ವಡೋದರ: ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕಿಂತಲೂ ಆತ್ಮಹತ್ಯೆ ಮಾಡಿಕೊಂಡ ರೀತಿ ಹಲವು ಚರ್ಚೆಗೊಳಗಾಗುತ್ತಿರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಜನರು ವಿಚಿತ್ರ ಹಾದಿಗಳನ್ನು ತುಳಿದಿರುವುದನ್ನು ನಾವು ನೋಡಿರಬಹುದು. ಇಲ್ಲೊಬ್ಬ ಆಸಾಮಿ ಮೊಸಳೆಗಳನ್ನು ಹುಡುಕಿಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆಯೊಂದು ವಡೋದರಾದಲ್ಲಿ ನಡೆದಿದೆ.
ಮುಖೇಶ್ (25) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ. ಆದಾವ ಕಾರಣಕ್ಕೋ ಏನೋ ಈತ ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸಿದ್ದಾನೆ. ನಂತರ ಆತ್ಮಹತ್ಯೆಗೆ ಈಗ ಮೊಸಳೆಗಳನ್ನು ಆಯ್ಕೆ ಮಾಡಿಕೊಂಡು 250ಕ್ಕೂ ಹೆಚ್ಚು ಮೊಸಳೆಗಳಿರುವ ಭಿಮನಾಥ್ ಬ್ರಿಡ್ಜ್ ಕೆಳಗಿರುವ ನದಿಗೆ ಹಾರಿದ್ದಾನೆ. ಮುಖೇಶ್ ನದಿಗೆ ಹಾರುತ್ತಿದ್ದಂತೆ ಮೊಸಳೆಗಳು ಆತನ ಬಳಿ ಒಂದೊಂದಾಗಿ ಬಂದಿದೆ. ಇದರಿಂದ ಭಯಭೀತಗೊಂಡ ಮುಖೇಶ್ ಸಹಾಯಕ್ಕಾಗಿ ಚೀರಾಡಿದ್ದಾನೆ.
ಮುಖೇಶ್ ಚೀರಾಟ ಕಂಡ ಸ್ಥಳೀಯರು ಸ್ಥಳಕ್ಕೆ ಬಂದು ಆತನನ್ನು ರಕ್ಷಿಸಲು ನಾನಾ ರೀತಿಯ ಉಪಾಯಗಳನ್ನು ಪ್ರಯೋಗಿಸಿದ್ದಾರಾದರೂ ಅದಾವುದೂ ಕೆಲಸಕ್ಕೆ ಬಂದಿಲ್ಲ. ಕೊನೆಗೆ ಸ್ಥಳದಲ್ಲಿದ್ದ ದೊಡ್ಡದಾದ ಕಬ್ಬಿಣದ ರಾಡ್ ತೆಗೆದುಕೊಂಡ ಸ್ಥಳೀಯರು ಅದನ್ನು ಹಿಡಿದಕೊಳ್ಳುವಂತೆ ಮುಖೇಶ್ ಗೆ ತಿಳಿಸಿದ್ದಾರೆ. ನಂತರ ಮುಖೇಶ್ ನನ್ನು ಹೊರಗೆಳದು ಆತನನ್ನು ರಕ್ಷಿಸಿದ್ದಾರೆ.
ನದಿಯ ಬಳಿ ನಾವು ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದು, ವ್ಯಕ್ತಿ ಕೂಗಾಟ ಕೇಳಿ ಅತ್ತ ತಿರುಗಿದ್ದೆವು. ಅಲ್ಲಿ ನೂರಾರು ಮೊಸಳೆಗಳು ವ್ಯಕ್ತಿಯೊಬ್ಬನನ್ನು ಸುತ್ತುವರಿದಿರುವುದು ಕಂಡು ನಿಜಕ್ಕೂ ಆಘಾತವಾಯಿತು. ತಕ್ಷಣ ನಾವು ಮೊಸಳೆಗಳತ್ತ ಕಲ್ಲು ತೂರಲು ಆರಂಭಿಸಿದೆವು. ಇದರಿಂದ ಮೊಸಳೆಗಳ ಗಮನ ಬೇರೆಡೆಗೆ ಹರಿಯಿತು, ಮತ್ತೊಂದು ಕಡೆಯಿಂದ ನಾವು ಉದ್ದದ ಕಬ್ಬಿಣಡ ರಾಡನ್ನು ನದಿಗೆಸೆದು ಗಟ್ಟಿಯಾಗಿ ಹಿಡಿಯುವಂತೆ ಮುಖೇಶ್ ಗೆ ಹೇಳಿದೆವು” ಎಂದು ಸ್ಥಳೀಯರು ಮುಖೇಶ್ ನನ್ನು ರಕ್ಷಿಸಿದ ಬಗೆಯನ್ನು ವಿವರಿಸಿದ್ದಾರೆ.
ಮುಖೇಶ್ ನನ್ನು ರಕ್ಷಿಸಿದ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದರು. ಈ ವೇಳೆ ಮುಖೇಶ್ ಅಪಾಯದಿಂದ ಪಾರಾಗಿರುವ ವಿಷಯ ತಿಳಿದ ಅಧಿಕಾರಿ ಮನೀಶ್ ಮೋಡ್ ಸ್ಥಳೀಯರ ಚಾಣಾಕ್ಷ್ಯತನವನ್ನು ಶ್ಲಾಘಿಸಿದರು.
ಪ್ರಸ್ತುತ ಮುಖೇಶ್ ಎಸ್ ಎಸ್ ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ವೇಳೆ ಮೊಸಳೆಗಳು ಮುಖೇಶ್ ನ ಬಲಗೈ ಕಚ್ಚಿ ಎಳೆದಿದೆ. ಅಲ್ಲದೆ, ಎದೆಯ ಭಾಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ ಹೀಗಾಗಿ ಮುಖೇಶ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.