ಮಂಗಳೂರು,ನ.28: ಮುಲ್ಕಿ ಸಮೀಪದ ಕೆರೆಕಾಡು ಎಂಬಲ್ಲಿನ ಕಾಡಿನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಎರಡು ಮೃತ ದೇಹಗಳು ಪತ್ತೆಯಾಗಿವೆ. ಸಾವಿಗೀಡಾದವರನ್ನು ಪ್ರೇಮಿಗಳೆಂದು ಶಂಕಿಸಲಾಗಿದೆ. ಮರಕ್ಕೆ ನೇಣು ಹಾಕಿಕೊಂಡು ಇಬ್ಬರು ಮೃಪಟ್ಟಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ ಮಧ್ಯಾಹ್ನ ಕೆರೆಕಾಡು ಪರಿಸರದ ದಟ್ಟವಾದ ಕಾಡಿನಲ್ಲಿ ಈ ಮೃತದೇಹಗಳು ಪತ್ತೆಯಾಗಿದ್ದು, ಎರಡೂ ದೇಹಗಳು ಕೊಳೆತು ಅಸ್ತಿ ಪಂಜರಗಳಾಗಿವೆ. ಈ ಕಾಡಿಗೆ ಜನರು ಹೋಗದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಂದು ಮಧ್ಯಾಹ್ನ ಸ್ಥಳೀಯರು ಕಟ್ಟಿಗೆ ಸಂಗ್ರಹಿಸಲೆಂದು ಕಾಡಿಗೆ ಹೋದಾಗ ಎರಡು ಕೊಳೆತಿರುವ ಶವಗಳು ಪತ್ತೆಯಾಗಿದೆ. ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಸ್ಥಳದಲ್ಲಿ ಹಗ್ಗ, ಯುವತಿಯ ಬಟ್ಟೆ ಮುಂತಾದ ವಸ್ತುಗಳು ಪತ್ತೆಯಾಗಿವೆ.
ಶವಗಳು ಸಂಪೂರ್ಣ ಕೊಳೆತು ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡವರಾರು ಎಂಬುದು ತಿಳಿದುಬಂದಿಲ್ಲ. ಸ್ಥಳೀಯರು ಮೃತದೇಹಗಳ ಗುರುತು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ.
ಸ್ಥಳಕ್ಕೆ ಮುಲ್ಕಿ ಠಾಣಾ ಪೊಲೀಸರು ತೆರಳಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.