, ಅಪರಾಧ ವಿಭಾಗದ ಪಿಎಸ್ಐ ಪ್ರಸಾದ್ ಕುಮಾರ್, ಶಂಕರನಾರಾಯಣ ಠಾಣೆಯ ಪಿಎಸ್ಐ ಮಧು. ಬಿ.ಇ ಹಾಗೂ ಸಿಬ್ಬಂದಿಗಳಾದ ಮಧು ಸೂದನ್, ರಾಮ, ಶ್ರೀಧರ್, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ ಆರೋಪಿಗಳನ್ನು ಬಂಧಿಸಿದ್ದರು.

Comments are closed.