ಕನ್ನೌಜ್: ಉತ್ತರಪ್ರದೇಶದ ಕಾನೂನು ಇಲ್ಲದಂತಹ ರಾಜ್ಯವಾಗಿದೆ. ಕೆಲ ತಿಂಗಳುಗಳ ಹಿಂದೆ ಶಹಜಹಾನ್‌ಪುರ್‍ನಲ್ಲಿ ಪತ್ರಕರ್ತನೊಬ್ಬನನ್ನು ಜೀವಂತವಾಗಿ ದಹಿಸಿದ ಘಟನೆ ಮಾಸಿಲ್ಲ. ಆದರೆ, ಇಂದು ಮತ್ತೊಬ್ಬ ಪತ್ರಕರ್ತನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಪತ್ರಕರ್ತ ರಾಜಾ ಚತುರ್ವೇದಿ ತಮ್ಮ ಮನೆಯ ಮುಂದೆ ನಿಂತಿದ್ದಾಗ ಆರೋಪಿಗಳು ಗುಂಡುಹಾರಿಸಿ ಹತ್ಯಮಾಡಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಘಟನೆಯ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಪತ್ರಕರ್ತ ದೇವೇಂದ್ರ ಚತುರ್ವೇದಿ ಪುತ್ರನಾಗಿದ್ದ ರಾಜಾ ಚತುರ್ವೇದಿ ಪತ್ರಕರ್ತನಾಗಿದ್ದುದಲ್ಲದೇ ವಕೀಲ ವೃತ್ತಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಸಮೃದ್ಧಿ ಮತ್ತು ಯುನೈಟೆಡ್ ಇಂಡಿಯಾ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜಾ ಚತುರ್ವೇದಿ. ಶುಕ್ರವಾರದಂದು ಮಧ್ಯಾಹ್ನ ಮನೆಯ ಮುಂದೆ ನಿಂತಿದ್ದಾಗ ಅಕಸ್ಮಿಕವಾಗಿ ಕೆಲ ವ್ಯಕ್ತಿಗಳು ದಾಳಿ ಮಾಡಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ರಾಜಾ ಕೆಳಗೆ ಕುಸಿದಿದ್ದಾನೆ. ಮನೆಯೊಳಗಿದ್ದ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಬರುವ ಮುನ್ನವೇ ಹಂತಕರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಲೇ ಪತ್ರಕರ್ತ ರಾಜಾ ಚತುರ್ವೇದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.