ರಾಷ್ಟ್ರೀಯ

ಉದ್ಯಮಸ್ನೇಹಿ ಪಟ್ಟಿ: ರಾಜ್ಯಕ್ಕೆ 9ನೇ ಸ್ಥಾನ

Pinterest LinkedIn Tumblr

21Fir28-29.qxpನವದೆಹಲಿ (ಪಿಟಿಐ): ದೇಶದ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದೆ.

ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ  ನಿರೀಕ್ಷೆಯಂತೆ ಗುಜರಾತ್‌ ಮೊದಲ ಸ್ಥಾನದಲ್ಲಿದೆ. ಜಾರ್ಖಂಡ್‌ ಮತ್ತು ಛತ್ತೀಸ್‌ಗಡದಂತಹ ರಾಜ್ಯಗಳು ಸಹ ಕರ್ನಾಟಕಕ್ಕಿಂತ ಮೇಲಿನ ಸ್ಥಾನದಲ್ಲಿವೆ. ಆಂಧ್ರಪ್ರದೇಶ ಹಾಗೂ ಜಾರ್ಖಂಡ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ದೇಶದ ರಾಜ್ಯಗಳಲ್ಲಿ ಉದ್ಯಮಕ್ಕೆ ಅನುಕೂಲಕರವಾದ ವಾತಾವರಣ ಆಧರಿಸಿ ವಿಶ್ವಬ್ಯಾಂಕ್‌ ‘ಉದ್ಯಮ ಸುಧಾರಣೆಗಾಗಿ ರಾಜ್ಯಗಳು ಕೈಗೊಂಡ ಕ್ರಮದ ಮೌಲ್ಯಮಾಪನ’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಮನವಿಯಂತೆ ಈ  ಅಧ್ಯಯನ ನಡೆಸಲಾಗಿತ್ತು. ಔದ್ಯಮಿಕ ನೀತಿ ಮತ್ತು ಉತ್ತೇಜನ ಇಲಾಖೆ, ಭಾರತೀಯ ಕೈಗಾರಿಕಾ ಒಕ್ಕೂಟ, ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ ಹಾಗೂ ಕೆಪಿಎಂಜಿ ವರದಿ ಸಿದ್ಧಪಡಿಸಲು ನೆರವು ನೀಡಿದ್ದವು.

ಆಯಾ ರಾಜ್ಯದಲ್ಲಿ ಉದ್ಯಮ ಅಥವಾ ವ್ಯವಹಾರ ಆರಂಭಿಸಲು ಇರುವ ವಾತಾವರಣ, ಜಮೀನು ಮಂಜೂರಾತಿ, ಕಾರ್ಮಿಕ ಸುಧಾರಣೆ, ಪರಿಸರ ಅನುಮತಿ, ಮೂಲಸೌಕರ್ಯ, ತೆರಿಗೆ ಉದ್ದೇಶಕ್ಕಾಗಿ ನೋಂದಣಿ ಪ್ರಕ್ರಿಯೆ ಮತ್ತು ವಿವಿಧ ನಿಯಮಾವಳಿ ಅನುಸರಿಸಿರುವುದರ ಕುರಿತು ಪರಿಶೀಲಿಸುವ ಪ್ರಕ್ರಿಯೆ ಇವುಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.

ಮಿಜೋರಾಂ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ನಾಗಾಲ್ಯಾಂಡ್‌ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತಿ ಕೆಳಗಿವೆ.

ವರದಿಯ ಮುನ್ನುಡಿಯಲ್ಲಿ  ಅಭಿಪ್ರಾಯ ವ್ಯಕ್ತಪಡಿಸಿರುವ ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ  ಒನ್ನೊ ರಹ್ಲ್‌,   ‘ವಿಶ್ವಬ್ಯಾಂಕ್‌ನ ಉದ್ಯಮಸ್ನೇಹಿ ದೇಶಗಳ 182 ಪಟ್ಟಿಯಲ್ಲಿ ಪೈಕಿ  ಭಾರತ 142ನೇ ಸ್ಥಾನದಲ್ಲಿದೆ. ಅತಿಯಾದ ನಿಯಂತ್ರಣ ಕ್ರಮಗಳಿಂದ ಭಾರತದಲ್ಲಿ ಉದ್ಯಮ ಆರಂಭಿಸುವುದು, ವ್ಯವಹಾರ ನಡೆಸುವುದು ಸುಲಭವಲ್ಲ’ ಎಂದು ಹೇಳಿದ್ದಾರೆ.

‘ಇತ್ತೀಚೆಗೆ ಭಾರತ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಆದರೆ, ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮತ್ತಷ್ಟು ಕೆಲಸ ಮಾಡಬೇಕಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
‘ದೇಶೀಯ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜಿಸಲು ರಾಜ್ಯಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಹುಟ್ಟುಹಾಕಲು ಈ ರೀತಿಯ ರ್‍ಯಾಂಕಿಂಗ್‌ ನೀಡಲಾಗಿದೆ.

‘ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತವನ್ನು ಪ್ರಮುಖ 50 ಉದ್ಯಮಸ್ನೇಹಿ ದೇಶಗಳ ಪಟ್ಟಿಯಲ್ಲಿ ತರಲು ಈ ಪ್ರಯತ್ನ ನಡೆಸಲಾಗಿದೆ. ಭಾರತವನ್ನು ಉದ್ಯಮಿಗಳ ಸ್ವರ್ಗವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಿಸಬೇಕಾದರೆ ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ನಡೆಸಬೇಕು’ ಎಂದೂ ಒನ್ನೊ ರಹ್ಲ್‌  ಹೇಳಿದ್ದಾರೆ.

₹ 559 ಕೋಟಿ ಹೂಡಿಕೆಗೆ ಸಮ್ಮತಿ (ಬೆಂಗಳೂರು/ ಪ್ರಜಾವಾಣಿ ವರದಿ): ರಾಜ್ಯದಲ್ಲಿ ₹559 ಕೋಟಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ.

ಈ ಯೋಜನೆಗಳಿಂದ 932 ಜನರಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ.
ಸಮ್ಮತಿಸಿದ ಯೋಜನೆಗಳು
1. ತುಮಕೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ  ಜವಳಿ ಯಂತ್ರೋಪಕರಣಗಳ  ತಯಾರಿಕೆಗಾಗಿ ಟೊಯೊಟಾ ಇಂಡಸ್ಟ್ರೀಸ್‌ ಇಂಡಿಯಾದಿಂದ ₹ 410 ಕೋಟಿ  ಹೂಡಿಕೆ
2. ಈಕೋಮೈಸ್ಟರ್‌ ಬೀಡ್ಸ್‌  ಇಂಡಿಯಾದಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ₹148 ಕೋಟಿ ವೆಚ್ಚದಲ್ಲಿ ಸ್ಲ್ಯಾಗ್‌ ಬಾಲ್‌ ತಯಾರಿಕಾ ಘಟಕ ಸ್ಥಾಪನೆ

Write A Comment